Skip to content
Opens in a new window
Listen to this chapter • 2:48

[1] ವ್ಯಾಜ್ಯದ ಮನೆಯಲ್ಲಿ ತುಂಬಿದ ಔತಣಕ್ಕಿಂತಲೂ, ಸಮಾಧಾನದ ಒಣತುತ್ತೇ ಮೇಲು.

[2] ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರಮಾಡುವನು, ಮನೆಮಕ್ಕಳೊಂದಿಗೆ ಬಾಧ್ಯತೆಯನ್ನು ಹೊಂದುವನು.

[3] ಬೆಳ್ಳಿಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು, ಹೃದಯಗಳನ್ನು ಶೋಧಿಸುವವನು ಯೆಹೋವನೇ.

[4] ಕೆಡುಕನು ಕೆಟ್ಟ ತುಟಿಗಳನ್ನು ಗಮನಿಸುವನು, ಸುಳ್ಳುಗಾರನು ನಾಶನದ ನಾಲಿಗೆಗೆ ಕಿವಿಗೊಡುವನು.

[5] ಬಡವರನ್ನು ಹಾಸ್ಯಮಾಡುವವನು ಸೃಷ್ಟಿಕರ್ತನನ್ನೇ ಹೀನೈಸುವನು, ಪರರ ವಿಪತ್ತಿಗೆ ಹಿಗ್ಗುವವನು ದಂಡನೆಯನ್ನು ಹೊಂದದಿರನು.

[6] ಮಕ್ಕಳ ಸಂತತಿಯವರು ವೃದ್ಧರಿಗೆ ಕಿರೀಟ, ತಂದೆತಾಯಿಗಳು ಮಕ್ಕಳಿಗೆ ಭೂಷಣ.

[7] ಉತ್ತಮವಾದ ಮಾತು ಮೂರ್ಖನಿಗೆ ಅಯುಕ್ತ, ಸುಳ್ಳುಮಾತು ಉತ್ತಮನಿಗೆ ಮತ್ತೂ ಅಯುಕ್ತ.

[8] ಕೊಡುವವನ ದೃಷ್ಟಿಗೆ ಲಂಚವು ಚಿಂತಾಮಣಿಯಾಗಿದೆ, ಎಲ್ಲಿ ಹೋದರೂ ಅವನಿಗೆ ಅನುಕೂಲವೇ.

[9] ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು, ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು.

[10] ಮಂದಮತಿಗೆ ನೂರು ಪೆಟ್ಟು ಹೊಡೆಯುವುದಕ್ಕಿಂತಲೂ, ಗದರಿಕೆಯೇ ವಿವೇಕಿಗೆ ಹೆಚ್ಚಾದ ಶಿಕ್ಷೆ.

[11] ದುರಾತ್ಮನಿಗೆ ದಂಗೆಯ ಮೇಲೆಯೇ ಮನಸ್ಸು, ಕ್ರೂರದೂತನು ಅವನನ್ನು ಆಕ್ರಮಿಸುವನು.

[12] ಮೂರ್ಖತನದಲ್ಲಿ ಮುಳುಗಿರುವ ಮೂಢನನ್ನು ಎದುರಾಗುವುದಕ್ಕಿಂತಲೂ, ಮರಿಗಳನ್ನು ಕಳೆದುಕೊಂಡ ಕರಡಿಯನ್ನು ಎದುರಾಗುವುದು ಲೇಸು.

[13] ಉಪಕಾರಕ್ಕೆ ಅಪಕಾರಮಾಡುವವನ ಮನೆಗೆ ಕೇಡು ತಪ್ಪದು.

[14] ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ, ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು.

[15] ದುಷ್ಟನನ್ನು ಶಿಷ್ಟನೆಂದು, ಶಿಷ್ಟನನ್ನು ದುಷ್ಟನೆಂದು ನಿರ್ಣಯಿಸುವವರಿಬ್ಬರೂ ಯೆಹೋವನಿಗೆ ಅಸಹ್ಯರು.

[16] ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಅವನಿಗೆ ಬುದ್ಧಿಯೇ ಇಲ್ಲವಲ್ಲಾ.

[17] ಮಿತ್ರನ ಪ್ರೀತಿಯು ನಿರಂತರ, ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.

[18] ನೆರೆಯವನಿಗಾಗಿ ಪ್ರಮಾಣಮಾಡಿ ಹೊಣೆಯಾದವನು ಬುದ್ಧಿಹೀನನೇ ಸರಿ.

[19] ಪಾಪಪ್ರಿಯನು ಕಲಹಪ್ರಿಯ, ಸೊಕ್ಕಿನಿಂದ ಮಾತನಾಡುವವನು ಕೇಡು ಬರಮಾಡಿಕೊಳ್ಳುವನು.

[20] ವಕ್ರ ಹೃದಯನು ಶುಭವನ್ನು ಪಡೆಯನು, ಕೆಟ್ಟ ನಾಲಿಗೆಯವನು ವಿಪತ್ತಿಗೆ ಸಿಕ್ಕಿಬೀಳುವನು.

[21] ಮೂರ್ಖನನ್ನು ಹೆತ್ತವರಿಗೆ ವ್ಯಥೆ, ಮೂರ್ಖನ ತಂದೆಗೆ ವ್ಯಸನ.

[22] ಹರ್ಷಹೃದಯವು ಒಳ್ಳೆಯ ಔಷಧ, ಕುಗ್ಗಿದ ಮನದಿಂದ ಅನಾರೋಗ್ಯ.

[23] ದುಷ್ಟನು ಲಂಚವನ್ನು ಗುಪ್ತವಾಗಿ ತೆಗೆದುಕೊಂಡು, ನ್ಯಾಯವನ್ನು ತಪ್ಪಿಸುವನು.

[24] ವಿವೇಕಿಗೆ ಜ್ಞಾನವೇ ಗುರಿಯಾಗಿರುವುದು, ಮೂಢನ ದೃಷ್ಟಿಯು ದಿಗಂತಗಳಲ್ಲಿಯೂ ಅಲೆಯುವುದು.

[25] ಜ್ಞಾನಹೀನನಾದ ಮಗನು ತಂದೆಗೆ ಕಿರಿಕಿರಿ, ತಾಯಿಗೆ ಕರಕರೆ.

[26] ಶಿಷ್ಟನಿಗೆ ದಂಡನೆ ಯುಕ್ತವಲ್ಲ, ಧರ್ಮಿಷ್ಠನಿಗೆ ಪೆಟ್ಟು ಅಧರ್ಮ.

[27] ಮಿತವಾಗಿ ಮಾತನಾಡುವವನು ಜ್ಞಾನಿ, ಶಾಂತಾತ್ಮನು ವಿವೇಕಿ.

[28] ಮೂಢನು ಕೂಡ ಸುಮ್ಮನಿದ್ದರೆ ಜ್ಞಾನಿಯೆಂತಲೂ, ತುಟಿಗಳನ್ನು ಬಿಗಿಹಿಡಿದರೆ ವಿವೇಕಿಯೆಂತಲೂ ಅನ್ನಿಸಿಕೊಳ್ಳುವನು.

ಜ್ಞಾನೋಕ್ತಿಗಳು — Chapters