[1] ಯೇಸು ದೊಡ್ಡ ಗುಂಪನ್ನು ಕಂಡು ಬೆಟ್ಟದ ಮೇಲೇರಿ ಕುಳಿತ ತರುವಾಯ ಆತನ ಶಿಷ್ಯರು ಆತನ ಬಳಿಗೆ ಬಂದರು.
[2] ಆತನು ಅವರಿಗೆ ಉಪದೇಶ ಮಾಡಿ ಹೇಳಿದ್ದೇನೆಂದರೆ,
[3] “ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕ ರಾಜ್ಯವು ಅವರದು.
[4] ದುಃಖಪಡುವವರು ಧನ್ಯರು; ಅವರು ದೇವರಿಂದ ಸಮಾಧಾನ ಹೊಂದುವರು.
[5] ವಿನಯವುಳ್ಳವರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.
[6] ನೀತಿಗೆ ಹಸಿದು ಬಾಯಾರಿದವರು ಧನ್ಯರು; ಅವರು ತೃಪ್ತರಾಗುವರು.
[7] ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು.
[8] ಶುದ್ಧ ಹೃದಯದವರು ಧನ್ಯರು; ಅವರು ದೇವರನ್ನು ನೋಡುವರು.
[9] ಶಾಂತಿಗಾಗಿ ಶ್ರಮಿಸುವವರು ಧನ್ಯರು; ಅವರು ದೇವರ ಮಕ್ಕಳು ಎಂದೆನಿಸಿಕೊಳ್ಳುವರು.
[10] ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಪರಲೋಕ ರಾಜ್ಯವು ಅವರದು.
[11] “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು.
[12] ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಅವರು ಹೀಗೆಯೇ ಹಿಂಸೆಪಡಿಸಿದರಲ್ಲಾ.
[13] “ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ ಅದಕ್ಕೆ ಬೇರೆ ಯಾವುದರಿಂದ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯ? ಜನರು ಅದನ್ನು ಹೊರಗೆಹಾಕಿ ದಾರಿಹೋಕರು ತುಳಿಯುವುದಕ್ಕೆ ಅದು ಯೋಗ್ಯವೇ ಹೊರತು ಮತ್ತ್ಯಾವ ಕೆಲಸಕ್ಕೂ ಬರುವುದಿಲ್ಲ.
[14] ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಕಟ್ಟಲ್ಪಟ್ಟಿರುವ ಊರು ಮರೆಯಾಗಿರಲಾರದು.
[15] ಮತ್ತು ಯಾರೂ ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವುದಿಲ್ಲ; ದೀಪಸ್ತಂಭದ ಮೇಲೆಯೇ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವುದು.
[16] ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.
[17] “ಮೋಶೆಯ ಧರ್ಮನಿಯಮವನ್ನಾಗಲಿ ಪ್ರವಾದಿಗಳ ಪ್ರವಾದನೆಗಳನ್ನಾಗಲಿ ನಿರರ್ಥಕಪಡಿಸುವುದಕ್ಕೆ ನಾನು ಬಂದೆನೆಂದು ನೆನಸಬೇಡಿರಿ; ನಿರರ್ಥಕಪಡಿಸಲು ಬಂದಿಲ್ಲ; ಬದಲಾಗಿ ನೆರವೇರಿಸುವುದಕ್ಕೆ ಬಂದಿದ್ದೇನೆ.
[18] ನಿಮಗೆ ಸತ್ಯವಾಗಿ ಹೇಳುತ್ತೇನೆ, ಆಕಾಶವೂ ಭೂಮಿಯೂ ಅಳಿದುಹೋಗುವ ತನಕ ಧರ್ಮನಿಯಮವೆಲ್ಲಾ ನೆರವೇರಿದ ಹೊರತು ಅದರೊಳಗಿಂದ ಒಂದು ಚುಕ್ಕೆಯಾಗಲಿ, ಒಂದು ಅಕ್ಷರವಾಗಲಿ ಅಳಿದುಹೋಗುವುದಿಲ್ಲ.
[19] ಆದುದರಿಂದ ಈ ಸಣ್ಣ ಆಜ್ಞೆಗಳಲ್ಲಿ ಒಂದನ್ನು ಮೀರಿ ನಡೆದು ಜನರಿಗೂ ಹಾಗೆ ಮಾಡುವುದಕ್ಕೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹಳ ಕನಿಷ್ಠನೆನ್ನಿಸಿಕೊಳ್ಳುವನು; ಆದರೆ ತಾನೇ ಸ್ವತಃ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೂ ಹಾಗೆ ನಡೆಯಬೇಕೆಂದು ಬೋಧಿಸುವವನು ಪರಲೋಕ ರಾಜ್ಯದಲ್ಲಿ ಶ್ರೇಷ್ಠನೆನಿಸಿಕೊಳ್ಳುವನು.
