Skip to content
Opens in a new window
Listen to this chapter • 5:52

[1] ತರುವಾಯ ಯೆರೂಸಲೇಮಿನಿಂದ ಫರಿಸಾಯರೂ, ಶಾಸ್ತ್ರಿಗಳೂ ಯೇಸುವಿನ ಬಳಿಗೆ ಬಂದು,

[2] “ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಅವರು ತಿನ್ನುವಾಗ ತಮ್ಮ ಕೈ ತೊಳೆದುಕೊಳ್ಳುವುದಿಲ್ಲ” ಎಂದು ಕೇಳಿದರು.

[3] ಅದಕ್ಕೆ ಆತನು ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ಏಕೆ ಉಲ್ಲಂಘಿಸುತ್ತೀರಿ?

[4] ಹೇಗೆಂದರೆ ‘ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂ ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನು ಸಾಯಲೇಬೇಕೆಂತಲೂ’ ದೇವರು ಹೇಳಿದ್ದಾನೆ.

[5] ನೀವೋ, ‘ಯಾವನಾದರೂ ತನ್ನ ತಂದೆಯನಾಗಲಿ, ತಾಯಿಯನ್ನಾಗಲಿ, ನೋಡಿ ನಾನು ನಿಮ್ಮ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ದೇವರಿಗೆ ಮುಡಿಪುಮಾಡಿದ್ದೇನೆ’ ಎಂದು ಹೇಳಿದರೆ,

[6] ಅವನು ‘ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕಾಗಿಲ್ಲ’ ಅನ್ನುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ಸಲುವಾಗಿ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ.

[7] ಕಪಟಿಗಳೇ, ನಿಮ್ಮ ಕುರಿತು ಯೆಶಾಯನು ಸರಿಯಾಗಿ ಪ್ರವಾದಿಸಿ, ಅವನು ಹೇಳಿರುವುದೇನೆಂದರೆ,

[8] “ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.

[9] ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಉಪದೇಶವಾಗಿ ಬೋಧಿಸುತ್ತಿರುವುದರಿಂದ ನನ್ನನ್ನು ವ್ಯರ್ಥವಾಗಿ ಆರಾಧಿಸುವರು” ಎಂಬುದೇ.

[10] ಆ ಮೇಲೆ ಯೇಸು ಜನರ ಗುಂಪನ್ನು ಹತ್ತಿರಕ್ಕೆ ಕರೆದು ಅವರಿಗೆ, “ಕೇಳಿ ತಿಳಿದುಕೊಳ್ಳಿರಿ,

[11] ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ. ಬಾಯೊಳಗಿಂದ ಹೊರಗೆ ಬರುವಂಥ ಮಾತು ಮನುಷ್ಯನನ್ನು ಅಶುದ್ಧಗೊಳಿಸುವುದು” ಎಂದು ಹೇಳಿದನು.

[12] ಆಗ ಶಿಷ್ಯರು ಬಂದು ಆತನನ್ನು, “ಫರಿಸಾಯರು ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿನಗೆ ಗೊತ್ತಾಯಿತೋ” ಎಂದು ಕೇಳಿದರು.

[13] ಅದಕ್ಕೆ ಆತನು “ಪರಲೋಕದ ನನ್ನ ತಂದೆಯು ನೆಡದೆ ಇರುವ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು.

[14] ಅವರನ್ನು ಬಿಡಿರಿ, ಅವರು ಕುರುಡರಿಗೆ ದಾರಿ ತೋರಿಸುವವರು ಕುರುಡರ ಹಾಗಿದ್ದಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಕುಣಿಯೊಳಗೆ ಬೀಳುವರು” ಅಂದನು.

[15] ಆಗ ಪೇತ್ರನು, “ಈ ಸಾಮ್ಯವನ್ನು ನಮಗೆ ವಿವರಿಸಿ ಹೇಳು” ಅಂದನು,

[16] ಅದಕ್ಕೆ ಯೇಸು, “ನೀವೂ ಕೂಡಾ ಇನ್ನೂ ತಿಳಿವಳಿಕೆ ಇಲ್ಲದವರಾಗಿದ್ದೀರಾ?

[17] ಬಾಯೊಳಕ್ಕೆ ಹೋಗುವಂಥದ್ದು ಹೊಟ್ಟೆಯಲ್ಲಿ ಸೇರಿ ವಿಸರ್ಜಿತವಾಗುತ್ತದೆಂದು ನಿಮಗೆ ತಿಳಿಯಲಿಲ್ಲವೋ?

