[1] ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ, ಬೆಳ್ಳಿ, ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ.
[2] ಬಡವರು ಮತ್ತು ಸಿರಿವಂತರು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರನ್ನೆಲ್ಲಾ ಸೃಷ್ಟಿಸಿದನು.
[3] ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.
[4] ಧನ, ಮಾನ ಮತ್ತು ಜೀವಗಳು ದೀನಭಾವಕ್ಕೂ, ಯೆಹೋವನ ಭಯಕ್ಕೂ ಫಲ.
[5] ವಕ್ರಬುದ್ಧಿಯುಳ್ಳವನ ಮಾರ್ಗದಲ್ಲಿ ಮುಳ್ಳುಗಳೂ, ಉರುಲುಗಳೂ ತುಂಬಿವೆ, ತನ್ನನ್ನು ರಕ್ಷಿಸಿಕೊಳ್ಳುವವನು ಅವುಗಳಿಗೆ ದೂರವಾಗಿರುವನು.
[6] ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳನ್ನು ಶಿಕ್ಷಿಸು, ಮುಪ್ಪಿನಲ್ಲಿಯೂ ಓರೆಯಾಗರು.
[7] ಬಲ್ಲಿದನು ಬಡವನಿಗೆ ಒಡೆಯ, ಸಾಲಗಾರನು ಸಾಲಕೊಟ್ಟವನಿಗೆ ಸೇವಕ.
[8] ಕೆಟ್ಟತನವನ್ನು ಬಿತ್ತುವವನು ಕೇಡನ್ನೇ ಕೊಯ್ಯುವನು, ಹೆಮ್ಮೆಯಿಂದ ಹಿಡಿದ ದಂಡವು ಅವನ ಕೈಯಿಂದ ಬಿದ್ದುಹೋಗುವುದು.
[9] ದಯಾದೃಷ್ಟಿಯವನು ಆಶೀರ್ವಾದವನ್ನು ಪಡೆಯುವನು, ತನ್ನ ಆಹಾರವನ್ನು ಬಡವರಿಗೆ ಕೊಡುತ್ತಾನಲ್ಲವೆ.
[10] ಧರ್ಮನಿಂದಕನನ್ನು ಓಡಿಸಿಬಿಟ್ಟರೆ ಜಗಳವು ತೊಲಗುವುದು, ಹೌದು, ವ್ಯಾಜ್ಯವು ತೀರಿ ಅವಮಾನವು ಇಲ್ಲವಾಗುವುದು.
[11] ಹೃದಯಶುದ್ಧಿಯನ್ನು ಅಪೇಕ್ಷಿಸುವ ಮತ್ತು ಸವಿಮಾತನಾಡುವ ಮನುಷ್ಯನಿಗೆ ರಾಜನ ಸ್ನೇಹವು ದೊರೆಯುವುದು.
[12] ಯೆಹೋವನ ಕಣ್ಣು ತಿಳಿವಳಿಕೆಗೆ ಕಾವಲು, ಆತನು ವಂಚಕನ ಮಾತುಗಳನ್ನು ಕೆಡವಿಬಿಡುವನು.
[13] “ಹೊರಗೆ ಸಿಂಹವಿದೆ, ನನ್ನನ್ನು ಬೀದಿಯಲ್ಲಿ ಕೊಂದ್ದಿತು” ಎಂಬುದು ಸೋಮಾರಿಯ ನೆವ.
[14] ಜಾರಸ್ತ್ರೀಯ ಬಾಯಿ ಆಳವಾದ ಹಳ್ಳ, ಯೆಹೋವನಿಗೆ ಸಿಟ್ಟನ್ನೆಬ್ಬಿಸಿದವನು ಅದರಲ್ಲಿ ಬೀಳುವನು.
[15] ಮೂರ್ಖತನವು ಮಕ್ಕಳ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವುದು.
[16] ಸ್ವಂತ ಲಾಭಕ್ಕಾಗಿ ಬಡವರನ್ನು ಹಿಂಸಿಸುವವನಿಗೂ, ಸಿರಿವಂತರಿಗೆ ಲಂಚಕೊಡುವವನಿಗೂ ಕೊರತೆಯೇ ಗತಿ.
