Skip to content
Opens in a new window
Listen to this chapter • 3:18

[1] ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನೆಂಬುವವನು ಯೂದಾಯದ ಅಡವಿಯಲ್ಲಿ ಬೋಧನೆ ಮಾಡುತ್ತಾ,

[2] ಹೇಳಿದ್ದೇನೆಂದರೆ, “ಪಶ್ಚಾತ್ತಾಪಪಡಿರಿ; ಏಕೆಂದರೆ ಪರಲೋಕ ರಾಜ್ಯವು ಸಮೀಪಿಸುತ್ತಿದೆ.”

[3] “‘ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಮಾರ್ಗವನ್ನು ಸರಾಗ ಮಾಡಿರಿ’ ಎಂದು ಅಡವಿಯಲ್ಲಿ ಕೂಗುವವನ ಶಬ್ದವಿದೆ” ಎಂಬುದಾಗಿ ಪ್ರವಾದಿಯಾದ ಯೆಶಾಯನಿಂದ ಸೂಚಿತನಾದವನು ಇವನೇ.

[4] ಯೋಹಾನನ ಉಡುಪು ಒಂಟೆಯ ಕೂದಲಿನಿಂದ ಮಾಡಿತ್ತು, ಅವನು ಸೊಂಟಕ್ಕೆ ಒಂದು ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆ ಮತ್ತು ಕಾಡುಜೇನು ಅವನ ಆಹಾರವಾಗಿತ್ತು.

[5] ಆಗ ಯೆರೂಸಲೇಮಿನವರು, ಎಲ್ಲಾ ಯೂದಾಯದವರೂ ಮತ್ತು ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಸೀಮೆಯ ಜನರು ಅವನ ಬಳಿಗೆ ಹೊರಟು ಬಂದು,

[6] ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.

[7] ಆದರೆ ಯೋಹಾನನು ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುವುದಕ್ಕೆ ಬರುವುದನ್ನು ಕಂಡು ಅವರಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರಾರು?

[8] ನೀವು ಮಾನಸಾಂತರ ಹೊಂದಿರುವಿರಿ ಎಂಬುದಕ್ಕೆ ಯೋಗ್ಯವಾದ ಫಲವನ್ನು ತೋರಿಸಿರಿ.

[9] ಅಬ್ರಹಾಮನು ನಮ್ಮ ತಂದೆ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗಾಗಿ ಈ ಕಲ್ಲುಗಳಿಂದಲೂ ಮಕ್ಕಳನ್ನು ಸೃಷ್ಟಿಮಾಡಬಲ್ಲನೆಂದು ನಿಮಗೆ ಹೇಳುತ್ತೇನೆ.

[10] ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿದೆ; ಆದ್ದರಿಂದ ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು.

[11] ನಾನಂತೂ ಮಾನಸಾಂತರಕ್ಕಾಗಿ ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನ್ನ ನಂತರ ಬರುವವನು ನನಗಿಂತ ಶಕ್ತನು; ಆತನ ಪಾದರಕ್ಷೆಗಳನ್ನು ಹೊರಲಿಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನಮಾಡಿಸುವನು.

[12] ಹೊಟ್ಟನು ತೂರುವ ಮೊರವನ್ನು ಆತನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನು ಮಾಡಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಕೊಂಡು ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟು ಬಿಡುವನು” ಎಂದು ಹೇಳಿದನು.

[13] ಆ ಕಾಲದಲ್ಲಿ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್ ಹೊಳೆಯ ಬಳಿ ಬಂದನು.

[14] ಆತನಿಗೆ ಯೋಹಾನನು ತಡೆಯುತ್ತಾ, “ನಾನೇ ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿತ್ತು, ಆದರೆ ನೀನು ನನ್ನ ಬಳಿಗೆ ಬರುವುದೇಕೆ?” ಎಂದು ಹೇಳಿದಕ್ಕೆ,

[15] ಯೇಸು ಪ್ರತ್ಯುತ್ತರವಾಗಿ ಅವನಿಗೆ, “ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ನೀತಿಯನ್ನು ನೆರವೇರಿಸತಕ್ಕದ್ದಾಗಿದೆ” ಎಂದು ಹೇಳಿದಾಗ ಯೋಹಾನನು ಒಪ್ಪಿಕೊಂಡನು.

[16] ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ನೀರಿನಿಂದ ಮೇಲಕ್ಕೆ ಬಂದ ಕೂಡಲೇ ಇಗೋ, ಆತನಿಗಾಗಿ ಪರಲೋಕವು ತೆರೆಯಿತು; ಮತ್ತು ದೇವರ ಆತ್ಮವು ಪಾರಿವಾಳದ ಹಾಗೆ ತನ್ನ ಮೇಲೆ ಇಳಿದು ಬರುವುದನ್ನು ಕಂಡನು.

[17] ಆಗ “ಈತನು ನನ್ನ ಪ್ರಿಯ ಮಗನು, ಈತನನ್ನು ನಾನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ವಾಣಿ ಪರಲೋಕದಿಂದ ಕೇಳಿಬಂದಿತು.

ಮತ್ತಾಯನು — Chapters