Skip to content
Opens in a new window
Listen to this chapter • 3:15

[1] ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವುದು, ಬಿರುನುಡಿಯು ಸಿಟ್ಟನ್ನೇರಿಸುವುದು.

[2] ಜ್ಞಾನಿಗಳ ನಾಲಿಗೆಯು ತಿಳಿವಳಿಕೆಯನ್ನು ಸಾರ್ಥಕ ಮಾಡುವುದು, ಜ್ಞಾನಹೀನರ ಬಾಯಿಯು ಮೂರ್ಖತನವನ್ನು ಕಾರುವುದು.

[3] ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವುದು, ಆತನು ಕೆಟ್ಟವರನ್ನು ಮತ್ತು ಒಳ್ಳೆಯವರನ್ನು ನೋಡುತ್ತಲೇ ಇರುವನು.

[4] ಸಂತೈಸುವ ನಾಲಿಗೆ ಜೀವವೃಕ್ಷವು, ಬಲತ್ಕರಿಸುವ ನಾಲಿಗೆ ಮನಮುರಿಯುವುದು.

[5] ಮೂರ್ಖನು ತಂದೆಯ ಶಿಕ್ಷೆಯನ್ನು ತಿರಸ್ಕರಿಸುವನು, ಗದರಿಕೆಯನ್ನು ಗಮನಿಸುವವನು ಜಾಣನು.

[6] ಶಿಷ್ಟನ ಮನೆಯಲ್ಲಿ ದೊಡ್ಡ ನಿಧಿ, ದುಷ್ಟನ ಆದಾಯವು ನಷ್ಟಕ್ಕೆ ದಾರಿ.

[7] ಜ್ಞಾನಿಗಳ ತುಟಿಗಳು ತಿಳಿವಳಿಕೆಯನ್ನು ಬಿತ್ತುವವು. ಜ್ಞಾನಹೀನರ ಹೃದಯವು ಅದನ್ನು ಬಿತ್ತುವುದೇ ಇಲ್ಲ.

[8] ದುಷ್ಟರ ಯಜ್ಞ ಯೆಹೋವನಿಗೆ ಅಸಹ್ಯ, ಶಿಷ್ಟರ ಬಿನ್ನಹ ಆತನಿಗೆ ಇಷ್ಟ.

[9] ದುಷ್ಟನ ನಡತೆಯು ಯೆಹೋವನಿಗೆ ಅಸಹ್ಯ, ಧರ್ಮಾಸಕ್ತನು ಆತನಿಗೆ ಪ್ರಿಯ.

[10] ಧರ್ಮಮಾರ್ಗವನ್ನು ಬಿಟ್ಟವನಿಗೆ ತೀಕ್ಷ್ಣ ಶಿಕ್ಷಣ, ಗದರಿಕೆಯನ್ನು ಕೇಳದವನಿಗೆ ಸಾವು.

[11] ಪಾತಾಳವೂ, ನಾಶಲೋಕವೂ ಯೆಹೋವನಿಗೆ ಗೋಚರವಾಗಿರುವಲ್ಲಿ ನರವಂಶದವರ ಹೃದಯಗಳು ಆತನಿಗೆ ಮತ್ತೂ ಸ್ಪಷ್ಟ.

[12] ಧರ್ಮನಿಂದಕನು ಗದರಿಕೆಯನ್ನು ಕೇಳನು, ಜ್ಞಾನಿಗಳ ಸಂಗಡ ಸೇರನು.

[13] ಹರ್ಷ ಹೃದಯದಿಂದ ಹಸನ್ಮುಖ, ಮನೋವ್ಯಥೆಯಿಂದ ಆತ್ಮಭಂಗ.

[14] ವಿವೇಕಿಯ ಹೃದಯ ತಿಳಿವಳಿಕೆಯನ್ನು ಹುಡುಕುವುದು, ಮೂಢರ ಬಾಯಿ ಮೂರ್ಖತನವನ್ನು ಮುಕ್ಕುವುದು.

[15] ದೀನನ ದಿನಗಳೆಲ್ಲಾ ದುಃಖಭರಿತ, ಹರ್ಷಹೃದಯನಿಗೆ ನಿತ್ಯವೂ ಔತಣ.

[16] ಕಳವಳದಿಂದ ಕೂಡಿದ ಬಹುಧನಕ್ಕಿಂತಲೂ ಯೆಹೋವನ ಭಯದಿಂದ ಕೂಡಿದ ಅಲ್ಪ ಧನವೇ ಲೇಸು.

