[1] ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವೋಕ್ತಿಯು,
[2] ಏನು, ಕಂದಾ? ನನ್ನ ಗರ್ಭಪುತ್ರನೇ, ಏನು, ನನ್ನ ಹರಕೆಯ ಮಗುವೇ, ನಾನು ಏನು ಹೇಳಲಿ?
[3] ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸಬೇಡ, ರಾಜರಿಗೆ ವಿನಾಶಕರವಾದ ದಾರಿಗೆ ತಿರುಗಬೇಡ.
[4] ದ್ರಾಕ್ಷಾರಸವನ್ನು ಕುಡಿಯುವುದು ರಾಜರಿಗೆ ಯೋಗ್ಯವಲ್ಲ, ಲೆಮೂವೇಲನೇ, ಅದು ರಾಜರಿಗೆ ಯೋಗ್ಯವಲ್ಲ, “ಮದ್ಯವೆಲ್ಲಿ?” ಎನ್ನುವುದು ಪ್ರಭುಗಳಿಗೆ ವಿಹಿತವಲ್ಲ.
[5] ಕುಡಿದರೆ ಅವರು ಧರ್ಮನಿಯಮಗಳನ್ನು ಮರೆತುಬಿಟ್ಟು, ಬಾಧೆಪಡುವವರೆಲ್ಲರ ನ್ಯಾಯವನ್ನು ವ್ಯತ್ಯಾಸಮಾಡುವರು.
[6] ಮದ್ಯವನ್ನು ಗತಿಯಿಲ್ಲದವನಿಗೂ, ದ್ರಾಕ್ಷಾರಸವನ್ನು ಮನೋವ್ಯಥೆಪಡುವವನಿಗೂ ಕೊಟ್ಟರೆ ಕೊಡು.
[7] ಕುಡಿದು ಬಡತನವನ್ನು ಮರೆತುಬಿಡಲಿ, ಶ್ರಮೆಯನ್ನು ಇನ್ನೂ ಜ್ಞಾಪಕಕ್ಕೆ ತಾರದಿರಲಿ.
[8] ಬಾಯಿಲ್ಲದವರಿಗೂ, ಹಾಳಾಗಿ ಹೋಗುತ್ತಿರುವವರೆಲ್ಲರಿಗೂ, ನ್ಯಾಯವಾಗುವಂತೆ ಬಾಯಿ ತೆರೆ.
[9] ಬಾಯನ್ನು ತೆರೆದು ನ್ಯಾಯವನ್ನು ತೀರಿಸು, ದೀನದರಿದ್ರರ ವ್ಯಾಜ್ಯ ಮಾಡು.
[10] ಗುಣವತಿಯಾದ ಸತಿಯು ಎಲ್ಲಿ ಸಿಕ್ಕುವಳು? ಆಕೆಯು ಹವಳಕ್ಕಿಂತಲೂ ಬಹೂ ಅಮೂಲ್ಯಳು.
[11] ಪತಿಯ ಹೃದಯವು ಆಕೆಯಲ್ಲಿ ಭರವಸವಿಡುವುದು, ಅವನು ಕೊಳ್ಳೆ ಕೊಳ್ಳೆಯಾಗಿ ಸಂಪಾದಿಸುವನು.
[12] ಆಕೆಯು ಜೀವಮಾನದಲ್ಲೆಲ್ಲಾ ಅವನಿಗೆ ಅಹಿತವನ್ನು ಮಾಡದೆ, ಹಿತವನ್ನೇ ಮಾಡುತ್ತಿರುವಳು.
[13] ಉಣ್ಣೆಯನ್ನೂ, ಸೆಣಬನ್ನೂ ಹುಡುಕಿ ತಂದು, ಕೈಕೆಲಸವನ್ನು ಆಸಕ್ತಿಯಿಂದ ಮಾಡುವಳು.
[14] ವ್ಯಾಪಾರದ ಹಡಗುಗಳಂತೆ, ದೂರದಿಂದ ಬೇಕಾದ ಆಹಾರವನ್ನು ತರುವಳು.
[15] ಇನ್ನೂ ಕತ್ತಲಿರುವಾಗಲೇ ಎದ್ದು, ಮನೆಯವರಿಗೆ ಆಹಾರವನ್ನು, ನೀಡುವಳು ದಾಸಿಯರಿಗೆ ದಿನದ ಕೆಲಸಗಳನ್ನು ಹಂಚುವಳು.
