Skip to content
Opens in a new window
Listen to this chapter • 5:52

[1] “ಪರಲೋಕ ರಾಜ್ಯವು ತನ್ನ ದ್ರಾಕ್ಷಾತೋಟಕ್ಕೆ ಕೂಲಿಯಾಳುಗಳನ್ನು ಗೊತ್ತುಮಾಡಲು ಬೆಳಗ್ಗೆ ಹೊರಟ ಒಬ್ಬ ತೋಟದ ಯಜಮಾನನಿಗೆ ಹೋಲಿಕೆಯಾಗಿದೆ.

[2] ಅವನು ದಿನಕ್ಕೆ ಒಂದು ಬೆಳ್ಳಿ ನಾಣ್ಯದಂತೆ ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿದ ನಂತರ ಅವರನ್ನು ದ್ರಾಕ್ಷಾತೋಟಕ್ಕೆ ಕಳುಹಿಸಿದನು.

[3] ಅವನು ಪುನಃ ಸುಮಾರು ಒಂಭತ್ತು ಗಂಟೆಗೆ ಸಂತೆಯ ಸ್ಥಳಕ್ಕೆ ಹೋಗಿ ಕೆಲಸವಿಲ್ಲದೆ ಸುಮ್ಮನೇ ನಿಂತಿದ್ದ ಬೇರೆ ಕೆಲವರು ಕೂಲಿಯಾಳುಗಳನ್ನು ಕಂಡು,

[4] ಅವರಿಗೆ, ‘ನೀವು ಸಹ ನನ್ನ ದ್ರಾಕ್ಷಾತೋಟಕ್ಕೆ ಹೋಗಿರಿ; ನಿಮಗೆ ಸರಿಯಾದ ಕೂಲಿಯನ್ನು ಕೊಡುತ್ತೇನೆ’ ಅಂದನು. ಆಗ ಅವರು ಕೆಲಸಕ್ಕೆ ಹೋದರು.

[5] ಅವನು ಪುನಃ ಸುಮಾರು ಹನ್ನೆರಡು ಗಂಟೆಗೆ ಮತ್ತು ಮೂರು ಗಂಟೆಗೆ ಹೋಗಿ ಅದೇ ಪ್ರಕಾರ ಮಾಡಿದನು.

[6] ಮತ್ತೊಂದು ಸಾರಿ ಸಾಯಂಕಾಲ ಐದು ಗಂಟೆಗೆ ಅವನು ಹೋಗಿ ಬೇರೆ ಕೆಲವರು ಸುಮ್ಮನೇ ನಿಂತಿರುವುದನ್ನು ಕಂಡು ಅವರನ್ನು, ‘ದಿನವೆಲ್ಲಾ ಇಲ್ಲಿ ಸುಮ್ಮನೇ ನಿಂತಿರುವುದೇಕೆ?’ ಎಂದು ಕೇಳಿದನು.

[7] ಅವರು ಅವನಿಗೆ, ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ’ ಎಂದರು, ಆಗ ಅವನು ಅವರಿಗೆ, ‘ನೀವು ಸಹ ನನ್ನ ದ್ರಾಕ್ಷಾತೋಟಕ್ಕೆ ಹೋಗಿರಿ’ ಅಂದನು.

[8] ಸಂಜೆಯಾದಾಗ ದ್ರಾಕ್ಷಾತೋಟದ ಯಜಮಾನನು ತನ್ನ ಮೇಲ್ವಿಚಾರಕನಿಗೆ, ‘ಆ ಕೂಲಿಯಾಳುಗಳನ್ನು ಕರೆದು ಕಡೆಗೆ ಬಂದವರಿಂದ ಪ್ರಾರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದು ಹೇಳಿದನು.

[9] ಆಗ ಸಾಯಂಕಾಲ ಐದು ಗಂಟೆಗೆ ಬಂದು ಕೆಲಸ ಮಾಡಿದವರು ಬಂದಾಗ, ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು.

[10] ಮೊದಲು ಬಂದವರು ಬಂದಾಗ ತಮಗೆ, ಹೆಚ್ಚು ದೊರೆಯುವುದೆಂದು ನೆನಸಿದರು. ಆದರೆ ಅವರಿಗೂ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು.

