[1] ಬಹಳವಾಗಿ ಗದರಿಸಿದರೂ ತಗ್ಗದವನು, ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.
[2] ಶಿಷ್ಟರ ವೃದ್ಧಿ ಜನರಿಗೆ ಉಲ್ಲಾಸ, ದುಷ್ಟನ ಆಳ್ವಿಕೆ ಜನರಿಗೆ ನರಳಾಟ.
[3] ಜ್ಞಾನವನ್ನು ಪ್ರೀತಿಸುವವನು ತಂದೆಯನ್ನು ಹರ್ಷಗೊಳಿಸುವನು, ವೇಶ್ಯೆಯ ಸಂಗಡಿಗನು ಆಸ್ತಿಯನ್ನು ಹಾಳುಮಾಡಿಕೊಳ್ಳುವನು.
[4] ನ್ಯಾಯಪಾಲಕನಾದ ರಾಜನು ದೇಶವನ್ನು ವೃದ್ಧಿಗೆ ತರುವನು, ಅನ್ಯಾಯವಾಗಿ ತೆರಿಗೆಯನ್ನು ಕಸಕೊಳ್ಳುವವನು ದೇಶವನ್ನು ನಾಶಮಾಡುವನು.
[5] ನೆರೆಯವನೊಂದಿಗೆ ವಂಚನೆಯ ಸವಿನುಡಿಗಳನ್ನು ಆಡುವವನು, ಅವನ ಹೆಜ್ಜೆಗೆ ಬಲೆಯನ್ನೊಡ್ಡುವನು.
[6] ಕೆಟ್ಟವನ ದುರ್ಮಾರ್ಗದಲ್ಲಿ ಉರುಲುಂಟು, ಒಳ್ಳೆಯವನು ಉಲ್ಲಾಸಗೊಂಡು ಹರ್ಷಧ್ವನಿಗೈಯುವನು.
[7] ಶಿಷ್ಟನು ಬಡವರ ನ್ಯಾಯವನ್ನು ತಿಳಿದಿರುವನು, ದುಷ್ಟನಿಗೆ ಅದನ್ನು ಗ್ರಹಿಸುವಷ್ಟು ವಿವೇಕವಿಲ್ಲ.
[8] ಧರ್ಮನಿಂದಕರು ಪಟ್ಟಣಕ್ಕೆ ಬೆಂಕಿಯನ್ನು ಹತ್ತಿಸುವರು, ಜ್ಞಾನಿಗಳೋ ರೋಷಾಗ್ನಿಯನ್ನು ಆರಿಸುವರು.
[9] ಮೂರ್ಖನ ಸಂಗಡ ಜ್ಞಾನಿಯು ವ್ಯಾಜ್ಯವಾಡುವಾಗ, ರೇಗಿದರೂ, ನಕ್ಕರೂ ಜಗಳವು ತೀರುವುದಿಲ್ಲ.
[10] ಕೊಲೆಪಾತಕರು ನಿರ್ದೋಷಿಯನ್ನು ದ್ವೇಷಿಸುವರು, ಯಥಾರ್ಥವಂತನ ಪ್ರಾಣಕ್ಕೂ ಹೊಂಚುಹಾಕುವರು.
[11] ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು, ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.
[12] ಸುಳ್ಳಿಗೆ ಕಿವಿಗೊಡುವ ಅಧಿಪತಿಯ ಸೇವಕರೆಲ್ಲಾ ದುಷ್ಟರೇ.
[13] ತಗ್ಗುವವನು, ತಗ್ಗಿಸುವವನು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರಿಬ್ಬರ ಕಣ್ಣುಗಳಿಗೆ ಕಳೆಕೊಟ್ಟವನು.
[14] ಬಡವರನ್ನು ನ್ಯಾಯವಾಗಿ ಆಳ್ವಿಕೆ ಮಾಡುವ ರಾಜನ ಸಿಂಹಾಸನವು ಶಾಶ್ವತವು.
[15] ಬೆತ್ತ ಮತ್ತು ಬೆದರಿಕೆಗಳಿಂದ ಜ್ಞಾನವುಂಟಾಗುವುದು, ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.
[16] ದುಷ್ಟರ ವೃದ್ಧಿ ಪಾಪವೃದ್ಧಿ, ಶಿಷ್ಟರೋ ಅವರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.
[17] ಮಗನನ್ನು ಶಿಕ್ಷಿಸು, ಅವನು ನಿನ್ನನ್ನು ಸಂತೋಷಪಡಿಸುವನು, ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.
[18] ದೇವದರ್ಶನ ಇಲ್ಲದಿರುವಲ್ಲಿ ಜನರು ನಾಶವಾಗುವರು, ಧರ್ಮೋಪದೇಶವನ್ನು ಕೈಕೊಳ್ಳುವವನೋ ಧನ್ಯನಾಗುವನು.
[19] ಆಳು ಮಾತಿನಿಂದ ಮಾತ್ರ ಶಿಕ್ಷಿತನಾಗಲಾರನು, ಅವನು ತಿಳಿದುಕೊಂಡರೂ ಗಮನಿಸನು.
[20] ದುಡುಕಿ ಮಾತನಾಡುವವನನ್ನು ನೋಡು, ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನು ಇಡಬಹುದು.
[21] ಆಳನ್ನು ಬಾಲ್ಯದಿಂದ ಕೋಮಲವಾಗಿ ಸಾಕಿದರೆ, ತರುವಾಯ ಅವನು ಎದುರುಬೀಳುವನು.
[22] ಕೋಪಿಷ್ಠನು ಜಗಳವನ್ನೆಬ್ಬಿಸುವನು, ಕ್ರೋಧಶೀಲನು ದೋಷಭರಿತನು.
[23] ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವುದು, ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.
[24] ಕಳ್ಳನೊಂದಿಗೆ ಪಾಲುಗಾರನಾದವನು ತನಗೆ ತಾನೇ ಶತ್ರು, ಆಣೆಯಿಡುವುದನ್ನು ಕೇಳಿದರೂ ಸುಮ್ಮನಿರುವನು.
[25] ಮನುಷ್ಯನ ಭಯ ಉರುಲು, ಯೆಹೋವನ ಭರವಸ ಉದ್ಧಾರ.
[26] ಅನೇಕರು ನ್ಯಾಯಾಧಿಪತಿಯ ಕಟಾಕ್ಷವನ್ನು ಕೋರುವರು, ನ್ಯಾಯತೀರ್ಪು ಯೆಹೋವನಿಂದಲೇ ಆಗುವುದು.
[27] ಶಿಷ್ಟರಿಗೆ ದುರ್ಮಾರ್ಗಿಯು ಅಸಹ್ಯನು, ದುಷ್ಟರಿಗೆ ಸರಳಮಾರ್ಗಿಯು ಅಸಹ್ಯನು.