[1] ದೈವೋಕ್ತಿ. ಯಾಕೆ ಎಂಬುವವನ ಮಗನಾದ ಆಗೂರನ ಮಾತುಗಳು. ಇವನು ಇಥಿಯೇಲನಿಗೆ, ಇಥಿಯೇಲನಿಗೂ ಉಕ್ಕಾಲನಿಗೂ ಹೀಗೆ ಹೇಳಿದನು.
[2] ಮನುಷ್ಯರಲ್ಲಿ ನನ್ನಂಥ ಪಶುಪ್ರಾಯನು ಇಲ್ಲವಷ್ಟೆ, ಮಾನುಷ ವಿವೇಕವು ನನಗಿಲ್ಲ.
[3] ನಾನು ಜ್ಞಾನವನ್ನು ಪಡೆದುಕೊಂಡಿಲ್ಲ, ಪರಿಶುದ್ಧನ ವಿಷಯವಾದ ತಿಳಿವಳಿಕೆಯನ್ನು ಹೊಂದಿಲ್ಲ.
[4] ಆಕಾಶಕ್ಕೆ ಏರಿ ಇಳಿದಿರುವವನಾರು? ಮುಷ್ಠಿಯಲ್ಲಿ ಗಾಳಿಯನ್ನು ಕೂಡಿಸಿರುವವರು ಯಾರು? ತನ್ನ ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿರುವವರು ಯಾರು? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿರುವವರು ಯಾರು? ಅವನ ಹೆಸರೇನು? ಅವನ ಮಗನ ಹೆಸರೇನು? ನೀನೇ ಬಲ್ಲವನು.
[5] ದೇವರ ಪ್ರತಿಯೊಂದು ಮಾತು ಶುದ್ಧವಾದದ್ದು, ಆತನು ಶರಣಾಗತರಿಗೆ ಗುರಾಣಿಯಾಗಿದ್ದಾನೆ.
[6] ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, ಆತನು ನಿನ್ನನ್ನು ಖಂಡಿಸುವಾಗ ನೀನು ಸುಳ್ಳುಗಾರನೆಂದು ತೋರಿಬಂದೀಯೆ.
[7] ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ, ಅನುಗ್ರಹಿಸದಿರಬೇಡ, ನಾನು ಸಾಯುವುದರೊಳಗಾಗಿ ಅವುಗಳನ್ನು ಕೈಗೂಡಿಸು.
[8] ನನ್ನಿಂದ ಕಪಟವನ್ನೂ, ಸುಳ್ಳುಮಾತನ್ನೂ ತೊಲಗಿಸು, ಬಡತನವನ್ನಾಗಲಿ, ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು.
[9] ಹಾಗಾಗದೆ ಹೊಟ್ಟೆತುಂಬಿದವನಾದರೆ, “ಯೆಹೋವನು ಯಾರೋ?” ಎಂದು ನಿನ್ನನ್ನು ತಿರಸ್ಕರಿಸೇನು, ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೆನು.
[10] ಆಳಿನ ಮೇಲೆ ದಣಿಗೆ ದೂರನ್ನು ಹೇಳಬೇಡ, ಅವನು ಶಪಿಸಾನು, ನಿನ್ನಲ್ಲೇ ದೋಷವು ಕಂಡು ಬಂದೀತು.
[11] ತಾಯಿಗೆ ಶುಭವನ್ನು ಕೋರದೆ, ತಂದೆಯನ್ನು ಶಪಿಸುವ ಒಂದು ತರದವರು ಉಂಟು.
[12] ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು, ಎಣಿಸಿಕೊಳ್ಳುವ ಬೇರೊಂದು ತರದವರು ಉಂಟು.
[13] ಕಣ್ಣುರೆಪ್ಪೆಗಳನ್ನೆತ್ತಿಕೊಂಡು, ಎಷ್ಟೋ ಮೇಲೆ ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರು ಉಂಟು.
[14] ಖಡ್ಗದಂತಿರುವ ಹಲ್ಲುಗಳೂ ಕತ್ತಿಯಂತಿರುವ ಕೋರೆಗಳೂ ಉಳ್ಳವರಾಗಿ ಭೂಮಿಯೊಳಗಿಂದ ಬಡವರನ್ನೂ, ಮನುಷ್ಯರ ಮಧ್ಯದೊಳಗಿಂದ ದಿಕ್ಕಿಲ್ಲದವರನ್ನೂ, ಅಗೆದು ನುಂಗಿಬಿಡುವ ಮತ್ತೊಂದು ತರದವರು ಉಂಟು.
[15] ಕೊಡು, ಕೊಡು ಅನ್ನುವ ಎರಡು ಹೆಣ್ಣು ಮಕ್ಕಳು ಜಿಗಣೆಗೆ ಉಂಟು. ತೃಪ್ತಿಪಡದವುಗಳು ಮೂರು ಉಂಟು, ಹೌದು, ಸಾಕೆನ್ನದವುಗಳು ನಾಲ್ಕು ಉಂಟು.
