[1] ಹೃದಯದ ಸಂಕಲ್ಪವು ಮನುಷ್ಯನ ವಶವು, ತಕ್ಕ ಉತ್ತರಕೊಡುವ ಶಕ್ತಿಯು ಯೆಹೋವನಿಂದಾಗುವುದು.
[2] ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧವಾಗಿದೆ, ಯೆಹೋವನು ಅಂತರಂಗವನ್ನೇ ಪರೀಕ್ಷಿಸುವನು.
[3] ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ, ನಿನ್ನ ಉದ್ದೇಶಗಳು ಸಫಲವಾಗುವವು.
[4] ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ, ಹೌದು, ಕೇಡಿನ ದಿನಕ್ಕಾಗಿ ಕೆಡುಕರನ್ನು ಉಂಟುಮಾಡಿದ್ದಾನೆ.
[5] ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ, ಅವರಿಗೆ ದಂಡನೆ ಖಂಡಿತ.
[6] ಕೃಪಾಸತ್ಯತೆಗಳಿಂದ ಪಾಪನಿವಾರಣೆ, ಯೆಹೋವನ ಭಯಭಕ್ತಿಯಿಂದ ಹಾನಿನಿವಾರಣೆ.
[7] ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ, ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು.
[8] ಅನ್ಯಾಯದಿಂದ ಗಳಿಸಿದ ಬಹು ಧನಕ್ಕಿಂತಲೂ, ನ್ಯಾಯದಿಂದ ಕೂಡಿಸಿದ ಅಲ್ಪ ಧನವೇ ಲೇಸು.
[9] ಮನುಷ್ಯನು ತನ್ನ ಮನದಂತೆ ದಾರಿಯನ್ನು ಆರಿಸಿಕೊಂಡರೂ, ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು.
[10] ರಾಜನ ತುಟಿಗಳಲ್ಲಿ ದೈವೋಕ್ತಿ, ನ್ಯಾಯತೀರಿಸುವುದರಲ್ಲಿ ಅವನ ಬಾಯಿ ತಪ್ಪಿಹೋಗದು.
[11] ನ್ಯಾಯದ ಅಳತೆ ಮತ್ತು ತಕ್ಕಡಿಗಳು ಯೆಹೋವನ ಏರ್ಪಾಡು, ಚೀಲದಲ್ಲಿನ ತೂಕದಕಲ್ಲುಗಳೆಲ್ಲಾ ಆತನ ಕೈಕೆಲಸವೇ.
[12] ರಾಜರು ಸಿಂಹಾಸನಕ್ಕೆ ಧರ್ಮವೇ ಆಧಾರವೆಂದು ತಿಳಿದು, ಅಧರ್ಮವನ್ನಾಚರಿಸಲು ಅಸಹ್ಯಪಡುವರು.
[13] ರಾಜರು ಸತ್ಯದ ತುಟಿಗಳನ್ನು ಮೆಚ್ಚುವರು, ಯಥಾರ್ಥವಾದಿಯನ್ನು ಪ್ರೀತಿಸುವರು.
[14] ರಾಜನ ಕೋಪ ಮೃತ್ಯುವಿನ ದೂತ, ಜಾಣನು ಅದನ್ನು ಶಮನಪಡಿಸುವನು.
[15] ಪ್ರಭುವಿನ ಮುಖಪ್ರಸನ್ನತೆ ಜೀವ, ಆತನ ದಯೆ ಮುಂಗಾರುಮುಗಿಲು.
[16] ಬಂಗಾರಕ್ಕಿಂತಲೂ ಜ್ಞಾನವನ್ನು ಪಡೆಯುವುದು ಎಷ್ಟೋ ಮೇಲು, ಬೆಳ್ಳಿಗಿಂತಲೂ ವಿವೇಕವನ್ನು ಹೊಂದುವುದು ಲೇಸು.
[17] ಸತ್ಯವಂತನ ರಾಜಮಾರ್ಗ ಹಾನಿಗೆ ದೂರ, ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.
[18] ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು.
[19] ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವುದಕ್ಕಿಂತಲೂ, ದೀನರ ಸಂಗಡ ದೈನ್ಯದಿಂದಿರುವುದು ವಾಸಿ.
[20] ದೇವರ ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು, ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು.
[21] ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವುದು, ಸವಿತುಟಿಯಿಂದ ಉಪದೇಶ ಶಕ್ತಿಯು ಹೆಚ್ಚುವುದು.
[22] ವಿವೇಕಿಗೆ ವಿವೇಕವೇ ಜೀವದ ಬುಗ್ಗೆ, ಮೂರ್ಖನಿಗೆ ಮೂರ್ಖತನವೇ ದಂಡನೆ.
[23] ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.
[24] ಸವಿನುಡಿಯು ಜೇನುಕೊಡ, ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.
[25] ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು, ಕಟ್ಟಕಡೆಗೆ ಅದು ಮರಣಮಾರ್ಗವೇ.
[26] ದುಡಿಯುವವನಿಗೆ ಅವನ ಹೊಟ್ಟೆಯೇ ದುಡಿಯುವಂತೆ ಮಾಡುವುದು, ದುಡಿಯಲಿಕ್ಕೆ ಅವನ ಬಾಯೇ ಅವನನ್ನು ಒತ್ತಾಯ ಮಾಡುವುದು.
[27] ನೀಚನು ಕೇಡೆಂಬ ಕುಣಿಯನ್ನು ತೋಡುತ್ತಾನೆ, ಅವನ ಮಾತುಗಳು ಬೆಂಕಿಯ ಉರಿಯಂತಿದೆ.
[28] ತುಂಟನು ಜಗಳ ಬಿತ್ತುತ್ತಾನೆ, ಚಾಡಿಕೋರನು ಮಿತ್ರರನ್ನು ಅಗಲಿಸುತ್ತಾನೆ.
[29] ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ, ದುರ್ಮಾರ್ಗಕ್ಕೆ ಎಳೆಯುವನು.
[30] ಕಣ್ಣನ್ನು ಮುಚ್ಚಿಕೊಳ್ಳುವವನು ಕುಯುಕ್ತಿಯನ್ನು ಕಲ್ಪಿಸುವನು, ತುಟಿಯನ್ನು ಕಚ್ಚುವವನು ಕೇಡನ್ನು ಸಾಧಿಸುವನು.
[31] ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವುದು.
[32] ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ, ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ.
[33] ಮಡಲಿನಲ್ಲಿ ಚೀಟು ಹಾಕಬಹುದು, ಅದರ ತೀರ್ಪು ಯೆಹೋವನದೇ.