[1] ಆ ಕಾಲದಲ್ಲಿ ಉಪರಾಜನಾದ ಹೆರೋದನು ಯೇಸುವಿನ ಸುದ್ದಿಯನ್ನು ಕೇಳಿ,
[2] ತನ್ನ ಸೇವಕರಿಗೆ, “ಇವನು ಸ್ನಾನಿಕ ಯೋಹಾನನೇ; ಸತ್ತವರೊಳಗಿಂದ ಎದ್ದು ಬಂದಿದ್ದಾನೆ. ಆದಕಾರಣ ಮಹತ್ಕಾರ್ಯಗಳನ್ನು ನಡಿಸುವ ಶಕ್ತಿಗಳು ಅವನಲ್ಲಿ ಇದೆ” ಎಂದು ಹೇಳಿದನು.
[3] ಹೆರೋದನು ತನ್ನ ಅಣ್ಣನಾದ ಫಿಲಿಪ್ಪನ ಹೆಂಡತಿಯಾದ ಹೆರೋದ್ಯಳ ನಿಮಿತ್ತ ಯೋಹಾನನನ್ನು ಹಿಡಿದು ಕಟ್ಟಿಸಿ ಸೆರೆಮನೆಯಲ್ಲಿ ಹಾಕಿಸಿದ್ದನು.
[4] ಯೋಹಾನನು ಹೆರೋದನಿಗೆ “ನೀನು ಇವಳನ್ನು ಹೆಂಡತಿಯಾಗಿ ಇಟ್ಟುಕೊಂಡಿರುವುದು ನ್ಯಾಯವಲ್ಲವೆಂದು” ಹೇಳುತ್ತಿದ್ದನು.
[5] ಹೆರೋದನು ಅವನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟನು, ಏಕೆಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು.
[6] ಆದರೆ ಹೆರೋದನ ಹುಟ್ಟಿದ ದಿನದ ಹಬ್ಬವು ನಡೆಯುವಾಗ ಹೆರೋದ್ಯಳ ಮಗಳು ಬಂದಿದ್ದ ಅತಿಥಿಗಳ ಮುಂದೆ ನೃತ್ಯಮಾಡಿ ಹೆರೋದನನ್ನು ಮೆಚ್ಚಿಸಿದಳು.
[7] ಅವನು ಅವಳಿಗೆ, ನೀನು ಏನು ಕೇಳಿಕೊಂಡರೂ ಕೊಡುತ್ತೇನೆಂದು ಆಣೆಯಿಟ್ಟು ವಾಗ್ದಾನ ಮಾಡಿದನು.
[8] ಅವಳು ತನ್ನ ತಾಯಿಯ ಪ್ರೇರೇಪಣೆಗೆ ಒಳಗಾಗಿ, “ಸ್ನಾನಿಕ ಯೋಹಾನನ ತಲೆಯನ್ನು ಹರಿವಾಣದಲ್ಲಿ ನನಗೆ ತರಿಸಿಕೊಡು” ಅಂದಳು.
[9] ಆಕೆಯ ಕೋರಿಕೆಯಿಂದ ಅರಸನು ದುಃಖಪಟ್ಟರೂ ತಾನು ಮಾಡಿದ ಆಣೆಯ ನಿಮಿತ್ತವಾಗಿಯೂ, ತನ್ನ ಸಂಗಡ ಊಟಕ್ಕೆ ಕುಳಿತಿದ್ದವರ ನಿಮಿತ್ತವಾಗಿಯೂ ಅದನ್ನು ತಂದುಕೊಡುವುದಕ್ಕೆ ಅಪ್ಪಣೆ ಕೊಟ್ಟನು.
[10] ಅವನು ಆಳುಗಳನ್ನು ಕಳುಹಿಸಿ ಸೆರೆಮನೆಯಲ್ಲಿ ಯೋಹಾನನ ಶಿರಚ್ಛೇದನಮಾಡಿ,
[11] ಅವರು ಅವನ ತಲೆಯನ್ನು ಹರಿವಾಣದಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು.
