[1] ಅಬ್ರಹಾಮನ ಮಗನಾದ ದಾವೀದನ ಕುಮಾರನಾದ ಯೇಸು ಕ್ರಿಸ್ತನ ವಂಶಾವಳಿ.
[2] ಅಬ್ರಹಾಮನ ಮಗನು ಇಸಾಕನು. ಇಸಾಕನ ಮಗನು ಯಾಕೋಬನು. ಯಾಕೋಬನ ಮಗನು ಯೆಹೂದನು, ಅವನ ಅಣ್ಣತಮ್ಮಂದಿರು ಯೆಹೂದನ ಮಕ್ಕಳು.
[3] ಯೆಹೂದನಿಗೆ ತಾಮಾರಳಲ್ಲಿ ಪೆರೆಚನು, ಜೆರಹನು ಹುಟ್ಟಿದರು. ಪೆರೆಚನ ಮಗನು ಹೆಚ್ರೋನನು.
[4] ಹೆಚ್ರೋನನ ಮಗನು ಅರಾಮನು. ಅರಾಮನ ಮಗನು ಅಮ್ಮಿನಾದಾಬನು. ಅಮ್ಮಿನಾದಾಬನ ಮಗನು ನಹಶೋನನು. ನಹಶೋನನ ಮಗನು ಸಲ್ಮೋನನು.
[5] ಸಲ್ಮೋನನ ಮಗನಾದ ಬೋವಜನು ರಾಹಾಬಳಲ್ಲಿ ಹುಟ್ಟಿದವನು. ಬೋವಜನ ಮಗನು ಓಬೇದನು ರೂತಳಲ್ಲಿ ಹುಟ್ಟಿದವನು. ಓಬೇದನ ಮಗನು ಇಷಯನು.
[6] ಇಷಯನ ಮಗನು ಅರಸನಾದ ದಾವೀದನು. ದಾವೀದನ ಮಗನಾದ ಸೊಲೊಮೋನನು ಊರೀಯನ ಹೆಂಡತಿಯಲ್ಲಿ ಹುಟ್ಟಿದವನು.
[7] ಸೊಲೊಮೋನನ ಮಗನು ರೆಹಬ್ಬಾಮನು. ರೆಹಬ್ಬಾಮನ ಮಗನು ಅಬೀಯನು. ಅಬೀಯನ ಮಗನು ಆಸನು.
[8] ಆಸನ ಮಗನು ಯೆಹೋಷಾಫಾಟನು. ಯೆಹೋಷಾಫಾಟನ ಮಗನು ಯೆಹೋರಾಮನು. ಯೆಹೋರಾಮನ ಮಗನು ಉಜ್ಜೀಯನು.
[9] ಉಜ್ಜೀಯನ ಮಗನು ಯೋತಾಮನು. ಯೋತಾಮನ ಮಗನು ಆಹಾಜನನು. ಆಹಾಜನ ಮಗನು ಹಿಜ್ಕೀಯನು.
[10] ಹಿಜ್ಕೀಯನ ಮಗನು ಮನಸ್ಸೆಯನು. ಮನಸ್ಸೆಯ ಮಗನು ಆಮೋನನು.
[11] ಆಮೋನ ಮಗನು ಯೋಷೀಯನು. ಬಾಬಿಲೋನಿಗೆ ಸೆರೆಹೋದ ಸಮಯದಲ್ಲಿ ಯೋಷೀಯನಿಗೆ ಯೆಕೊನ್ಯನು, ಅವನ ಅಣ್ಣತಮ್ಮಂದಿರು ಹುಟ್ಟಿದರು.
[12] ಬಾಬಿಲೋನಿಗೆ ಸೆರೆಹೋದ ಮೇಲೆ ಯೆಕೊನ್ಯನು ಶೆಯಲ್ತಿಯೇಲನನ್ನು ಪಡೆದನು. ಶೆಯಲ್ತಿಯೇಲನ ಮಗನು ಜೆರುಬ್ಬಾಬೆಲನು
[13] ಜೆರುಬ್ಬಾಬೆಲನ ಮಗನು ಅಬಿಹೂದನು. ಅಬಿಹೂದನ ಮಗನು ಎಲ್ಯಕೀಮನು. ಎಲ್ಯಕೀಮನ ಮಗನು ಅಜೋರನು.
