Skip to content
Opens in a new window
Listen to this chapter • 10:24

[1] ಬೆಳಗಾಗಲು ಎಲ್ಲಾ ಮುಖ್ಯಯಾಜಕರೂ, ಜನರ ಹಿರಿಯರೂ ಯೇಸುವನ್ನು ಕೊಲ್ಲಿಸಬೇಕೆಂದು ಸಂಚುಮಾಡಿಕೊಂಡು,

[2] ಆತನನ್ನು ಕಟ್ಟಿಸಿ ಕರೆದುಕೊಂಡು ಹೋಗಿ ದೇಶಾಧಿಪತಿಯಾದ ಪಿಲಾತನಿಗೆ ಒಪ್ಪಿಸಿದರು.

[3] ಆಗ ಆತನನ್ನು ದ್ರೋಹದಿಂದ ಹಿಡಿದುಕೊಟ್ಟಿದ್ದ ಯೂದನು ಯೇಸುವಿಗೆ ಮರಣದಂಡನೆಯ ತೀರ್ಪು ಆಗಿರುವುದನ್ನು ನೋಡಿ, ಪಶ್ಚಾತ್ತಾಪಪಟ್ಟು, ಆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಮುಖ್ಯಯಾಜಕರಿಗೂ ಹಿರಿಯರಿಗೂ ಹಿಂದಿರುಗಿಸಿದನು.

[4] “ನಿರಪರಾಧಿಯನ್ನು ಮರಣಕ್ಕೆ ಒಪ್ಪಿಸಿಕೊಟ್ಟು ನಾನು ಪಾಪ ಮಾಡಿದ್ದೇನೆ” ಅಂದನು. ಅದಕ್ಕವರು, “ಅದು ನಮಗೇನು? ನೀನೇ ನೋಡಿಕೋ” ಅಂದರು.

[5] ಆಗ ಅವನು ದೇವಾಲಯದಲ್ಲಿ ಆ ಹಣವನ್ನು ಎಸೆದು ಹೊರಟುಹೋಗಿ ನೇಣು ಹಾಕಿಕೊಂಡು ಸತ್ತನು.

[6] ಮುಖ್ಯಯಾಜಕರು ಆ ಹಣವನ್ನು ತೆಗೆದುಕೊಂಡು “ಇದು ಜೀವಹತ್ಯೆಗೆ ಕೊಟ್ಟ ಕ್ರಯವಾದುದರಿಂದ ಇದನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಬಾರದು” ಎಂದರು.

[7] ಬಳಿಕ ಆಲೋಚನೆಮಾಡಿ ಪರದೇಶಿಗಳನ್ನು ಹೂಣಿಡುವುದಕ್ಕೋಸ್ಕರ ಅದರಿಂದ ಕುಂಬಾರನ ಹೊಲವೆಂಬ ಭೂಮಿಯನ್ನು ಕೊಂಡುಕೊಂಡರು.

[8] ಈ ಕಾರಣದಿಂದ ಇಂದಿನವರೆಗೂ ಆ ಹೊಲಕ್ಕೆ “ಜೀವಹತ್ಯದ ಹೊಲವೆಂಬ” ಹೆಸರು ಇದೆ.

[9] ಅದೇನೆಂದರೆ, “ಇಸ್ರಾಯೇಲ್ ಜನರಿಂದ ಅವನಿಗೆ ನಿರ್ಣಯಿಸಿದಂಥ ಕ್ರಯವಾದ ಆ ಮೂವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು, ಕರ್ತನು ನನಗೆ ಅಪ್ಪಣೆಮಾಡಿದಂತೆ

[10] ಅವರು ಅದನ್ನು ಕುಂಬಾರನ ಹೊಲಕ್ಕಾಗಿ ಕೊಟ್ಟರು.” ಹೀಗೆ ಪ್ರವಾದಿಯಾದ ಯೆರೆಮೀಯನು ಹೇಳಿದ ಮಾತು ನೆರವೇರಿತು.