[12] ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ಹೊತ್ತುಕೊಂಡು ಹೋಗಿ ಹೂಣಿಟ್ಟರು. ಅನಂತರ ಯೇಸುವಿನ ಬಳಿಗೆ ಬಂದು ತಿಳಿಸಿದರು.
[13] ಯೇಸು ಅದನ್ನು ಕೇಳಿ ದೋಣಿಯನ್ನು ಹತ್ತಿ ಆ ಸ್ಥಳವನ್ನು ಬಿಟ್ಟು ಅಡವಿಯ ಸ್ಥಳಕ್ಕೆ ಹೋದನು. ಇದನ್ನು ಕೇಳಿದ ಜನರು ಗುಂಪು ಗುಂಪಾಗಿ ತಮ್ಮ ತಮ್ಮ ಪಟ್ಟಣಗಳಿಂದ ಕಾಲುನಡಿಗೆಯಿಂದ ಆತನನ್ನು ಹಿಂಬಾಲಿಸಿದರು.
[14] ಆತನು ಅವರಿಗಿಂತ ಮುಂದಾಗಿ ಬಂದು ಬಹು ಜನರ ಗುಂಪನ್ನು ಕಂಡು ಅವರ ಮೇಲೆ ಕನಿಕರಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು.
[15] ಸಂಜೆಯಾದಾಗ ಶಿಷ್ಯರು ಆತನ ಬಳಿಗೆ ಬಂದು, “ಇದು ಅಡವಿಯ ಸ್ಥಳ ಈಗ ಹೊತ್ತು ಮುಳುಗಿಹೋಯಿತು. ಅವರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವಂತೆ ಕಳುಹಿಸಿಕೊಡು” ಎಂದು ಹೇಳಿದರು.
[16] ಆದರೆ ಯೇಸು, “ಅವರು ಹೋಗುವ ಅಗತ್ಯವಿಲ್ಲ. ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ” ಅಂದನು.
[17] ಅದಕ್ಕವರು, “ಇಲ್ಲಿ ಐದು ರೊಟ್ಟಿ ಎರಡು ಮೀನು ಮಾತ್ರ ಇವೆ” ಅನ್ನಲಾಗಿ,
[18] ಆತನು, “ಅವುಗಳನ್ನು ನನಗೆ ತಂದು ಕೊಡಿರಿ” ಅಂದನು.
[19] ತರುವಾಯ ಜನರ ಗುಂಪಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರಿಗೆ ಸ್ತೋತ್ರ ಮಾಡಿ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಜನರಿಗೆ ಕೊಟ್ಟರು.
[20] ಅವರೆಲ್ಲರೂ ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಕೂಡಿಸಲಾಗಿ ಹನ್ನೆರಡು ಪುಟ್ಟಿ ತುಂಬಿತು.
[21] ಊಟಮಾಡಿದವರು ಹೆಂಗಸರೂ ಮಕ್ಕಳನ್ನು ಬಿಟ್ಟು ಗಂಡಸರೇ ಸುಮಾರು ಐದು ಸಾವಿರವಿದ್ದರು.
[22] ಇದಾದ ಕೂಡಲೆ ಆತನು ತನ್ನ ಶಿಷ್ಯರಿಗೆ ನಾನು ಈ ಜನರ ಗುಂಪುಗಳನ್ನು ಕಳುಹಿಸಿಬಿಡುವಷ್ಟರೊಳಗೆ ನೀವು ದೋಣಿಯನ್ನು ಹತ್ತಿ ನನಗೆ ಮುಂದಾಗಿ ಆಚೇದಡಕ್ಕೆ ಹೋಗಿರಿ ಎಂದು ಒತ್ತಾಯ ಮಾಡಿದನು.
[23] ಆತನು ಜನರ ಗುಂಪುಗಳನ್ನು ಕಳುಹಿಸಿಬಿಟ್ಟ ಮೇಲೆ ಪ್ರಾರ್ಥನೆ ಮಾಡುವುದಕ್ಕಾಗಿ ಏಕಾಂಗಿಯಾಗಿ ಬೆಟ್ಟವನ್ನು ಹತ್ತಿದನು. ಮತ್ತು ಸಂಜೆಯಾದಾಗ ಆತನೊಬ್ಬನೇ ಅಲ್ಲಿ ಇದ್ದನು.
