[1] ಬೇಸಿಗೆಯಲ್ಲಿ ಹಿಮ, ಸುಗ್ಗಿಯಲ್ಲಿ ಮಳೆ ಹೇಗೋ, ಮೂಢನಿಗೆ ಮಾನವು ಹಾಗೆ ಸರಿಯಲ್ಲ.
[2] ಕುಪ್ಪಳಿಸುತ್ತಿರುವ ಗುಬ್ಬಿಯಂತೆ, ಹಾರಾಡುವ ಬಾನಕ್ಕಿಯ ಹಾಗೆ, ಕಾರಣವಿಲ್ಲದೆ ಕೊಟ್ಟ ಶಾಪವು ಎರಗಿ ನಿಲ್ಲದು.
[3] ಕುದುರೆಗೆ ಚಬುಕು, ಕತ್ತೆಗೆ ಕಡಿವಾಣ, ಮೂಢನ ಬೆನ್ನಿಗೆ ಬೆತ್ತ.
[4] ಮೂಢನ ಮೂರ್ಖತನಕ್ಕೆ ಸರಿಯಾಗಿ ಉತ್ತರ ಕೊಡಬೇಡ, ನೀನೂ ಅವನಿಗೆ ಸಮಾನನಾದೀಯೆ.
[5] ಮೂಢನ ಮೂರ್ಖತನಕ್ಕೆ ಸರಿಯಾಗಿ ಉತ್ತರ ಕೊಡು, ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು.
[6] ಮೂಢನ ಮೂಲಕ ಮಾತನ್ನು ಹೇಳಿಕಳುಹಿಸುವವನು, ತನ್ನ ಕಾಲುಗಳನ್ನು ತಾನೇ ಕಡಿದುಕೊಂಡು ಕೇಡನ್ನು ಕುಡಿಯುವನು.
[7] ಮೂಢನ ಬಾಯಿಯ ಜ್ಞಾನೋಕ್ತಿಯು, ಜೋಲಾಡುವ ಕುಂಟಕಾಲು.
[8] ಮೂಢನಿಗೆ ಕೊಡುವ ಮಾನವು, ಕವಣೆಯಲ್ಲಿಟ್ಟ ಕಲ್ಲಿನ ಹಾಗೆ.
[9] ಮೂಢನ ಬಾಯಿಗೆ ಸಿಕ್ಕಿದ ಜ್ಞಾನೋಕ್ತಿಯು, ಕುಡುಕನ ಕೈಗೆ ಸಿಕ್ಕಿದ ಮುಳ್ಳುಗೋಲಿನ ಹಾಗೆ.
[10] ಮೂಢರನ್ನೂ, ತಿರುಗಾಡುವವರನ್ನೂ ಕೂಲಿಗೆ ಕರೆಯುವವನು, ಯಾರಿಗೋ ತಗಲಲಿ ಎಂದು ಬಾಣವನ್ನು ಎಸೆಯುವವನಂತೆ.
[11] ನಾಯಿ ತಾನು ಕಕ್ಕಿದ್ದನ್ನು ನೆಕ್ಕುವುದಕ್ಕೆ ತಿರುಗಿಕೊಳ್ಳುವ ಹಾಗೆ, ಮೂಢನು ತಾನು ಮಾಡಿದ ಮೂರ್ಖತನವನ್ನೇ ಪುನಃ ಮಾಡುವನು.
[12] ತಾನೇ ಜ್ಞಾನಿಯೆಂದು ಎಣಿಸಿಕೊಳ್ಳುವವನನ್ನು ನೋಡು, ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನಿಡಬಹುದು.
[13] “ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ತಿರುಗಾಡುತ್ತಿದೆ” ಎಂಬುದು ಸೋಮಾರಿಯ ನೆವ.
[14] ಕದವು ತಿರುಗುಣಿಯಲ್ಲಿ ಹೇಗೋ, ಹಾಗೆ ಸೋಮಾರಿಯು ಹಾಸಿಗೆಯಲ್ಲಿ ಹೊರಳಾಡುತ್ತಿರುವನು.