[11] ಯೇಸು ದೇಶಾಧಿಪತಿಯ ಮುಂದೆ ನಿಂತಿರುವಾಗ ದೇಶಾಧಿಪತಿಯು ಆತನನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಯೇಸು, “ನೀನೇ ಹೇಳಿದ್ದೀ” ಅಂದನು.

[12] ಮತ್ತು ಮುಖ್ಯಯಾಜಕರೂ ಹಿರಿಯರೂ ಆತನ ಮೇಲೆ ದೂರುಹೇಳುತ್ತಿರುವಾಗ ಆತನು ಏನೂ ಉತ್ತರ ಕೊಡಲಿಲ್ಲ,

[13] ನಂತರ ಪಿಲಾತನು ಆತನನ್ನು, “ನಿನ್ನ ವಿರುದ್ಧ ಇಷ್ಟು ಸಾಕ್ಷಿ ಹೇಳುತ್ತಿದ್ದಾರೆ, ನಿನಗೆ ಕೇಳಿಸುತ್ತಿಲ್ಲವೋ?” ಎಂದು ಕೇಳಿದನು.

[14] ಆತನು ಅವನ ಯಾವ ಮಾತುಗಳಿಗೂ ಉತ್ತರಕೊಡಲಿಲ್ಲ. ಅದನ್ನು ನೋಡಿ ದೇಶಾಧಿಪತಿಯು ತುಂಬಾ ಆಶ್ಚರ್ಯಪಟ್ಟನು.

[15] ಆದರೆ ಆ ಹಬ್ಬದಲ್ಲಿ ಜನರು ಅಪೇಕ್ಷಿಸುವ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವುದು ದೇಶಾಧಿಪತಿಯ ಪದ್ಧತಿಯಾಗಿತ್ತು.

[16] ಆ ಕಾಲದಲ್ಲಿ ಬರಬ್ಬನೆಂಬ ಕುಖ್ಯಾತನಾದ ಒಬ್ಬ ಸೆರೆಯವನಿದ್ದನು.

[17] ಹೀಗಿರಲಾಗಿ ಅವರು ಸೇರಿಬಂದಿದ್ದ ಸಮಯದಲ್ಲಿ ಪಿಲಾತನು, “ನಿಮಗೆ ಯಾರನ್ನು ಬಿಟ್ಟುಕೊಡಬೇಕೆನ್ನುತ್ತೀರಿ? ಬರಬ್ಬನನ್ನೋ ಅಥವಾ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನೋ?” ಎಂದು ಅವರನ್ನು ಕೇಳಿದನು.

[18] ಏಕೆಂದರೆ ಅವರು ಹೊಟ್ಟೆಕಿಚ್ಚಿನಿಂದಲೇ ಈ ರೀತಿಯಾಗಿ ಮಾಡಿದ್ದಾರೆಂದು ಅವನಿಗೆ ತಿಳಿದಿತ್ತು.

[19] ಇದಲ್ಲದೆ ಅವನು ನ್ಯಾಯಾಸನದಲ್ಲಿ ಕುಳಿತಿರುವಾಗ ಅವನ ಹೆಂಡತಿಯು, “ನೀನು ಆ ನೀತಿವಂತನ ಗೊಡವೆಗೆ ಹೋಗಬೇಡ; ಅವನ ದೆಸೆಯಿಂದ ಈ ಹೊತ್ತು ಕನಸಿನಲ್ಲಿ ಬಹಳ ತೊಂದರೆ ಪಟ್ಟೆನು” ಎಂದು ಅವನ ಬಳಿಗೆ ಸಂದೇಶ ಹೇಳಿಕಳುಹಿಸಿದಳು.

[20] ಆದರೆ ಮುಖ್ಯಯಾಜಕರೂ ಹಿರಿಯರೂ ಬರಬ್ಬನನ್ನು ಬಿಟ್ಟುಕೊಡಬೇಕೆಂದು ಬೇಡಿಕೊಳ್ಳುವಂತೆಯೂ ಯೇಸುವನ್ನು ಸಾಯಿಸಬೇಕೆಂದು ಕೇಳುವ ಹಾಗೆಯೂ ಜನರನ್ನು ಒಡಂಬಡಿಸಿದ್ದರು.

