[1] ಜ್ಞಾನಿಯಾದ ಮಗನಿಂದ ತಂದೆಗೆ ಆನಂದ, ಅಜ್ಞಾನಿಯಾದ ಮಗನಿಂದ ತಾಯಿಗೆ ದುಃಖ.
[2] ಅನ್ಯಾಯದ ಸಂಪತ್ತು ವ್ಯರ್ಥ, ಧರ್ಮವು ಮೃತ್ಯುವಿನಿಂದ ರಕ್ಷಿಸುವಂತದ್ದು.
[3] ಯೆಹೋವನು ನೀತಿವಂತರನ್ನು ಹಸಿವೆಗೊಳಿಸನು, ದುಷ್ಟನ ಆಶೆಯನ್ನು ಭಂಗಪಡಿಸುತ್ತಾನೆ.
[4] ಜೋಲುಗೈ ದಾರಿದ್ರ್ಯ, ಚುರುಕು ಕೈ ತರುವುದು ಐಶ್ವರ್ಯ.
[5] ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತನು, ಕೊಯ್ಲಿನಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು.
[6] ಶಿಷ್ಟನ ತಲೆ ಆಶೀರ್ವಾದದ ನೆಲೆ, ದುಷ್ಟನ ಬಾಯಿಗೆ ಬಲಾತ್ಕಾರವೇ ಮುಚ್ಚಳ.
[7] ಶಿಷ್ಟರ ಸ್ಮರಣೆಯು ಆಶೀರ್ವಾದಕ್ಕಾಸ್ಪದ, ದುಷ್ಟರ ನಾಮವು ನಿರ್ನಾಮಕಾಸ್ಪದ.
[8] ಜ್ಞಾನಹೃದಯನು ಆಜ್ಞೆಗಳನ್ನು ಪಾಲಿಸುವನು, ಹರಟೆಯ ಮೂರ್ಖನು ಕೆಡವಲ್ಪಡುವನು.
[9] ನಿರ್ದೋಷದ ನಡತೆಯವನು ನಿರ್ಭಯವಾಗಿ ನಡೆಯುವನು, ವಕ್ರಮಾರ್ಗಿಯು ಬೈಲಿಗೆ ಬೀಳುವನು.
[10] ಕಣ್ಣು ಮಿಟಕಿಸುವವನು ಕಷ್ಟಕ್ಕೆ ಕಾರಣನು, ಧೈರ್ಯದಿಂದ ಗದರಿಸುವವನು ಸಮಾಧಾನಕರನು.
[11] ಶಿಷ್ಟನ ಬಾಯಿ ಜೀವದ ಬುಗ್ಗೆ, ದುಷ್ಟನ ಬಾಯಲ್ಲಿ ಬಲಾತ್ಕಾರವು ತುಂಬಿ ತುಳುಕುತ್ತದೆ.
[12] ದ್ವೇಷವು ಜಗಳಗಳನ್ನೆಬ್ಬಿಸುತ್ತದೆ, ಪ್ರೀತಿಯು ಪಾಪಗಳನ್ನೆಲ್ಲಾ ಮುಚ್ಚುತ್ತದೆ.
[13] ವಿವೇಕಿಯ ತುಟಿಗಳಿಂದ ಜ್ಞಾನ, ಬುದ್ಧಿಹೀನನ ಬೆನ್ನಿಗೆ ಬೆತ್ತ.
[14] ಜ್ಞಾನಿಗಳು ತಿಳಿದ ಸಂಗತಿಯನ್ನು ಹೊರಪಡಿಸುವುದಿಲ್ಲ, ಮೂರ್ಖನ ಭಾಷಣ ನಾಶನಕ್ಕೆ ಸಮೀಪ.
[15] ಐಶ್ವರ್ಯವಂತನಿಗೆ ಐಶ್ವರ್ಯವು ಬಲವಾದ ಕೋಟೆ, ಬಡವನಿಗೆ ಅವನ ಬಡತನವೇ ನಾಶನ.
