[1] ಇಸ್ರಾಯೇಲರ ಅರಸನಾಗಿದ್ದ ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು.
[2] ಇವುಗಳಿಂದ ಜನರು ಜ್ಞಾನವನ್ನು ಮತ್ತು ಶಿಕ್ಷಣವನ್ನು ಪಡೆದು, ಬುದ್ಧಿವಾದಗಳನ್ನು ಗ್ರಹಿಸಿಕೊಳ್ಳುವರು.
[3] ಅವರು ವಿವೇಕಮಾರ್ಗದಲ್ಲಿ ಅಂದರೆ ನೀತಿ, ನ್ಯಾಯ ಮತ್ತು ಧರ್ಮಮಾರ್ಗಗಳಲ್ಲಿ ಶಿಕ್ಷಿತರಾಗುವರು.
[4] ಈ ನುಡಿಗಳು ಮೂಢರಿಗೆ ಜಾಣತನವನ್ನೂ, ಯೌವನಸ್ಥರಿಗೆ ತಿಳಿವಳಿಕೆಯನ್ನು ಮತ್ತು ಬುದ್ಧಿಯನ್ನು ಉಂಟುಮಾಡುವವು.
[5] ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಡಿಂತ್ಯವನ್ನು ಹೊಂದುವನು, ವಿವೇಕಿಯು ಮತ್ತಷ್ಟು ಉಚಿತಾಲೋಚನೆಯನ್ನು ಹೊಂದುವನು.
[6] ಇವು ಗಾದೆ, ಸಾಮ್ಯ, ಜ್ಞಾನಿಗಳ ನುಡಿ ಮತ್ತು ಒಗಟುಗಳನ್ನು ತಿಳಿಯಲು ಸಾಧನವಾಗಿವೆ.
[7] ಯೆಹೋವನ ಭಯವೇ ತಿಳಿವಳಿಕೆಗೆ ಮೂಲವು, ಮೂರ್ಖರಾದರೋ ಜ್ಞಾನವನ್ನು ಮತ್ತು ಶಿಕ್ಷಣವನ್ನು ತಿರಸ್ಕರಿಸುವರು.
[8] ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.
[9] ಅವು ನಿನ್ನ ತಲೆಗೆ ಸುಂದರವಾದ ಪುಷ್ಪಕಿರೀಟ, ಕೊರಳಿಗೆ ಹಾರದಂತಿರುವುದು.
[10] ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇ ಬೇಡ.
[11] ಅವರು, “ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚುಹಾಕೋಣ, ನಿರಪರಾಧಿಯನ್ನು ಕಾರಣವಿಲ್ಲದೆಯೇ ಹಿಡಿಯುವುದಕ್ಕೆ ಕಾದಿರೋಣ.
[12] ಪಾತಾಳವು ತನ್ನೊಳಗೆ ಇಳಿಯುವವರನ್ನು ಸಂಪೂರ್ಣವಾಗಿ ನುಂಗುವಂತೆ, ನಾವೂ ಇವರನ್ನು ಜೀವದೊಡನೆ ನುಂಗಿಬಿಡೋಣ.
[13] ಸಕಲವಿಧವಾದ ಅಮೂಲ್ಯ ಸಂಪತ್ತನ್ನು ಕಂಡುಹಿಡಿದು, ಕೊಳ್ಳೆಮಾಡಿ ನಮ್ಮ ಮನೆಗಳಲ್ಲಿ ತುಂಬಿಕೊಳ್ಳೋಣ.
[14] ನಮ್ಮ ಸಂಗಡ ಚೀಟು ಹಾಕು; ನಮ್ಮೆಲ್ಲರ ಹಣದ ಚೀಲ ಒಂದೇ ಆಗಿರಲಿ” ಎಂದು ಹೇಳಿದರೆ,
[15] ಮಗನೇ, ಅವರೊಡನೆ ದಾರಿಯಲ್ಲಿ ನಡೆಯಬಾರದು, ಅವರ ಮಾರ್ಗದಲ್ಲಿ ನೀನು ಹೆಜ್ಜೆಯಿಡಬೇಡ.
[16] ಅವರ ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುವವು, ಅವರು ರಕ್ತವನ್ನು ಸುರಿಸಲು ಆತುರಪಡುವರು.
[17] ಪಕ್ಷಿಗಳ ಕಣ್ಣೆದುರಿಗೆ ಬಲೆಯನ್ನೊಡ್ಡುವುದು ವ್ಯರ್ಥ.
[18] ಇವರಾದರೋ ಸ್ವರಕ್ತವನ್ನು ಸುರಿಸಿಕೊಳ್ಳುವುದಕ್ಕೆ ಹೊಂಚುಹಾಕುತ್ತಾರೆ, ಸ್ವಜೀವವನ್ನು ತೆಗೆದುಕೊಳ್ಳುವುದಕ್ಕೆ ಕಾದಿರುತ್ತಾರೆ.