[16] ಹೊಲವನ್ನು ನೋಡಿ ಯೋಚಿಸಿ ಕೊಂಡುಕೊಳ್ಳುವಳು, ತನ್ನ ಕೈಗೆಲಸದ ಲಾಭದಿಂದ ದ್ರಾಕ್ಷಿತೋಟವನ್ನು ಮಾಡಿಸುವಳು.
[17] ನಡುವಿನ ಬಲವೆಂಬ ಪಟ್ಟಿಯನ್ನು ಕಟ್ಟಿಕೊಂಡು, ತೋಳುಗಳನ್ನು ಶಕ್ತಿಗೊಳಿಸುವಳು.
[18] ವಿವೇಚಿಸಿ ಬಹುಲಾಭವಾಯಿತೆಂದು ತಿಳುಕೊಳ್ಳುವಳು, ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು.
[19] ರಾಟೆಯ ಮೇಲೆ ಕೈ ಹಾಕಿ, ಕದರನ್ನು ಹಿಡಿಯುವಳು.
[20] ಬಡವರಿಗಾಗಿ ಕೈ ಬಿಚ್ಚಿ, ದಿಕ್ಕಿಲ್ಲದವರಿಗೆ ಕೈ ನೀಡುವಳು.
[21] ಮನೆಯವರೆಲ್ಲರಿಗೂ ಸಕಲಾತಿಯನ್ನು ಹೊದಿಸಿರುವುದರಿಂದ, ಅವರ ವಿಷಯವಾಗಿ ಆಕೆಗೆ ಹಿಮದ ಭಯವಿಲ್ಲ.
[22] ತನಗಾಗಿ ರತ್ನಗಂಬಳಿಗಳನ್ನು ಮಾಡುವಳು, ಆಕೆಯ ಉಡುಪು ನಾರುಮಡಿ, ರಕ್ತಾಂಬರ.
[23] ಆಕೆಯ ಪತಿಯು ನ್ಯಾಯಸ್ಥಾನದಲ್ಲಿ, ದೇಶದ ಹಿರಿಯರ ಮಧ್ಯದಲ್ಲಿ ಕುಳಿತಿರುವಾಗ ಪ್ರಸಿದ್ಧನಾಗಿ ಕಾಣುವನು.
[24] ಹಚ್ಚಡಗಳನ್ನು ನೆಯ್ದು ಮಾರಾಟಮಾಡುವಳು, ನಡುಕಟ್ಟುಗಳನ್ನು ವರ್ತಕನಿಗೆ ಒದಗಿಸುವಳು.
[25] ಬಲವನ್ನು, ತೇಜಸ್ಸನ್ನು ಹೊದ್ದುಕೊಂಡಿರುವಳು, ಭವಿಷ್ಯತ್ತಿನ ಭಯವಿಲ್ಲದೆ ನಗುತ್ತಿರುವಳು.
[26] ಬಾಯಿದೆರೆದು ಜ್ಞಾನವನ್ನು ತೋರ್ಪಡಿಸುವಳು. ಆಕೆಯ ನಾಲಿಗೆಯು ಬುದ್ಧಿಯನ್ನು ಪ್ರೀತಿಪೂರ್ವಕವಾಗಿ ಹೇಳುವುದು.
[27] ಸೋಮಾರಿತನದ ಅನ್ನವನ್ನು ತಿನ್ನದೆ, ಗೃಹಕೃತ್ಯಗಳನ್ನೆಲ್ಲಾ ನೋಡಿಕೊಳ್ಳುವಳು.
[28] ಮಕ್ಕಳು ಎದ್ದುನಿಂತು ಆಕೆಯನ್ನು “ಧನ್ಯಳು” ಎಂದು ಹೇಳುವರು.
[29] ಪತಿಯು ಸಹ, “ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ, ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠಳು” ಎಂದು ಆಕೆಯನ್ನು ಕೊಂಡಾಡುವನು.
[30] ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ, ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು.
[31] ಆಕೆಯ ಕೈಕೆಲಸಕ್ಕೆ ಪ್ರತಿಫಲವನ್ನು ಸಲ್ಲಿಸಿರಿ, ಆಕೆಯ ಕಾರ್ಯಗಳೇ ಪುರದ್ವಾರಗಳಲ್ಲಿ ಆಕೆಯನ್ನು ಪ್ರಶಂಸಿಸಲಿ.