[20] ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಉತ್ತಮವಾಗಿರದಿದ್ದರೆ ನೀವು ಪರಲೋಕ ರಾಜ್ಯಕ್ಕೆ ಸೇರಲಾರಿರಿ ಎಂದು ನಿಮಗೆ ಹೇಳುತ್ತೇನೆ.
[21] “‘ನರಹತ್ಯ ಮಾಡಬಾರದು; ನರಹತ್ಯ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನೆಂದು’ ಹಿರಿಯರಿಗೆ ಹೇಳಿಯದೆ ಎಂದು ಕೇಳಿದ್ದೀರಿ.
[22] ಆದರೆ ನಾನು ನಿಮಗೆ ಹೇಳುವುದೇನಂದರೆ, ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿಯೊಬ್ಬ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು; ತನ್ನ ಸಹೋದರನನ್ನು ನೋಡಿ, ‘ಎಲೈ ಮೂರ್ಖನೇ’ ಎಂದು ಅನ್ನುವವನು ನ್ಯಾಯ ಸಭೆಯ ವಿಚಾರಣೆಗೆ ಒಳಗಾಗುವನು; ‘ಎಲೈ ನೀಚನೇ’ ಎಂದು ಅನ್ನುವವನು, ಅಗ್ನಿ ನರಕಕ್ಕೆ ಗುರಿಯಾಗುವನು.
[23] ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ,
[24] ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟು ಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.
[25] “ಇನ್ನೂ ದಾರಿಯಲ್ಲಿರುವಾಗಲೇ ನಿನ್ನ ಪ್ರತಿವಾದಿಯೊಂದಿಗೆ ಬೇಗ ಸಂಧಾನ ಮಾಡಿಕೋ; ಇಲ್ಲದಿದ್ದರೆ ಆ ಆಪಾದಕನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಾನು ನ್ಯಾಯಾಧಿಪತಿಯು ನಿನ್ನನ್ನು ಸೆರೆಮನೆ ಅಧಿಕಾರಿಯ ಕೈಗೆ ಒಪ್ಪಿಸಿಕೊಟ್ಟಾನು. ಆಗ ನೀನು ಸೆರೆಯಲ್ಲಿ ಎಸೆಯಲ್ಪಡುವಿ.
[26] ನೀನು ಒಂದು ಕಾಸನ್ನಾದರೂ ಉಳಿಸಿಕೊಳ್ಳದೆ ಎಲ್ಲವನ್ನು ಸಲ್ಲಿಸುವ ತನಕ ಅಲ್ಲಿಂದ ಬರುವುದಕ್ಕಾಗುವುದೇ ಇಲ್ಲ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ.
[27] “‘ವ್ಯಭಿಚಾರ ಮಾಡಬಾರದೆಂದು’ ಹೇಳಿಯದೆ ಎಂಬುದಾಗಿ ನೀವು ಕೇಳಿದ್ದೀರಿ.
[28] ಆದರೆ ನಾನು ನಿಮಗೆ ಹೇಳುವುದೇನಂದರೆ, ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿಯೊಬ್ಬ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾಗಿದ್ದಾನೆ.
[29] ನಿನ್ನ ಬಲಗಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಿತ್ತು ಎಸೆದುಬಿಡು, ನಿನ್ನ ದೇಹವೆಲ್ಲಾ ನರಕದಲ್ಲಿ ಬೀಳುವುದಕ್ಕಿಂತ ದೇಹದ ಭಾಗಗಳಲ್ಲಿ ಒಂದು ಹೋಗುವುದು ನಿನಗೆ ಹಿತವಲ್ಲವೇ.
[30] ನಿನ್ನ ಬಲಗೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಡಿದು ಎಸೆದುಬಿಡು, ನಿನ್ನ ದೇಹವೆಲ್ಲಾ ನರಕದಲ್ಲಿ ಬೀಳುವುದಕ್ಕಿಂತ ದೇಹದ ಭಾಗಗಳಲ್ಲಿ ಒಂದು ಹೋಗುವುದು ನಿನಗೆ ಹಿತವಲ್ಲವೇ.
[31] ಇದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಆಕೆಗೆ ವಿಚ್ಛೇದನ ಪತ್ರವನ್ನು ಕೊಡತಕ್ಕದ್ದೆಂದು ಹೇಳಿಯದೆಯಷ್ಟೆ.
[32] ಆದರೆ ನಾನು ನಿಮಗೆ ಹೇಳುವುದೇನಂದರೆ, ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವುದಕ್ಕೆ ಕಾರಣನಾಗುತ್ತಾನೆ ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರಮಾಡುವವನಾಗಿದ್ದಾನೆ.