[11] ಅವರು ಅದನ್ನು ತೆಗೆದುಕೊಂಡು ತೋಟದ ಯಜಮಾನನಿಗೆ ವಿರುದ್ಧವಾಗಿ ಗುಣಗುಟ್ಟಿ,

[12] ‘ಕಡೆಗೆ ಬಂದ ಇವರು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ನಾವು ದಿನವೆಲ್ಲಾ ಬಿಸಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಆದರೆ ನೀನು ಅವರನ್ನು ನಮಗೆ ಸಮನಾಗಿ ಮಾಡಿದ್ದೀಯೆ’ ಅಂದರು.

[13] ಅದಕ್ಕೆ ಯಜಮಾನನು ಅವರಲ್ಲಿ ಒಬ್ಬನಿಗೆ, ‘ಸ್ನೇಹಿತನೇ ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ನನ್ನ ಸಂಗಡ ಒಂದು ಬೆಳ್ಳಿಯ ನಾಣ್ಯಕ್ಕೆ ಒಪ್ಪಂದ ಮಾಡಿಕೊಳ್ಳಲಿಲ್ಲವೆ?

[14] ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು ನಿನಗೆ ಕೊಟ್ಟಂತೆ ಕಡೆಗೆ ಬಂದವರಿಗೂ ಕೊಡುವುದು ನನ್ನ ಇಷ್ಟ.

[15] ನನ್ನ ಸ್ವಂತ ಸೊತ್ತನ್ನು ನನ್ನ ಇಷ್ಟದಂತೆ ಮಾಡಲು ನನಗೆ ಅಧಿಕಾರವಿಲ್ಲವೋ? ನಾನು ಉದಾರಿಯಾಗಿರುವುದಕ್ಕೆ ನೀನೇಕೆ ಹೊಟ್ಟೆಕಿಚ್ಚುಪಟ್ಟುಕೊಳ್ಳುವಿ?’ ಎಂದು ಹೇಳಿದನು.

[16] ಹೀಗೆ ಕಡೆಯವರು ಮೊದಲಿನವರಾಗುವರು ಮೊದಲಿನವರು ಕಡೆಯವರಾಗುವರು” ಎಂದು ಹೇಳಿದನು.

[17] ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ದಾರಿಯಲ್ಲಿ ಹನ್ನೆರಡು ಮಂದಿ ಶಿಷ್ಯರನ್ನು ಏಕಾಂತವಾಗಿ ಪಕ್ಕಕ್ಕೆ ಕರೆದುಕೊಂಡು ಅವರಿಗೆ,

[18] “ನೋಡಿರಿ ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ ಮತ್ತು ಮನುಷ್ಯಕುಮಾರನನ್ನು ಮುಖ್ಯಯಾಜಕರ ಮತ್ತು ಶಾಸ್ತ್ರಿಗಳ ಕೈಗೊಪ್ಪಿಸಿಕೊಡುವರು. ಅವರು ಆತನಿಗೆ ಮರಣದಂಡನೆಯನ್ನು ವಿಧಿಸುವರು.

[19] ಆತನನ್ನು ಅಪಹಾಸ್ಯ ಮಾಡುವುದಕ್ಕಾಗಿಯೂ ಚಾಟಿಗಳಿಂದ ಹೊಡೆಯುವುದಕ್ಕಾಗಿಯೂ ಶಿಲುಬೆಗೆ ಹಾಕುವುದಕ್ಕಾಗಿಯೂ ಅನ್ಯಜನರ ಕೈಗೆ ಒಪ್ಪಿಸುವರು. ಆದರೆ ಆತನು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡುವನು” ಎಂದು ಹೇಳಿದನು.

[20] ಆಗ ಜೆಬೆದಾಯನ ಮಕ್ಕಳ ತಾಯಿ ತನ್ನ ಮಕ್ಕಳೊಂದಿಗೆ ಯೇಸುವಿನ ಬಳಿಗೆ ಬಂದು; ಆತನಿಗೆ ಅಡ್ಡಬಿದ್ದು ಒಂದು ಉಪಕಾರ ಮಾಡಬೇಕೆಂದು ಬೇಡಿಕೊಂಡಳು.

[21] ಆತನು ಆಕೆಯನ್ನು, “ನಿನ್ನ ಅಪೇಕ್ಷೆ ಏನು?” ಎಂದು ಕೇಳಲು ಆಕೆ ಆತನಿಗೆ, “ನಿನ್ನ ರಾಜ್ಯದಲ್ಲಿ ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ಅನುಗ್ರಹ ಮಾಡಬೇಕು” ಅಂದಳು.

