[1] ದ್ರಾಕ್ಷಾರಸವು ಪರಿಹಾಸ್ಯ, ಮದ್ಯವು ಕೂಗಾಟ, ಇವುಗಳಿಂದ ದಾರಿತಪ್ಪಿ ಹೋಗುವವನು ಜ್ಞಾನಿಯಲ್ಲ.
[2] ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು, ಅವನನ್ನು ಕೆಣಕುವವನು ತನಗೇ ಕೆಡುಕುಮಾಡಿಕೊಳ್ಳುವನು.
[3] ವ್ಯಾಜ್ಯಕ್ಕೆ ದೂರವಿರುವವನು ಮಾನಕ್ಕೆ ಯೋಗ್ಯನು, ಜಗಳವು ಪ್ರತಿಯೊಬ್ಬ ಮೂರ್ಖನಿಗೂ ಸಹಜ.
[4] ಮೈಗಳ್ಳನು ಮಳೆಗಾಲದಲ್ಲಿ ಉಳುವುದಿಲ್ಲ, ಸುಗ್ಗೀಕಾಲದಲ್ಲಿ ಅಪೇಕ್ಷಿಸಲು ಏನು ಸಿಕ್ಕೀತು?
[5] ಮನುಷ್ಯನ ಹೃದಯಸಂಕಲ್ಪವು ಆಳವಾದ ಬಾವಿಯ ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು.
[6] ಸ್ನೇಹಿತರೆಂದು ಹೇಳಿಕೊಳ್ಳುವವರು ಬಹಳ ಜನರು, ನಂಬಿಗಸ್ತನಾದ ಸ್ನೇಹಿತನು ಎಲ್ಲಿ ಸಿಕ್ಕುವನು?
[7] ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು, ಅವನು ಗತಿಸಿದ ಮೇಲೆಯೂ ಅವನ ಮಕ್ಕಳು ಭಾಗ್ಯವಂತರು.
[8] ರಾಜನು ನ್ಯಾಯಾಸನಾರೂಢನಾಗಿ, ತನ್ನ ದೃಷ್ಟಿಯಿಂದ ಸಕಲ ಕೆಟ್ಟತನವನ್ನು ತೂರುವನು.
[9] “ನನ್ನ ಹೃದಯವನ್ನು ಶುದ್ಧಿಮಾಡಿಕೊಂಡಿದ್ದೇನೆ, ನನ್ನ ಪಾಪವನ್ನು ತೊಳೆದುಕೊಂಡು ನಿರ್ಮಲನಾಗಿದ್ದೇನೆ” ಎಂದು ಯಾರು ಹೇಳಬಲ್ಲರು?
[10] ತೂಕದ ಕಲ್ಲನ್ನೂ, ಅಳತೆಯ ಪಾತ್ರೆಯನ್ನೂ ಹೆಚ್ಚಿಸುವುದು, ತಗ್ಗಿಸುವುದು ಇವೆರಡೂ ಯೆಹೋವನಿಗೆ ಅಸಹ್ಯ.
[11] ಒಬ್ಬ ಹುಡುಗನಾದರೂ ಶುದ್ಧವೂ, ಸತ್ಯವೂ ಆದ ನಡತೆಯಿಂದಲೇ, ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು.
[12] ಕೇಳುವ ಕಿವಿ, ನೋಡುವ ಕಣ್ಣು, ಇವೆರಡನ್ನೂ ಯೆಹೋವನು ನಿರ್ಮಿಸಿದ್ದಾನೆ.
[13] ನಿದ್ರಾನಿರತನಾಗಿರಬೇಡ! ಬಡವನಾದೀಯೆ, ಕಣ್ಣು ತೆರೆ! ಆಹಾರದಿಂದ ತೃಪ್ತಿಗೊಳ್ಳುವಿ.
[14] ಕೊಳ್ಳುವವನು, “ಚೆನ್ನಾಗಿಲ್ಲ, ಚೆನ್ನಾಗಿಲ್ಲ” ಎಂದು ಹೇಳುತ್ತಾನೆ, ಕೊಂಡುಕೊಂಡು ಹೋಗಿ ಹೆಚ್ಚಳಪಡುತ್ತಾನೆ.
[15] ಹೊನ್ನು ಉಂಟು, ಹವಳದ ರಾಶಿ ಉಂಟು, ಆದರೆ ಜ್ಞಾನದ ತುಟಿಗಳೇ ಅಮೂಲ್ಯವಾದ ಆಭರಣ.