[18] ಆದರೆ ಬಾಯೊಳಗಿಂದ ಹೊರ ಬರುವಂಥವುಗಳು ಹೃದಯದಿಂದ ಬರುತ್ತವೆ. ಇವೇ ಮನುಷ್ಯನನ್ನು ಅಶುದ್ಧಿಮಾಡುವವು.

[19] ಏಕೆಂದರೆ ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಜಾರತ್ವ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೂಷಣೆಗಳು ಹೊರಟು ಬರುತ್ತವೆ.

[20] ಇಂಥವುಗಳೇ ಮನುಷ್ಯನನ್ನು ಅಶುದ್ಧಿಗೊಳಿಸುತ್ತವೆ. ಆದರೆ ಕೈ ತೊಳೆದುಕೊಳ್ಳದೆ ಊಟಮಾಡುವುದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ” ಅಂದನು.

[21] ಅನಂತರ ಯೇಸು ಅಲ್ಲಿಂದ ಹೊರಟು ತೂರ್ ಸೀದೋನ್ ಪಟ್ಟಣಗಳ ಪ್ರಾಂತ್ಯಗಳಿಗೆ ಹೋದನು.

[22] ಆ ಸೀಮೆಯಿಂದ ಕಾನಾನ್ಯಳಾದ ಸ್ತ್ರೀಯೊಬ್ಬಳು ಹೊರಟು ಬಂದು, “ಕರ್ತನೇ, ದಾವೀದನ ಕುಮಾರನೇ, ನನ್ನ ಮೇಲೆ ಕರುಣೆಯಿಡು, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಯಾತನೆಪಡುತ್ತಿದ್ದಾಳೆ” ಎಂದು ಕೂಗಿಕೊಂಡಳು.

[23] ಆದರೆ ಆತನು ಆಕೆಗೆ ಏನೂ ಉತ್ತರ ಕೊಡಲಿಲ್ಲ. ಆಗ ಆತನ ಶಿಷ್ಯರು ಬಂದು, “ಅವಳು ನಮ್ಮ ಹಿಂದೆ ಕೂಗಿಕೊಂಡು ಬರುತ್ತಿದ್ದಾಳೆ. ಆಕೆಯನ್ನು ಕಳುಹಿಸಿಬಿಡು” ಎಂದು ಆತನನ್ನು ಬೇಡಿಕೊಂಡರು.

[24] ಆದರೆ ಯೇಸು ಹೇಳಿದ್ದೇನೆಂದರೆ “ಕಳೆದುಹೋದ ಕುರಿಗಳಂತಿರುವ ಇಸ್ರಾಯೇಲ್ ಮನೆತನದವರ ಬಳಿಗೇ ಹೊರತು ಮತ್ತಾರ ಬಳಿಗೂ ನಾನು ಕಳುಹಿಸಲ್ಪಟ್ಟವನಲ್ಲ” ಅಂದನು.

[25] ಆಗ ಆಕೆ ಬಂದು ಆತನ ಮುಂದೆ ಅಡ್ಡ ಬಿದ್ದು, “ಕರ್ತನೇ ನನಗೆ ಸಹಾಯಮಾಡು” ಅಂದಳು.

[26] ಅದಕ್ಕಾತನು, “ಮಕ್ಕಳ ರೊಟ್ಟಿಯನ್ನು ತೆಗೆದುಕೊಂಡು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಉತ್ತರಕೊಟ್ಟನು.

[27] ಆಕೆಯು, “ಹೌದು, ಕರ್ತನೇ, ಆದರೆ ನಾಯಿಮರಿಗಳಂತೂ ತಮ್ಮ ಯಜಮಾನನ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ” ಅಂದಳು.

[28] ಆಗ ಯೇಸು ಆಕೆಗೆ, “ಸ್ತ್ರೀಯೇ ನಿನ್ನ ನಂಬಿಕೆ ದೊಡ್ಡದು. ನಿನ್ನ ಇಷ್ಟದಂತೆಯೇ ನಿನಗಾಗಲಿ” ಎಂದು ಉತ್ತರಕೊಟ್ಟನು. ಅದೇ ಗಳಿಗೆಯಲ್ಲಿ ಆಕೆಯ ಮಗಳು ಸ್ವಸ್ಥವಾದಳು.

[29] ಯೇಸು ಅಲ್ಲಿಂದ ಹೊರಟು ಗಲಿಲಾಯ ಸಮುದ್ರದ ಬಳಿಗೆ ಬಂದನು. ಆಗ ಆತನು ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡನು.

