[1] “ಪರಲೋಕ ರಾಜ್ಯವು ತಮ್ಮ ದೀಪಾರತಿಗಳನ್ನು ತೆಗೆದುಕೊಂಡು ಮದಲಿಂಗನನ್ನು ಸಂಧಿಸುವುದಕ್ಕೆ ಹೊರಟಂತಹ ಹತ್ತು ಮಂದಿ ಕನ್ನಿಕೆಯರಿಗೆ ಹೋಲಿಕೆಯಾಗಿದೆ.
[2] ಅವರಲ್ಲಿ ಐದು ಮಂದಿ ಬುದ್ಧಿವಂತೆಯರು, ಐದು ಮಂದಿ ಬುದ್ಧಿಹೀನರು.
[3] ಅವಿವೇಕಿಗಳು ತಮ್ಮ ದೀಪಾರತಿಗಳನ್ನು ತೆಗೆದುಕೊಂಡರು, ಆದರೆ ತಮ್ಮೊಂದಿಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ.
[4] ಆದರೆ ಬುದ್ಧಿವಂತರಾದ ಕನ್ನಿಕೆಯರು ತಮ್ಮ ದೀಪಾರತಿಗಳೊಂದಿಗೆ ಪಾತ್ರೆಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು.
[5] ಮದಲಿಂಗನು ಬರುವುದಕ್ಕೆ ತಡಮಾಡಲು ಅವರೆಲ್ಲರೂ ತೂಕಡಿಸಿ ನಿದ್ರಿಸಿದರು.
[6] ಆದರೆ ಅರ್ಧರಾತ್ರಿಯಲ್ಲಿ, ‘ಇಗೋ, ಮದಲಿಂಗನು ಬರುತ್ತಿದ್ದಾನೆ ಅವನನ್ನು ಎದುರುಗೊಳ್ಳಲು ಹೊರಡಿರಿ’ ಎಂಬ ಕೂಗು ಕೇಳಿಸಿತು.
[7] ಆಗ ಆ ಕನ್ನಿಕೆಯರೆಲ್ಲರು ಎಚ್ಚೆತ್ತು ತಮ್ಮ ದೀಪಾರತಿಗಳನ್ನು ಸರಿಮಾಡಿಕೊಂಡರು.
[8] ಆಗ ಬುದ್ಧಿಹೀನರಾದ ಕನ್ನಿಕೆಯರು ಬುದ್ಧಿವಂತರಾಗಿದ್ದ ಕನ್ನಿಕೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿರಿ.
[9] ಏಕೆಂದರೆ ನಮ್ಮ ದೀಪಗಳು ಆರಿಹೋಗುತ್ತವೆ’ ಎಂದು ಕೇಳಿದರು. ಅದಕ್ಕೆ ಆ ಬುದ್ಧಿವಂತರಾದ ಕನ್ನಿಕೆಯರು, ಆಗುವುದಿಲ್ಲ ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು’ ಅಂದರು.
[10] ಅವರು ಕೊಂಡುಕೊಳ್ಳುವುದಕ್ಕೆ ಹೊರಟುಹೋದಾಗ ಮದಲಿಂಗನು ಬಂದನು. ಸಿದ್ಧವಾಗಿದ್ದವರು ಅವನ ಸಂಗಡ ಮದುವೆಯ ಮನೆಯೊಳಗೆ ಹೋದರು, ಬಾಗಿಲನ್ನು ಮುಚ್ಚಲಾಯಿತು.
[11] ಅನಂತರ ಉಳಿದ ಕನ್ನಿಕೆಯರು ಸಹ ಬಂದು, ‘ಕರ್ತನೇ, ಕರ್ತನೇ, ನಮಗೆ ಬಾಗಿಲು ತೆರೆಯಿರಿ’ ಅಂದರು.
[12] ಆದರೆ ಆತನು ಅವರಿಗೆ ಉತ್ತರವಾಗಿ, ‘ನಿಮ್ಮನ್ನು ನಾನರಿಯೆನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅಂದನು.
[13] ಏಕೆಂದರೆ ಆ ದಿನವಾದರೂ ಗಳಿಗೆಯಾದರೂ ನಿಮಗೆ ತಿಳಿಯದು, ಆದಕಾರಣ ಎಚ್ಚರವಾಗಿರಿ.
[14] “ದೇವರ ರಾಜ್ಯವು ಹೇಗೆಂದರೆ ದೇಶಾಂತರಕ್ಕೆ ಹೊರಟ್ಟಿದ್ದ ಒಬ್ಬ ಮನುಷ್ಯನು ತನ್ನ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವುದು.
[15] ಅವನು ಒಬ್ಬನಿಗೆ ಐದು ತಲಾಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ತಲಾಂತನ್ನು ವಹಿಸಿಕೊಟ್ಟು ತನ್ನ ಪ್ರಯಾಣಕ್ಕೆ ಹೋದನು.
[16] ತಕ್ಷಣವೇ ಐದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಗಳಿಸಿಕೊಂಡನು.
[17] ಹಾಗೆಯೇ ಎರಡು ತಲಾಂತು ಹೊಂದಿದವನು ಇನ್ನೂ ಎರಡು ಸಂಪಾದಿಸಿಕೊಂಡನು.
[18] ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.
