Skip to content
Opens in a new window
Listen to this chapter • 3:11

[1] ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡುವನು, ಶಿಷ್ಟನು ಸಿಂಹದಂತೆ ಧೈರ್ಯದಿಂದಿರುವನು.

[2] ಅಧರ್ಮದಿಂದ ದೇಶದಲ್ಲಿ ಬಹು ನಾಯಕರಿರುವರು, ಜ್ಞಾನಿಗಳೂ, ವಿವೇಕಿಗಳೂ ಆದವರಿಂದ ಧರ್ಮವು ಶಾಶ್ವತವಾಗಿರುವುದು.

[3] ಬಡವರನ್ನು ಹಿಂಸಿಸುವ ದರಿದ್ರನು, ಒಂದು ಕಾಳೂ ಉಳಿಯದಂತೆ ಪೈರನ್ನು ಬಡಿಯುವ ಮಳೆಯ ಹಾಗೆ.

[4] ಧರ್ಮೋಪದೇಶವನ್ನು ಕೈಕೊಳ್ಳದವರು ದುಷ್ಟರನ್ನು ಹೊಗಳುವರು, ಕೈಕೊಳ್ಳುವವರು ಅವರನ್ನು ಎದುರಿಸುವರು.

[5] ಕೆಟ್ಟವರು ನ್ಯಾಯವನ್ನು ಗ್ರಹಿಸರು, ಯೆಹೋವನ ಭಕ್ತರು ಸಮಸ್ತವನ್ನು ಗ್ರಹಿಸುವರು.

[6] ವಕ್ರಮಾರ್ಗಿಯಾದ ಐಶ್ವರ್ಯವಂತನಿಗಿಂತ, ನಿರ್ದೋಷವಾಗಿ ನಡೆಯುವ ದರಿದ್ರನು ಶ್ರೇಷ್ಠನು.

[7] ಧರ್ಮೋಪದೇಶವನ್ನು ಕೈಕೊಳ್ಳುವವನು ವಿವೇಕಿಯಾದ ಮಗನು, ಹೊಟ್ಟೆಬಾಕರ ಗೆಳೆಯನು ತಂದೆಯ ಮಾನವನ್ನು ಕಳೆಯುವನು.

[8] ಬಡ್ಡಿ ಮತ್ತು ಅನ್ಯಾಯ ಲಾಭದಿಂದ ವೃದ್ಧಿಯಾದ ಆಸ್ತಿಯು ಬಡವರಲ್ಲಿ ಕನಿಕರಪಡುವವನ ಪಾಲಾಗುವುದು.

[9] ಧರ್ಮೋಪದೇಶಕ್ಕೆ ಕಿವಿಗೊಡದವನು ಮಾಡುವ ದೇವಪ್ರಾರ್ಥನೆಯೂ ಅಸಹ್ಯ.

[10] ಯಥಾರ್ಥವಂತರನ್ನು ದುರ್ಮಾರ್ಗಕ್ಕೆ ಎಳೆಯುವವನು, ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು, ನಿರ್ದೋಷಿಗಳಿಗೋ ಸುಖವು ಸೊತ್ತಾಗುವುದು.

[11] ಐಶ್ವರ್ಯವಂತನು ತಾನು ಜ್ಞಾನಿಯೆಂದೆಣಿಸಿಕೊಳ್ಳುವನು, ವಿವೇಕಿಯಾದ ಬಡವನು ಅವನನ್ನು ಇಂಥವನೆಂದು ಗೊತ್ತುಮಾಡುವನು.

[12] ಶಿಷ್ಟರಿಗೆ ಉಲ್ಲಾಸವಾದರೆ ದೊಡ್ಡ ಸಂಭ್ರಮವಾಗುವುದು, ದುಷ್ಟರಿಗೆ ಏಳಿಗೆಯಾದರೆ ಜನರು ಅಡಗಿಕೊಳ್ಳುವರು.

[13] ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು, ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವುದು.

[14] ಕೆಟ್ಟದನ್ನು ಮಾಡುವುದಕ್ಕೆ ಯಾವಾಗಲೂ ಭಯಪಡುವವನು ಧನ್ಯನು, ಕಠಿಣಹೃದಯನು ಕೇಡಿಗೆ ಸಿಕ್ಕಿಬೀಳುವನು.