[21] ಅದಕ್ಕೆ ದೇಶಾಧಿಪತಿಯು ಅವರನ್ನು, “ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟುಕೊಡಬೇಕನ್ನುತ್ತೀರಿ?” ಎಂದು ಕೇಳಲು ಅವರು “ಬರಬ್ಬನನ್ನು” ಅಂದರು.

[22] ಪಿಲಾತನು ಅವರನ್ನು, “ಹಾಗಾದರೆ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಲು ಎಲ್ಲರೂ, “ಅವನನ್ನು ಶಿಲುಬೆಗೆ ಹಾಕಿಸು” ಅಂದರು.

[23] ಅದಕ್ಕವನು “ಏಕೆ? ಈತನು ಮಾಡಿದ ಅಪರಾಧವೇನು?” ಅಂದನು. ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಬಹಳವಾಗಿ ಆರ್ಭಟಿಸಿದರು.

[24] ಆಗ ಪಿಲಾತನು ತನ್ನ ಯತ್ನ ನಡೆಯುವುದಿಲ್ಲ ಗದ್ದಲ ಮಾತ್ರ ಹೆಚ್ಚಾಗುತ್ತದೆ ಎಂದು ತಿಳಿದು ನೀರನ್ನು ತೆಗೆದುಕೊಂಡು ಜನರ ಮುಂದೆ ಕೈ ತೊಳೆದುಕೊಂಡು, “ಈ ನೀತಿವಂತನನ್ನು ಕೊಲ್ಲಿಸುವುದರಲ್ಲಿ ನಾನು ನಿರಪರಾಧಿ, ನೀವೇ ನೋಡಿಕೊಳ್ಳಿರಿ” ಎನ್ನಲು

[25] ಜನರೆಲ್ಲಾ, “ಆತನ ರಕ್ತವು ನಮ್ಮ ಮತ್ತು ನಮ್ಮ ಮಕ್ಕಳ ಮೇಲೆ ಬರಲಿ” ಅಂದರು.

[26] ಆಗ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.

[27] ಆ ಮೇಲೆ ದೇಶಾಧಿಪತಿಯ ಸಿಪಾಯಿಗಳು ಯೇಸುವನ್ನು ಅರಮನೆಯೊಳಗೆ ಕರೆದುಕೊಂಡು ಹೋಗಿ ಪಟಾಲವನ್ನೆಲ್ಲಾ ಆತನ ಸುತ್ತಲೂ ಸೇರಿಸಿಕೊಂಡು,

[28] ಆತನ ಬಟ್ಟೆಗಳನ್ನು ತೆಗೆದುಹಾಕಿ ಕೆಂಪು ನಿಲುವಂಗಿಯನ್ನು ಹೊದಿಸಿ,

[29] ಮುಳ್ಳುಬಳ್ಳಿಯಿಂದ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು ಬಲಗೈಯಲ್ಲಿ ಬೆತ್ತವನ್ನು ಕೊಟ್ಟು, ಆತನ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಆತನನ್ನು ಪರಿಹಾಸ್ಯಮಾಡಿ

[30] ಮತ್ತು ಆತನ ಮೇಲೆ ಉಗುಳಿ ಆ ಬೆತ್ತವನ್ನು ತೆಗೆದುಕೊಂಡು ಆತನ ತಲೆಯ ಮೇಲೆ ಹೊಡೆದರು.

[31] ಹೀಗೆ ಆತನನ್ನು ಪರಿಹಾಸ್ಯಮಾಡಿದ ಮೇಲೆ ಆ ನಿಲುವಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು.