[22] ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನೀವು ಬೇಡಿಕೊಳ್ಳುತ್ತಿರುವುದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾನಪಾತ್ರೆಯಲ್ಲಿ ಕುಡಿಯುವುದಕ್ಕೆ ನಿಮ್ಮಿಂದ ಆಗುವುದೋ?” ಎಂದು ಕೇಳಿದನು. ಅವರು ಆತನಿಗೆ, “ನಮ್ಮಿಂದ ಆಗುವುದು” ಅಂದರು.

[23] ಆಗ ಆತನು ಅವರಿಗೆ, “ನನ್ನ ಪಾನಪಾತ್ರೆಯಲ್ಲಿ ನಿಶ್ಚಯವಾಗಿ ನೀವು ಕುಡಿಯುವಿರಿ. ಆದರೆ ನನ್ನ ಎಡಬಲಗಡೆಗಳಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹ ಮಾಡುವುದು ನನ್ನದಲ್ಲ, ಆದರೆ ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಲಾಗಿದೆಯೋ ಅವರಿಗೇ ಸಿಕ್ಕುವುದು” ಎಂದು ಹೇಳಿದನು.

[24] ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು.

[25] ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು ಅವರಿಗೆ, “ಅನ್ಯಜನರ ಅಧಿಪತಿಗಳು ಅವರ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮುಖ್ಯಾಧಿಕಾರಿಗಳು ಅವರ ಮೇಲೆ ಬಲಾತ್ಕಾರದಿಂದ ಅಧಿಕಾರ ನಡೆಸುತ್ತಾರೆ ಎಂದು ನಿಮಗೆ ಗೊತ್ತು.

[26] ಆದರೆ ನಿಮ್ಮಲ್ಲಿ ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಲು ಬಯಸುವವನು ನಿಮ್ಮ ಸೇವಕನಾಗಿರಲಿ.

[27] ನಿಮ್ಮಲ್ಲಿ ಪ್ರಮುಖನಾಗಿರಲು ಬಯಸುವವನು ನಿಮ್ಮ ದಾಸನಾಗಿರಲಿ.

[28] ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕಾಗಿ ಬರಲಿಲ್ಲ, ಸೇವೆ ಮಾಡುವುದಕ್ಕೂ, ಅನೇಕರ ವಿಮೋಚನೆಗಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದನು” ಎಂದು ಹೇಳಿದನು.

[29] ಅವರು ಯೆರಿಕೋವಿನಿಂದ, ಹೊರಟುಹೋಗುತ್ತಿರುವಾಗ ಜನರ ದೊಡ್ಡ ಗುಂಪು ಆತನನ್ನು ಹಿಂಬಾಲಿಸಿತು.

[30] ಆಗ ದಾರಿಯ ಮಗ್ಗುಲಲ್ಲಿ ಕುಳಿತಿದ್ದ ಕುರುಡರಿಬ್ಬರು ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ಕೇಳಿ, “ಕರ್ತನೇ, ದಾವೀದ ಕುಮಾರನೇ ನಮ್ಮನ್ನು ಕರುಣಿಸು” ಎಂದು ಕೂಗಿಕೊಂಡರು.

[31] ಆದರೆ ಆ ಗುಂಪಿನವರು, ಸುಮ್ಮನಿರಿ ಎಂದು ಅವರನ್ನು ಗದರಿಸಿದರು. ಅವರಾದರೋ, “ಕರ್ತನೇ, ದಾವೀದ ಕುಮಾರನೇ, ನಮ್ಮನ್ನು ಕರುಣಿಸು” ಎಂದು ಗಟ್ಟಿಯಾಗಿ ಕೂಗಿಕೊಂಡರು.

[32] ಆಗ ಯೇಸು ನಿಂತು ಅವರನ್ನು ಕರೆದು, “ನಾನು ನಿಮಗೆ ಏನು ಮಾಡಬೇಕೆಂದು ಕೋರುತ್ತೀರಿ?” ಎಂದು ಕೇಳಿದನು.

[33] ಅವರು, “ಕರ್ತನೇ, ನಮ್ಮ ಕಣ್ಣುಗಳು ಕಾಣುವಂತೆ ಮಾಡು” ಅಂದರು.

[34] ಆಗ ಯೇಸು ಕನಿಕರಪಟ್ಟು, ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರು ದೃಷ್ಟಿಯನ್ನು ಹೊಂದಿಕೊಂಡು ಆತನನ್ನು ಹಿಂಬಾಲಿಸಿದರು.

ಮತ್ತಾಯನು — Chapters