[24] ಆದರೆ ದೋಣಿಯು ಸಮುದ್ರದ ನಡುವೆಯಿತ್ತು, ಎದುರು ಗಾಳಿ ಬೀಸುತ್ತಿದ್ದುದರಿಂದ ಅಲೆಗಳ ಬಡಿತಕ್ಕೆ ಸಿಕ್ಕಿ ಹೊಯ್ದಾಡುತ್ತಿತ್ತು.
[25] ರಾತ್ರಿಯ ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಕಡೆಗೆ ಬಂದನು.
[26] ಸಮುದ್ರದ ಮೇಲೆ ನಡೆಯುವ ಆತನನ್ನು ನೋಡಿದ ಶಿಷ್ಯರು “ಭೂತವೆಂದು” ದಿಗಿಲುಬಿದ್ದು ಭಯದಿಂದ ಕೂಗಿದರು.
[27] ಕೂಡಲೆ ಯೇಸು ಮಾತನಾಡಿ ಅವರಿಗೆ, “ಧೈರ್ಯವಾಗಿರಿ ನಾನೇ ಭಯಪಡಬೇಡಿರಿ” ಎಂದು ಹೇಳಿದನು.
[28] ಅದಕ್ಕೆ ಪೇತ್ರನು, “ಕರ್ತನೇ ನೀನೇ ಆದರೆ ನಾನು ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವುದಕ್ಕೆ ಅಪ್ಪಣೆ ಕೊಡು” ಅನ್ನಲು,
[29] ಆತನು, “ಬಾ” ಅಂದನು. ಆಗ ಪೇತ್ರನು ಯೇಸುವಿನ ಬಳಿಗೆ ಹೋಗುವುದಕ್ಕೆ ದೋಣಿಯಿಂದ ಇಳಿದು ನೀರಿನ ಮೇಲೆ ನಡೆದನು.
[30] ಆದರೆ ಅವನು ಗಾಳಿಯನ್ನು ನೋಡಿದಾಗ ಭಯಪಟ್ಟು ಮುಳುಗಲಾರಂಭಿಸಿದಾಗ, “ಕರ್ತನೇ, ನನ್ನನ್ನು ಕಾಪಾಡು” ಎಂದು ಕೂಗಿಕೊಂಡನು.
[31] ತಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದು, “ಅಲ್ಪ ವಿಶ್ವಾಸಿಯೇ ಏಕೆ ಸಂದೇಹ ಪಟ್ಟೆ” ಎಂದು ಹೇಳಿದನು.
[32] ತರುವಾಯ ಅವರು ದೋಣಿಯನ್ನು ಹತ್ತಿದ ಮೇಲೆ ಗಾಳಿ ನಿಂತು ಹೋಯಿತು.
[33] ಆಗ ದೋಣಿಯಲ್ಲಿದ್ದ ಶಿಷ್ಯರು “ನಿಜವಾಗಿ ನೀನು ದೇವಕುಮಾರನು” ಎಂದು ಹೇಳಿ ಆತನನ್ನು ಆರಾಧಿಸಿದರು.
[34] ಅವರು ಸಮುದ್ರವನ್ನು ದಾಟಿ ಗೆನೆಜರೇತ್ ಪಟ್ಟಣದ ದಡಕ್ಕೆ ಬಂದರು.
[35] ಆ ಸ್ಥಳದ ಜನರು ಆತನ ಗುರುತನ್ನು ಹಿಡಿದು ಆ ಸುತ್ತಲಿನ ಸೀಮೆಗೆಲ್ಲಾ ಹೇಳಿ ಕಳುಹಿಸಿದರು ಮತ್ತು ಅವರು ಅಸ್ವಸ್ಥರಾದವರೆಲ್ಲರನ್ನು ಆತನ ಬಳಿಗೆ ಕರೆತಂದರು.
[36] ಅವರು ಆತನನ್ನು ನಿನ್ನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಬೇಡಿಕೊಂಡರು, ಮತ್ತು ಮುಟ್ಟಿದವರೆಲ್ಲರು ಸ್ವಸ್ಥರಾದರು.