[1] ಕೆಟ್ಟವರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ, ಅವರ ಸಹವಾಸವನ್ನು ಬಯಸಬೇಡ.
[2] ಅವರ ಮನಸ್ಸು ಹಿಂಸೆಯನ್ನು ಯೋಚಿಸುತ್ತಿರುವುದು, ಅವರ ತುಟಿಯು ಹಾನಿಯನ್ನು ಪ್ರಸ್ತಾಪಿಸುತ್ತಿರುವುದು.
[3] ಮನೆಯನ್ನು ಕಟ್ಟುವುದಕ್ಕೆ ಜ್ಞಾನವೇ ಸಾಧನ, ಅದನ್ನು ಸ್ಥಿರಪಡಿಸುವುದಕ್ಕೆ ವಿವೇಕವೇ ಆಧಾರ,
[4] ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ, ಇಷ್ಟ ಸಂಪತ್ತಿನಿಂದ ತುಂಬಿಸುವುದಕ್ಕೆ, ತಿಳಿವಳಿಕೆಯೇ ಉಪಕರಣ.
[5] ಜ್ಞಾನಿಗೆ ತ್ರಾಣ, ಬಲ್ಲವನಿಗೆ ಬಹು ಬಲ.
[6] ಮಂತ್ರಾಲೋಚನೆಯಿಂದ ಯುದ್ಧವನ್ನು ನಡೆಸು, ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆಯಿರುವುದು.
[7] ಜ್ಞಾನವು ಮೂರ್ಖನಿಗೆ ನಿಲುಕದು, ಅವನು ನ್ಯಾಯಸ್ಥಾನದಲ್ಲಿ ಬಾಯಿಬಿಡಲಾರನು.
[8] ಕೇಡನ್ನು ಕಲ್ಪಿಸುವವನು, ಕುಯುಕ್ತಿಯುಳ್ಳವನು ಎನಿಸಿಕೊಳ್ಳುವನು.
[9] ಮೂರ್ಖನ ಸಂಕಲ್ಪವು ಪಾಪವೇ, ಧರ್ಮನಿಂದಕನು ಮನುಷ್ಯರಿಗೆ ಅಸಹ್ಯ.
[10] ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ, ನಿನ್ನ ಬಲವೂ ಇಕ್ಕಟ್ಟೇ.
[11] ಕೊಲೆಗೆ ಸೆಳೆಯಲ್ಪಟ್ಟವರನ್ನು ರಕ್ಷಿಸು, ಸಂಹಾರಕ್ಕೆ ಗುರಿಯಾದವರನ್ನು ತಪ್ಪಿಸು.
[12] “ಇದು ನನಗೆ ಗೊತ್ತಿರಲಿಲ್ಲ” ಎಂದು ನೀನು ನೆವ ಹೇಳಿದರೆ, ಹೃದಯಶೋಧಕನು ಗ್ರಹಿಸುವುದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ತಿಳಿಯುವುದಿಲ್ಲವೋ? ಪ್ರತಿಯೊಬ್ಬನ ಕರ್ಮಕ್ಕೆ ಪ್ರತಿಫಲವನ್ನು ಕೊಡದೆ ಬಿಟ್ಟಾನೇ?
[13] ಕಂದಾ, ಜೇನು ಚೆನ್ನಾಗಿದೆಯಲ್ಲವೆ, ಜೇನುತುಪ್ಪವು ನಿನ್ನ ಬಾಯಿಗೆ ಸಿಹಿಯಷ್ಟೆ, ಅದನ್ನು ತಿನ್ನು.
[14] ಜ್ಞಾನವು ನಿನ್ನ ಆತ್ಮಕ್ಕೆ ಹೀಗೆಯೇ ಇರುವುದೆಂದು ತಿಳಿದುಕೋ, ಅದನ್ನು ಪಡೆದುಕೊಂಡರೆ ಮುಂದೆ ಫಲಕಾಲ ಬರುವುದು, ನಿನ್ನ ನಿರೀಕ್ಷೆಯು ನಿರರ್ಥಕವಾಗದು.
[15] ದುಷ್ಟನೇ, ಶಿಷ್ಟನ ಮನೆಗೆ ಹೊಂಚುಹಾಕಬೇಡ, ಅವನ ನಿವಾಸವನ್ನು ಸೂರೆಮಾಡಬೇಡ.
[16] ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು, ದುಷ್ಟನು ಕೇಡಿನಿಂದ ಬಿದ್ದೇಹೋಗುವನು.
