[1] ಜ್ಞಾನಿಯಾದ ಮಗನು ತಂದೆಯ ನೀತಿ ಶಿಕ್ಷಣವನ್ನು ಕೇಳುವನು, ಧರ್ಮನಿಂದಕನೋ ಗದರಿಕೆಯನ್ನು ಕೇಳನು.
[2] ಬಾಯಿಯ ಫಲವಾಗಿ ಮನುಷ್ಯನು ಸುಖವನ್ನು ಅನುಭವಿಸುವನು, ಬಲಾತ್ಕಾರವೇ ದ್ರೋಹಿಗಳ ಕೋರಿಕೆ.
[3] ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ, ತುಟಿಗಳನ್ನು ತೆರೆದುಬಿಡುವವನು ನಾಶವಾಗುವನು.
[4] ಸೋಮಾರಿಯ ಆಶೆಯು ವ್ಯರ್ಥ, ಉದ್ಯೋಗಿಯ ಆತ್ಮಕ್ಕೆ ಪುಷ್ಟಿ.
[5] ಶಿಷ್ಟನು ಮೋಸಕ್ಕೆ ಅಸಹ್ಯಪಟ್ಟು ಅದನ್ನು ಮಾಡಲಾರನು, ದುಷ್ಟನ ನಡತೆಯು ಹೇಸಿಕೆಗೂ, ನಾಚಿಕೆಗೂ ಆಸ್ಪದ.
[6] ಧರ್ಮವು ನಿರ್ದೋಷಿಯನ್ನು ಕಾಯುವುದು, ಅಧರ್ಮವು ದೋಷಿಯನ್ನು ಕೆಡವಿಬಿಡುವುದು.
[7] ಒಬ್ಬನು ಧನವನ್ನು ಸಂಗ್ರಹಿಸಿದರೂ, ಏನೂ ಇಲ್ಲದ ದರಿದ್ರನ ಹಾಗೆ ವರ್ತಿಸುತ್ತಾನೆ, ಮತ್ತೊಬ್ಬನು ಧನವನ್ನೆಲ್ಲಾ ವೆಚ್ಚಮಾಡಿ ಬಡವನಾದರೂ, ಬಹು ಐಶ್ವರ್ಯವಂತನ ಹಾಗೆ ವರ್ತಿಸುತ್ತಾನೆ.
[8] ಧನವಂತನ ಪ್ರಾಣರಕ್ಷಣೆಗೆ ಅವನ ಧನವೇ ಕ್ರಯ, ಬಡವನಿಗೆ ಯಾವ ಬೆದರಿಕೆಯೂ ಇಲ್ಲ.
[9] ಶಿಷ್ಟರ ಬೆಳಕು ಬೆಳಗುವುದು, ದುಷ್ಟರ ದೀಪವು ಆರುವುದು.
[10] ಹೆಮ್ಮೆಯ ಫಲವು ಕಲಹವೇ, ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ.
[11] ಸುಮ್ಮನೆ ಸಿಕ್ಕಿದ ಸಂಪತ್ತು ಕ್ಷಯಿಸುವುದು, ದುಡಿದು ಕೂಡಿಸಿಕೊಂಡವನಿಗೆ ಅಭಿವೃದ್ಧಿಯಾಗುವುದು.
[12] ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವುದು, ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.
[13] ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು, ಆಜ್ಞೆಯನ್ನು ಭಯಭಕ್ತಿಯಿಂದ ಕೈಕೊಳ್ಳುವವನು ಸಫಲವನ್ನು ಹೊಂದುವನು.
[14] ಜ್ಞಾನಿಯ ಬೋಧನೆ ಜೀವದ ಬುಗ್ಗೆ, ಅದನ್ನಾಲಿಸುವವನು ಮೃತ್ಯುಪಾಶದಿಂದ ತಪ್ಪಿಸಿಕೊಳ್ಳುವನು.
[15] ಸುಬುದ್ಧಿಯು ದಯಾಸ್ಪದವು, ದ್ರೋಹಿಯ ಮಾರ್ಗವು ನಾಶಕರ.
[16] ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳಿವಳಿಕೆಯಿಂದ ನಡೆಸುವನು, ಮೂಢನು ತನ್ನ ಮೂರ್ಖತನವನ್ನು ತೋರ್ಪಡಿಸುವನು.
[17] ಕೆಟ್ಟ ದೂತನು ಕೇಡಿಗೆ ಬೀಳುವನು, ನಂಬಿಗಸ್ತನಾದ ರಾಯಭಾರಿಯು ಕ್ಷೇಮದಾಯಕನು.
[18] ಶಿಕ್ಷೆಯನ್ನು ತ್ಯಜಿಸುವವನಿಗೆ ಬಡತನ ಮತ್ತು ಅವಮಾನ, ಗದರಿಕೆಯನ್ನು ಗಮನಿಸುವವನಿಗೆ ಮಾನ.
[19] ಇಷ್ಟಸಿದ್ಧಿ ಮನಸ್ಸಿಗೆ ಸಿಹಿ, ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ.
[20] ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು, ಜ್ಞಾನಹೀನರ ಒಡನಾಡಿ ಸಂಕಟಪಡುವನು.
[21] ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು, ಮಂಗಳವು ಸಜ್ಜನರಿಗೆ ಪ್ರತಿಫಲವಾಗುವುದು.
[22] ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ, ಪಾಪಿಯ ಸೊತ್ತು ಸಜ್ಜನರಿಗೆ ಗಂಟು.
[23] ಬಡವರಿಗೆ ಬಂಜರು ಭೂಮಿಯೂ ಬಹು ಬೆಳೆಯನ್ನೀಯುವುದು, ಅನ್ಯಾಯದಿಂದ ಹಾಳಾದ ಸುದ್ದಿಯು ಉಂಟು.
[24] ಬೆತ್ತ ಹಿಡಿಯದ ತಂದೆ ಮಗನಿಗೆ ಶತ್ರು, ಸುಶಿಕ್ಷಣವನ್ನು ನೀಡುವ ತಂದೆ ಮಗನಿಗೆ ಮಿತ್ರ.
[25] ಶಿಷ್ಟನು ಹೊಟ್ಟೆತುಂಬಾ ಉಣ್ಣುವನು, ದುಷ್ಟನ ಹೊಟ್ಟೆ ಹಸಿದಿರುವುದು.