[1] ತರುವಾಯ ಯೇಸು ಜನರ ಗುಂಪಿಗೂ ಹಾಗು ತನ್ನ ಶಿಷ್ಯರಿಗೂ ಹೇಳಿದ್ದೇನೆಂದರೆ,
[2] “ಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ;
[3] ಆದುದರಿಂದ ಅವರು ನಿಮಗೆ ಏನೆಲ್ಲಾ ಆಜ್ಞಾಪಿಸುತ್ತಾರೋ ಅದನ್ನೆಲ್ಲಾ ಕೈಕೊಂಡು ನಡೆಯಿರಿ; ಆದರೆ ಅವರ ಕ್ರಿಯೆಗಳ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೆಯೇ ಹೊರತು ಅದರಂತೆ ನಡೆಯುವುದಿಲ್ಲ.
[4] ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ; ಆದರೆ ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲೊಲ್ಲರು.
[5] ಅವರು ತಮ್ಮ ಕೆಲಸಗಳನ್ನೆಲ್ಲಾ ಜನರು ನೋಡಬೇಕೆಂದು ಮಾಡುತ್ತಾರೆ. ತಾವು ಕಟ್ಟಿಕೊಳ್ಳುವ ಜ್ಞಾಪಕಪಟ್ಟಿಗಳನ್ನು ಅಗಲಮಾಡುತ್ತಾರೆ. ತಮ್ಮ ವಸ್ತ್ರಗಳ ಗೊಂಡೆಗಳನ್ನು ಉದ್ದಮಾಡಿಕೊಳ್ಳುತ್ತಾರೆ.
[6] ಇದಲ್ಲದೆ ಔತಣ ಉತ್ಸವಗಳಲ್ಲಿ ಪ್ರಥಮಸ್ಥಾನ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು;
[7] ಅಂಗಡಿ ಬೀದಿಗಳಲ್ಲಿ ನಮಸ್ಕಾರಗಳು, ಜನರಿಂದ ‘ಗುರುಗಳೆನ್ನಿಸಿಕೊಳ್ಳುವುದು,’ ಇವುಗಳೇ ಅವರಿಗೆ ಇಷ್ಟ.
[8] ಆದರೆ ನೀವು ‘ಬೋಧಕರೆನ್ನಿಸಿಕೊಳ್ಳಬೇಡಿರಿ;’ ಏಕೆಂದರೆ ಕ್ರಿಸ್ತನೊಬ್ಬನೇ ನಿಮಗಿರುವ ಬೋಧಕನು ಮತ್ತು ನೀವೆಲ್ಲರೂ ಸಹೋದರರು.
[9] ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಿಮ್ಮ ತಂದೆ ಎಂದು ಕರೆಯಬೇಡಿರಿ; ಏಕೆಂದರೆ ಪರಲೋಕದಲ್ಲಿರುವಾತನೊಬ್ಬನೇ ನಿಮ್ಮ ತಂದೆ
[10] ಮತ್ತು ‘ಗುರುವೆಂದು’ ಅನ್ನಿಸಿಕೊಳ್ಳಬೇಡಿರಿ; ಏಕೆಂದರೆ, ಕ್ರಿಸ್ತನೊಬ್ಬನೇ ನಿಮಗಿರುವ ಗುರುವು
[11] ಆದರೆ ನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು.
[12] ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.
[13] “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ಪರಲೋಕ ರಾಜ್ಯದ ಬಾಗಿಲನ್ನು ಮನುಷ್ಯರ ಎದುರಿಗೆ ಮುಚ್ಚಿಬಿಡುತ್ತೀರಿ. ನೀವಂತೂ ಒಳಕ್ಕೆ ಪ್ರವೇಶಿಸುವುದಿಲ್ಲ, ಒಳಕ್ಕೆ ಪ್ರವೇಶಿಸಬೇಕೆಂದಿರುವವರನ್ನೂ ಪ್ರವೇಶಿಸಗೊಡಿಸುವುದೂ ಇಲ್ಲ.
