[1] ಮಗನೇ, ನೀನು ನೆರೆಯವನ ಸಾಲಕ್ಕೆ ಹೊಣೆಯಾಗಿದ್ದರೆ, ಪರನೊಂದಿಗೆ ಪ್ರಮಾಣ ಮಾಡಿಕೊಂಡಿದ್ದರೆ,
[2] ನೀನು ಮಾತುಕೊಟ್ಟು ಪಾಶಕ್ಕೆ ಸಿಕ್ಕಿಕೊಂಡಿದ್ದೀ, ನಿನ್ನ ವಾಗ್ದಾನವು ನಿನ್ನನ್ನು ಹಿಡಿದಿದೆ.
[3] ಹೀಗಿರಲು, ಮಗನೇ, ನೀನು ನೆರೆಯವನ ಕೈಗೆ ಸಿಕ್ಕಿಕೊಂಡದ್ದರಿಂದ ತಪ್ಪಿಸಿಕೊಳ್ಳುವ ಒಂದು ಕೆಲಸ ಮಾಡು, ನಡೆ, ತ್ವರೆಪಡು, ಆ ನೆರೆಯವನನ್ನು ಅಂಗಲಾಚಿ ಬೇಡಿಕೋ,
[4] ನಿನ್ನ ಕಣ್ಣುಗಳಿಗೆ ನಿದ್ರೆಕೊಡಬೇಡ, ನಿನ್ನ ರೆಪ್ಪೆಗಳನ್ನು ಮುಚ್ಚಬೇಡ;
[5] ಬೇಟೆಗಾರನ ಕೈಯಿಂದ ಜಿಂಕೆಯು ಓಡುವಂತೆಯೂ, ಪಕ್ಷಿಯು ಹಾರಿ ಹೋಗುವ ಹಾಗೂ ತಪ್ಪಿಸಿಕೋ.
[6] ಸೋಮಾರಿಯೇ, ಇರುವೆಯ ಹತ್ತಿರ ಹೋಗಿ, ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ಪಡೆದುಕೋ.
[7] ಅದಕ್ಕೆ ನಾಯಕ, ಅಧಿಕಾರಿ ಹಾಗೂ ಪ್ರಭುಗಳಿಲ್ಲದಿದ್ದರೂ,
[8] ಬೇಸಿಗೆಯಲ್ಲಿ ತನ್ನ ತೀನಿಯನ್ನು ಸಿದ್ಧಮಾಡುವುದು, ಸುಗ್ಗಿಯ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವುದು.
[9] ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ?
[10] “ಇನ್ನು ಸ್ವಲ್ಪ ನಿದ್ದೆ, ಇನ್ನು ಸ್ವಲ್ಪ ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ” ಅಂದುಕೊಳ್ಳುವಿಯಾ?
[11] ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.
[12] ನೀಚನೂ, ದುಷ್ಟನೂ ಆಗಿರುವ ಮನುಷ್ಯನ ನಡತೆಯನ್ನು ನೋಡು, ಅವನು ವಕ್ರ ಮಾತಿನವನಾಗಿದ್ದಾನೆ,
[13] ಕಣ್ಣನ್ನು ಮಿಟಕಿಸುತ್ತಾನೆ, ಕಾಲಿನಿಂದ ಕೆರೆಯುತ್ತಾನೆ, ಬೆರಳ ಸನ್ನೆಮಾಡುತ್ತಾನೆ.
[14] ಅವನ ಮನಸ್ಸಿನಲ್ಲಿರುವುದು ದ್ರೋಹವೇ; ಯಾವಾಗಲೂ ಕೇಡನ್ನು ಕಲ್ಪಿಸುತ್ತಾನೆ, ಜಗಳದ ಬೀಜವನ್ನು ಬಿತ್ತುತ್ತಾನೆ.
[15] ಆದಕಾರಣ ಅವನಿಗೆ ತಟ್ಟನೆ ವಿಪತ್ತು ಸಂಭವಿಸುವುದು, ಏಳದ ಹಾಗೆ ಫಕ್ಕನೆ ಮುರಿಯಲ್ಪಡುವನು.
[16] ಯೆಹೋವನು ಹಗೆಮಾಡುವ ವಿಷಯಗಳು ಆರು ಇವೆ, ಹೌದು, ಏಳು ಸಂಗತಿಗಳು ಆತನಿಗೆ ಅಸಹ್ಯವಾಗಿ ತೋರುತ್ತವೆ.
[17] ಅವು ಯಾವುವೆಂದರೆ, ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, ನಿರ್ದೋಷಿಗಳ ರಕ್ತವನ್ನು ಸುರಿಸುವ ಕೈ,
[18] ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತ್ವರೆಪಡುವ ಕಾಲು,
[19] ಅಸತ್ಯವಾಡುವ ಸುಳ್ಳುಸಾಕ್ಷಿ ಮತ್ತು ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು ಇವುಗಳೇ.
[20] ಕಂದಾ, ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಉಪದೇಶವನ್ನು ಬಿಡಬೇಡ.