[17] ದ್ವೇಷವಿರುವಲ್ಲಿ ಮೃಷ್ಟಾನ್ನಕ್ಕಿಂತಲೂ, ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ.

[18] ಕೋಪಿಷ್ಠನು ವ್ಯಾಜ್ಯವನ್ನೆಬ್ಬಿಸುವನು, ದೀರ್ಘಶಾಂತನು ಜಗಳವನ್ನು ಶಮನಪಡಿಸುವನು.

[19] ಸೋಮಾರಿಯ ಮಾರ್ಗ ಮುಳ್ಳುಬೇಲಿ, ಯಥಾರ್ಥವಂತನ ಮಾರ್ಗ ರಾಜಮಾರ್ಗ.

[20] ಜ್ಞಾನವಂತನಾದ ಮಗನು ತಂದೆಯನ್ನು ಉಲ್ಲಾಸಗೊಳಿಸುವನು, ಜ್ಞಾನಹೀನನು ತಾಯಿಯನ್ನು ತಿರಸ್ಕರಿಸುವನು.

[21] ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುವನು, ಬುದ್ಧಿವಂತನು ತನ್ನ ಮಾರ್ಗವನ್ನು ಸರಳಮಾಡಿಕೊಳ್ಳುವನು.

[22] ಆಲೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರು ಇರುವಲ್ಲಿ ಅವು ನೆರವೇರುವವು.

[23] ತಕ್ಕ ಉತ್ತರಕೊಡುವವನಿಗೆ ಎಷ್ಟೋ ಸಂತೋಷ! ಸಮಯೋಚಿತವಾದ ನುಡಿಯಲ್ಲಿ ಎಷ್ಟೋ ಸ್ವಾರಸ್ಯ!

[24] ಜೀವದ ಮಾರ್ಗವು ವಿವೇಕಿಯನ್ನು ಮೇಲಕ್ಕೆತ್ತುವುದು; ಅದು ಅವನನ್ನು ಪಾತಾಳದಿಂದ ತಪ್ಪಿಸುವುದು.

[25] ಯೆಹೋವನು ಗರ್ವಿಷ್ಠನ ಮನೆಯನ್ನು ಕೆಡವಿಬಿಡುವನು; ವಿಧವೆಯ ಮೇರೆಯನ್ನು ನೆಲೆಗೊಳಿಸುವನು.

[26] ಕುಯುಕ್ತಿಯು ಯೆಹೋವನಿಗೆ ಅಸಹ್ಯ, ನಯನುಡಿಯು ಆತನಿಗೆ ಪ್ರಿಯ.

[27] ಸೂರೆಮಾಡುವವನು ಸ್ವಂತ ಮನೆಯನ್ನು ಬಾಧಿಸುವನು. ಲಂಚವನ್ನೊಪ್ಪದವನು ಸುಖವಾಗಿ ಬಾಳುವನು.

[28] ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ, ದುಷ್ಟನ ಬಾಯಿ ಕೆಟ್ಟದ್ದನ್ನು ಕಾರುತ್ತದೆ.

[29] ಯೆಹೋವನು ದುಷ್ಟರಿಗೆ ದೂರ, ಶಿಷ್ಟರ ಬಿನ್ನಹಕ್ಕೆ ಹತ್ತಿರ.

[30] ಹಸನ್ಮುಖ ಹೃದಯಕ್ಕೆ ಆನಂದ, ಶುಭಸಮಾಚಾರ ದೇಹಕ್ಕೆ ಆರೋಗ್ಯ.

[31] ಜೀವಪ್ರದವಾದ ಗದರಿಕೆಗೆ ಕಿವಿಗೊಡುವವನು, ಜ್ಞಾನಿಗಳ ನಡುವೆ ನೆಲೆಗೊಳ್ಳುವನು.

[32] ಶಿಕ್ಷೆಯನ್ನು ತಿರಸ್ಕರಿಸುವವನು ತನ್ನನ್ನೇ ನಿರಾಕರಿಸಿಕೊಳ್ಳುವನು, ಗದರಿಕೆಯನ್ನು ಕೇಳುವವನು ಬುದ್ಧಿಯನ್ನು ಪಡೆಯುವನು.

[33] ಯೆಹೋವನ ಭಯವೇ ಜ್ಞಾನೋಪದೇಶ, ಗೌರವಕ್ಕೆ ಮೊದಲು ವಿನಯ.

ಜ್ಞಾನೋಕ್ತಿಗಳು — Chapters