[16] ಯಾವುವೆಂದರೆ, ಪಾತಾಳ, ಹೆರದ ಗರ್ಭ, ನೀರಿನಿಂದ ತೃಪ್ತಿಪಡದ ಭೂಮಿ, ಸಾಕಾಯಿತೆಂದು ಹೇಳದ ಬೆಂಕಿ, ಇವೇ.
[17] ತಂದೆಯನ್ನು ಹಾಸ್ಯಮಾಡಿ ತಾಯಿಯ ಅಪ್ಪಣೆಯನ್ನು, ಧಿಕ್ಕರಿಸುವವನ ಕಣ್ಣನ್ನು, ಹಳ್ಳಕೊಳ್ಳದ ಕಾಗೆಗಳು ಕುಕ್ಕುವವು, ರಣಹದ್ದುಗಳು ತಿಂದುಬಿಡುವವು.
[18] ಮೂರು ವಿಷಯಗಳು ನನ್ನ ಬುದ್ಧಿಯನ್ನು ಮೀರಿವೆ, ಹೌದು, ನಾಲ್ಕನ್ನು ಗ್ರಹಿಸಲಾರೆನು;
[19] ಯಾವುವೆಂದರೆ, ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ, ಸಾಗರದ ನಡುವೆ ಹಡಗಿನ ಮಾರ್ಗ, ಸ್ತ್ರೀಯಲ್ಲಿ ಪುರುಷನ ಪದ್ಧತಿ, ಇವೇ.
[20] ಜಾರಳ ನಡತೆಯು ಹೀಗೆಯೇ ಸರಿ, ಅವಳು ತಿಂದು ಬಾಯಿ ಒರೆಸಿಕೊಂಡು, “ನಾನು ತಪ್ಪುಮಾಡಲಿಲ್ಲವಲ್ಲವೆ” ಅಂದುಕೊಳ್ಳುವಳು.
[21] ಮೂರರ ಭಾರದಿಂದ ಭೂಮಿಯು ಕಂಪಿಸುತ್ತದೆ, ಹೌದು, ನಾಲ್ಕರ ಹೊರೆಯನ್ನು ತಾಳಲಾರದು.
[22] ಯಾವುವೆಂದರೆ, ಪಟ್ಟಕ್ಕೆ ಬಂದ ದಾಸನು, ಹೊಟ್ಟೆತುಂಬಿದ ನೀಚನು,
[23] ಮದುವೆಯಾದ ಚಂಡಿಯು, ಸವತಿಯಾದ ತೊತ್ತು, ಇವೇ.
[24] ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳ ನಾಲ್ಕು ಸಣ್ಣ ಜಂತುಗಳುಂಟು.
[25] ಇರುವೆಗಳು ದುರ್ಬಲಜಾತಿಯಾವಾದರೂ, ಸುಗ್ಗಿಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುವವು.
[26] ಬೆಟ್ಟದ ಮೊಲಗಳು ದೊಡ್ಡ ಜಾತಿಯಲ್ಲದಿದ್ದರೂ, ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುವವು.
[27] ಮಿಡತೆಗಳಿಗೆ ಅರಸನಿಲ್ಲ, ಆದರೂ ಅವೆಲ್ಲಾ ದಂಡುದಂಡಾಗಿ ಹೊರಡುವವು.
[28] ಹಲ್ಲಿಯನ್ನು ಅಂಗೈಯಿಂದ ಹಿಡಿಯಬಹುದಾದರೂ, ಅದು ಅರಮನೆಗಳಲ್ಲಿ ವಾಸಮಾಡುವುದು.
[29] ಗಂಭೀರಾಗಮನದ ಮೂರು ಪ್ರಾಣಿಗಳುಂಟು, ಹೌದು, ಗಂಭೀರಗತಿಯ ನಾಲ್ಕುಂಟು.
[30] ಯಾವುದಕ್ಕೂ ಹೆದರಿ ಓರೆಯಾಗದ, ಮೃಗರಾಜನಾದ ಸಿಂಹ,
[31] ಹೆಮ್ಮೆಯಿಂದ ನಡೆಯುವ ಹುಂಜ, ಹೋತವು ಸಹ, ಸೈನ್ಯಸಮೇತನಾದ ರಾಜ.
[32] ನೀನು ಉಬ್ಬಿಕೊಂಡು ಮೂರ್ಖನಾಗಿ ನಡೆದಿದ್ದರೆ, ಅಥವಾ ದುರಾಲೋಚನೆಮಾಡಿದ್ದರೆ ಬಾಯಿಯ ಮೇಲೆ ಕೈಯಿಟ್ಟುಕೋ.
[33] ಹಾಲು ಕಡೆಯುವುದರಿಂದ ಬೆಣ್ಣೆ, ಮೂಗು ಹಿಂಡುವುದರಿಂದ ರಕ್ತ, ಕೋಪಕಲಕುವುದರಿಂದ ಜಗಳ.