[1] “ಜನರು ನೋಡಲಿ ಎಂದು ನಿಮ್ಮ ‘ಧರ್ಮಕಾರ್ಯಗಳನ್ನು’ ಅವರ ಮುಂದೆ ಮಾಡಬಾರದು; ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯ ಹತ್ತಿರ ನಿಮಗೆ ಫಲದೊರೆಯುವುದಿಲ್ಲ.
[2] “ಆದುದರಿಂದ ನೀನು ದಾನಕೊಡುವಾಗ ಅದನ್ನು ಪ್ರಚಾರಪಡಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
[3] ಆದರೆ ನೀನು ದಾನ ಕೊಡುವಾಗ ನಿನ್ನ ಬಲಗೈ ದಾನಕೊಟ್ಟದ್ದು ಎಡಗೈಗೂ ತಿಳಿಯದಿರಲಿ.
[4] ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.
[5] “ನೀವು ಪ್ರಾರ್ಥನೆಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾಮಂದಿರಗಳಲ್ಲಿಯೂ ಬೀದಿಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವುದಕ್ಕೆ ಇಷ್ಟಪಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
[6] ನೀನು ಪ್ರಾರ್ಥನೆಮಾಡುವಾಗ ನಿನ್ನ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.
[7] ಆದರೆ ಪ್ರಾರ್ಥನೆಮಾಡುವಾಗ ಅನ್ಯಜನಗಳ ಹಾಗೆ ಹೇಳಿದ್ದನ್ನೇ ಸುಮ್ಮನೆ ಮತ್ತೆ ಮತ್ತೆ ಹೇಳಬೇಡ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ಭಾವಿಸುತ್ತಾರೆ.
[8] ಆದುದರಿಂದ ನೀವು ಅವರ ಹಾಗೆ ಆಗಬೇಡಿರಿ. ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವುದಕ್ಕಿಂತ ಮೊದಲೇ ನಿಮಗೆ ಏನೇನು ಅಗತ್ಯವೆಂಬುದು ಆತನಿಗೆ ತಿಳಿದಿದೆ.
[9] ಆದುದರಿಂದ ನೀವು ಹೀಗೆ ಪ್ರಾರ್ಥನೆಮಾಡಬೇಕು,
[10] “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.
[11] ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು.
[12] ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು.
[13] ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೆಡುಕನಿಂದ; ನಮ್ಮನ್ನು ತಪ್ಪಿಸು
[14] ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು.
[15] ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೇ ಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.
[16] “ಇದಲ್ಲದೆ ನೀವು ಉಪವಾಸಮಾಡುವಾಗ ಕಪಟಿಗಳಂತೆ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿರಿ. ಅವರು ತಾವು ಉಪವಾಸಿಗಳೆಂದು ಜನರಿಗೆ ತೋರಿಬರುವಂತೆ ತಮ್ಮ ಮುಖವನ್ನು ವಿಕಾರಮಾಡಿಕೊಳ್ಳುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
[17] ಆದರೆ ನೀನು ಉಪವಾಸಮಾಡುವಾಗ ತಲೆಗೆ ಎಣ್ಣೆ ಹಚ್ಚಿಕೊಂಡು ಮುಖವನ್ನು ತೊಳೆದುಕೋ.
[18] ಹೀಗೆ ಮಾಡಿದರೆ ನೀನು ಉಪವಾಸಿಯೆಂದು ಜನರಿಗೆ ಕಾಣದೆ ಹೋದಾಗ್ಯೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಉಪವಾಸಿಯೆಂದು ಕಾಣಿಸಿಕೊಳ್ಳುವಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಪ್ರತಿಫಲಕೊಡುವನು.
[19] “ಭೂಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು.
[20] ಆದರೆ ಪರಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವುದೂ ಇಲ್ಲ. ಕದಿಯುವುದೂ ಇಲ್ಲ,
[21] ನಿನ್ನ ಸಂಪತ್ತು ಇದ್ದಲ್ಲಿಯೇ ನಿನ್ನ ಮನಸ್ಸು ಇರುತ್ತದಷ್ಟೆ.
[22] “ಕಣ್ಣು ದೇಹಕ್ಕೆ ದೀಪವಾಗಿದೆ; ಹೀಗಿರುವುದರಿಂದ ನಿನ್ನ ಕಣ್ಣು ಚೆನ್ನಾಗಿದ್ದರೆ ನಿನ್ನ ದೇಹವೆಲ್ಲಾ ಬೆಳಕಾಗಿರುವುದು.
[23] ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ ನಿನ್ನ ದೇಹವೆಲ್ಲಾ ಕತ್ತಲಾಗಿರುವುದು. ನಿನ್ನೊಳಗಿರುವ ಬೆಳಕೇ ಕತ್ತಲಾದರೆ ಆ ಕತ್ತಲು ಎಷ್ಟು ಮಹತ್ತರವಾಗಿರಬೇಕು!
[24] “ಯಾರೊಬ್ಬನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನಿಗೆ ಶ್ರದ್ಧೆಯಿಂದ ಸೇವೆಮಾಡಿ ಮತ್ತೊಬ್ಬನನ್ನು ತಾತ್ಸಾರ ಮಾಡಬಹುದು. ನೀವು ದೇವರನ್ನೂ ಐಶ್ವರ್ಯವನ್ನೂ ಒಟ್ಟಾಗಿ ಸೇವಿಸಲಾರಿರಿ.
[25] “ಈ ಕಾರಣದಿಂದ, ನಮ್ಮ ಜೀವನಕ್ಕೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗಾಗಿ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂದು ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದುದಲ್ಲವೇ.
[26] ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವುದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?
[27] ಚಿಂತೆಮಾಡಿ ನಿಮ್ಮ ಜೀವಿತಾವಧಿಯನ್ನು ಒಂದು ಮೊಳ ಉದ್ದ ಬೆಳೆಸಲು ನಿಮ್ಮಲ್ಲಿ ಯಾರಿಂದಾದೀತು?
[28] ಇದಲ್ಲದೆ ನೀವು ಉಡುಪಿನ ವಿಷಯದಲ್ಲಿ ಚಿಂತೆಮಾಡುವುದೇಕೆ? ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿದುಕೊಳ್ಳಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ;
[29] ಆದಾಗ್ಯೂ ಆ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರ ಅರಸನಾದ ಸೊಲೊಮೋನನಿಗೆ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಸಹ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ.
[30] ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನಲ್ಲವೇ!
[31] ಹೀಗಿರುವುದರಿಂದ, ‘ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಧರಿಸಿಕೊಳ್ಳಬೇಕು’ ಎಂದು ಚಿಂತೆಮಾಡಬೇಡಿರಿ.
[32] ಇವೆಲ್ಲವುಗಳಿಗಾಗಿ ಅನ್ಯಜನಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಅಗತ್ಯವಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆಯಷ್ಟೆ.
[33] ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯವನ್ನೂ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.
[34] ಆದುದರಿಂದ ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವುದು. ಆ ಹೊತ್ತಿನ ಪಾಡೇ ಆ ಹೊತ್ತಿಗೆ ಸಾಕು.