[1] ನಾಳೆ ಎಂದು ಕೊಚ್ಚಿಕೊಳ್ಳಬೇಡ, ಒಂದು ದಿನದೊಳಗೆ ಏನಾಗುವುದೋ ನಿನಗೆ ತಿಳಿಯದು.
[2] ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ, ಮತ್ತೊಬ್ಬನು ಹೊಗಳಿದರೆ ಹೊಗಳಲಿ, ಆತ್ಮಸ್ತುತಿ ಬೇಡ, ಪರನು ನಿನ್ನನ್ನು ಸ್ತುತಿಸಿದರೆ ಸ್ತುತಿಸಲಿ.
[3] ಕಲ್ಲು ಭಾರ, ಮರಳು ಭಾರ, ಎರಡಕ್ಕಿಂತಲೂ ಮೂಢನ ಕೋಪವು ಬಲು ಭಾರ.
[4] ಕೋಪವು ಕ್ರೂರ, ಕ್ರೋಧವು ಪ್ರವಾಹ, ಮತ್ಸರಕ್ಕೆ ಎದುರಾಗಿ ಯಾರು ನಿಂತಾರು?
[5] ಕಾರ್ಯದಿಂದ ಹೊರಪಡದ ಪ್ರೀತಿಗಿಂತಲೂ, ಬಹಿರಂಗವಾದ ಗದರಿಕೆಯು ಲೇಸು.
[6] ಮಿತ್ರನು ಮಾಡುವ ಗಾಯಗಳು ಮೇಲಿಗಾಗಿಯೇ, ಶತ್ರುವಿನ ಮುದ್ದುಗಳು ಹೇರಳವಾಗಿವೆ.
[7] ಹೊಟ್ಟೆತುಂಬಿದವನಿಗೆ ಜೇನುತುಪ್ಪವೂ ಅಸಹ್ಯ, ಹೊಟ್ಟೆ ಹಸಿದವನಿಗೆ ಕಹಿಯೆಲ್ಲಾ ಸಿಹಿ.
[8] ಸ್ಥಳವನ್ನು ಬಿಟ್ಟು ಅಲೆಯುವ ಮನುಷ್ಯನು, ಗೂಡನ್ನು ಬಿಟ್ಟು ಅಲೆಯುವ ಹಕ್ಕಿಯ ಹಾಗೆ.
[9] ತೈಲವೂ, ಸುಗಂಧದ್ರವ್ಯಗಳೂ ಹೇಗೋ, ಮಿತ್ರನ ಸಂಭಾಷಣೆಯಿಂದ ಅನುಭವಕ್ಕೆ ಬರುವ ಸ್ನೇಹರಸವು ಹಾಗೆ ಮನೋಹರ.
[10] ನಿನಗೂ, ನಿನ್ನ ತಂದೆಗೂ ಮಿತ್ರನಾದವನನ್ನು ಬಿಡಬೇಡ, ನಿನ್ನ ಇಕ್ಕಟ್ಟಿನ ದಿನದಲ್ಲಿ ಅಣ್ಣನ ಮನೆಯನ್ನು ಆಶ್ರಯಿಸದಿರು, ದೂರವಾಗಿರುವ ಅಣ್ಣನಿಗಿಂತ ಹತ್ತಿರವಾಗಿರುವ ನೆರೆಯವನು ಲೇಸು.
[11] ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಹೃದಯವನ್ನು ಸಂತೋಷಪಡಿಸು, ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವುದು.
[12] ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.
[13] ಮತ್ತೊಬ್ಬನಿಗೆ ಹೊಣೆಯಾದವನ ಬಟ್ಟೆಯನ್ನು ಕಿತ್ತುಕೋ, ಮತ್ತೊಬ್ಬಳಿಗೆ ಹೊಣೆಯಾದವನನ್ನೇ ಒತ್ತೆಮಾಡಿಕೋ.
[14] ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನು, ಶಪಿಸುವವನೆನಿಸಿಕೊಳ್ಳುವನು.