[32] ಅವರು ಹೊರಕ್ಕೆ ಹೋಗುತ್ತಿರುವಾಗ ಕುರೇನೆ ಪಟ್ಟಣದ ಸೀಮೋನನೆಂಬುವನನ್ನು ಕಂಡು ಅವನನ್ನು ಬಲವಂತವಾಗಿ ಆತನ ಶಿಲುಬೆಯನ್ನು ಹೊರುವುದಕ್ಕೆ ಕರೆದುಕೊಂಡರು.

[33] ಅವರೆಲ್ಲರೂ ಗೊಲ್ಗೊಥಾ ಅಂದರೆ “ಕಪಾಲಸ್ಥಳ” ಎಂಬ ಸ್ಥಾನಕ್ಕೆ ಬಂದಾಗ

[34] ಆತನಿಗೆ ಕಹಿ ಬೆರಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು; ಆತನು ಅದನ್ನು ರುಚಿ ನೋಡಿ ಕುಡಿಯಲಾರದೆ ಇದ್ದನು.

[35] ಬಳಿಕ ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಿಗಾಗಿ ಚೀಟು ಹಾಕಿ ಪಾಲುಮಾಡಿಕೊಂಡರು;

[36] ಮತ್ತು ಅಲ್ಲಿ ಕುಳಿತುಕೊಂಡು ಆತನನ್ನು ಕಾಯುತ್ತಾ ಇದ್ದರು.

[37] ಇದಲ್ಲದೆ ಆತನ ಮೇಲೆ ಹೊರಿಸಿದ ಅಪರಾಧವನ್ನು ಬರೆದು ಆತನ ತಲೆಯ ಮೇಲ್ಗಡೆ ಹಚ್ಚಿದರು; ಅದೇನೆಂದರೆ, “ಈತನು ಯೇಸು, ಯೆಹೂದ್ಯರ ಅರಸನು” ಎಂಬುದೇ.

[38] ಆಗ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆಯಲ್ಲಿ ಆತನ ಸಂಗಡ ಶಿಲುಬೆಗೆ ಹಾಕಿದರು.

[39] ಅಲ್ಲಿ ಹಾದುಹೋಗುತ್ತಿರುವವರು ತಲೆ ಅಲ್ಲಾಡಿಸಿ,

[40] “ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಕಟ್ಟುವವನೇ, ನಿನ್ನನ್ನು ರಕ್ಷಿಸಿಕೊ; ನೀನು ದೇವರ ಮಗನೇ ಆಗಿದ್ದರೆ ಶಿಲುಬೆಯಿಂದ ಇಳಿದು ಬಾ” ಎಂದು ಆತನನ್ನು ಹಂಗಿಸುತ್ತಿದ್ದರು.

[41] ಅದೇ ರೀತಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಹಿರಿಯರೂ, “ಅವನು ಮತ್ತೊಬ್ಬರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.

[42] ಅವನು ಇಸ್ರಾಯೇಲಿನ ಅರಸನಲ್ಲವೇ. ಈಗ ಶಿಲುಬೆಯಿಂದ ಇಳಿದು ಬರಲಿ, ಇಳಿದು ಬಂದರೆ ಅವನಲ್ಲಿ ನಂಬಿಕೆಯಿಡುತ್ತೇವೆ ಅಂದರು.

[43] ಅವನು ದೇವರಲ್ಲಿ ಭರವಸವಿಟ್ಟಿದ್ದಾನೆ, ದೇವರಿಗೆ ಇಷ್ಟವಿದ್ದರೆ ಈಗ ಅವನನ್ನು ಬಿಡಿಸಲಿ; ‘ತಾನು ದೇವರ ಮಗನಾಗಿದ್ದೇನೆಂದು ಹೇಳಿದನಲ್ಲಾ’” ಎಂದು ಅಣಕಿಸಿ ಮಾತನಾಡುತ್ತಿದ್ದರು.

[44] ಆತನ ಸಂಗಡ ಶಿಲುಬೆಗೆ ಹಾಕಲ್ಪಟ್ಟ ಕಳ್ಳರು ಸಹ ಆತನನ್ನು ಅದೇ ಪ್ರಕಾರ ನಿಂದಿಸುತ್ತಿದ್ದರು.

