[1] ಕಪಟವಾಗಿ ಮಾತನಾಡುವ ಮೂಢನಿಗಿಂತಲೂ, ನಿರ್ದೋಷಿಯಾಗಿ ನಡೆಯುವ ದರಿದ್ರನೇ ಶ್ರೇಷ್ಠ.
[2] ತಿಳಿವಳಿಕೆಯಿಲ್ಲದೆ ಕೋರುವುದು ಯುಕ್ತವಲ್ಲ, ದುಡುಕುವ ಕಾಲು ದಾರಿತಪ್ಪುವುದು.
[3] ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು, ಯೆಹೋವನ ಮೇಲೆ ಕುದಿಯುವನು.
[4] ಭಾಗ್ಯವಂತನಿಗೆ ಬಹು ಮಂದಿ ಸ್ನೇಹಿತರು, ಬಡವನಿಗೆ ಇದ್ದ ಸ್ನೇಹಿತನೂ ದೂರವಾಗುವನು.
[5] ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ, ಸುಳ್ಳಾಡುವವನು ತಪ್ಪಿಸಿಕೊಳ್ಳನು.
[6] ಉದಾರಿಯ ಕಟಾಕ್ಷವನ್ನು ಅನೇಕರು ಕೋರುವರು, ದಾನಶೂರನಿಗೆ ಪ್ರತಿಯೊಬ್ಬನೂ ಸ್ನೇಹಿತನಲ್ಲವೇ.
[7] ಬಡವನನ್ನು ಬಂಧುಗಳೆಲ್ಲಾ ಹಗೆಮಾಡುವರು, ಹೌದು, ಮಿತ್ರರೂ ಅವನಿಗೆ ದೂರವಾಗುವರು. ಅವರ ಬರೀ ಮಾತುಗಳನ್ನು ನಂಬಿ ಹಿಂಬಾಲಿಸಿದರೆ ಏನೂ ಸಿಕ್ಕದು.
[8] ಬುದ್ಧಿಯನ್ನು ಸಂಪಾದಿಸುವವನು ತನಗೆ ತಾನೇ ಮಿತ್ರನು, ವಿವೇಕವನ್ನು ಕಾಪಾಡುವವನು ಮೇಲನ್ನು ಪಡೆಯುವನು.
[9] ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ, ಸುಳ್ಳಾಡುವವನು ಹಾಳಾಗುವನು.
[10] ಮೂಢನಿಗೆ ಸುಖಭೋಗ ಜೀವನ ಯುಕ್ತವಲ್ಲ, ದಾಸನಿಗೆ ದೊರೆಗಳ ಮೇಲಣ ದೊರೆತನ ಯುಕ್ತವಲ್ಲ.
[11] ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ, ಪರರ ದೋಷವನ್ನು ಲಕ್ಷಿಸದಿರುವುದು ಅವನಿಗೆ ಭೂಷಣ.
[12] ರಾಜನ ರೋಷವು ಸಿಂಹದ ಗರ್ಜನೆ, ಅವನ ದಯೆಯು ಪೈರಿನ ಇಬ್ಬನಿ.
[13] ಜ್ಞಾನಹೀನನಾದ ಮಗನು ತಂದೆಗೆ ಹಾನಿ, ಜಗಳವಾಡುವ ಹೆಂಡತಿಯು ತಟತಟನೆ ತೊಟ್ಟಿಕ್ಕುವ ಹನಿ.
[14] ಮನೆಮಾರು, ಆಸ್ತಿಪಾಸ್ತಿಯು ಪೂರ್ವಿಕರಿಂದ ದೊರಕುವವು, ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ.
[15] ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುವುದು, ಸೋಮಾರಿಯು ಹಸಿವೆಗೊಳ್ಳುವನು.
[16] ಆಜ್ಞೆಯನ್ನು ಪಾಲಿಸುವವನು ಆತ್ಮವನ್ನು ಪಾಲಿಸುವನು, ನಡತೆಯನ್ನು ಲಕ್ಷಿಸದವನು ಸಾಯುವನು.
[17] ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು, ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು.
[18] ಬುದ್ಧಿ ಬರುವುದೆಂಬ ನಿರೀಕ್ಷೆಯಿಂದ ಮಗನನ್ನು ಶಿಕ್ಷಿಸು, ಹಾಳುಮಾಡಲು ಮನಸ್ಸು ಮಾಡಬೇಡ,
[19] ಕೋಪಿಷ್ಠನು ತನಗಾಗುವ ದಂಡನೆಯನ್ನು ಅನುಭವಿಸಲಿ, ಬಿಡಿಸಿದರೆ ಪ್ರತಿಬಾರಿಯೂ ಬಿಡಿಸಬೇಕಾಗುವುದು.
[20] ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ.
[21] ಮನುಷ್ಯನ ಮನಸ್ಸಿನಲ್ಲಿ ಅನೇಕ ಸಂಕಲ್ಪಗಳಿವೆ, ಯೆಹೋವನ ಸಂಕಲ್ಪವೇ ಈಡೇರುವುದು.
[22] ಮನುಷ್ಯನು ತನ್ನ ಹೃದಯದಲ್ಲಿ ಬಯಸುವಂಥದ್ದು ನಿಷ್ಠೆಯಾಗಿದೆ, ಬಡವನಾಗಿರುವುದು ಉತ್ತಮ.
[23] ಯೆಹೋವನ ಭಯವು ಜೀವದಾಯಕವು, ಭಯಭಕ್ತಿಯುಳ್ಳವನು ತೃಪ್ತನಾಗಿ ನೆಲೆಗೊಳ್ಳುವನು, ಅವನಿಗೆ ಕೇಡು ಸಂಭವಿಸದು.
[24] ಮೈಗಳ್ಳನು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ, ತಿರುಗಿ ಬಾಯಿಯ ಹತ್ತಿರಕ್ಕೆ ತರಲಾರನು.
[25] ಧರ್ಮನಿಂದಕನಿಗೆ ಪೆಟ್ಟುಹೊಡೆ, ನೋಡಿದ ಅವಿವೇಕಿ ಜಾಣನಾಗುವನು, ವಿವೇಕಿಯನ್ನು ಗದರಿಸು, ತಾನೇ ತಿಳಿವಳಿಕೆಯನ್ನು ಗ್ರಹಿಸುವನು.
[26] ತಂದೆಯನ್ನು ಹೊಡೆದು, ತಾಯಿಯನ್ನು ಓಡಿಸುವ ಮಗನು, ನಾಚಿಕೆಯನ್ನು ಮತ್ತು ಅವಮಾನವನ್ನು ಉಂಟುಮಾಡುವನು.
[27] ಮಗನೇ, ಬುದ್ಧಿವಾದಗಳನ್ನು ಅನುಸರಿಸಲಿಕ್ಕೆ ಮನಸ್ಸಿಲ್ಲದಿದ್ದರೆ, ಉಪದೇಶ ಕೇಳುವುದನ್ನೇ ಬಿಟ್ಟುಬಿಡು.
[28] ನೀಚ ಸಾಕ್ಷಿಯು ನ್ಯಾಯವನ್ನು ಗೇಲಿಮಾಡುವನು, ದುಷ್ಟರ ಬಾಯಿ ದ್ರೋಹವನ್ನು ಆತುರದಿಂದ ನುಂಗುವುದು.
[29] ಧರ್ಮನಿಂದಕರಿಗೆ ದಂಡನೆಯ ತೀರ್ಪು ಸಿದ್ಧ, ಮೂಢರ ಬೆನ್ನಿಗೆ ಪೆಟ್ಟು ಖಂಡಿತ.