[15] ದೊಡ್ಡ ಮಳೆಯ ದಿನದಲ್ಲಿ ತಟತಟನೆ ತೊಟ್ಟಿಕ್ಕುವ ಹನಿ, ತಂಟೆಮಾಡುವ ಹೆಂಡತಿ, ಎರಡೂ ಒಂದೇ.
[16] ಅವಳನ್ನು ಅಡಗಿಸುವವನು ಗಾಳಿಯನ್ನು ಅಡಗಿಸುವನು, ಅವಳನ್ನು ಹಿಡಿಯುವ ಬಲಗೈ ಜಿಡ್ಡಿನ ವಸ್ತುವನ್ನು ಹಿಡಿಯುವುದು.
[17] ಕಬ್ಬಿಣವು ಕಬ್ಬಿಣವನ್ನು ಹೇಗೆ ಹರಿತಮಾಡುವುದೋ, ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆಯೇ ಹರಿತಮಾಡುವನು.
[18] ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು, ಯಜಮಾನನ ಮಾತಿನಂತೆ ನಡೆಯುವವನು ಸನ್ಮಾನವನ್ನು ಅನುಭವಿಸುವನು.
[19] ನೀರು ಮುಖಕ್ಕೆ ಮುಖವನ್ನು ಹೇಗೆ ಪ್ರತಿಬಿಂಬಿಸುತ್ತದೋ, ಹಾಗೆಯೇ ಮನುಷ್ಯನಿಗೆ ಮನುಷ್ಯನ ಹೃದಯವು ತೋರ್ಪಡಿಸುತ್ತದೆ.
[20] ಪಾತಾಳಕ್ಕೂ, ನಾಶಲೋಕಕ್ಕೂ ಹೇಗೆ ತೃಪ್ತಿಯಿಲ್ಲವೋ, ಹಾಗೆಯೇ ಮನುಷ್ಯನ ಕಣ್ಣುಗಳಿಗೆ ತೃಪ್ತಿಯಿಲ್ಲ.
[21] ಪುಟಕುಲುಮೆಗಳಿಂದ ಬೆಳ್ಳಿಬಂಗಾರಗಳಿಗೆ ಶೋಧನೆಯು ಹೇಗೋ, ಹೊಗಳಿಕೆಯಿಂದ ಮನುಷ್ಯನಿಗೆ ಶೋಧನೆಯು ಹಾಗೆಯೇ.
[22] ಗೋದಿರವೆಯ ಸಂಗಡ ಮೂರ್ಖನನ್ನು ಒರಳಿನಲ್ಲಿ ಒನಕೆಯಿಂದ ಕುಟ್ಟಿದರೂ, ಮೂರ್ಖತನವು ಅವನಿಂದ ತೊಲಗದು.
[23] ನಿನ್ನ ಹಿಂಡುಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರು, ನಿನ್ನ ಮಂದೆಗಳ ಮೇಲೆ ಮನಸ್ಸಿಡು.
[24] ಸಂಪತ್ತು ಶಾಶ್ವತವಾಗಿರುವುದಿಲ್ಲವಷ್ಟೆ, ಕಿರೀಟವು ತಲತಲಾಂತರಗಳ ವರೆಗೆ ನಿಂತೀತೋ?
[25] ಹುಲ್ಲನ್ನು ಕೊಯ್ದು ಹೊತ್ತುಕೊಂಡು ಬಂದ ಮೇಲೆ ಹಸಿಹುಲ್ಲು ತಲೆದೋರುವುದು, ಬೆಟ್ಟಗಳ ಸೊಪ್ಪನ್ನೂ ಕೂಡಿಸಿಡುವರು.
[26] ಕುರಿಗಳಿಂದ ನಿನಗೆ ಉಡುಪಾಗುವುದು, ಆಡುಗಳಿಂದ ಹೊಲದ ಕ್ರಯ ಹೆಚ್ಚುವುದು.
[27] ನಿನ್ನ ಊಟಕ್ಕೂ, ಮನೆಯವರ ಆಹಾರಕ್ಕೂ ಮೇಕೆಯ ಹಾಲು ಬೇಕಾದಷ್ಟಾಗುವುದು, ಅದು ನಿನ್ನ ದಾಸಿಯರಿಗೆ ಜೀವನವಾಗುವುದು.