[15] ಸೋಮಾರಿಯು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ, ತಿರುಗಿ ಬಾಯಿಯ ಹತ್ತಿರ ತರಲಾರದಷ್ಟು ಆಯಾಸಗೊಳ್ಳುತ್ತಾನೆ.
[16] ವಿವೇಕದಿಂದ ಉತ್ತರಕೊಡಬಲ್ಲ ಏಳು ಜನರಿಗಿಂತಲೂ, ತಾನೇ ಜ್ಞಾನಿಯೆಂದು ಸೋಮಾರಿಯು ಎಣಿಸಿಕೊಳ್ಳುವನು.
[17] ಒಬ್ಬನು ದಾರಿಯಲ್ಲಿ ಹೋಗುತ್ತಾ ಪರರ ವ್ಯಾಜ್ಯಕ್ಕೆ ಸೇರಿ ರೇಗಿಕೊಳ್ಳುವುದು, ನಾಯಿಯ ಕಿವಿಹಿಡಿದ ಹಾಗೆ.
[18] ನೆರೆಯವನನ್ನು ಮೋಸಗೊಳಿಸಿ, “ತಮಾಷೆಗೋಸ್ಕರ, ಮಾಡಿದೆನಲ್ಲಾ” ಎನ್ನುವವನು,
[19] ಕೊಳ್ಳಿಗಳನ್ನೂ, ಅಂಬುಗಳನ್ನೂ, ಸಾವನ್ನೂ ಬೀರುವ, ದೊಡ್ಡ ಹುಚ್ಚನ ಹಾಗೆ.
[20] ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವುದು, ಚಾಡಿಕೋರನು ಇಲ್ಲದಿದ್ದರೆ ಜಗಳ ಶಮನವಾಗುವುದು.
[21] ಕೆಂಡಕ್ಕೆ ಇದ್ದಲು, ಉರಿಗೆ ಕಟ್ಟಿಗೆ, ವ್ಯಾಜ್ಯದ ಕಿಚ್ಚನ್ನೆಬ್ಬಿಸುವುದಕ್ಕೆ ಜಗಳಗಂಟಿಗ.
[22] ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳು, ಇವು ಹೊಟ್ಟೆಯೊಳಕ್ಕೇ ಇಳಿಯುವವು.
[23] ಕೆಟ್ಟ ಹೃದಯದಿಂದ ಪ್ರೀತಿಯನ್ನಾಡುವ ತುಟಿಯು, ಬೆಳ್ಳಿ ಲೇಪನ ಮಾಡಿದ ಮಣ್ಣಿನ ಮಡಿಕೆಯ ಹಾಗೆ.
[24] ಶತ್ರುವು ಸ್ನೇಹಭಾವದಿಂದ ನಟಿಸುತ್ತಾನೆ, ಅಂತರಂಗದಲ್ಲಿ ಬರೀ ಮೋಸವನ್ನು ಇಟ್ಟುಕೊಂಡಿದ್ದಾನೆ.
[25] ಸವಿಮಾತನಾಡಿದರೂ ಅವನನ್ನು ನಂಬಬೇಡ, ಅವನ ಹೃದಯದಲ್ಲಿ ಎಷ್ಟೋ ಹೇಯ ಕೃತ್ಯಗಳು.
[26] ತನ್ನ ಹಗೆಯನ್ನು ವಂಚನೆಯಿಂದ ಮರೆಮಾಚಿಕೊಂಡಿದ್ದರೂ, ಅವನ ಕೆಟ್ಟತನವು ಸಭೆಯಲ್ಲಿ ಬೈಲಾಗುವುದು.
[27] ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು, ಹೊರಳಿಸುವವನ ಮೇಲೆಯೇ ಕಲ್ಲು ಹೊರಳುವುದು.
[28] ಸುಳ್ಳು ನಾಲಿಗೆಯವನು ತಾನು ಬಾಧಿಸಿದವರನ್ನೇ ದ್ವೇಷಿಸುವನು, ಕಪಟದ ಬಾಯಿ ನಾಶಕರ.