[14] ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ ಜನರು ನೋಡಬೇಕೆಂದು ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತೀರೀ. ನೀವು ವಿಧವೆಯರ ಮನೆಗಳನ್ನು ನುಂಗಿ ನಟನೆಮಾಡುತ್ತೀರಿ. ಆದುದರಿಂದ ನೀವು ಹೆಚ್ಚಿನ ದಂಡನೆಯನ್ನು ಹೊಂದುವಿರಿ.
[15] “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಒಬ್ಬ ಮನುಷ್ಯನನ್ನು ಮತಾಂತರಗೊಳ್ಳಿಸುವುದಕ್ಕಾಗಿ ಭೂಮಿಯನ್ನೂ ಸಮುದ್ರವನ್ನೂ ಸುತ್ತಾಡಿಕೊಂಡು ಬರುತ್ತೀರಿ; ಅವನು ನಿಮ್ಮ ಮತಕ್ಕೆ ಸೇರಿದ ಮೇಲೆ ಅವನನ್ನು ನಿಮಗಿಂತ ಎರಡರಷ್ಟು ನರಕಕ್ಕೆ ಪಾತ್ರನಾಗಮಾಡುತ್ತೀರಿ.
[16] “ಅಯ್ಯೋ, ಕುರುಡು ಮಾರ್ಗದರ್ಶಿಗಳೇ, ‘ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ ಅನ್ನುತ್ತೀರಿ. ಆದರೆ ಒಬ್ಬನು ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು’ ಎಂದು ಹೇಳುತ್ತೀರಿ.
[17] ಕುರುಡರೇ, ಮೂರ್ಖರೇ, ಯಾವುದು ಹೆಚ್ಚಿನದು? ಚಿನ್ನವೋ, ಚಿನ್ನವನ್ನು ಪ್ರತಿಷ್ಠೆ ಮಾಡುವ ದೇವಾಲಯವೋ?
[18] ಮತ್ತು ‘ಒಬ್ಬನು ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ ಅನ್ನುತ್ತೀರಿ, ಆದರೆ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು’ ಎಂದು ಹೇಳುತ್ತೀರಿ.
[19] ಕುರುಡರೇ, ಮೂರ್ಖರೇ, ಯಾವುದು ಹೆಚ್ಚಿನದು? ಕಾಣಿಕೆಯೋ, ಆ ಕಾಣಿಕೆಯನ್ನು ಪ್ರತಿಷ್ಠೆ ಮಾಡುವ ಯಜ್ಞವೇದಿಯೋ?
[20] ಹೀಗಿರುವುದರಿಂದ ಯಾವನಾದರೂ ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ, ಅದರಲ್ಲಿರುವ ಎಲ್ಲದರ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು.
[21] ಮತ್ತು ಯಾವನಾದರೂ ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ, ಅದರಲ್ಲಿ ವಾಸಮಾಡುವಾತನ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು.
[22] ಮತ್ತು ಪರಲೋಕದ ಮೇಲೆ ಆಣೆಯಿಟ್ಟುಕೊಂಡರೆ ದೇವರ ಸಿಂಹಾಸನದ ಮೇಲೆಯೂ ಅದರಲ್ಲಿ ಕುಳಿತಿರುವಾತನ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು.
[23] ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪುದೀನ, ಮರುಗಪತ್ರೆ, ಸಬಸಿಗೆಸೊಪ್ಪು, ಜೀರಿಗೆಗಳಲ್ಲಿ ದಶಮ ಭಾಗವನ್ನು ಕೊಡುತ್ತೀರಿ ಸರಿ, ಆದರೆ ಧರ್ಮಶಾಸ್ತ್ರದಲ್ಲಿ ಮುಖ್ಯವಾದುದನ್ನು ಅಂದರೆ ನ್ಯಾಯವನ್ನೂ, ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿದ್ದೀರಿ. ಇವುಗಳನ್ನು ಮಾಡಬೇಕು; ಅವುಗಳನ್ನೂ ಬಿಡಬಾರದು.
[24] ಕುರುಡ ಮಾರ್ಗದರ್ಶಿಗಳೇ, ನೀವು ಸೊಳ್ಳೇ ಸೋಸುವವರು, ಆದರೆ ಒಂಟೆ ನುಂಗುವವರು.
