[1] ಆದೇ ವೇಳೆಯಲ್ಲಿ ಶಿಷ್ಯರು ಯೇಸುವಿನ ಬಳಿ ಬಂದು, “ಪರಲೋಕ ರಾಜ್ಯದಲ್ಲಿ ಯಾವನು ದೊಡ್ಡವನು?” ಎಂದು ಕೇಳಿದರು.
[2] ಆತನು ಚಿಕ್ಕ ಮಗುವನ್ನು ಹತ್ತಿರಕ್ಕೆ ಕರೆದು ಅವರ ನಡುವೆ ನಿಲ್ಲಿಸಿ,
[3] ಅವರಿಗೆ, “ನಿಮ್ಮ ಮನಸ್ಸು ಪರಿವರ್ತನೆಕೊಂಡು ಚಿಕ್ಕ ಮಕ್ಕಳಂತೆ ಆಗದೇ ಹೋದರೆ ನೀವು ಪರಲೋಕ ರಾಜ್ಯದಲ್ಲಿ ಪ್ರವೇಶಿಸುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
[4] ಹೀಗಿರುವುದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಾನೇ ತಗ್ಗಿಸಿಕೊಳ್ಳುತ್ತಾನೋ ಅವನೇ ಪರಲೋಕ ರಾಜ್ಯದಲ್ಲಿ ದೊಡ್ಡವನು.
[5] ಇದಲ್ಲದೆ ಯಾವನಾದರೂ ನನ್ನ ಹೆಸರಿನಲ್ಲಿ ಇಂಥ ಒಂದು ಚಿಕ್ಕ ಮಗುವನ್ನು ಸ್ವೀಕರಿಸುವನೋ ನನ್ನನ್ನೇ ಸ್ವೀಕರಿಸುವವನಾಗಿದ್ದಾನೆ.
[6] ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯನ್ನುಂಟುಮಾಡಿದರೆ ಅಂಥವನ ಕೊರಳಿಗೆ ದೊಡ್ಡ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಆಳವಾದ ಸಮುದ್ರದಲ್ಲಿ ಮುಳುಗಿಸಿಬಿಡುವುದು ಅವನಿಗೆ ಉತ್ತಮ.
[7] “ತೊಡಕುಗಳ ನಿಮಿತ್ತ ಲೋಕಕ್ಕೆ ಅಯ್ಯೋ, ತೊಡಕುಗಳು ಬರುವುದು ಅನಿವಾರ್ಯ, ಆದಾಗ್ಯೂ ಯಾವ ಮನುಷ್ಯನಿಂದ ತೊಡಕು ಬರುತ್ತದೋ ಅವನಿಗೆ ಅಯ್ಯೋ.
[8] ನಿನ್ನ ಕೈಯಾಗಲಿ, ನಿನ್ನ ಕಾಲಾಗಲಿ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಡಿದು ಬಿಸಾಡಿಬಿಡು, ಎರಡು ಕೈ, ಎರಡು ಕಾಲು ಉಳ್ಳವನಾಗಿ ನಿತ್ಯ ಬೆಂಕಿಯಲ್ಲಿ ಹಾಕಲ್ಪಡುವುದಕ್ಕಿಂತ ಅಂಗಹೀನನಾಗಿ ಅಥವಾ ಕುಂಟನಾಗಿ ಜೀವದಲ್ಲಿ ಸೇರುವುದು ನಿನಗೆ ಉತ್ತಮ.
[9] ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಿತ್ತು ಬಿಸಾಡಿಬಿಡು, ಎರಡು ಕಣ್ಣುಳ್ಳವನಾಗಿ ಅಗ್ನಿನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿ ಜೀವದಲ್ಲಿ ಸೇರುವುದು ನಿನಗೆ ಉತ್ತಮ.
[10] ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ಪರಲೋಕದಲ್ಲಿ ಇವರ ದೂತರು ನನ್ನ ಸ್ವರ್ಗೀಯ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿರುತ್ತಾರೆ ಎಂದು ನಿಮಗೆ ಹೇಳುತ್ತೇನೆ.