[17] ನಿನ್ನ ಶತ್ರು ಬಿದ್ದರೆ ಹಿಗ್ಗಬೇಡ, ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ.
[18] ಯೆಹೋವನು ನಿನ್ನ ಹರ್ಷವನ್ನು ಕಂಡು ಬೇಸರಗೊಂಡು, ತನ್ನ ಕೋಪವನ್ನು ಅವನ ಕಡೆಯಿಂದ ತಿರುಗಿಸಾನು.
[19] ಕೆಡುಕರ ಮೇಲೆ ಉರಿಗೊಳ್ಳದಿರು, ದುಷ್ಟರನ್ನು ನೋಡಿ ಹೊಟ್ಟೆಕಿಚ್ಚುಪಡದಿರು.
[20] ಕೆಟ್ಟವನಿಗೆ ಶುಭಕಾಲವು ಬಾರದು, ದುಷ್ಟರ ದೀಪವು ಆರಿಯೇ ಹೋಗುವುದು.
[21] ಮಗನೇ, ಯೆಹೋವನಿಗೂ ಮತ್ತು ರಾಜನಿಗೂ ಭಯಪಡು, ತಿರುಗಿಬೀಳುವವರ ಗೊಡವೆಗೆ ಹೋಗಬೇಡ.
[22] ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸುವುದು, ಅವರಿಂದಾಗುವ ನಾಶವು ಯಾರಿಗೆ ತಿಳಿದೀತು?
[23] ಇವು ಕೂಡ ಜ್ಞಾನಿಗಳ ಮಾತುಗಳು: ನ್ಯಾಯವಿಚಾರಣೆಯಲ್ಲಿ ಪಕ್ಷಪಾತವು ಧರ್ಮವಲ್ಲ.
[24] ಯಾವನು ಅಧರ್ಮಿಗೆ, “ನೀನು ಧರ್ಮಾತ್ಮನು” ಎಂದು ಹೇಳುತ್ತಾನೋ, ಅವನನ್ನು ಜನರು ಶಪಿಸುವರು, ಪ್ರಜೆಗಳು ದೂಷಿಸುವರು.
[25] ದುಷ್ಟನನ್ನು ಗದರಿಸುವವರಿಗಾದರೋ ಶುಭವಾಗುವುದು, ಸುಖಕರವಾದ ಆಶೀರ್ವಾದವೂ ಲಭಿಸುವುದು.
[26] ಯಥಾರ್ಥವಾದ ಉತ್ತರವು, ತುಟಿಗೆ ಮುದ್ದು.
[27] ನಿನ್ನ ಕೆಲಸದ ಸಾಮಾನುಗಳನ್ನು ಸಿದ್ಧಮಾಡು, ನಂತರ ಹೊಲಗದ್ದೆಗಳ ಕೆಲಸವನ್ನು ಮುಗಿಸು, ಆಮೇಲೆ ನಿನ್ನ ಮನೆಯನ್ನು ಕಟ್ಟು.
[28] ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ, ಮಾತಿನಿಂದ ಮೋಸಮಾಡಬೇಡ.
[29] “ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆನು, ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆನು” ಅಂದುಕೊಳ್ಳಬೇಡ.
[30] ಸೋಮಾರಿಯ ಹೊಲದ ಮೇಲೆಯೂ, ಬುದ್ಧಿಹೀನನ ದ್ರಾಕ್ಷಿಯ ತೋಟದ ಮೇಲೆಯೂ ಹಾದು ಹೋದೆನು.
[31] ಆಹಾ, ಮುಳ್ಳುಗಿಡಗಳು ಅದರಲ್ಲಿ ಹರಡಿಕೊಂಡಿದ್ದವು, ಕಳೆಗಳು ಅದನ್ನು ಮುಚ್ಚಿದ್ದವು, ಅದರ ಕಲ್ಲಿನ ಗೋಡೆಯು ಹಾಳಾಗಿತ್ತು.
[32] ಆಗ ನಾನು ನೋಡಿ ಆಲೋಚಿಸಿದೆನು, ದೃಷ್ಟಿಸಿ ಶಿಕ್ಷಿತನಾದೆನು.
[33] ಇನ್ನು ಸ್ವಲ್ಪ ನಿದ್ದೆ, ಇನ್ನು ತುಸ ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ?
[34] ಬಡತನವು ದಾರಿಗಳ್ಳನ ಹಾಗೂ, ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.