Skip to content
Opens in a new window
Listen to this chapter • 2:55

[1] ಕಂದಾ, ನನ್ನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೋ, ನನ್ನ ಆಜ್ಞೆಗಳನ್ನು ನಿಧಿಯಂತೆ ಕಾಪಾಡಿಕೋ.

[2] ನನ್ನ ಉಪದೇಶವನ್ನು ಕಣ್ಣುಗುಡ್ಡೆಯಂತೆ ಪಾಲಿಸು, ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು.

[3] ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿ ಧರಿಸಿಕೋ, ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆದುಕೋ.

[4] ಜ್ಞಾನವನ್ನು, “ನೀನು ನನ್ನ ಅಕ್ಕಾ” ಎಂದು ಹೇಳು, ವಿವೇಕವನ್ನು, “ಪ್ರಿಯೇ” ಎಂದು ಕರೆ.

[5] ಅವು ಜಾರಳಿಂದ ಮತ್ತು ಸವಿಮಾತನಾಡುವ ಪರಸ್ತ್ರೀಯಿಂದ ನಿನ್ನನ್ನು ರಕ್ಷಿಸುವವು.

[6] ನಾನು ನನ್ನ ಮನೆಯ ಕಿಟಕಿಯ ಜಾಲರಿಯಿಂದ ಇಣಿಕಿ ನೋಡಲು

[7] ಅಲ್ಪಬುದ್ಧಿಯುಳ್ಳ ಅನೇಕ ಯುವಕರು ಕಾಣಿಸಿದರು. ಅವರಲ್ಲಿ ಜ್ಞಾನಹೀನನಾದ ಒಬ್ಬ ಯೌವನಸ್ಥನನ್ನು ಕಂಡೆನು.

[8] ಅವನು ಸಂಜೆಯ ಮೊಬ್ಬಿನಲ್ಲಿ, ಮಧ್ಯರಾತ್ರಿಯ ಅಂಧಕಾರದಲ್ಲಿ,

[9] ಅವಳ ಮನೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾ, ಅವಳ ಮನೆಯ ಕಡೆಗೆ ತಿರುಗಿದ್ದನ್ನು ಕಂಡೆನು.

[10] ಇಗೋ ವೇಶ್ಯಾರೂಪವನ್ನು ಧರಿಸಿಕೊಂಡಿದ್ದ ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.

[11] ಇವಳು ಕೂಗಾಟದವಳು, ಹಟಮಾರಿ, ಮನೆಯಲ್ಲಿ ನಿಲ್ಲತಕ್ಕವಳೇ ಅಲ್ಲ;

[12] ಒಂದು ವೇಳೆ ಬೀದಿಗಳಲ್ಲಿರುವಳು, ಮತ್ತೊಂದು ವೇಳೆ ಚೌಕಗಳಲ್ಲಿರುವಳು, ಅಂತು ಪ್ರತಿಯೊಂದು ಮೂಲೆಯಲ್ಲಿಯೂ ಹೊಂಚು ಹಾಕುವಳು.

[13] ಅವನನ್ನು ಹಿಡಿದು, ಮುದ್ದಾಡಿ ನಾಚಿಕೆಗೆಟ್ಟವಳಾಗಿ,

[14] “ಎಲೈ, ಈ ದಿನ ನನ್ನ ಹರಕೆಗಳನ್ನು ಸಲ್ಲಿಸಿದ್ದೇನೆ, ಸಮಾಧಾನ ಯಜ್ಞಶೇಷವು ನನ್ನಲ್ಲಿದೆ,

[15] ಆದಕಾರಣ ನಿನ್ನನ್ನು ಎದುರುಗೊಳ್ಳಲು ಬಂದೆನು, ನಿನ್ನನ್ನು ಆತುರದಿಂದ ಹುಡುಕಿ ಕಂಡುಕೊಂಡೆನು.

[16] ನನ್ನ ಮಂಚದಲ್ಲಿ ಸುಪ್ಪತ್ತಿಯನ್ನೂ, ಐಗುಪ್ತದೇಶದ ನೂಲಿನ ವಿಚಿತ್ರ ವಸ್ತ್ರಗಳನ್ನೂ ಹಾಸಿದ್ದೇನೆ.

[17] ಹಾಸಿಗೆಯ ಮೇಲೆ ರಕ್ತಬೋಳ, ಅಗುರು, ಲವಂಗ, ಚಕ್ಕೆ ಇವುಗಳ ಚೂರ್ಣಗಳಿಂದ ಸುವಾಸನೆಗೊಳಿಸಿದ್ದೇನೆ.

[18] ಬಾ, ಬೆಳಗಿನ ತನಕ ಬೇಕಾದಷ್ಟು ರಮಿಸುವ, ಕಾಮವಿಲಾಸಗಳಿಂದ ಸಂತೋಷಿಸುವ.

[19] ಯಜಮಾನನು ಮನೆಯಲ್ಲಿಲ್ಲ, ದೂರ ಪ್ರಯಾಣದಲ್ಲಿದ್ದಾನೆ.

[20] ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ, ಹುಣ್ಣಿಮೆಗೆ ಮನೆಗೆ ಬರುವನು” ಎಂದು ಹೇಳುವಳು.

[21] ಅವಳು ಅವನನ್ನು ತನ್ನ ಸವಿಮಾತುಗಳಿಂದ ಮನವೊಲಿಸಿ, ಬಹಳವಾಗಿ ಪ್ರೇರೇಪಿಸಿ ಸಮ್ಮತಿಪಡಿಸುತ್ತಾಳೆ.

[22] ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ, ಬೇಡಿಬಿದ್ದಿರುವ ಮೂರ್ಖನು ದಂಡನೆಗೆ ನಡೆಯುವಂತೆಯೂ,

[23] ಪಕ್ಷಿಯು ಬಲೆಯ ಕಡೆಗೆ ಓಡುವಂತೆಯೂ, ಅವನು ತನ್ನ ಪ್ರಾಣಾಪಾಯವನ್ನು ತಿಳಿಯದೆ, ಬಾಣವು ತನ್ನ ಕಾಳಿಜವನ್ನು ತಿವಿಯುವ ಮೇರೆಗೂ, ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.

[24] ಈಗ, ಮಕ್ಕಳೇ, ನನ್ನ ಕಡೆಗೆ ಕಿವಿಗೊಡಿರಿ, ನನ್ನ ಮಾತುಗಳನ್ನು ಆಲಿಸಿರಿ.

[25] ನಿನ್ನ ಹೃದಯವು ಅವಳ ನಡತೆಯ ಕಡೆಗೆ ತಿರುಗದಿರಲಿ, ತಪ್ಪಿಹೋಗಿಯೂ ಅವಳ ಮಾರ್ಗದಲ್ಲಿ ನಡೆಯಬೇಡ.

[26] ಅವಳಿಂದ ಗಾಯಪಟ್ಟು ಬಿದ್ದವರು ಬಹು ಜನರು, ಹತರಾದವರೋ ಲೆಕ್ಕವೇ ಇಲ್ಲ.

[27] ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಅಂತಃಪುರಕ್ಕೆ ಇಳಿದುಹೋಗುತ್ತದೆ.

ಜ್ಞಾನೋಕ್ತಿಗಳು — Chapters