[1] ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ಕೈಗೊಳ್ಳು.
[2] ಅವು ನಿನ್ನ ದಿನಗಳನ್ನು ಹೆಚ್ಚಿಸಿ, ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ, ನಿನಗೆ ಸುಕ್ಷೇಮವನ್ನು ಉಂಟುಮಾಡುವವು.
[3] ಪ್ರೀತಿ, ಸತ್ಯತೆಗಳು ನಿನ್ನನ್ನು ಬಿಡದಿರಲಿ, ಅವುಗಳನ್ನು ನಿನ್ನ ಕೊರಳಿಗೆ ಕಟ್ಟು, ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ.
[4] ಇದರಿಂದ ನೀನು ದೇವರ ಮತ್ತು ಮನುಷ್ಯರ ದಯೆಯನ್ನೂ, ಸಮ್ಮತಿಯನ್ನೂ ಪಡೆದುಕೊಳ್ಳುವಿ.
[5] ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.
[6] ನಿನ್ನ ಎಲ್ಲಾ ನಡವಳಿಕೆಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.
[7] ನೀನೇ ಬುದ್ಧಿವಂತನು ಎಂದೆಣಿಸದೆ, ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.
[8] ಇದರಿಂದ ನಿನ್ನ ದೇಹಕ್ಕೆ ಆರೋಗ್ಯವೂ, ಎಲುಬುಗಳಿಗೆ ಸಾರವೂ ಉಂಟಾಗುವವು.
[9] ನಿನ್ನ ಆದಾಯದಿಂದಲೂ, ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು.
[10] ಹೀಗೆ ಮಾಡಿದರೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು, ತೊಟ್ಟಿಗಳಲ್ಲಿ ದ್ರಾಕ್ಷಾರಸವು ತುಂಬಿ ತುಳುಕುವುದು.
[11] ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
[12] ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.
[13] ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು ಸಂಪಾದಿಸುವವನು ಭಾಗ್ಯವಂತನು.
[14] ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ, ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ.
[15] ಅದರ ಬೆಲೆಯು ಹವಳಕ್ಕಿಂತಲೂ ಹೆಚ್ಚು, ನಿನ್ನ ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.
[16] ಜ್ಞಾನವೆಂಬಾಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ, ಎಡಗೈಯಲ್ಲಿ ಧನವೂ, ಘನತೆಯೂ ಉಂಟು.
[17] ಆಕೆಯ ದಾರಿಗಳು ಸುಖಕರವಾಗಿವೆ, ಆಕೆಯ ಮಾರ್ಗಗಳೆಲ್ಲಾ ಸಮಾಧಾನವೇ.
[18] ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವವೃಕ್ಷವಾಗಿದೆ. ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು.
[19] ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸ್ಥಾಪಿಸಿ, ವಿವೇಕದ ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು.
[20] ಭೂಮಿಯ ಕೆಳಗಿನ ಸಾಗರವು ಒಡೆದದ್ದಕ್ಕೂ, ಆಕಾಶವು ಇಬ್ಬನಿಯನ್ನು ಸುರಿಸುವುದಕ್ಕೂ ಆತನ ತಿಳಿವಳಿಕೆಯೇ ಸಾಧನ.
[21] ನನ್ನ ಮಗನೇ, ಸುಜ್ಞಾನವನ್ನೂ ಮತ್ತು ಬುದ್ಧಿಯನ್ನೂ ಭದ್ರವಾಗಿಟ್ಟುಕೋ, ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದೇ ಇರಲಿ.
[22] ಅವು ನಿನಗೆ ಜೀವವೂ, ನಿನ್ನ ಕೊರಳಿಗೆ ಭೂಷಣವೂ ಆಗಿರುವವು.
[23] ಆಗ ನೀನು ಎಡವದೆ ನಿನ್ನ ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಿ.
[24] ನೀನು ಮಲಗುವಾಗ ಹೆದರಿಕೆ ಇರುವುದಿಲ್ಲ, ಮಲಗಿದ ಮೇಲೆ ಸುಖವಾಗಿ ನಿದ್ರೆಮಾಡುವಿ.
[25] ಪಕ್ಕನೆ ಬರುವ ಅಪಾಯಕ್ಕಾಗಲಿ ಅಥವಾ ದುಷ್ಟರಿಗೆ ಸಂಭವಿಸುವ ನಾಶನಕ್ಕಾಗಲಿ ನೀನು ಅಂಜುವುದೇ ಇಲ್ಲ.
[26] ಯೆಹೋವನು ನಿನ್ನ ಭರವಸಕ್ಕೆ ಆಧಾರನಾಗಿದ್ದು, ನಿನ್ನ ಕಾಲು ಮೋಸದ ಬಲೆಗೆ ಸಿಕ್ಕದಂತೆ ನಿನ್ನನ್ನು ಕಾಪಾಡುವನು.
[27] ಉಪಕಾರಮಾಡುವುದಕ್ಕೆ ನಿನ್ನಿಂದ ಸಾಧ್ಯವಾಗುವಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.
[28] ಕೊಡತಕ್ಕದ್ದು ನಿನ್ನಲ್ಲಿದ್ದರೆ ನೆರೆಯವನಿಗೆ, “ಹೋಗಿ ಬಾ, ನಾಳೆ ಕೊಡುತ್ತೇನೆ” ಎಂದು ಹೇಳಬೇಡ.
[29] ನೆರೆಯವನಿಗೆ ಕೇಡನ್ನು ಕಲ್ಪಿಸಬಾರದು, ಅವನು ನಿನ್ನ ಪಕ್ಕದಲ್ಲಿ ನಂಬಿಕೆಯಿಂದ ವಾಸಮಾಡುತ್ತಾನಲ್ಲವೇ?
[30] ನಿನಗೆ ಅಪಕಾರ ಮಾಡದವನ ಸಂಗಡ ಸುಮ್ಮನೆ ಜಗಳವಾಡಬೇಡ.
[31] ಬಲಾತ್ಕಾರಿಯನ್ನು ನೋಡಿ ಹೊಟ್ಟೆಕಿಚ್ಚುಪಡದಿರು, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ.
[32] ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವುದು.
[33] ಯೆಹೋವನು ದುಷ್ಟನ ಮನೆಯನ್ನು ಶಪಿಸುವನು, ನೀತಿವಂತರ ನಿವಾಸವನ್ನೋ ಆಶೀರ್ವದಿಸುವನು.
[34] ಯಾರು ಧರ್ಮವನ್ನು ತಿರಸ್ಕರಿಸುವರೋ ಅವರನ್ನು ಆತನು ತಿರಸ್ಕರಿಸುವನು. ದೀನರಿಗಾದರೋ ತನ್ನ ಕೃಪೆಯನ್ನು ಅನುಗ್ರಹಿಸುವನು.
[35] ಜ್ಞಾನವಂತರು ಸನ್ಮಾನಕ್ಕೆ ಬಾಧ್ಯರಾಗುವರು, ಜ್ಞಾನಹೀನರಿಗಾಗುವ ಬಹುಮಾನವು ಅವಮಾನವೇ.