Skip to content
Opens in a new window
Listen to this chapter • 3:31

[1] ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು, ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ನಾಶಮಾಡುವಳು.

[2] ಸರಳಮಾರ್ಗಿಯು ಯೆಹೋವನಿಗೆ ಭಯಪಡುವನು, ವಕ್ರಮಾರ್ಗಿಯು ಆತನನ್ನು ಅಸಡ್ಡೆಮಾಡುವನು.

[3] ಮೂರ್ಖನ ಮಾತುಗಳು ಅವನ ಬೆನ್ನಿಗೆ ಬೆತ್ತ, ಜ್ಞಾನಿಗಳ ತುಟಿಗಳು ಅವರನ್ನು ಕಾಯುವವು.

[4] ಎತ್ತುಗಳಿಲ್ಲದಿರುವಾಗ ಗೋದಲಿಯು ಶುದ್ಧ, ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ವೃದ್ಧಿಯಾಗುವುದು.

[5] ಸತ್ಯಸಾಕ್ಷಿಯು ಸುಳ್ಳಾಡನು, ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು.

[6] ಧರ್ಮನಿಂದಕನಲ್ಲಿ ಹುಡುಕಿದರೂ ಜ್ಞಾನವು ಸಿಕ್ಕದು, ವಿವೇಕಿಗೆ ತಿಳಿವಳಿಕೆಯು ಸುಲಭವಾಗಿ ದೊರೆಯುವುದು.

[7] ನೀನು ಜ್ಞಾನಹೀನನ ಬಳಿಗೆ ಹೋದರೆ ಅವನ ತುಟಿಗಳಲ್ಲಿ ಯಾವ ತಿಳಿವಳಿಕೆಯನ್ನೂ ಕಾಣಲಾರೆ.

[8] ಸನ್ಮಾರ್ಗವನ್ನು ಗ್ರಹಿಸಿಕೊಳ್ಳುವುದೇ ಜಾಣನ ಜ್ಞಾನ, ಮೂಢರ ಮೂರ್ಖತನ ಮೋಸಕರ.

[9] ಮೂರ್ಖರನ್ನು ಅವರ ದೋಷವೇ ಹಾಸ್ಯಮಾಡುವುದು, ಯಥಾರ್ಥವಂತರಲ್ಲಿ (ದೇವರ) ದಯೆಯಿರುವುದು.

[10] ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು, ಅವನ ಆನಂದದಲ್ಲಿಯೂ ಬೇರೆಯವರು ಪಾಲುಗಾರರಾಗುವುದಿಲ್ಲ.

[11] ದುಷ್ಟರ ಮನೆಗೆ ನಾಶನ, ಶಿಷ್ಟರ ಗುಡಾರಕ್ಕೆ ಏಳಿಗೆ.

[12] ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ.

[13] ನಗುವವನಿಗೂ ಮನೋವ್ಯಥೆಯುಂಟು, ಉಲ್ಲಾಸದ ಅಂತ್ಯವು ವ್ಯಾಕುಲವೇ.

[14] ಭ್ರಷ್ಟನು ಕರ್ಮಫಲವನ್ನು ತಿಂದು ತಿಂದು ದಣಿಯುವನು, ಶಿಷ್ಟನು ತನ್ನಲ್ಲಿ ತಾನೇ ತೃಪ್ತನಾಗುವನು.

[15] ಮೂಢನು ಯಾವ ಮಾತನ್ನಾದರೂ ನಂಬುವನು, ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.

[16] ಜ್ಞಾನಿಯು ಕೇಡಿಗೆ ಭಯಪಟ್ಟು ಓರೆಯಾಗುವನು, ಜ್ಞಾನಹೀನನು ಸೊಕ್ಕಿನಿಂದ ಭಯವನ್ನು ಲಕ್ಷಿಸನು.

[17] ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುವನು, ಕುಯುಕ್ತಿಯುಳ್ಳವನು ದ್ವೇಷಕ್ಕೆ ಪಾತ್ರನು.

[18] ಮೂರ್ಖರಿಗೆ ಮೂರ್ಖತನವೇ ಸ್ವತ್ತು, ಜಾಣರಿಗೆ ಜ್ಞಾನವೇ ಕಿರೀಟ.

[19] ಕೆಟ್ಟವರು ಒಳ್ಳೆಯವರಿಗೆ ಬಾಗುವರು, ದುಷ್ಟರು ಶಿಷ್ಟರ ಬಾಗಿಲಲ್ಲಿ ಅಡ್ಡಬೀಳುವರು.