[21] ಅವುಗಳನ್ನು ಸದಾ ನಿನ್ನ ಹೃದಯದಲ್ಲಿ ಇಟ್ಟುಕೋ, ನಿನ್ನ ಕೊರಳಿಗೆ ಅವುಗಳನ್ನು ಧರಿಸಿಕೋ.
[22] ನೀನು ನಡೆಯುವಾಗ ಆ ಉಪದೇಶವು ನಿನ್ನನ್ನು ಮುನ್ನಡೆಸುವುದು, ಮಲಗಿಕೊಂಡಾಗ ಅದು ನಿನ್ನನ್ನು ಕಾಯುವುದು, ಎಚ್ಚರಗೊಂಡಾಗ ನಿನ್ನೊಂದಿಗೆ ಮಾತನಾಡುವುದು.
[23] ಆಜ್ಞೆಯೇ ದೀಪ, ಉಪದೇಶವೇ ಬೆಳಕು, ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ.
[24] ಅದು ಕೆಟ್ಟ ಸ್ತ್ರೀಯಿಂದಲೂ, ವೇಶ್ಯೆಯ ಸಿಹಿನುಡಿಯಿಂದಲೂ ನಿನ್ನನ್ನು ರಕ್ಷಿಸತಕ್ಕದ್ದಾಗಿದೆ.
[25] ನಿನ್ನ ಹೃದಯವು ಅವಳ ಸೌಂದರ್ಯವನ್ನು ಮೋಹಿಸದಿರಲಿ, ಅವಳು ತನ್ನ ಕಣ್ಣುರೆಪ್ಪೆಗಳಿಂದ ನಿನ್ನನ್ನು ವಶಮಾಡಿಕೊಂಡಾಳು, ನೋಡಿಕೋ.
[26] ವೇಶ್ಯೆಯಿಂದ ಯಾವನಿಗಾದರೂ ಒಂದು ರೊಟ್ಟಿ ಮಾತ್ರ ಗತಿಯಾಗುವುದು, ಪರಸ್ತ್ರೀಯೋ ಅಮೂಲ್ಯವಾದ ಜೀವವನ್ನು ಬೇಟೆಯಾಡುವಳು.
[27] ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ ಬಟ್ಟೆ ಸುಡುವುದಿಲ್ಲವೋ?
[28] ಧಗಧಗಿಸುವ ಕೆಂಡದ ಮೇಲೆ ನಡೆದರೆ ಕಾಲು ಬೇಯುವುದಿಲ್ಲವೋ?
[29] ನೆರೆಯವನ ಹೆಂಡತಿಯ ಹತ್ತಿರ ಹೋಗುವವನಿಗೆ ಹೀಗೆಯೇ ಆಗುವುದು, ಯಾರು ಅವಳನ್ನು ಮುಟ್ಟುವನೋ ಅವನು ದಂಡನೆಯನ್ನು ಹೊಂದದೇ ಇರನು.
[30] ಕಳ್ಳನು ಹೊಟ್ಟೆಗಿಲ್ಲದೆ ಹಸಿವೆಯನ್ನು ನೀಗಿಸಲು ಕಳವು ಮಾಡಿದರೆ ಜನರು ಅಷ್ಟೇನೂ ಹೀಯಾಳಿಸರು.
[31] ಅವನ ತಪ್ಪು ಬಯಲಾದರೆ ಅವನು ಏಳರಷ್ಟು ಕೊಡಬೇಕಾಗುವುದು, ಅಥವಾ ತನ್ನ ಮನೆಯ ಆಸ್ತಿಯನ್ನೆಲ್ಲಾ ಕೊಟ್ಟು ತೀರಿಸಲೇಬೇಕು.
[32] ವ್ಯಭಿಚಾರಿಯೋ ಕೇವಲ ಬುದ್ಧಿಹೀನನು, ಇಂಥಾ ಕಾರ್ಯವನ್ನು ಮಾಡುವವನು ತನ್ನನ್ನೇ ನಾಶಪಡಿಸಿಕೊಳ್ಳುವನು.
[33] ಅವನಿಗೆ ಗಾಯವೂ, ಅವಮಾನವೂ ಆಗುವವು, ಅವನ ಕೆಟ್ಟ ಹೆಸರು ಎಂದಿಗೂ ಅಳಿಸಲ್ಪಡದು.
[34] ಏಕೆಂದರೆ ಮತ್ಸರವು ಪತಿಗೆ ಕ್ರೋಧವನ್ನು ಉಂಟುಮಾಡುತ್ತದೆ, ಅವನು ಮುಯ್ಯಿತೀರಿಸತಕ್ಕ ದಿನದಲ್ಲಿ ವ್ಯಭಿಚಾರಿಯನ್ನು ಉಳಿಸನು.
[35] ಅವನು ಯಾವ ಈಡನ್ನೂ ಮುಟ್ಟನು; ಎಷ್ಟು ಲಂಚಕೊಟ್ಟರೂ ಒಪ್ಪನು.