[45] ಮಧ್ಯಾಹ್ನ ಹನ್ನೆರಡು ಘಂಟೆಯಿಂದ ಮೂರು ಘಂಟೆಯ ವರೆಗೆ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.

[46] ಸುಮಾರು ಮೂರು ಘಂಟೆಗೆ ಯೇಸು, “ಏಲೀ, ಏಲೀ, ಲಮಾ ಸಬಕ್ತಾನೀ” ಅಂದರೆ, “ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ” ಎಂದು ಮಹಾ ಧ್ವನಿಯಿಂದ ಕೂಗಿದನು.

[47] ಅಲ್ಲಿ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ” ಅಂದನು.

[48] ಕೂಡಲೆ ಅವರಲ್ಲಿ ಒಬ್ಬನು ಓಡಿಹೋಗಿ ಸ್ಪಂಜನ್ನು ತಂದು ಹುಳಿರಸದಿಂದ ತುಂಬಿಸಿ ಕೋಲಿಗೆ ಸಿಕ್ಕಿಸಿ ಆತನಿಗೆ ಕುಡಿಯುವುದಕ್ಕೆ ಕೊಟ್ಟನು.

[49] ಮಿಕ್ಕಾದವರು, “ಬಿಡು, ಎಲೀಯನು ಬಂದು ಅವನನ್ನು ರಕ್ಷಿಸುವನೇನೋ ನೋಡೋಣ” ಅಂದರು.

[50] ಅನಂತರ ಯೇಸು ತಿರುಗಿ ಮಹಾ ಧ್ವನಿಯಿಂದ ಕೂಗಿ ಪ್ರಾಣಬಿಟ್ಟನು.

[51] ಆಗ ಇಗೋ, ದೇವಾಲಯದ ಪರದೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು; ಭೂಮಿಯು ನಡುಗಿತು;

[52] ಬಂಡೆಗಳು ಸೀಳಿಹೋದವು; ಸಮಾಧಿಗಳು ತೆರೆದವು; ನಿದ್ರೆಹೋಗಿದ್ದ ಅನೇಕ ಭಕ್ತರ ದೇಹಗಳು ಜೀವದಿಂದ ಎದ್ದವು;

[53] ಮತ್ತು ಆತನ ಪುನರುತ್ಥಾನವಾದ ಮೇಲೆ ಸಮಾಧಿಗಳೊಳಗಿಂದ ಹೊರಗೆ ಬಂದು ಪರಿಶುದ್ಧ ಪಟ್ಟಣದೊಳಗೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.

[54] ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ, ನಡೆದ ಸಂಗತಿಗಳನ್ನೂ ನೋಡಿ ಬಹಳ ಹೆದರಿಕೊಂಡು, “ನಿಜವಾಗಿ ಈತನು ದೇವಕುಮಾರನಾಗಿದ್ದನು” ಅಂದರು.

[55] ಇದಲ್ಲದೆ ಅನೇಕ ಸ್ತ್ರೀಯರು ಅಲ್ಲಿ ಇದ್ದು ದೂರದಿಂದ ಇದನ್ನು ನೋಡುತ್ತಿದ್ದರು. ಇವರು ಯೇಸುವಿನ ಸೇವೆಮಾಡುತ್ತಾ ಗಲಿಲಾಯದಿಂದ ಆತನ ಹಿಂದೆ ಬಂದವರಾಗಿದ್ದರು.

[56] ಇವರಲ್ಲಿ ಮಗ್ದಲದ ಮರಿಯಳೂ ಯಾಕೋಬ ಯೋಸೆಯರ ತಾಯಿಯಾದ ಮರಿಯಳೂ ಜೆಬೆದಾಯನ ಮಕ್ಕಳ ತಾಯಿಯೂ ಇದ್ದರು.