[16] ಮತ್ತೊಬ್ಬನಿಗೆ ಹೊಣೆಯಾದವನ ಬಟ್ಟೆಯನ್ನು ಕಿತ್ತುಕೋ, ಮತ್ತೊಬ್ಬಳಿಗೆ ಹೊಣೆಯಾದವನನ್ನೇ ಒತ್ತೆ ಮಾಡಿಕೋ.
[17] ಮೋಸದಿಂದ ಸಿಕ್ಕಿದ ಆಹಾರವು ಮನುಷ್ಯನಿಗೆ ರುಚಿ, ಆ ಮೇಲೆ ಅವನ ಬಾಯಿ ಮರಳಿನಿಂದ ತುಂಬುವುದು.
[18] ಉದ್ದೇಶಗಳು ಮಂತ್ರಾಲೋಚನೆಯಿಂದ ನೆರವೇರುವವು, ಮಂತ್ರಾಲೋಚನೆಯಿಂದಲೇ ಯುದ್ಧವನ್ನು ನಡಿಸು.
[19] ಚಾಡಿಕೋರನು ಗುಟ್ಟನ್ನು ರಟ್ಟು ಮಾಡುವನು, ಆದುದರಿಂದ ತುಟಿ ಬಿಗಿಹಿಡಿಯದವನ ಗೊಡವೆಗೆ ಹೋಗಬೇಡ.
[20] ತಂದೆಯನ್ನಾಗಲಿ ಅಥವಾ ತಾಯಿಯನ್ನಾಗಲಿ ಶಪಿಸುವವನ ದೀಪವು, ಮಧ್ಯರಾತ್ರಿಯ ಅಂಧಕಾರದಲ್ಲಿ ಆರಿಹೋಗುವುದು.
[21] ಮೊದಲು ಬೇಗನೆ ಬಾಚಿಕೊಂಡ ಸ್ವತ್ತು, ಕೊನೆಯಲ್ಲಿ ಕಳೆದು ಹೋಗುವುದು.
[22] ಕೇಡಿಗೆ ಮುಯ್ಯಿತೀರಿಸುವೆನು ಅನ್ನಬೇಡ, ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಆತನೇ ನಿನ್ನನ್ನು ಉದ್ಧರಿಸುವನು.
[23] ತೂಕದ ಕಲ್ಲನ್ನು ಹೆಚ್ಚಿಸುವುದು, ತಗ್ಗಿಸುವುದು ಯೆಹೋವನಿಗೆ ಅಸಹ್ಯ, ಮೋಸದ ತಕ್ಕಡಿ ಒಳ್ಳೆಯದಲ್ಲ.
[24] ಮನುಷ್ಯನಿಗೆ ಗತಿಯನ್ನು ಏರ್ಪಡಿಸುವವನು ಯೆಹೋವನೇ ಆಗಿರುವಲ್ಲಿ, ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಂಡಾನು?
[25] “ಇದು ದೇವರಿಗಾಗಿ” ಎಂದು ದುಡುಕಿ ಹರಕೆಮಾಡುವುದು, ಹರಕೆಯನ್ನು ಹೊತ್ತಮೇಲೆ ವಿಚಾರಮಾಡುವುದು ಮನುಷ್ಯನಿಗೆ ಉರುಲು.
[26] ಜ್ಞಾನಿಯಾದ ಅರಸನು ದುಷ್ಟರ ಮೇಲೆ ಕಣದ ಗುಂಡನ್ನು ಉರುಳಿಸಿ, ಅವರನ್ನು ತೂರಿಬಿಡುವನು.
[27] ಮನುಷ್ಯನ ಆತ್ಮವು ಯೆಹೋವನ ದೀಪವಾಗಿದೆ, ಅದು ಅಂತರಂಗವನ್ನೆಲ್ಲಾ ಶೋಧಿಸುತ್ತದೆ.
[28] ರಾಜನ ಕೃಪಾಸತ್ಯತೆಗಳು ಅವನನ್ನು ಕಾಯುವವು, ಅವನ ಕರುಣೆಯೇ ಅವನ ಸಿಂಹಾಸನಕ್ಕೆ ಆಧಾರ.
[29] ಯುವಕರಿಗೆ ಬಲವು ಭೂಷಣ, ಮುದುಕರಿಗೆ ನರೆಯು ಒಡವೆ.
[30] ಗಾಯಮಾಡುವ ಪೆಟ್ಟುಗಳು ಕೆಟ್ಟದ್ದನ್ನು ತೊಳೆದುಬಿಡುವುದು, ಏಟುಗಳು ಅಂತರಂಗವನ್ನು ಶುದ್ಧಿಮಾಡುವುದು.