[11] ಮನುಷ್ಯಕುಮಾರನು ಕೆಟ್ಟು ಹೋಗಿರುವುದನ್ನು ಹುಡುಕಿ ರಕ್ಷಿಸುವುದಕ್ಕೆ ಬಂದನು.
[12] “ನಿಮ್ಮಲ್ಲಿ ಒಬ್ಬ ಮನುಷ್ಯನಿಗೆ ನೂರು ಕುರಿಗಳು ಇರಲಾಗಿ ಅವುಗಳಲ್ಲಿ ಒಂದು ಕುರಿಯು ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಬತ್ತೊಂಬತ್ತು ಕುರಿಗಳನ್ನು ಬೆಟ್ಟದಲ್ಲಿ ಬಿಟ್ಟು ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ?
[13] ಅದು ಅವನಿಗೆ ಸಿಕ್ಕಿದರೆ, ತಪ್ಪಿಸಿಕೊಳ್ಳದೆ ಇರುವ ತೊಂಬತ್ತೊಂಬತ್ತು ಕುರಿಗಳಿಗಿಂತ ಆ ಒಂದು ಕುರಿಗೋಸ್ಕರ ತುಂಬಾ ಸಂತೋಷಪಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
[14] ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗಿಹೋಗುವುದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.
[15] “ನಿನ್ನ ಸಹೋದರನು ನಿನ್ನ ವಿರುದ್ಧ ತಪ್ಪು ಮಾಡಿದರೆ, ನೀನು ಹೋಗಿ ಅವನು ಒಬ್ಬನೇ ಇರುವಾಗ ಅವನ ತಪ್ಪನ್ನು ಅವನಿಗೆ ಅರಿವಾಗುವಂತೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ನೀನು ಸಂಪಾದಿಸಿಕೊಂಡಿರುವಿ.
[16] ಆದರೆ ಅವನು ನಿನ್ನ ಮಾತು ಕೇಳದೇ ಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಿರಪಡುವ ಹಾಗೆ ಒಬ್ಬನನ್ನು ಅಥವಾ ಇಬ್ಬರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು.
[17] ಅವನು ಅವರ ಮಾತನ್ನು ಕೇಳದೆ ಹೋದರೆ ಅದನ್ನು ಸಭೆಗೆ ಹೇಳು. ಅವನು ಸಭೆಯ ಮಾತನ್ನು ಕೇಳದೆ ಹೋದರೆ ಅವನು ನಿನಗೆ ಅನ್ಯನಂತೆಯೂ ಸುಂಕದವನಂತೆಯೂ ಇರಲಿ.
[18] “ಭೂಲೋಕದಲ್ಲಿ ನೀವು ಏನೇನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವುದು. ಮತ್ತು ಭೂಲೋಕದಲ್ಲಿ ಏನೇನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
[19] ಇದಲ್ಲದೆ ನಿಮ್ಮಲ್ಲಿ ಇಬ್ಬರು ಬೇಡಿಕೊಳ್ಳತಕ್ಕ ಯಾವುದಾದರು ಒಂದು ವಿಷಯವಾಗಿ ಭೂಲೋಕದಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವುದೆಂದು ನಿಮಗೆ ಹೇಳುತ್ತೇನೆ.
[20] ಏಕೆಂದರೆ ಇಬ್ಬರಾಗಲೀ ಮೂವರಾಗಲೀ ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬರುತ್ತಾರೋ ಅಲ್ಲಿ ಅವರ ಮಧ್ಯದಲ್ಲಿ ನಾನು ಇದ್ದೇನೆ” ಅಂದನು.
[21] ಆಗ ಪೇತ್ರನು ಆತನ ಬಳಿಗೆ ಬಂದು, “ಕರ್ತನೇ ನನ್ನ ಸಹೋದರನು ನನ್ನ ವಿರುದ್ಧ ಪಾಪ ಮಾಡಿದರೆ ನಾನು ಎಷ್ಟು ಸಾರಿ ಅವನನ್ನು ಕ್ಷಮಿಸಬೇಕು? ಏಳು ಸಾರಿಯೋ?” ಎಂದು ಕೇಳಿದನು.
[22] ಯೇಸು ಅವನಿಗೆ, “ಏಳು ಸಾರಿ ಎಂದಲ್ಲ ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.
