Skip to content
Opens in a new window
Listen to this chapter • 2:24

[1] ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ, ಸಮಸ್ತ ಸುಜ್ಞಾನಕ್ಕೂ ರೇಗುವನು.

[2] ಮೂಢನಿಗೆ ವಿವೇಕವು ಅನಿಷ್ಟ; ಸ್ವಭಾವವನ್ನು ಹೊರಪಡಿಸಿಕೊಳ್ಳುವುದೇ ಅವನಿಗಿಷ್ಟ.

[3] ದುರಾಚಾರವಿದ್ದಲ್ಲಿ ತಾತ್ಸಾರ; ಅವಮಾನವಿದ್ದಲ್ಲಿ ಧಿಕ್ಕಾರ.

[4] ಸತ್ಪುರುಷನ ನುಡಿಯು ಆಳವಾದ ನೀರು, ಜ್ಞಾನದ ಬುಗ್ಗೆ, ಹರಿಯುವ ತೊರೆ.

[5] ದುಷ್ಟನಿಗೆ ಪ್ರಸನ್ನನಾಗಿ ಶಿಷ್ಟನಿಗೆ ನ್ಯಾಯತಪ್ಪಿಸುವುದು ಅಧರ್ಮ.

[6] ಜ್ಞಾನಹೀನನ ತುಟಿಗಳು ಜಗಳವನ್ನು ಉಂಟುಮಾಡುತ್ತವೆ, ಅವನ ಬಾಯಿ ಪೆಟ್ಟುತಿನ್ನುವುದಕ್ಕೆ ಕೂಗಿಕೊಳ್ಳುತ್ತದೆ.

[7] ಜ್ಞಾನಹೀನನಿಗೆ ಬಾಯಿ ನಾಶ, ತುಟಿಗಳು ಪಾಶ.

[8] ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳು, ಹೊಟ್ಟೆಯೊಳಕ್ಕೇ ಇಳಿಯುವವು.

[9] ಕೆಲಸಗಳ್ಳನು ಕೆಡುಕನಿಗೆ ತಮ್ಮ.

[10] ಯೆಹೋವನ ನಾಮವು ಬಲವಾದ ಬುರುಜು, ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.

[11] ಧನವಂತನು ತನ್ನ ಐಶ್ವರ್ಯವನ್ನು ಬಲವಾದ ಕೋಟೆಯೆಂದು, ಎತ್ತರವಾದ ಗೋಡೆಯೆಂದು ಭಾವಿಸಿಕೊಳ್ಳುತ್ತಾನೆ.

[12] ಭಂಗಕ್ಕೆ ಮೊದಲು ಗರ್ವದ ಹೃದಯ, ಮಾನಕ್ಕೆ ಮುಂಚೆ ದೀನತೆ.

[13] ಗಮನಿಸದೆ ಉತ್ತರಕೊಡುವವನು, ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.

[14] ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು, ಆತ್ಮವೇ ನೊಂದರೆ ಸಹಿಸುವವರು ಯಾರು?

[15] ವಿವೇಕಿಯ ಹೃದಯವು ತಿಳಿವಳಿಕೆಯನ್ನು ಸಂಪಾದಿಸುವುದು, ಜ್ಞಾನಿಯ ಕಿವಿಯು ತಿಳಿವಳಿಕೆಯನ್ನು ಹುಡುಕುವುದು.

[16] ಕಾಣಿಕೆಯು ಅನುಕೂಲತೆಗೂ, ಶ್ರೀಮಂತರ ಸಾನ್ನಿಧ್ಯ ಪ್ರವೇಶಕ್ಕೂ ಸಾಧನ.

[17] ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು, ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವುದು.

[18] ಚೀಟು ಹಾಕುವುದರಿಂದ ವ್ಯಾಜ್ಯಶಮನವೂ, ಬಲಿಷ್ಠರ ನ್ಯಾಯಾನ್ಯಾಯಗಳ ವಿವೇಚನೆಯೂ ಆಗುವುದು.

[19] ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂತ ಅನ್ಯಾಯಹೊಂದಿದ ಸಹೋದರನನ್ನು ಗೆಲ್ಲುವುದು ಅಸಾಧ್ಯ, ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ.

[20] ಮನುಷ್ಯನು ತನ್ನ ಬಾಯಿಯ ಬೆಳೆಯನ್ನು ಹೊಟ್ಟೆ ತುಂಬಾ ಉಣ್ಣುವನು, ತನ್ನ ತುಟಿಗಳ ಫಲವನ್ನು ಸಾಕಷ್ಟು ತಿನ್ನುವನು.

[21] ಜೀವ ಮತ್ತು ಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು,

[22] ಪತ್ನಿಲಾಭವು ರತ್ನಲಾಭ, ಅದು ಯೆಹೋವನ ಅನುಗ್ರಹವೇ.

[23] ಬಡವನು ಬಿನ್ನೈಸುವನು, ಬಲ್ಲಿದನು ಉತ್ತರವನ್ನು ಉಗ್ರವಾಗಿ ಕೊಡುವನು.

[24] ಬಹಳ ಗೆಳೆಯರನ್ನು ಸೇರಿಸಿಕೊಂಡವನಿಗೆ ನಾಶನ, ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು.

ಜ್ಞಾನೋಕ್ತಿಗಳು — Chapters