[1] ಆ ಸಬ್ಬತ್ ದಿನದಲ್ಲಿ ಯೇಸು ಪೈರಿನ ಹೊಲಗಳ ಮೂಲಕ ಹಾದುಹೋಗುತ್ತಿರುವಾಗ ಆತನ ಶಿಷ್ಯರು ಹಸಿದಿದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
[2] ಆದರೆ ಫರಿಸಾಯರು ಅದನ್ನು ಕಂಡು, “ನೋಡು ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಾರೆ” ಎಂದು ಆತನಿಗೆ ಹೇಳಿದರು.
[3] ಆತನು ಅವರಿಗೆ, “ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೋ?
[4] ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರು ಮಾತ್ರವೇ ಹೊರತು ಬೇರೆ ಯಾರು ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನು ಅವನು, ಅವನ ಸಂಗಡ ಇದ್ದವರು ತಿಂದನಲ್ಲವೇ.
[5] ಇದಲ್ಲದೆ ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನವನ್ನು ಹೊಲೆಮಾಡಿದಾಗ್ಯೂ ಅವರು ನಿರಪರಾಧಿಗಳಾಗಿದ್ದಾರೆ. ಇದನ್ನು ನೀವು ಧರ್ಮಶಾಸ್ತ್ರದಲ್ಲಿ ಓದಲಿಲ್ಲವೋ?
[6] ಆದರೆ ಇಲ್ಲಿ ದೇವಾಲಯಕ್ಕಿಂತ ದೊಡ್ಡವನು ಇದ್ದಾನೆಂದು ನಿಮಗೆ ಹೇಳುತ್ತೇನೆ.
[7] ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬುದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡುತ್ತಿರಲಿಲ್ಲಾ.
[8] ಮನುಷ್ಯಕುಮಾರನು ಸಬ್ಬತ್ ದಿನಕ್ಕೆ ಕರ್ತನಾಗಿದ್ದಾನೆಂದು” ಹೇಳಿದನು.
[9] ಆತನು ಅಲ್ಲಿಂದ ಹೊರಟು ಅವರ ಸಭಾಮಂದಿರಕ್ಕೆ ಹೋದನು.
[10] ಆಗ ಅಲ್ಲಿ ಕೈಬತ್ತಿದವನೊಬ್ಬನಿದ್ದನು. ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನನ್ನು, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯವೋ?” ಎಂದು ಕೇಳಿದರು.
[11] ಅದಕ್ಕಾತನು, “ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಸಬ್ಬತ್ ದಿನದಲ್ಲಿ ಗುಂಡಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದೇ ಇರುವನೇ?
[12] ಕುರಿಗಿಂತ ಮನುಷ್ಯನು ಎಷ್ಟೋ ಮೌಲ್ಯವುಳ್ಳವನು. ಆದಕಾರಣ ಸಬ್ಬತ್ ದಿನದಲ್ಲಿ ಒಳ್ಳೆಯ ಕೆಲಸ ಮಾಡುವುದು ನ್ಯಾಯವಾದದ್ದೆ” ಎಂದು ಉತ್ತರ ಕೊಟ್ಟನು.
[13] ತರುವಾಯ ಯೇಸು ಆ ಮನುಷ್ಯನಿಗೆ “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ಚಾಚಿದನು. ಅದು ಸಂಪೂರ್ಣವಾಸಿಯಾಗಿ ಮತ್ತೊಂದು ಕೈಯಂತಾಯಿತು.
[14] ಆದರೆ ಫರಿಸಾಯರು ಹೊರಕ್ಕೆ ಹೋಗಿ ಇವನನ್ನು ಯಾವ ರೀತಿಯಲ್ಲಿ ಕೊಲ್ಲೋಣ ಎಂದು ಆತನ ವಿರುದ್ಧ ಸಂಚು ಮಾಡತೊಡಗಿದರು.
[15] ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು.
[16] ಅನೇಕರು ಆತನ ಹಿಂದೆ ಹೋದರು. ಆತನು ಅವರೆಲ್ಲರನ್ನು ಸ್ವಸ್ಥಮಾಡಿ ತನ್ನ ಬಗ್ಗೆ ಯಾರಿಗೂ ತಿಳಿಸಬಾರದೆಂದು ಅವರಿಗೆ ಖಂಡಿತವಾಗಿ ಹೇಳಿದನು.