[20] ಬಡವನು ನೆರೆಯವನಿಗೂ ಅಸಹ್ಯ, ಧನವಂತನಿಗೆ ಬಹು ಜನ ಮಿತ್ರರು.

[21] ನೆರೆಯವನನ್ನು ತಿರಸ್ಕರಿಸುವವನು ದೋಷಿ, ದರಿದ್ರನನ್ನು ಕನಿಕರಿಸುವವನು ಧನ್ಯನು.

[22] ಕುಯುಕ್ತಿಯುಳ್ಳವರು ದಾರಿತಪ್ಪಿದವರೇ ಸರಿ, ಒಳ್ಳೆಯದನ್ನು ಕಲ್ಪಿಸುವವರು ಪ್ರೀತಿಸತ್ಯತೆಗಳಿಗೆ ಪಾತ್ರರು.

[23] ಶ್ರಮೆಯಿಂದ ಸಮೃದ್ಧಿ, ಹರಟೆಯಿಂದ ಕೊರತೆ.

[24] ಜ್ಞಾನಿಗಳ ಜ್ಞಾನಕಿರೀಟವೇ ಅವರ ಶ್ರೇಷ್ಠ ಸಂಪತ್ತು, ಜ್ಞಾನಹೀನರ ಮೂರ್ಖತನವು ಬರೀ ಮೂರ್ಖತನವೇ.

[25] ಸತ್ಯಸಾಕ್ಷಿಯು ಪ್ರಾಣರಕ್ಷಕ, ಸುಳ್ಳುಸಾಕ್ಷಿಯು ವಂಚಕ.

[26] ಯೆಹೋವನಿಗೆ ಭಯಪಡುವುದರಿಂದ ಕೇವಲ ನಿರ್ಭಯ, ಆತನ ಮಕ್ಕಳಿಗೆ ಆಶ್ರಯವಿದ್ದೇ ಇರುವುದು.

[27] ಯೆಹೋವನ ಭಯ ಜೀವದ ಬುಗ್ಗೆ, ಮೃತ್ಯುಪಾಶದಿಂದ ತಪ್ಪಿಸಿಕೊಳ್ಳಲು ಅದು ಸಾಧನವಾಗಿದೆ.

[28] ಪ್ರಜೆಗಳ ವೃದ್ಧಿ ರಾಜನ ಮಹಿಮೆ, ಪ್ರಜೆಗಳ ನಾಶ ಪ್ರಭುವಿಗೆ ಭಯ.

[29] ದೀರ್ಘಶಾಂತನು ಕೇವಲ ಬುದ್ಧಿವಂತನು, ಮುಂಗೋಪಿಯು ಮೂರ್ಖತನವನ್ನು ಧ್ವಜವಾಗಿ ಎತ್ತುವನು.

[30] ಶಾಂತಗುಣವು ದೇಹಕ್ಕೆ ಜೀವಾಧಾರವು, ಕ್ರೋಧವು ಎಲುಬಿಗೆ ಕ್ಷಯವು.

[31] ಬಡವರನ್ನು ಹಿಂಸಿಸುವವನು ಸೃಷ್ಟಿಕರ್ತನನ್ನು ಹೀನೈಸುವನು, ಗತಿಯಿಲ್ಲದವರನ್ನು ಕರುಣಿಸುವವನು ಆತನನ್ನು ಘನಪಡಿಸುವನು.

[32] ದುಷ್ಟನು ವಿಪತ್ತಿಗೊಳಗಾಗಿ ಹಾಳಾಗುವನು, ಶಿಷ್ಟನು ಮರಣಕಾಲದಲ್ಲಿಯೂ ಆಶ್ರಯಹೊಂದುವನು.

[33] ವಿವೇಕಿಯ ಹೃದಯ ಜ್ಞಾನಾಶ್ರಯ, ಜ್ಞಾನಹೀನನ ಹೃದಯದಲ್ಲಿ ಅದು ಕಾಣದು.

[34] ಪ್ರಜೆಗೆ ಧರ್ಮವು ಉನ್ನತಿ, ಅಧರ್ಮವು ಅವಮಾನ.

[35] ಜಾಣನಾದ ಸೇವಕನಿಗೆ ರಾಜನ ಕೃಪೆ, ಮಾನಗೇಡಿಗೆ ರಾಜನ ರೌದ್ರ.

ಜ್ಞಾನೋಕ್ತಿಗಳು — Chapters