[16] ಶಿಷ್ಟನ ದುಡಿತ ಜೀವಾಸ್ಪದ, ದುಷ್ಟನ ಆದಾಯ ಪಾಪಾಸ್ಪದ.
[17] ಶಿಕ್ಷೆಯನ್ನು ಕೈಕೊಳ್ಳುವವನು ಜೀವದ ಮಾರ್ಗವನ್ನು ತೋರಿಸುವನು, ಗದರಿಕೆಯನ್ನು ಕೈಕೊಳ್ಳದವನು ಸನ್ಮಾರ್ಗದಿಂದ ತಪ್ಪಿಸುವನು.
[18] ಹೊಟ್ಟೆಯಲ್ಲಿ ಹಗೆಯನ್ನಿಟ್ಟುಕೊಂಡವನು ಸುಳ್ಳುಗಾರ, ಚಾಡಿಗಾರನು ಜ್ಞಾನಹೀನ.
[19] ಮಾತಾಳಿಗೆ ಪಾಪ ತಪ್ಪದು, ಮೌನಿಯು ವಿವೇಕಿ.
[20] ಶಿಷ್ಟರ ನಾಲಿಗೆ ಚೊಕ್ಕ ಬೆಳ್ಳಿ, ದುಷ್ಟನ ಹೃದಯ ಮೌಲ್ಯವಿಲ್ಲದ್ದು.
[21] ಶಿಷ್ಟರ ಭಾಷಣ ಬಹುಜನ ಪೋಷಣ, ಬುದ್ಧಿಯ ಕೊರತೆ ಮೂರ್ಖರ ನಾಶನ.
[22] ಯೆಹೋವನ ಆಶೀರ್ವಾದವು ಭಾಗ್ಯದಾಯಕವು, ಅದು ವ್ಯಸನವನ್ನು ಸೇರಿಸದು.
[23] ಅವಿವೇಕಿಗೆ ಕುಯುಕ್ತಿ ವಿನೋದ ವಿವೇಕಿಗೆ ಜ್ಞಾನ ವಿನೋದ.
[24] ದುಷ್ಟನಿಗೆ ಶಂಕಿಸಿದ್ದೇ ಸಂಭವಿಸುವುದು, ಶಿಷ್ಟನಿಗೆ ಇಷ್ಟವು ಲಭಿಸುವುದು.
[25] ಬಿರುಗಾಳಿ ಬೀಸಿದರೆ ದುಷ್ಟನು ಎಲ್ಲೋ! ಶಿಷ್ಟನು ಶಾಶ್ವತವಾದ ಕಟ್ಟಡ.
[26] ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯೂ ಹೇಗೋ, ಯಜಮಾನನಿಗೆ ಸೋಮಾರಿಯು ಹಾಗೆ.
[27] ಯೆಹೋವನಿಗೆ ಭಯಪಡುವವರ ದಿನಗಳಿಗೆ ವೃದ್ಧಿ, ದುಷ್ಟರ ವರ್ಷಗಳು ಅಲ್ಪ.
[28] ಶಿಷ್ಟನ ನಂಬಿಕೆಗೆ ಆನಂದವು ಫಲ, ದುಷ್ಟನ ನಿರೀಕ್ಷೆ ನಿಷ್ಫಲ.
[29] ಯೆಹೋವನು ಸನ್ಮಾರ್ಗಿಗೆ ಆಶ್ರಯ, ಕೆಡುಕನಿಗೆ ನಾಶನ.
[30] ಶಿಷ್ಟರು ಎಂದಿಗೂ ಕದಲರು, ದುಷ್ಟರು ದೇಶದಲ್ಲಿ ನಿಲ್ಲರು.
[31] ಶಿಷ್ಟನ ಬಾಯಲ್ಲಿ ಜ್ಞಾನವು ಮೊಳೆಯುವುದು, ನೀಚನ ನಾಲಿಗೆ ಕತ್ತರಿಸಲ್ಪಡುವುದು.
[32] ಶಿಷ್ಟನ ತುಟಿಯಲ್ಲಿ ಹಿತವಚನ, ದುಷ್ಟನ ಬಾಯಲ್ಲಿ ನೀಚವಚನ.