[17] ಹೀಗೆ ಯೆಶಾಯನೆಂಬ ಪ್ರವಾದಿಯ ಮೂಲಕ ಹೇಳಿಸಿರುವ ಮಾತು ನೆರವೇರಿತು; ಅದೇನೆಂದರೆ,
[18] “ಇಗೋ, ನಾನು ಆರಿಸಿಕೊಂಡ ನನ್ನ ಸೇವಕನು. ಈತನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಈತನಲ್ಲಿ ನನ್ನ ಆತ್ಮವನ್ನು ಇರಿಸುವೆನು. ಈತನು ಅನ್ಯಜನಗಳಿಗೂ ನ್ಯಾಯವಿಧಿಯನ್ನು ಸಾರುವನು.
[19] ಈತನು ಜಗಳವಾಡುವುದಿಲ್ಲ, ಕೂಗಾಡುವುದಿಲ್ಲ. ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವುದಿಲ್ಲ.
[20] ನ್ಯಾಯಕ್ಕೆ ಜಯ ದೊರೆಯುವವರೆಗೂ ಜಜ್ಜಿದ ದಂಟನ್ನು ಮುರಿದುಹಾಕದೆಯೂ ಆರಿಹೋಗುತ್ತಿರುವ ದೀಪವನ್ನು ನಂದಿಸದೆಯೂ ಇರುವನು.
[21] ಅನ್ಯಜನರು ಈತನ ಹೆಸರನ್ನು ಕೇಳಿ ನಿರೀಕ್ಷೆಯಿಂದಿರುವರು.”
[22] ದೆವ್ವ ಹಿಡಿದ ಕುರುಡನೂ, ಮೂಕನೂ ಆಗಿರುವ ಒಬ್ಬನನ್ನು ಯೇಸುವಿನ ಬಳಿಗೆ ಕರೆತಂದರು. ಆತನು ಅವನನ್ನು ಸ್ವಸ್ಥಮಾಡಲು ಆ ಮೂಕನಿಗೆ ಮಾತು ಹಾಗೂ ದೃಷ್ಟಿ ಎರಡೂ ಬಂದವು.
[23] ಅದಕ್ಕೆ ಜನರೆಲ್ಲರೂ ಬೆರಗಾಗಿ, “ಈತನು ದಾವೀದನ ಕುಮಾರನೇ ಇರಬಹುದೇನೋ” ಎಂದು ಮಾತನಾಡಿಕೊಳ್ಳುತ್ತಿದ್ದರು.
[24] ಆದರೆ ಫರಿಸಾಯರು ಅದನ್ನು ಕೇಳಿ, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಯೇ ಹೊರತು ಬೇರೆ ರೀತಿಯಿಂದ ಅಲ್ಲ” ಅಂದರು.
[25] ಆತನು ಅವರ ಆಲೋಚನೆಗಳನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನೆಂದರೆ, “ಯಾವ ರಾಜ್ಯವಾದರೂ ತನ್ನಲ್ಲಿ ಭೇದ ಹುಟ್ಟಿದರೆ ವಿಭಜನೆಯಾಗಿ ಹಾಳಾಗುವುದು. ತನ್ನಲ್ಲಿ ಭೇದ ಉಂಟಾಗಿ ವಿಭಜನೆಯಾದ ಯಾವ ಪಟ್ಟಣವಾದರೂ ಮನೆಯಾದರೂ ನೆಲೆಯಾಗಿ ನಿಲ್ಲದು.
[26] ಅದರಂತೆ ಸೈತಾನನು ಸೈತಾನನನ್ನು ಹೊರಡಿಸಿದರೆ ತನ್ನ ವಿರುದ್ಧವಾಗಿ ಹೋರಾಡಿದ ಹಾಗಾಯಿತು, ಹಾಗಾದರೆ ಅವನ ರಾಜ್ಯವು ಹೇಗೆ ನಿಂತಿತು?
[27] ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮ ಶಿಷ್ಯರು ಯಾರ ಬಲದಿಂದ ಬಿಡಿಸುತ್ತಾರೆ? ಆದುದರಿಂದ ಅವರೇ ನಿಮಗೆ ನ್ಯಾಯತೀರಿಸುವರು.
[28] ನಾನು ದೇವರ ಆತ್ಮನ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮ ಹತ್ತಿರಕ್ಕೆ ಬಂದಿತಲ್ಲಾ?