[23] ಆದುದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.
[24] ಅವನು ಲೆಕ್ಕ ತೆಗೆದುಕೊಳ್ಳುವುದಕ್ಕೆ ಪ್ರಾರಂಭಮಾಡಿದಾಗ ಹತ್ತು ಸಾವಿರ ಬಂಗಾರದ ನಾಣ್ಯ ನೀಡಬೇಕಿದ್ದ ಸೇವಕನನ್ನು ಅವನ ಬಳಿಗೆ ಕರತಂದರು.
[25] ಆ ಸಾಲ ತೀರಿಸುವುದಕ್ಕೆ ಅವನಲ್ಲಿ ಏನೂ ಇಲ್ಲದುದರಿಂದ ಅವನ ಒಡೆಯನು ಅವನನ್ನೂ, ಅವನ ಹೆಂಡತಿ, ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಅದನ್ನು ತೀರಿಸಬೇಕೆಂದು ಅಪ್ಪಣೆ ಮಾಡಿದನು.
[26] ಆ ಸೇವಕನು ಮೊಣಕಾಲೂರಿ ತನ್ನ ತಲೆಯನ್ನು ಬಾಗಿ ಅವನಿಗೆ, ‘ಒಡೆಯನೇ, ನನ್ನ ಮೇಲೆ ತಾಳ್ಮೆಯಿರಲಿ, ನಿನ್ನದೆಲ್ಲವನ್ನೂ ನಾನು ಕೊಟ್ಟು ತೀರಿಸುತ್ತೇನೆಂದು’ ಹೇಳಿದನು.
[27] ಆ ಸೇವಕನ ಒಡೆಯನು ಕನಿಕರಪಟ್ಟು ಅವನನ್ನು ಬಿಡಿಸಿ ಆ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು.
[28] ತರುವಾಯ ಆ ಸೇವಕನು ಹೊರಕ್ಕೆ ಬಂದು ತನಗೆ ನೂರು ಬೆಳ್ಳಿ ನಾಣ್ಯ ಕೊಡಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲ ತೀರಿಸು’ ಎಂದು ಹೇಳಿದನು.
[29] ಆದರೆ ಅವನ ಜೊತೆ ಸೇವಕನು ಮೊಣಕಾಲೂರಿ, ‘ನನ್ನ ಮೇಲೆ ತಾಳ್ಮೆಯಿರಲಿ ನಾನು ತೀರಿಸುತ್ತೇನೆ’ ಎಂದು ಬೇಡಿಕೊಂಡನು.
[30] ಆದರೆ ಅವನು ಒಪ್ಪದೆ ಹೊರಟುಹೋಗಿ ಆ ಸಾಲ ತೀರಿಸುವ ತನಕ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು.
[31] ಅವನ ಜೊತೆ ಸೇವಕರು ನಡೆದ ಸಂಗತಿಯನ್ನು ನೋಡಿ ಬಹಳವಾಗಿ ದುಃಖಪಟ್ಟು ತಮ್ಮ ಒಡೆಯನ ಬಳಿಗೆ ಬಂದು ನಡೆದದ್ದನ್ನೆಲ್ಲಾ ಆತನಿಗೆ ತಿಳಿಸಿದರು.
[32] ಆಗ ಅವನ ಒಡೆಯನು ಅವನನ್ನು ಕರಸಿ, ‘ಓ, ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲಾ ನಾನು ಮನ್ನಿಸಿಬಿಟ್ಟೆನಲ್ಲವೇ?
[33] ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೆ ಸೇವಕನನ್ನು ಕರುಣಿಸಬಾರದಾಗಿತ್ತೇ?’ ಎಂದು ಹೇಳಿ,
[34] ಒಡೆಯನು ಸಿಟ್ಟುಗೊಂಡು ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ ಅವನನ್ನು ಪೀಡಿಸುವವರ ಕೈಗೆ ಒಪ್ಪಿಸಿದನು.
[35] ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸಹೋದರನಿಗೆ ಹೃದಯಪೂರ್ವಕವಾಗಿ ಕ್ಷಮಿಸದೇ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯು ನಿಮಗೂ ಹಾಗೆಯೇ ಮಾಡುವನು” ಅಂದನು.