[17] ಕಿವಿಗೊಟ್ಟು ಜ್ಞಾನಿಗಳ ಮಾತುಗಳನ್ನು ಕೇಳು, ನನ್ನ ಜ್ಞಾನಬೋಧೆಗೆ ಮನಸ್ಸು ಕೊಡು.
[18] ನೀನು ಆ ಮಾತುಗಳನ್ನು ಅಂತರಂಗದಲ್ಲಿ ಕಾಪಾಡುತ್ತಾ, ತುಟಿಗಳಲ್ಲಿ ಸಿದ್ಧಪಡಿಸಿಕೊಂಡಿದ್ದರೆ ಎಷ್ಟೋ ರಮ್ಯ.
[19] ನೀನು ಯೆಹೋವನಲ್ಲಿ ಭರವಸವಿಡಬೇಕೆಂದು, ಅವುಗಳನ್ನು ಈ ದಿನ ನಿನಗೇ ತಿಳಿಯಪಡಿಸಿದ್ದೇನೆ.
[20] ಸತ್ಯವಚನಗಳು ಎಷ್ಟೋ ಯಥಾರ್ಥವೆಂದು ನೀನು ತಿಳಿದುಕೊಂಡು, ನಿನ್ನನ್ನು ಕಳುಹಿಸಿದವರಿಗೆ ಸತ್ಯವಚನಗಳನ್ನೇ ಅರಿಕೆ ಮಾಡುವಂತೆ,
[21] ಸತ್ಯ, ತಿಳಿವಳಿಕೆಯ ವಿಷಯವಾಗಿ ಇದಕ್ಕೆ ಮೊದಲೇ ನಿನಗಾಗಿ ಬರೆದಿರುವೆನಲ್ಲಾ.
[22] ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆ ಮಾಡಬೇಡ, ನ್ಯಾಯಸ್ಥಾನದಲ್ಲಿ ದರಿದ್ರರನ್ನು ತುಳಿಯಬೇಡ.
[23] ಯೆಹೋವನೇ ಅವರ ವ್ಯಾಜ್ಯವನ್ನು ನಡೆಸಿ, ಹಾಳುಮಾಡಿದವರ ಜೀವವನ್ನು ಹಾಳುಮಾಡುವನು.
[24] ಕೋಪಿಷ್ಠನ ಸಂಗಡ ಸ್ನೇಹ ಬೆಳಸಬೇಡ, ಸಿಟ್ಟುಗಾರನ ಸಹವಾಸ ಮಾಡಬೇಡ.
[25] ಮಾಡಿದರೆ ಅವನ ದುರ್ನಡತೆಯನ್ನು ಅನುಸರಿಸಿ, ನಿನ್ನ ಆತ್ಮವನ್ನು ಉರುಲಿಗೆ ಸಿಕ್ಕಿಸಿಕೊಳ್ಳುವಿ ನೋಡಿಕೋ.
[26] ಮಾತುಕೊಟ್ಟು ಸಾಲಕ್ಕೆ ಹೊಣೆಯಾಗುವವರಲ್ಲಿ, ನೀನೂ ಒಬ್ಬನಾಗಬೇಡ,
[27] ಆ ಸಾಲವನ್ನು ತೀರಿಸುವುದಕ್ಕೆ ನಿನ್ನಿಂದಾಗದಿರಲು, ಸಾಲಕೊಟ್ಟವನು ನಿನ್ನ ಕೆಳಗಿನ ಹಾಸಿಗೆಯನ್ನು ಕಿತ್ತುಹಾಕುವುದು ಬೇಕೇ?
[28] ನಿನ್ನ ಪೂರ್ವಿಕರು ಹಾಕಿದ ಪೂರ್ವಕಾಲದ ಮೇರೆಯನ್ನು ದಾಟಬೇಡ.
[29] ತನ್ನ ಕೆಲಸದಲ್ಲಿ ಚಾತುರ್ಯವುಳ್ಳವನನ್ನು ನೋಡು, ಇಂಥವನು ರಾಜನ ಸನ್ನಿಧಿಯಲ್ಲಿ ನಿಲ್ಲುವನೇ ಹೊರತು, ಸಾಮಾನ್ಯ ಜನರ ಮುಂದೆ ಅಲ್ಲ.