[19] ಸೂರೆಮಾಡುವವರೆಲ್ಲರ ದಾರಿಯು ಹೀಗೆಯೇ ಸರಿ; ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವುದು.
[20] ಜ್ಞಾನವೆಂಬಾಕೆಯು ಬೀದಿಗಳಲ್ಲಿ ಕೂಗುತ್ತಾಳೆ, ಚೌಕಗಳಲ್ಲಿ ಧ್ವನಿಮಾಡುತ್ತಾಳೆ.
[21] ಪೇಟೆಯ ಮುಖ್ಯಸ್ಥಾನದಲ್ಲಿ ಆಕೆ ಕೂಗುತ್ತಾಳೆ, ಊರ ಬಾಗಿಲಿನಲ್ಲಿ ಆಕೆಯು ನುಡಿಯುವುದೇನೆಂದರೆ,
[22] “ಮೂಢರೇ, ಮೂಢತನವನ್ನು ಎಂದಿನ ತನಕ ಪ್ರೀತಿಸುವಿರಿ? ಧರ್ಮನಿಂದಕರು ನಿಂದಿಸುವುದಕ್ಕೆ ಎಷ್ಟುಕಾಲ ಇಷ್ಟಪಡುವರು? ಜ್ಞಾನಹೀನರು ತಿಳಿವಳಿಕೆಯನ್ನು ಎಷ್ಟರವರೆಗೆ ಹಗೆಮಾಡುವರು?
[23] ನನ್ನ ಗದರಿಕೆಗೆ ಲಕ್ಷ್ಯಕೊಡಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ, ನನ್ನ ಮಾತುಗಳನ್ನು ನಿಮಗೆ ತಿಳಿಯಪಡಿಸುವೆನು.
[24] ನಾನು ಕರೆದಾಗ ನೀವು ತಿರಸ್ಕರಿಸಿದಿರಿ. ಕೈ ಚಾಚಿದರೂ ಯಾರೂ ನನ್ನನ್ನು ಗಮನಿಸಲಿಲ್ಲ;
[25] ನನ್ನ ಬುದ್ಧಿವಾದವನ್ನು ಲಕ್ಷ್ಯಕ್ಕೆ ತಾರದೆ, ನನ್ನ ತಿದ್ದುಪಾಟನ್ನು ಬೇಡವೆಂದು ತಳ್ಳಿಬಿಟ್ಟಿದ್ದೀರಿ.
[26] ಆದಕಾರಣ ಬಿರುಗಾಳಿಯಂತೆ ಅಪಾಯವೂ, ತುಫಾನಿನಂತೆ ಆಪತ್ತೂ ಬಂದು, ನಿಮಗೆ ಶ್ರಮಸಂಕಟಗಳು ಸಂಭವಿಸುವಾಗ
[27] ನಿಮ್ಮ ಅಪಾಯದಲ್ಲಿ ನಾನೂ ನಗುವೆನು; ನಿಮ್ಮ ಆಪತ್ತಿನಲ್ಲಿ ಪರಿಹಾಸ್ಯ ಮಾಡುವೆನು.
[28] ಆಗ ಅವರು ನನಗೆ ಮೊರೆಯಿಟ್ಟರೂ ನಾನು ಉತ್ತರಕೊಡೆನು, ನನ್ನನ್ನು ಆತುರದಿಂದ ಹುಡುಕಿದರೂ ನಾನು ಕಾಣಿಸೆನು.
[29] ಯಾಕೆಂದರೆ ಅವರು ಯೆಹೋವನ ಭಯಭಕ್ತಿಗೆ ಮನಸ್ಸು ಕೊಡದೆ ತಿಳಿವಳಿಕೆಯನ್ನು ಹಗೆಮಾಡಿದರು.
[30] ನನ್ನ ಬೋಧನೆಯನ್ನು ಕೇಳಲೊಲ್ಲದೆ, ನನ್ನ ಗದರಿಕೆಯನ್ನೆಲ್ಲಾ ತಾತ್ಸಾರಮಾಡಿದರು.
[31] ಆದುದರಿಂದ ಅವರು ತಮ್ಮ ನಡತೆಯ ಫಲವನ್ನು ಅನುಭವಿಸಿ, ಸ್ವಂತ ಕುಯುಕ್ತಿಗಳನ್ನೇ ಹೊಟ್ಟೆತುಂಬಾ ಉಣ್ಣಬೇಕಾಗುವುದು.
[32] ಮೂಢರು ತಮ್ಮ ಉದಾಸೀನತೆಯಿಂದಲೇ ಹತರಾಗುವರು, ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೇ ನಾಶವಾಗುವರು.
[33] ನನ್ನ ಮಾತಿಗೆ ಕಿವಿಗೊಡುವವನಾದರೋ ಸುರಕ್ಷಿತನಾಗಿದ್ದು, ಯಾವ ಕೇಡಿಗೂ ಭಯಪಡದೆ ನೆಮ್ಮದಿಯಾಗಿ ಬಾಳುವನು” ಎಂಬುದೇ.