[33] “ಮತ್ತು, ನೀನು ಸುಳ್ಳಾಣೆಯಿಡಬಾರದು; ‘ನೀನು ಇಟ್ಟುಕೊಂಡ ಆಣೆಗಳನ್ನು ಕರ್ತನಿಗೆ ಸಲ್ಲಿಸಬೇಕೆಂದು ಹಿರಿಯರ ಕಾಲದಲ್ಲಿ’ ಹೇಳಿದೆ ಎಂದು ಕೇಳಿದ್ದೀರಷ್ಟೆ.
[34] ಆದರೆ ನಾನು ನಿಮಗೆ ಹೇಳುವುದೇನಂದರೆ, ಆಣೆಯನ್ನೇ ಇಡಬೇಡಿರಿ. ಆಕಾಶದ ಮೇಲೆ ಆಣೆ ಇಡಬೇಡಿರಿ; ಅದು ದೇವರ ಸಿಂಹಾಸನವು.
[35] ಭೂಮಿಯ ಮೇಲೆ ಆಣೆ ಇಡಬೇಡಿ ಅದು ಆತನ ಪಾದಪೀಠ. ಯೆರೂಸಲೇಮಿನ ಮೇಲೆ ಆಣೆ ಇಡಬೇಡಿ; ಅದು ಆ ಮಹಾ ರಾಜನ ಪಟ್ಟಣವಾಗಿದೆ.
[36] ನಿನ್ನ ತಲೆಯ ಮೇಲೆ ಕೂಡ ಆಣೆ ಇಡಬೇಡ; ನೀನು ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲಾರೆ.
[37] ಆದರೆ ನಿಮ್ಮ ಮಾತು ‘ಹೌದಾದರೆ ಹೌದು ಅಲ್ಲವಾದರೆ ಅಲ್ಲ’ ಎಂದಿರಲಿ. ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬರುವಂತಹದ್ದಾಗಿದೆ.
[38] “‘ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗೆಯಿಸು’ ಎಂದು ಹೇಳಿರುವುದು ಕೇಳಿದ್ದೀರಷ್ಟೆ.
[39] ಆದರೆ ನಾನು ನಿಮಗೆ ಹೇಳುವುದೇನಂದರೆ, ಕೆಡುಕನನ್ನು ವಿರೋಧಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ನಿನ್ನ ಮತ್ತೊಂದು ಕೆನ್ನೆಯನ್ನು ಸಹ ತಿರುಗಿಸು.
[40] ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಒಳಂಗಿಯನ್ನು ತೆಗೆದುಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಟ್ಟುಕೊಡು.
[41] ಒಬ್ಬನು ಒಂದು ಮೈಲು ದೂರ ಬಾ ಎಂದು ನಿನ್ನನ್ನು ಒತ್ತಾಯಿಸಿದರೆ ಅವನ ಸಂಗಡ ಎರಡು ಮೈಲು ದೂರ ಹೋಗು.
[42] ನಿನ್ನನ್ನು ಕೇಳುವವನಿಗೆ ಕೊಡು; ನಿನ್ನಲ್ಲಿ ಬೇಡಲು ಬಂದವನಿಗೆ ಮುಖ ತಿರುಗಿಸಿಕೊಳ್ಳಬೇಡ.
[43] “‘ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ದ್ವೇಷಿಸಬೇಕೆಂದು’ ಹೇಳಿಯದೆ ಎಂಬುದಾಗಿ ಕೇಳಿದ್ದೀರಷ್ಟೆ.
[44] ಆದರೆ ನಾನು ನಿಮಗೆ ಹೇಳುವುದೇನಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೊಸ್ಕರ ದೇವರನ್ನು ಪ್ರಾರ್ಥಿಸಿರಿ.
[45] ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ. ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ.
[46] ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ಫಲವೇನು? ಸುಂಕದವರು ಹಾಗೆ ಮಾಡುವುದಿಲ್ಲವೇ.
[47] ನಿಮ್ಮ ಸಹೋದರರಿಗೆ ಮಾತ್ರ ನೀವು ಮರ್ಯಾದೆ ಕೊಟ್ಟರೆ ಏನು ಹೆಚ್ಚು ಮಾಡಿದ ಹಾಗಾಯಿತು? ಅನ್ಯಜನರು ಸಹ ಹಾಗೆ ಮಾಡುತ್ತಾರಲ್ಲವೇ.
[48] ಆದುದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವ ಹಾಗೆಯೇ ನೀವೂ ಪರಿಪೂರ್ಣರಾಗಿರಿ.