Skip to content
Opens in a new window
Listen to this chapter • 3:02

[1] ಮಕ್ಕಳೇ, ತಂದೆಯ ಉಪದೇಶವನ್ನು ಕೇಳಿರಿ, ವಿವೇಕವನ್ನು ಗ್ರಹಿಸುವಂತೆ ಕಿವಿಗೊಡಿರಿ.

[2] ನಾನು ನಿಮಗೆ ಸುಬೋಧೆಯನ್ನು ಮಾಡುವೆನು, ನನ್ನ ಉಪದೇಶವನ್ನು ಬಿಡಬೇಡಿರಿ.

[3] ನಾನೂ ನನ್ನ ತಂದೆಗೆ ಅಧೀನನಾದ ಮಗನೂ, ತಾಯಿಯ ದೃಷ್ಟಿಗೆ ಕೋಮಲನಾದ ಏಕಪುತ್ರನೂ ಆಗಿದ್ದೆನು.

[4] ಆಗ ತಂದೆಯು ನನಗೆ ಬೋಧಕನಾಗಿ ಹೀಗೆಂದನು, “ನಿನ್ನ ಮನಸ್ಸು ನನ್ನ ಮಾತುಗಳನ್ನು ಹಿಡಿದುಕೊಳ್ಳಲಿ, ನನ್ನ ಆಜ್ಞೆಯನ್ನು ಕೈಕೊಂಡು ಸುಖವಾಗಿ ಬಾಳು.

[5] ಜ್ಞಾನವನ್ನು ಪಡೆ, ವಿವೇಕವನ್ನು ಸಂಪಾದಿಸು, ಮರೆಯಬೇಡ, ನನ್ನ ಮಾತುಗಳಿಗೆ ಅಸಡ್ಡೆ ತೋರಿಸಬೇಡ.

[6] ಜ್ಞಾನವನ್ನು ಬಿಡದಿದ್ದರೆ ಅದು ನಿನ್ನನ್ನು ಕಾಪಾಡುವುದು, ಪ್ರೀತಿಸಿದರೆ, ಅದು ನಿನ್ನನ್ನು ಕಾಯುವುದು.

[7] ಜ್ಞಾನವನ್ನು ಪಡೆಯಬೇಕೆಂಬುದೇ ಜ್ಞಾನಬೋಧೆಯ ಪ್ರಥಮಪಾಠ, ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು ಪಡೆ.

[8] ಜ್ಞಾನವೆಂಬಾಕೆಯು ಶ್ರೇಷ್ಠಳು ಎಂದು ನೀನು ಭಾವಿಸಿದರೆ ಆಕೆಯು ನಿನ್ನನ್ನು ಉನ್ನತಿಗೆ ತರುವಳು, ಆಕೆಯನ್ನು ಅಪ್ಪಿಕೊಂಡರೆ ನಿನ್ನನ್ನು ಘನಪಡಿಸುವಳು.

[9] ಆಕೆಯು ನಿನ್ನ ತಲೆಗೆ ಅಂದದ ಪುಷ್ಪಮಾಲೆಯನ್ನು ಇಟ್ಟು, ಸುಂದರ ಕಿರೀಟವನ್ನು ನಿನಗೆ ಒಪ್ಪಿಸುವಳು.”

[10] ಕಂದಾ, ಗಮನಿಸಿ ನನ್ನ ಮಾತುಗಳನ್ನು ಕೇಳು, ಕೇಳಿದರೆ, ನಿನ್ನ ಜೀವಮಾನದ ವರ್ಷಗಳು ಹೆಚ್ಚುವವು.

[11] ನಾನು ಜ್ಞಾನಮಾರ್ಗವನ್ನು ಉಪದೇಶಿಸಿ, ಧರ್ಮಮಾರ್ಗದಲ್ಲಿ ನಿನ್ನನ್ನು ನಡೆಸುವೆನು.

[12] ನೀನು ನಡೆಯುವಾಗ ನಿನ್ನ ಹೆಜ್ಜೆಗೆ ಅಡ್ಡಿಯಾಗುವುದಿಲ್ಲ, ಓಡಿದರೆ ಮುಗ್ಗರಿಸುವುದಿಲ್ಲ.

[13] ಸದುಪದೇಶವನ್ನು ಗ್ರಹಿಸಿಕೋ, ಸಡಿಲಬಿಡಬೇಡ, ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು.

[14] ದುಷ್ಟರ ಮಾರ್ಗದಲ್ಲಿ ಸೇರಬೇಡ, ಕೆಟ್ಟವರ ದಾರಿಯಲ್ಲಿ ನಡೆಯಬೇಡ.

[15] ಅದಕ್ಕೆ ದೂರವಾಗಿರು, ಅದರಲ್ಲಿ ನಡೆಯಬೇಡ, ಅದರಿಂದ ಹಿಂತಿರುಗಿ ಮುಂದೆ ನಡೆ.

[16] ಕೇಡುಮಾಡದಿದ್ದರೆ ಅವರಿಗೆ ನಿದ್ರೆಬಾರದು; ಯಾರನ್ನಾದರೂ ಎಡವಿಬೀಳಿಸದಿದ್ದರೆ ಅವರ ನಿದ್ರೆಗೆ ಭಂಗವಾಗುವುದು.

[17] ದುಷ್ಟತನವೇ ಅವರ ಆಹಾರ; ಬಲಾತ್ಕಾರವೇ ಅವರ ದ್ರಾಕ್ಷಾರಸ ಪಾನ.

[18] ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.

[19] ದುಷ್ಟರ ಮಾರ್ಗವೋ ಕತ್ತಲಿನಂತಿದೆ; ತಾವು ಯಾವುದಕ್ಕೆ ಎಡವಿಬಿದ್ದೆವೆಂದು ಅವರಿಗೆ ಗೊತ್ತಾಗದು.

[20] ಕಂದಾ, ನನ್ನ ಮಾತುಗಳನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು.

[21] ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದಿರಲಿ, ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ.

[22] ಅವುಗಳನ್ನು ಹೊಂದುವವರಿಗೆ ಅವು ಜೀವವು, ದೇಹಕ್ಕೆಲ್ಲಾ ಅವೇ ಆರೋಗ್ಯವು.

[23] ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ, ಅದರೊಳಗಿಂದ ಜೀವಬುಗ್ಗೆಗಳು ಹೊರಡುವವು.

[24] ಸೊಟ್ಟಮಾತುಗಳನ್ನು ನಿನ್ನಿಂದ ತೊಲಗಿಸಿಬಿಡು, ಕೆಟ್ಟ ನುಡಿಗಳನ್ನು ಬಾಯಿಂದ ದೂರಮಾಡು.

[25] ನೆಟ್ಟಗೆ ದೃಷ್ಟಿಸು, ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ.

[26] ನೀನು ನಡೆಯುವ ದಾರಿಯನ್ನು ಸಮಮಾಡು, ಆಗ ನಿನ್ನ ಮಾರ್ಗಗಳೆಲ್ಲಾ ದೃಢವಾಗಿರುವವು.

[27] ಎಡಕ್ಕಾಗಲಿ ಅಥವಾ ಬಲಕ್ಕಾಗಲಿ ತಿರುಗಬೇಡ, ನಿನ್ನ ಕಾಲನ್ನು ಕೇಡಿಗೆ ದೂರಮಾಡು.

ಜ್ಞಾನೋಕ್ತಿಗಳು — Chapters