[29] ಇದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಗೆ ನುಗ್ಗಿ ಅವನ ಸೊತ್ತನ್ನು ಸುಲುಕೊಳ್ಳುವುದು ಹೇಗೆ? ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಸುಲುಕೊಂಡಾನು.
[30] ನನ್ನ ಸಂಗಡ ಇರದವನು ನನಗೆ ವಿರೋಧಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದುರಿಸುವವನಾಗಿದ್ದಾನೆ.
[31] ಆದಕಾರಣ ನಿಮಗೆ ಹೇಳುತ್ತೇನೆ ಮನುಷ್ಯರು ಮಾಡುವ ಪ್ರತಿಯೊಂದು ಪಾಪಕ್ಕೂ ದೂಷಣೆಗೂ ಕ್ಷಮಾಪಣೆ ಉಂಟಾಗುವುದು. ಆದರೆ ಪವಿತ್ರಾತ್ಮನಿಗೆ ವಿರುದ್ಧವಾಗಿ ನುಡಿಯುವ ದೂಷಣೆಗೆ ಕ್ಷಮಾಪಣೆಯಿರುವುದಿಲ್ಲ.
[32] ಯಾವನಾದರೂ ಮನುಷ್ಯಕುಮಾರನಿಗೆ ವಿರುದ್ಧವಾಗಿ ಮಾತನಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವುದು, ಪವಿತ್ರಾತ್ಮನಿಗೆ ವಿರುದ್ಧವಾಗಿ ಮಾತನಾಡಿದರೆ ಅದು ಅವನಿಗೆ ಈ ಲೋಕದಲ್ಲಾಗಲಿ ಮುಂಬರುವ ಲೋಕದಲ್ಲಾಗಲಿ ಕ್ಷಮಿಸಲ್ಪಡುವುದಿಲ್ಲ.
[33] “ಮರ ಒಳ್ಳೆಯದಾದರೆ ಅದರ ಫಲವು ಒಳ್ಳೆಯದೆನ್ನಿರಿ. ಮರ ಕೆಟ್ಟದಾದರೆ ಅದರ ಫಲವು ಕೆಟ್ಟದು ಅನ್ನಿರಿ. ಫಲದಿಂದಲೇ ಮರದ ಗುಣವು ಗೊತ್ತಾಗುವುದು.
[34] ಸರ್ಪ ಸಂತತಿಯವರೇ ನೀವು ಕೆಟ್ಟವರಾಗಿರಲಾಗಿ ಒಳ್ಳೆಯ ಮಾತುಗಳನ್ನಾಡುವುದಕ್ಕೆ ನಿಮ್ಮಿಂದ ಹೇಗಾದೀತು? ಹೃದಯದಲ್ಲಿ ತುಂಬಿರುವುದೇ ಬಾಯಿಂದ ಹೊರಡುವುದು.
[35] ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿನಿಂದ ಒಳ್ಳೆಯದನ್ನೇ ಹೊರಗೆ ತೆಗೆಯುತ್ತಾನೆ. ಕೆಟ್ಟವನು ತನ್ನ ಹೃದಯವೆಂಬ ಕೆಟ್ಟ ಬೊಕ್ಕಸದೊಳಗಿನಿಂದ ಕೆಟ್ಟವುಗಳನ್ನು ಹೊರಗೆ ತೆಗೆಯುತ್ತಾನೆ.
[36] ಇದಲ್ಲದೆ ನಾನು ನಿಮಗೆ ಹೇಳುವುದೇನಂದರೆ, ಮನುಷ್ಯರು ವ್ಯರ್ಥವಾಗಿ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿಯೂ ನ್ಯಾಯವಿಚಾರಣೆಯ ದಿನದಲ್ಲಿ ಲೆಕ್ಕ ಕೊಡಬೇಕು.
[37] ನಿನ್ನ ಮಾತುಗಳಿಂದಲೇ ನೀನು ನೀತಿವಂತನೆಂದು ತೀರ್ಪು ಹೊಂದುವಿ. ನಿನ್ನ ಮಾತುಗಳಿಂದಲೇ ನೀನು ಅಪರಾಧಿಯೆಂದು ತೀರ್ಪು ಹೊಂದುವಿ” ಅಂದನು.