[15] ಬಡವರಾದ ಪ್ರಜೆಗಳನ್ನು ಆಳುವ ದುಷ್ಟರಾಜನು, ಗರ್ಜಿಸುವ ಸಿಂಹ ಮತ್ತು ಹುಡುಕಾಡುವ ಕರಡಿಯಂತೆ.

[16] ವಿವೇಕಶೂನ್ಯನಾದ ಒಡೆಯನು ಮಹಾ ಹಿಂಸಕನು, ದೋಚಿಕೊಳ್ಳದವನು ದೀರ್ಘಾಯುಷ್ಯನು.

[17] ನರಪ್ರಾಣ ತೆಗೆದ ದೋಷವನ್ನು ಕಟ್ಟಿಕೊಂಡವನು ಸಮಾಧಿಯ ಕಡೆಗೆ ಓಡುವನು, ಅವನನ್ನು ಯಾರೂ ತಡೆಯಬಾರದು.

[18] ಸನ್ಮಾರ್ಗಿಗೆ ಉದ್ಧಾರ, ವಕ್ರಮಾರ್ಗಿಗೆ ತಟ್ಟನೆ ಸೋಲು.

[19] ದುಡಿದು ಹೊಲಗೇಯುವವನಿಗೆ ಹೊಟ್ಟೆ ತುಂಬಾ ಅನ್ನ, ವ್ಯರ್ಥ ಕಾರ್ಯಾಸಕ್ತನಿಗೆ ಹೊಟ್ಟೆತುಂಬಾ ಬಡತನ.

[20] ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು, ಧನವಂತನಾಗಲು ಆತುರಪಡುವವನು ದಂಡನೆಯನ್ನು ಹೊಂದದೆ ಇರನು.

[21] ಪಕ್ಷಪಾತವು ಅಧರ್ಮ, ತುತ್ತು ಅನ್ನಕ್ಕಾಗಿಯೂ ಜನರು ದ್ರೋಹಮಾಡುವುದುಂಟು.

[22] ಲೋಭಿಯು ಆಸ್ತಿಯನ್ನು ಗಳಿಸಲು ಆತುರಪಡುವನು, ತನಗೆ ಕೊರತೆಯಾಗುವುದೆಂದು ಅರಿಯನು.

[23] ಮುಖಸ್ತುತಿ ಮಾಡುವವನಿಗಿಂತಲೂ, ಗದರಿಸುವವನು ಬಳಿಕ ಹೆಚ್ಚು ದಯಾಪಾತ್ರನಾಗುವನು.

[24] ದೋಷವಲ್ಲವೆಂದು ತಾಯಿತಂದೆಗಳ ಧನವನ್ನು ಕದಿಯುವವನು, ಕೆಡುಕನಿಗೆ ಜೊತೆಗಾರನು.

[25] ದುರಾಶೆಯುಳ್ಳವನು ಜಗಳವನ್ನೆಬ್ಬಿಸುವನು, ಯೆಹೋವನಲ್ಲಿ ಭರವಸವಿಡುವವನು ಪುಷ್ಟನಾಗುವನು.

[26] ತನ್ನಲ್ಲೇ ಭರವಸವಿಡುವವನು ಮೂಢನು, ಜ್ಞಾನದಿಂದ ನಡೆಯುವವನು ಉದ್ಧಾರ ಹೊಂದುವನು.

[27] ಬಡವರಿಗೆ ದಾನಮಾಡುವವನು ಕೊರತೆಪಡನು, ಅವರನ್ನು ಕಂಡು ಕಾಣದಂತೆ ಇರುವವನು ಬಹುಶಾಪಕ್ಕೆ ಒಳಗಾಗುವನು.

[28] ದುಷ್ಟರು ಎದ್ದರೆ ಜನರು ಅಡಗಿಕೊಳ್ಳುವರು, ನಾಶನವಾದರೆ ಶಿಷ್ಟರು ವೃದ್ಧಿಯಾಗುವರು.

ಜ್ಞಾನೋಕ್ತಿಗಳು — Chapters