[30] ಆಗ ಜನರು ದೊಡ್ಡ ಗುಂಪುಗಳಾಗಿ ಆತನ ಬಳಿಗೆ ಬಂದುದಲ್ಲದೆ ಕುಂಟರು, ಕುರುಡರು, ಮೂಕರು, ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ತಮ್ಮೊಂದಿಗೆ ಕರೆತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು. ಆತನು ಅವರನ್ನು ಸ್ವಸ್ಥಮಾಡಿದನು.

[31] ಮೂಕರಾಗಿದ್ದವರು ಮಾತನಾಡುವುದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ, ಕುಂಟರು ನಡೆದಾಡುವುದನ್ನೂ, ಕುರುಡರು ನೋಡುವುದನ್ನೂ ಜನರು ಕಂಡು ಆಶ್ಚರ್ಯಪಟ್ಟು ಇಸ್ರಾಯೇಲ್ಯರ ದೇವರನ್ನು ಕೊಂಡಾಡಿದರು.

[32] ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ನಾನು ಈ ಜನರನ್ನು ನೋಡಿ ಕನಿಕರಪಡುತ್ತೇನೆ. ಏಕೆಂದರೆ ಅವರು ಮೂರು ದಿನಗಳಿಂದಲೂ ನನ್ನ ಜೊತೆಯಲ್ಲಿದ್ದಾರೆ. ಅವರಿಗೆ ತಿನ್ನುವುದಕ್ಕೆ ಏನೂ ಇಲ್ಲ. ಅವರನ್ನು ಹಸಿವಿನಿಂದ ಕಳುಹಿಸಿಬಿಡುವುದಕ್ಕೆ ನನಗೆ ಇಷ್ಟವಿಲ್ಲ. ಅವರು ದಾರಿಯಲ್ಲಿ ಬಳಲಿ ಹೋದಾರು” ಎಂದು ಹೇಳಿದನು.

[33] ಶಿಷ್ಯರು ಆತನಿಗೆ, “ಇಷ್ಟು ದೊಡ್ಡ ಜನರ ಗುಂಪನ್ನು ತೃಪ್ತಿಪಡಿಸಲಾಗುವಷ್ಟು ರೊಟ್ಟಿಯು ಈ ಅಡವಿಯಲ್ಲಿ ನಮಗೆ ಎಲ್ಲಿಂದ ಸಿಕ್ಕೀತು?” ಎಂದು ಹೇಳಿದರು.

[34] ಅದಕ್ಕೆ ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದ್ದಕ್ಕೆ ಅವರು, “ಏಳು ರೊಟ್ಟಿಗಳಿವೆ ಮತ್ತು ಕೆಲವು ಸಣ್ಣ ಮೀನುಗಳು ಅವೆ” ಅಂದರು.

[35] ಆಗ ಆತನು ಜನರ ಗುಂಪಿಗೆ, ನೆಲದ ಮೇಲೆ ಕುಳಿತುಕೊಳ್ಳಿರಿ ಎಂದು ಅಪ್ಪಣೆ ಕೊಟ್ಟನು.

[36] ಆತನು ಆ ಏಳು ರೊಟ್ಟಿಗಳನ್ನೂ ಆ ಮೀನುಗಳನ್ನೂ ತೆಗೆದುಕೊಂಡು ದೇವರಿಗೆ ಸ್ತೋತ್ರ ಮಾಡಿ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಜನರಿಗೆ ಹಂಚಿಕೊಟ್ಟರು.

[37] ಆ ಜನರೆಲ್ಲರೂ ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಕೂಡಿಸಲಾಗಿ ಏಳು ಪುಟ್ಟಿಗಳು ತುಂಬಿದವು.

[38] ಊಟಮಾಡಿದವರು ಹೆಂಗಸರು ಮಕ್ಕಳು ಅಲ್ಲದೆ ಗಂಡಸರೇ ನಾಲ್ಕು ಸಾವಿರವಿದ್ದರು.

[39] ತರುವಾಯ ಆತನು ಆ ಜನರ ಗುಂಪುಗಳನ್ನು ಕಳುಹಿಸಿ ಬಿಟ್ಟು ದೋಣಿಯನ್ನು ಹತ್ತಿ ಮಗದಾನ್ ಸೀಮೆಗೆ ಹೋದನು.

ಮತ್ತಾಯನು — Chapters