[1] ತರುವಾಯ ಫರಿಸಾಯರು ಸದ್ದುಕಾಯರು ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸಿಕೊಡಬೇಕೆಂದು ಕೇಳಿದರು.
[2] ಆತನು ಅವರಿಗೆ, “‘ನೀವು ಸಂಜೆಯಾದಾಗ ಆಕಾಶವು ಕೆಂಪಾಗಿದ್ದರೆ ಹಿತಕರವಾದ ವಾತಾವರಣವಿರುತ್ತದೆ’ ಅನ್ನುತ್ತೀರಿ.
[3] ಬೆಳಗ್ಗೆ, ‘ಆಕಾಶವು ಮೋಡ ಕವಿದುಕೊಂಡು ಕೆಂಪಾಗಿದ್ದರೆ ಈಹೊತ್ತು ಗಾಳಿ ಮಳೆ ಬರುತ್ತದೆ’ ಅನ್ನುತ್ತೀರಿ. ಆಕಾಶದಲ್ಲಿ ಕಾಣುವ ಸೂಚನೆಗಳನ್ನು ತಿಳಿದುಕೊಳ್ಳಬಲ್ಲವರಾಗಿದ್ದೀರಿ, ಆದರೆ ಈ ಕಾಲದ ಸೂಚನೆಗಳನ್ನು ತಿಳಿದುಕೊಳ್ಳಲು ನಿಮಗೆ ಸಾಧ್ಯವಿಲ್ಲವೋ?
[4] ವ್ಯಭಿಚಾರಿಣಿಯಂತಿರುವ ಈ ದುಷ್ಟ ಸಂತತಿಯು ಸೂಚಕಕಾರ್ಯವನ್ನು ನೋಡಬೇಕೆಂದು ಹುಡುಕುತ್ತದೆ. ಆದರೆ ಯೋನನ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಇದಕ್ಕೆ ಸಿಕ್ಕುವುದಿಲ್ಲ” ಎಂದು ಉತ್ತರ ಕೊಟ್ಟನು. ತರುವಾಯ ಆತನು ಅವರನ್ನು ಬಿಟ್ಟು ಹೊರಟು ಹೋದನು.
[5] ಶಿಷ್ಯರು ರೊಟ್ಟಿ ಬುತ್ತಿ ತೆಗೆದುಕೊಳ್ಳುವುದನ್ನು ಮರೆತು ಆಚೇ ದಡಕ್ಕೆ ಬಂದಿದ್ದರು.
[6] ಯೇಸು ಅವರಿಗೆ “ಎಚ್ಚರಿಕೆ! ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ” ಎಂದು ಹೇಳಿದನು.
[7] ಅದಕ್ಕೆ ಅವರು, “ನಾವು ರೊಟ್ಟಿಯನ್ನು ತೆಗೆದುಕೊಳ್ಳದೆ ಬಂದಿದ್ದರಿಂದ” ಹೀಗೆ ಹೇಳಿರಬೇಕು ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
[8] ಯೇಸು ಅದನ್ನು ತಿಳಿದು, “ಅಲ್ಪ ವಿಶ್ವಾಸಿಗಳೇ, ರೊಟ್ಟಿ ಬುತ್ತಿಯನ್ನು ತಂದಿಲ್ಲವೆಂದು ನಿಮ್ಮಲ್ಲೇ ಏಕೆ ಚರ್ಚೆಮಾಡುತ್ತಿದ್ದೀರಿ?
[9] ಆ ಐದು ರೊಟ್ಟಿಗಳನ್ನು ಐದು ಸಾವಿರ ಜನರಿಗೆ ಹಂಚಿದ ನಂತರ ಎಷ್ಟು ಪುಟ್ಟಿ ಶೇಖರಿಸಿಕೊಂಡಿದ್ದಿರಿ?
[10] ಇಲ್ಲವೆ ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರಿಗೆ ಹಂಚಿದ ನಂತರ ಎಷ್ಟು ಪುಟ್ಟಿ ತುಂಬಿಟ್ಟಿರಿ? ನೀವು ಇನ್ನೂ ಗ್ರಹಿಸಲಿಲ್ಲವೇ? ನಿಮಗೆ ನೆನಪಿಲ್ಲವೇ?
[11] ನಾನು ರೊಟ್ಟಿಯನ್ನು ಕುರಿತು ಮಾತನಾಡಲಿಲ್ಲ, ಎಂಬುದು ನಿಮಗೆ ಹೇಗೆ ತಿಳಿಯದು? ಆದರೆ ನಾನು ನಿಮಗೆ ಹೇಳಿದು ಏನೆಂದರೆ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರ ಬೇಕೆಂದೇ” ಅಂದನು.
[12] ಆಗ ಅವರು ರೊಟ್ಟಿಯ ಹುಳಿಹಿಟ್ಟನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಆತನು ತಮಗೆ ಹೇಳಲಿಲ್ಲ; ಆದರೆ ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಿದನು ಎಂಬುದಾಗಿ ತಿಳಿದುಕೊಂಡರು.
[13] ಯೇಸು ಫಿಲಿಪ್ಪನ ಕೈಸರೈಯ ಎಂಬ ಪಟ್ಟಣದ ಪ್ರಾಂತ್ಯಕ್ಕೆ ಬಂದಾಗ, “ಜನರು ಮನುಷ್ಯಕುಮಾರನಾದ ನನ್ನನ್ನು ಯಾರೆಂದು ಹೇಳುತ್ತಾರೆ” ಎಂದು ತನ್ನ ಶಿಷ್ಯರನ್ನು ಕೇಳಿದನು.