[57] ಸಂಜೆಯಾದಾಗ ಅರಿಮಥಾಯ ಊರಿನ ಯೋಸೇಫನೆಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಇವನು ಸಹ ಯೇಸುವಿನ ಶಿಷ್ಯನಾಗಿದ್ದನು.

[58] ಇವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಳ್ಳಲು ಪಿಲಾತನು ಅದನ್ನು ಆತನಿಗೆ ಕೊಡಬೇಕೆಂದು ಅಪ್ಪಣೆಮಾಡಿದನು.

[59] ಯೋಸೇಫನು ದೇಹವನ್ನು ತೆಗೆದುಕೊಂಡು ಅದನ್ನು ಶುದ್ಧವಾದ ನಾರುಮಡಿಯಲ್ಲಿ ಸುತ್ತಿ

[60] ಬಂಡೆಯಲ್ಲಿ ತೋಡಿದ್ದ ಹೊಸ ಸಮಾಧಿಯಲ್ಲಿ ಇಟ್ಟು ಸಮಾಧಿಯ ಬಾಗಿಲಿಗೆ ದೊಡ್ಡ ಕಲ್ಲನ್ನು ಉರುಳಿಸಿ ಹೊರಟುಹೋದನು.

[61] ಮಗ್ದಲದ ಮರಿಯಳೂ ಮತ್ತು ಆ ಇನ್ನೊಬ್ಬ ಮರಿಯಳೂ ಅಲ್ಲಿ ಸಮಾಧಿಗೆ ಎದುರಾಗಿ ಕುಳಿತಿದ್ದರು.

[62] ಮರುದಿನ ಅಂದರೆ ಸಿದ್ಧತೆಯ ದಿನ ಕಳೆದ ಮೇಲೆ ಮುಖ್ಯಯಾಜಕರೂ ಫರಿಸಾಯರೂ ಪಿಲಾತನ ಬಳಿಗೆ ಸೇರಿಬಂದು,

[63] “ಯಜಮಾನನೇ, ಆ ಮೋಸಗಾರನು ಬದುಕಿದ್ದಾಗ ‘ತಾನು ಮೂರು ದಿನದ ಮೇಲೆ ಜೀವದಿಂದ ಏಳುತ್ತೇನೆ’ ಎಂದು ಹೇಳಿದ್ದು ನಮ್ಮ ನೆನಪಿಗೆ ಬಂದಿತು;

[64] ಆದಕಾರಣ ಮೂರನೆಯ ದಿನದ ತನಕ ಸಮಾಧಿಯನ್ನು ಭದ್ರಮಾಡಿ ಕಾಯುವುದಕ್ಕೆ ಅಪ್ಪಣೆಕೊಡಬೇಕು; ಇಲ್ಲದಿದ್ದರೆ ಅವನ ಶಿಷ್ಯರು ಬಂದು ಅವನನ್ನು ಕದ್ದುಕೊಂಡು ಹೋಗಿ ಸತ್ತವನು ಬದುಕಿ ಬಂದಿದ್ದಾನೆ” ಎಂದು ಹೇಳಾರು; ಆಗ ಮೊದಲನೆಯ ವಂಚನೆಗಿಂತ ಕಡೆಯ ವಂಚನೆಯು ಕೆಡುಕಾದೀತು ಅಂದರು.

[65] ಪಿಲಾತನು ಅವರಿಗೆ, “ಕಾವಲುಗಾರರನ್ನು ಕರೆದುಕೊಂಡು ಹೋಗಿ ನಿಮಗೆ ತಿಳಿದ ಹಾಗೆ ಭದ್ರಮಾಡಿ ಕಾಯಿರಿ” ಎಂದು ಹೇಳಲು

[66] ಅವರು ಹೊರಟು ಕಾವಲುಗಾರರನ್ನು ಇರಿಸಿ ಆ ಕಲ್ಲಿಗೆ ಮುದ್ರೆಹಾಕಿ ಸಮಾಧಿಯನ್ನು ಸುಭದ್ರಮಾಡಿದರು.

ಮತ್ತಾಯನು — Chapters