Skip to content
Opens in a new window
Listen to this chapter • 2:40

[1] ಕಂದಾ, ನನ್ನ ಜ್ಞಾನೋಪದೇಶವನ್ನು ಆಲಿಸು, ವಿವೇಕದಿಂದ ಕೂಡಿದ ನನ್ನ ಬೋಧನೆಗೆ ಕಿವಿಗೊಡು.

[2] ಹೀಗಾದರೆ ನೀನು ವಿವೇಚನೆಯನ್ನು ಹೊಂದಿಕೊಳ್ಳುವಿ, ನಿನ್ನ ತುಟಿಗಳು ತಿಳಿವಳಿಕೆಯನ್ನು ಕಾಪಾಡುವವು.

[3] ವೇಶ್ಯಸ್ತ್ರೀಯ ತುಟಿಗಳಲ್ಲಾದರೋ ಜೇನುಗರೆಯುವುದು, ಅವಳ ಮಾತು ಎಣ್ಣೆಗಿಂತಲೂ ನಯವಾಗಿದೆ.

[4] ಅವಳು ಕಡೆಯಲ್ಲಿ ವಿಷದಂತೆ ಕಹಿಯೂ, ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗುವಳು.

[5] ಅವಳು ಮರಣದ ಕಡೆಗೆ ನಡೆಯುತ್ತಾ ಇಳಿದು ಹೋಗುವಳು, ಅವಳ ಹೆಜ್ಜೆಗಳು ಪಾತಾಳದ ದಾರಿಯನ್ನು ಹಿಡಿಯುವವು.

[6] ಅವಳ ನಡತೆಯು ಚಂಚಲವಾಗಿರುವುದರಿಂದ ಅವಳು ಜೀವದ ಮಾರ್ಗವನ್ನು ವಿವೇಚಿಸಲಾರಳು, ಅದು ಅವಳಿಗೆ ತಿಳಿದೇ ಇಲ್ಲ.

[7] ಹೀಗಿರಲು ಮಗನೇ, ನನ್ನ ಕಡೆಗೆ ಕಿವಿಗೊಡು, ನನ್ನ ಮಾತುಗಳಿಂದ ದೂರವಾಗಿರಬೇಡ.

[8] ನಿನ್ನ ಮಾರ್ಗವು ಅವಳಿಗೆ ದೂರವಾಗಿರಲಿ ಅವಳ ಮನೆಬಾಗಿಲ ಹತ್ತಿರ ಹೋದೆಯಾ, ಎಚ್ಚರಿಕೆ!

[9] ಎಚ್ಚರವಹಿಸಿಕೋ, ನಿನ್ನ ಪುರುಷತ್ವವು ಪರಾಧೀನವಾಗುವುದು, ನಿನ್ನ ಆಯುಷ್ಯವು ಕ್ರೂರರ ವಶವಾಗುವುದು.

[10] ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳುವರು, ನೀನು ಅನ್ಯನ ಮನೆಯಲ್ಲಿ ದುಡಿಯುವಿ.

[11] ಕಟ್ಟಕಡೆಗೆ ನಿನ್ನ ದೇಹವೆಲ್ಲಾ ಕ್ಷೀಣವಾಗಿ ನೀನು ಅಂಗಲಾಚಿಕೊಂಡು,

[12] “ಅಯ್ಯೋ, ನಾನು ಸದುಪದೇಶವನ್ನು ಎಷ್ಟು ದ್ವೇಷಿಸಿದೆ, ನನ್ನ ಹೃದಯವು ಬುದ್ಧಿವಾದವನ್ನು ಎಷ್ಟು ತಾತ್ಸಾರ ಮಾಡಿತು,

[13] ನನ್ನ ಬೋಧಕರ ಮಾತನ್ನು ಕೇಳದೆ ಹೋದೆನಲ್ಲಾ, ನನ್ನ ಉಪದೇಶಕರ ಕಡೆಗೆ ಕಿವಿಗೊಡಲಿಲ್ಲವಲ್ಲಾ!

[14] ನಾನು ದೇವಜನರ ಸಭೆಯ ನಡುವೆ ಎಲ್ಲಾ ಕೇಡಿಗೂ ಸಿಕ್ಕಿಕೊಳ್ಳುವ ಹಾಗೆ ಆದೆನು” ಎಂದು ಅಂದುಕೊಳ್ಳುವಿ.

[15] ಸ್ವಂತ ಕೊಳದ ನೀರನ್ನು, ಸ್ವಂತ ಬಾವಿಯಲ್ಲಿ ಉಕ್ಕುವ ಜಲವನ್ನು ಮಾತ್ರ ಕುಡಿ.

[16] ನಿನ್ನ ಒರತೆಗಳು ಬಯಲಿನಲ್ಲಿಯೂ, ನಿನ್ನ ಕಾಲುವೆಗಳು ಬೀದಿಗಳಲ್ಲಿಯೂ ಹರಡಿ ಹರಿಯುವುದು ಹಿತವೇ?

[17] ಅವು ನಿನಗೊಬ್ಬನಿಗೇ ಹರಿಯಲಿ, ಪರರು ನಿನ್ನೊಂದಿಗೆ ಸೇರಿ ಕುಡಿಯಬಾರದು.

[18] ನಿನ್ನ ಬುಗ್ಗೆಯು ದೇವರ ಆಶೀರ್ವಾದವನ್ನು ಹೊಂದಲಿ, ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು.

[19] ಆಕೆ ಮನೋಹರವಾದ ಜಿಂಕೆಯಂತೆಯೂ, ಅಂದವಾದ ದುಪ್ಪಿಯ ಹಾಗೂ ಇರುವಳಲ್ಲಾ, ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಪ್ರೀತಿಯಲ್ಲೇ ನಿರಂತರವಾಗಿ ಲೀನವಾಗಿರು.

[20] ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ, ಅನ್ಯಳ ಎದೆಯನ್ನು ತಬ್ಬಿಕೊಳ್ಳುವುದೇಕೆ?

[21] ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ, ಆತನು ಮನುಷ್ಯನ ನಡತೆಯನ್ನೆಲ್ಲಾ ಪರೀಕ್ಷಿಸುವವನಾಗಿದ್ದಾನೆ.

[22] ದುಷ್ಟನ ದುಷ್ಕೃತ್ಯಗಳೇ ಅವನನ್ನು ಆಕ್ರಮಿಸುವವು, ಅವನ ಪಾಪಪಾಶಗಳೇ ಅವನನ್ನು ಬಂಧಿಸುವವು.

[23] ಸದುಪದೇಶದ ಕೊರತೆಯಿಂದಲೇ ನಾಶವಾಗುವನು, ತನ್ನ ಅತಿಮೂರ್ಖತನದಿಂದ ಭ್ರಾಂತನಾಗುವನು.

ಜ್ಞಾನೋಕ್ತಿಗಳು — Chapters