Skip to content
Opens in a new window
Listen to this chapter • 2:24

[1] ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ, ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ,

[2] ನಿನ್ನ ಕಿವಿಯನ್ನು ಜ್ಞಾನದ ಕಡೆಗೂ, ಹೃದಯವನ್ನು ವಿವೇಕದ ಕಡೆಗೂ ತಿರುಗಿಸು;

[3] ಬುದ್ಧಿಗಾಗಿ ಮೊರೆಯಿಟ್ಟು, ವಿವೇಕಕ್ಕಾಗಿ ಕೂಗಿಕೋ.

[4] ಅದನ್ನು ಬೆಳ್ಳಿಯಂತೆಯು ಮತ್ತು ನಿಕ್ಷೇಪದಂತೆಯು ಹುಡುಕು;

[5] ಆಗ ನೀನು ಯೆಹೋವನ ಭಯವನ್ನು ಅರಿತು, ದೈವಜ್ಞಾನವನ್ನು ಪಡೆದುಕೊಳ್ಳುವಿ.

[6] ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳಿವಳಿಕೆಯೂ, ವಿವೇಕವೂ ಹೊರಟು ಬರುತ್ತವೆ.

[7] ಆತನು ಯಥಾರ್ಥಚಿತ್ತರಿಗಾಗಿ ಸುಜ್ಞಾನವನ್ನು ಕೂಡಿಸಿಡುವನು. ದೋಷವಿಲ್ಲದೆ ನಡೆಯುವವರಿಗೆ ಗುರಾಣಿಯಾಗಿದ್ದು,

[8] ನ್ಯಾಯಮಾರ್ಗವನ್ನು ರಕ್ಷಿಸುತ್ತಾ, ತನ್ನ ಭಕ್ತರ ದಾರಿಯನ್ನು ನೋಡಿಕೊಳ್ಳುವನು.

[9] ಹೀಗಿರಲು ನೀನು ನೀತಿ, ನ್ಯಾಯ, ಧರ್ಮವನ್ನೂ ಅಂದರೆ ಸಕಲ ಸನ್ಮಾರ್ಗಗಳನ್ನು ತಿಳಿದುಕೊಳ್ಳುವಿ.

[10] ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವುದು, ತಿಳಿವಳಿಕೆಯು ನಿನ್ನ ಆತ್ಮಕ್ಕೆ ಹಿತಕರವಾಗಿರುವುದು.

[11] ಬುದ್ಧಿಯು ನಿನಗೆ ಕಾವಲಾಗಿರುವುದು, ವಿವೇಕವು ನಿನ್ನನ್ನು ಕಾಪಾಡುವುದು.

[12] ಇದರಿಂದ ನೀನು ದುರ್ಮಾರ್ಗದಿಂದಲೂ, ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ.

[13] ಅವರಾದರೋ ಕತ್ತಲೆಯ ಮಾರ್ಗಗಳನ್ನು ಹಿಡಿಯಬೇಕೆಂದು, ಧರ್ಮಮಾರ್ಗಗಳನ್ನು ತೊರೆದುಬಿಡುವರು.

[14] ಅವರು ಕೆಟ್ಟದ್ದನ್ನು ಮಾಡುವುದರಲ್ಲಿ ಸಂತೋಷಿಸಿ, ಕೆಟ್ಟವರ ದುಷ್ಟತನದಲ್ಲಿ ಆನಂದಿಸುವರು.

[15] ಅವರ ಮಾರ್ಗಗಳು ವಕ್ರವಾಗಿವೆ. ಅವರ ನಡತೆಗಳು ದುರ್ನಡತೆಗಳೇ.

[16] ವಿವೇಕವು ನಿನ್ನನ್ನು ಜಾರಳಿಂದ ಅಂದರೆ ಸವಿಮಾತನಾಡುವ ಪರಸ್ತ್ರೀಯಿಂದ ತಪ್ಪಿಸುವುದು.

[17] ಅವಳು ತನ್ನ ಯೌವನಕಾಲದ ಕಾಂತನನ್ನು ತ್ಯಜಿಸಿ, ತನ್ನ ದೇವರ ಮುಂದೆ ಮಾಡಿಕೊಂಡ ಒಡಂಬಡಿಕೆಯನ್ನು ಮರೆತುಬಿಟ್ಟಿದ್ದಾಳೆ.

[18] ಅವಳ ಮನೆಯು ಪಾತಾಳಕ್ಕೆ ಇಳಿಯುವ ದಾರಿ, ಅವಳ ಮಾರ್ಗಗಳು ಪ್ರೇತಲೋಕಕ್ಕೆ ಹೋಗುತ್ತವೆ.

[19] ಅವಳ ಬಳಿಗೆ ಹೋಗುವವರು ಯಾರೂ ಹಿಂದಿರುಗುವುದಿಲ್ಲ, ಅವರಿಗೆ ಜೀವದ ಮಾರ್ಗವು ದೊರೆಯುವುದೇ ಇಲ್ಲ.

[20] ಒಳ್ಳೆಯವರ ನಡತೆಯನ್ನು ಅನುಸರಿಸುವಂತೆ ವಿವೇಕವು ನಿನ್ನನ್ನು ಪ್ರೇರೇಪಿಸಿ, ನೀತಿವಂತರ ದಾರಿಗಳನ್ನು ಹಿಡಿಯುವ ಹಾಗೆ ಮಾಡುವುದು.

[21] ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.

[22] ದುಷ್ಟರಾದರೋ ದೇಶದೊಳಗಿಂದ ತೆಗೆದುಹಾಕಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.

ಜ್ಞಾನೋಕ್ತಿಗಳು — Chapters