[14] ಅವರು, “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಲೀಯನು ಅನ್ನುತ್ತಾರೆ ಮತ್ತು ಬೇರೆಯವರು ಯೆರಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು” ಅನ್ನುತ್ತಾರೆ ಎಂದು ಹೇಳಿದರು.
[15] ಆತನು ಅವರನ್ನು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ ಎಂದು ಕೇಳಿದನು?”
[16] ಆಗ ಸೀಮೋನ ಪೇತ್ರನು, “ನೀನು ಜೀವವುಳ್ಳ ದೇವರ ಕುಮಾರನಾದ ಕ್ರಿಸ್ತನು” ಎಂದು ಉತ್ತರ ಕೊಟ್ಟನು.
[17] ಅದಕ್ಕೆ ಯೇಸು, “ಯೋನನ ಮಗನಾದ ಸೀಮೋನನೇ, ನೀನು ಧನ್ಯನು. ಏಕೆಂದರೆ ಇದು ಮನುಷ್ಯನಿಂದ ನಿನಗೆ ಪ್ರಕಟವಾಗಿಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನೂ ನಿನಗೆ ಪ್ರಕಟಪಡಿಸಿರುವನು” ಎಂದು ಹೇಳಿದನು.
[18] ನಾನು ಇದನ್ನು ಸಹ ನಿನಗೆ ಹೇಳುತ್ತೇನೆ, “ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ಶಕ್ತಿಗಳು ಅದನ್ನು ಸೋಲಿಸಲಾರವು.
[19] ಪರಲೋಕ ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಭೂಲೋಕದಲ್ಲಿ ನೀನು ಯಾವುದನ್ನು ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಟ್ಟಿರುವುದು. ಮತ್ತು ಭೂಲೋಕದಲ್ಲಿ ನೀನು ಯಾವುದನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಟ್ಟಿರುವುದು” ಅಂದನು.
[20] ಆಗ ಆತನು, ನಾನು ಕ್ರಿಸ್ತನಾಗಿದ್ದೆನೆಂಬುದನ್ನು ಯಾರಿಗೂ ಖಂಡಿತವಾಗಿ ಹೇಳಬೇಡಿರಿ ಎಂದು ತನ್ನ ಶಿಷ್ಯರಿಗೆ ಆಜ್ಞಾಪಿಸಿದನು.
[21] ಅಂದಿನಿಂದ ಯೇಸು ಕ್ರಿಸ್ತನು ತಾನು ಯೆರೂಸಲೇಮಿಗೆ ಹೋಗಿ ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವುದು ಅಗತ್ಯವೆಂದು ತನ್ನ ಶಿಷ್ಯರಿಗೆ ಹೇಳುವುದಕ್ಕೆ ಪ್ರಾರಂಭಿಸಿದನು.
[22] ಆಗ ಪೇತ್ರನು ಆತನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, “ಕರ್ತನೇ, ದೇವರು ಅದನ್ನು ನಿನಗೆ ಬರಗೊಡಿಸದಿರಲಿ; ನಿನಗೆ ಹೀಗೆ ಎಂದಿಗೂ ಆಗಬಾರದು” ಎಂದು ಆತನನ್ನು ಗದರಿಸುವುದಕ್ಕೆ ಪ್ರಾರಂಭಿಸಿದನು.
[23] ಆತನು ತಿರುಗಿಕೊಂಡು ಪೇತ್ರನಿಗೆ, “ಸೈತಾನನೇ, ನನ್ನನ್ನು ಬಿಟ್ಟು ತೊಲಗಿ ಹೋಗು. ನನಗೆ ನೀನು ಅಡ್ಡಿಯಾಗಿದ್ದಿ, ಏಕೆಂದರೆ ನೀನು ದೇವರ ವಿಷಯಗಳ ಬಗ್ಗೆ ಯೋಚಿಸದೇ ಮನುಷ್ಯರ ವಿಷಯಗಳ ಬಗ್ಗೆ ಯೋಚಿಸುತ್ತೀ” ಎಂದು ಹೇಳಿದನು.
[24] ಅನಂತರ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನೆಂದರೆ “ಯಾವನಾದರೂ ನನ್ನನ್ನು ಹಿಂಬಾಲಿಸುವುದಕ್ಕೆ ಬಯಸಿದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
[25] ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಂಡವನು ಅದನ್ನು ಕಂಡುಕೊಳ್ಳುವನು.
[26] ಒಬ್ಬ ಮನುಷ್ಯನು ಭೂಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಅವನ ಪ್ರಾಣವನ್ನು ಕಳೆದುಕೊಂಡರೆ ಅವನಿಗೆ ಪ್ರಯೋಜನವೇನು? ಅಥವಾ ಒಬ್ಬನು ತನ್ನ ಪ್ರಾಣಕ್ಕೆ ಬದಲಿಗೆ ಏನು ಕೊಟ್ಟಾನು?
[27] ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯೊಡನೆ ತನ್ನ ದೂತರ ಸಮೇತವಾಗಿ ಬರುವನು. ಆಗ ಆತನು ಒಬ್ಬೊಬ್ಬನಿಗೆ ಅವನು ಮಾಡಿದ ಕೆಲಸಕ್ಕೆ ತಕ್ಕಂತೆ ಪ್ರತಿಫಲವನ್ನು ಕೊಡುವನು.
[28] “ನಿಮಗೆ ನಿಜವಾಗಿ ಹೇಳುತ್ತೇನೆ ಇಲ್ಲಿ ನಿಂತವರಲ್ಲಿ ಕೆಲವರು ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವುದನ್ನು ನೋಡುವ ತನಕ ಮರಣಹೊಂದುವುದಿಲ್ಲ” ಅಂದನು.