[14] ಅಜೋರನ ಮಗನು ಸದೋಕನು. ಸದೋಕನ ಮಗನು ಅಖೀಮನು. ಅಖೀಮನ ಮಗನು ಎಲಿಹೂದನು.
[15] ಎಲಿಹೂದನ ಮಗನು ಎಲಿಯಾಜರನು. ಎಲಿಯಾಜರನ ಮಗನು ಮತ್ತಾನನು. ಮತ್ತಾನನ ಮಗನು ಯಾಕೋಬನು.
[16] ಯಾಕೋಬನ ಮಗನು ಯೋಸೇಫನು. ಯೋಸೇಫನು ಮರಿಯಳ ಗಂಡನು. ಈ ಮರಿಯಳಿಂದಲೇ ಕ್ರಿಸ್ತನೆಂಬ ಯೇಸು ಹುಟ್ಟಿದನು.
[17] ಅಬ್ರಹಾಮನಿಂದ ದಾವೀದನ ವರೆಗೂ ಒಟ್ಟು ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿನ ದಾಸತ್ವಕ್ಕೆ ಹೋಗುವವರೆಗೂ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿನ ದಾಸತ್ವದ ದಿನದಿಂದ ಕ್ರಿಸ್ತನವರೆಗೆ ಹದಿನಾಲ್ಕು ತಲೆಮಾರುಗಳು.
[18] ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ, ಆತನ ತಾಯಿಯಾದ ಮರಿಯಳಿಗೂ ಯೋಸೇಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಮದುವೆಯಾಗಿ ಕೂಡಿಬಾಳುವುದಕ್ಕಿಂತ ಮೊದಲೇ ಮರಿಯಳು ಪವಿತ್ರಾತ್ಮನ ಶಕ್ತಿಯಿಂದ ಗರ್ಭಧರಿಸಿದ್ದು ತಿಳಿದುಬಂತು.
[19] ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದ ಕಾರಣ ಮರಿಯಳನ್ನು ಬಯಲಿಗೆ ತಂದು ಅವಮಾನಕ್ಕೆ ಗುರಿಮಾಡದೆ ನಿಶ್ಚಿತಾರ್ಥವನ್ನು ರಹಸ್ಯವಾಗಿ ಮುರಿದುಬಿಡಬೇಕೆಂದು ಆಲೋಚಿಸಿದ್ದನು.
[20] ಅವನು ಇದನ್ನು ಕುರಿತು ಆಲೋಚಿಸುತ್ತಿರುವಾಗ, ದೇವದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ದಾವೀದನ ಮಗನಾದ ಯೋಸೇಫನೇ, ನೀನು ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ. ಆಕೆ ಗರ್ಭವತಿಯಾದದ್ದು ಪವಿತ್ರಾತ್ಮನಿಂದಲೇ.
[21] ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ‘ಯೇಸು’ ಎಂದು ಹೆಸರಿಡಬೇಕು; ಏಕೆಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ರಕ್ಷಿಸುವನು,” ಅಂದನು.
[22] ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು; ಆ ಮಾತು ಏನೆಂದರೆ,
[23] “ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು; ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು. ‘ದೇವರು ನಮ್ಮ ಕೂಡ ಇದ್ದಾನೆಂದು’ ಈ ಹೆಸರಿನ ಅರ್ಥ.”
[24] ಆಗ ಯೋಸೇಫನು ಎಚ್ಚೆತ್ತು ದೇವದೂತನು ಅಪ್ಪಣೆಕೊಟ್ಟ ಪ್ರಕಾರ ಮರಿಯಳನ್ನು ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು.
[25] ಆದರೆ ಆಕೆಯು ಗಂಡು ಮಗುವಿಗೆ ಜನ್ಮನೀಡುವವರೆಗೂ ಆಕೆಯೊಡನೆ ಶರೀರ ಸಂಬಂಧವಿಲ್ಲದೆ ಇದ್ದನು. ಮತ್ತು ಯೋಸೇಫನು ಆ ಮಗುವಿಗೆ ‘ಯೇಸು’ ಎಂದು ಹೆಸರಿಟ್ಟನು.