[25] “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪಾತ್ರೆ, ಬಟ್ಟಲು ಇವುಗಳ ಹೊರಭಾಗವನ್ನು ಶುಚಿಮಾಡುತ್ತೀರಿ ಆದರೆ ಅವುಗಳ ಒಳಗೆ ಸುಲಿಗೆಯಿಂದಲೂ, ದುರಾಶೆಯಿಂದಲೂ ತುಂಬಿರುತ್ತವೆ.
[26] ಕುರುಡನಾದ ಫರಿಸಾಯನೇ, ಮೊದಲು ಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು, ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.
[27] “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಸುಂದರವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ.
[28] ಹಾಗೆಯೇ ನೀವು ಸಹ ಹೊರಗೆ ಜನರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ. ಆದರೆ ಒಳಗೆ ಕಪಟ ಮತ್ತು ಅಕ್ರಮದಿಂದ ತುಂಬಿದವರಾಗಿದ್ದೀರಿ.
[29] ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ, ನೀತಿವಂತರ ಗೋರಿಗಳನ್ನು ಅಲಂಕರಿಸಿ,
[30] ‘ನಾವು ನಮ್ಮ ಹಿರಿಯರ ಕಾಲದಲ್ಲಿ ಇದ್ದಿದ್ದರೆ ಪ್ರವಾದಿಗಳನ್ನು ಕೊಂದ ಪಾಪದಲ್ಲಿ ಪಾಲುಗಾರರಾಗುತ್ತಿರಲಿಲ್ಲ’ ಅನ್ನುತ್ತೀರಿ.
[31] ಹಾಗಾದರೆ ನೀವು ಪ್ರವಾದಿಗಳನ್ನು ಕೊಂದವರ ಮಕ್ಕಳೇ ಹೌದು ಎಂಬುದಕ್ಕೆ ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ.
[32] ಒಳ್ಳೆಯದು, ನೀವು ನಿಮ್ಮ ಹಿರಿಯರ ಪಾಪದ ಅಳತೆಯನ್ನು ಪೂರ್ತಿಮಾಡುತ್ತೀರಿ.
[33] ಹಾವುಗಳೇ, ಸರ್ಪಜಾತಿಯವರೇ, ನರಕದಂಡನೆಯಿಂದ ಹೇಗೆ ನೀವು ತಪ್ಪಿಸಿಕೊಳ್ಳುವಿರಿ?
[34] ಆದುದರಿಂದ ನೋಡಿರಿ, ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ಕಳುಹಿಸುತ್ತೇನೆ; ಅವರಲ್ಲಿ ಕೆಲವರನ್ನು ನೀವು ಕೊಲ್ಲುವಿರಿ, ಶಿಲುಬೆಗೆ ಹಾಕುವಿರಿ; ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಚಾಟಿಗಳಿಂದ ಹೊಡೆದು ಊರಿಂದ ಊರಿಗೆ ಅಟ್ಟಿಕೊಂಡು ಹೋಗುವಿರಿ.
[35] ಹೀಗೆ ನೀತಿವಂತನಾದ ಹೇಬೆಲನ ರಕ್ತವು ಮೊದಲುಗೊಂಡು ನೀವು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತಸುರಿಸಿದ ಅಪರಾಧವು ನಿಮ್ಮ ತಲೆಯ ಮೇಲೆ ಬರುವುದು.
[36] ಇದೆಲ್ಲಾ ಈ ಸಂತತಿಯವರ ಮೇಲೆ ಬರುವುದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
[37] “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ! ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಹುದುಗಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಸೇರಿಸಿಕೊಳ್ಳಲು ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು.
[38] ನೋಡಿರಿ, ನಿಮ್ಮ ಮನೆಯು ನಿಮಗೆ ಬರಿದಾಗಿ ಬಿಡುತ್ತದೆ.
[39] ಈಗಿಂದ, ‘ಕರ್ತನ ಹೆಸರಿನಲ್ಲಿ ಬರುವವನು ಧನ್ಯನು ಎಂದು ನೀವಾಗಿ ನೀವು ಹೇಳುವ ತನಕ ನೀವು ನನ್ನನ್ನು ನೋಡುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ’” ಅಂದನು.