[38] ಆಗ ಶಾಸ್ತ್ರಿಗಳಲ್ಲಿಯೂ ಫರಿಸಾಯರಲ್ಲಿಯೂ ಕೆಲವರು, “ಬೋಧಕನೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ನೋಡಬೇಕೆಂದು” ಯೇಸುವನ್ನು ಕೇಳಿದರು. ಅದಕ್ಕೆ ಆತನು ಅವರಿಗೆ ಉತ್ತರಕೊಟ್ಟದ್ದೇನಂದರೆ,
[39] “ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತಾರೆ. ಆದರೆ ಯೋನನೆಂಬ ಪ್ರವಾದಿಯಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಇದಕ್ಕೆ ಸಿಕ್ಕುವುದಿಲ್ಲ.
[40] ಅಂದರೆ ಯೋನನು ಹೇಗೆ ಮೂರು ದಿನ ರಾತ್ರಿ ಹಗಲು ದೊಡ್ಡ ಮೀನಿನ ಹೊಟ್ಟೆಯೊಳಗೆ ಇದ್ದನೋ, ಹಾಗೆಯೇ ಮನುಷ್ಯಕುಮಾರನು ಮೂರು ದಿನ ರಾತ್ರಿ ಹಗಲು ಭೂಗರ್ಭದೊಳಗೆ ಇರುವನು.
[41] ನಿನೆವೆ ಪಟ್ಟಣದವರು ಯೋನನು ಸಾರಿದ ವಾಕ್ಯವನ್ನು ಕೇಳಿ ಮಾನಸಾಂತರಪಟ್ಟರು. ಇಗೋ, ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ. ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವರು.
[42] ದಕ್ಷಿಣ ದೇಶದ ರಾಣಿಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತ ಹೆಚ್ಚಿನವನಿದ್ದಾನೆ. ದಕ್ಷಿಣ ದೇಶದ ರಾಣಿಯು ನ್ಯಾಯವಿಚಾರಣೆಯಲ್ಲಿ ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವಳು.
[43] “ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ.
[44] ವಿಶ್ರಾಂತಿ ಸಿಕ್ಕದ ಕಾರಣ ಅದು, ‘ನಾನು ಬಿಟ್ಟು ಬಂದ ನನ್ನ ಮನೆಗೆ ತಿರುಗಿ ಹೋಗುತ್ತೇನೆ’ ಅಂದುಕೊಂಡು ಬಂದು ಆ ಮನೆ ಒಕ್ಕಲಿಲ್ಲದ್ದೂ, ಗುಡಿಸಿ, ಅಲಂಕರಿಸಿರುವುದನ್ನು ಕಂಡು,
[45] ತರುವಾಯ ಹೊರಟುಹೋಗಿ ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಂದಿಗೆ ಕರೆದುಕೊಂಡು ಬರುವುದು. ಅವು ಒಳ ನುಗ್ಗಿ ಅಲ್ಲಿ ವಾಸ ಮಾಡುವವು. ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದಾಗುವುದು. ಇದರಂತೆಯೇ ಈ ದುಷ್ಟ ಸಂತತಿಗೆ ಆಗುವುದು” ಅಂದನು.
[46] ಯೇಸು ಜನರ ಗುಂಪುಗಳ ಸಂಗಡ ಇನ್ನೂ ಮಾತನಾಡುತ್ತಿರುವಾಗ ಆತನ ತಾಯಿಯೂ ತಮ್ಮಂದಿರೂ ಆತನನ್ನು ಮಾತನಾಡಿಸಬೇಕೆಂದು ಹೊರಗೆ ಬಂದು ನಿಂತಿದ್ದರು.
[47] ಆಗ ಒಬ್ಬನು, “ಇಗೋ ನಿನ್ನ ತಾಯಿಯೂ ತಮ್ಮಂದಿರೂ ನಿನ್ನನ್ನು ಮಾತನಾಡಿಸಬೇಕೆಂದು ಹೊರಗೆ ನಿಂತಿದ್ದಾರೆ” ಅಂದನು.
[48] ಅದಕ್ಕಾತನು ಆ ಮಾತು ಹೇಳಿದವನಿಗೆ, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಹೇಳಿ
[49] ಶಿಷ್ಯರ ಕಡೆಗೆ ಕೈ ಚಾಚಿ, “ಇಗೋ ನನ್ನ ತಾಯಿ, ನನ್ನ ಸಹೋದರರು.
[50] ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ನನ್ನ ಸಹೋದರನೂ ಸಹೋದರಿಯೂ ತಾಯಿಯೂ ಆಗಿದ್ದಾರೆ” ಅಂದನು.