[19] ಬಹುಕಾಲದ ಮೇಲೆ ಆ ಸೇವಕರ ಯಜಮಾನನು ಬಂದು ಅವರಿಂದ ಲೆಕ್ಕ ತೆಗೆದುಕೊಳ್ಳಲು
[20] ಐದು ತಲಾಂತುಗಳು ಹೊಂದಿದವನು ಮುಂದೆ ಬಂದು ಇನ್ನೂ ಐದು ತಲಾಂತುಗಳನ್ನು ತಂದು, ‘ಯಜಮಾನನೇ, ನೀನು ಐದು ತಲಾಂತಗಳನ್ನು ನನಗೆ ಕೊಟ್ಟಿದ್ದೆಯಲ್ಲಾ, ಇಗೋ, ಇನ್ನು ಐದು ತಲಾಂತು ಸಂಪಾದಿಸಿದ್ದೇನೆ’ ಅಂದನು.
[21] ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ; ನೀನು ಸ್ವಲ್ಪ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದಿ; ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಒಡೆಯನ ಸಂತೋಷದಲ್ಲಿ ಸೇರು’ ಅಂದನು.
[22] ಆಗ ಎರಡು ತಲಾಂತು ಹೊಂದಿದವನು ಮುಂದೆ ಬಂದು, ‘ಯಜಮಾನನೇ, ನೀನು ಎರಡು ತಲಾಂತನ್ನು ನನಗೆ ಒಪ್ಪಿಸಿದ್ದೆಯಲ್ಲಾ; ಇಗೋ, ಇನ್ನು ಎರಡು ತಲಾಂತು ಸಂಪಾದಿಸಿದ್ದೇನೆ’ ಅಂದನು.
[23] ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ; ನೀನು ಸ್ವಲ್ಪ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಒಡೆಯನ ಸಂತೋಷದಲ್ಲಿ ಸೇರು’ ಎಂದು ಹೇಳಿದನು.
[24] ತರುವಾಯ ಒಂದು ತಲಾಂತು ಹೊಂದಿದವನು ಸಹ ಮುಂದೆಬಂದು, ‘ಯಜಮಾನನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಆಗಿರುವ ಕಠಿಣ ಮನುಷ್ಯನು ಎಂದು ನಾನು ತಿಳಿದು
[25] ಹೆದರಿ, ಹೊರಟುಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೇ ಸಲ್ಲಿಸುತ್ತಿದ್ದೇನೆ’ ಅಂದನು.
[26] ಆಗ ಅವನ ಯಜಮಾನನು ಅವನಿಗೆ, ‘ಮೈಗಳ್ಳನಾದ ದುಷ್ಟ ಸೇವಕನೇ; ನೀನು ನನ್ನನ್ನು ಬಿತ್ತದಿರುವಲ್ಲಿ ಕೊಯ್ಯುವವನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದಿದ್ದೇಯಾ?
[27] ಹಾಗಾದರೆ, ನೀನು ನನ್ನ ಹಣವನ್ನು ಸಾಹುಕಾರರಲ್ಲಿ ಬಡ್ಡಿಗೆ ಹಾಕಬೇಕಾಗಿತ್ತು; ನಾನು ಬಂದು ನನ್ನದನ್ನು ಬಡ್ಡಿ ಸಹಿತ ಪಡೆದುಕೊಳ್ಳುತ್ತಿದ್ದೆನು ಎಂದು ಹೇಳಿ,
[28] ಅವನಿಂದ ಆ ತಲಾಂತನ್ನು ತೆಗೆದು ಹತ್ತು ತಲಾಂತು ಇರುವ ಸೇವಕನಿಗೆ ಕೊಟ್ಟನು.
[29] ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲ್ಪಡುವುದು, ಅವರಿಗೆ ಇನ್ನೂ ಹೆಚ್ಚಾಗುವುದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು.
[30] ಮತ್ತು ನಿಷ್ಪ್ರಯೋಜಕನಾದ ಈ ಸೇವಕನನ್ನು ಹೊರಗೆ ಕಗ್ಗತ್ತಲೆಗೆ ಹಾಕಿಬಿಡಿರಿ ಎಂದು ಅಪ್ಪಣೆಕೊಟ್ಟನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು.’
[31] “ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಸಮಸ್ತ ದೇವದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು;
[32] ಆಗ ಎಲ್ಲಾ ದೇಶಗಳ ಜನರನ್ನೂ ಆತನ ಸಮ್ಮುಖದಲ್ಲಿ ತಂದು ಸೇರಿಸುವರು. ಕುರುಬನು ಕುರಿಗಳನ್ನೂ, ಆಡುಗಳನ್ನೂ ಬೇರ್ಪಡಿಸುವ ಪ್ರಕಾರ ಆತನು ಅವರನ್ನು ಬೇರ್ಪಡಿಸುವನು.
[33] ಕುರಿಗಳನ್ನು ತನ್ನ ಬಲಗಡೆಯಲ್ಲಿ ಮತ್ತು ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು.
[34] ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವತ್ತಾಗಿ ಪಡೆದುಕೊಳ್ಳಿರಿ.
[35] ನಾನು ಹಸಿದಿದ್ದೆನು, ನನಗೆ ಊಟ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವುದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನಗೆ ಆಶ್ರಯ ಕೊಟ್ಟಿರಿ;
[36] ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವುದಕ್ಕೆ ಕೊಟ್ಟಿರಿ; ಅಸ್ವಸ್ಥನಾಗಿದ್ದಾಗ, ನನ್ನನ್ನು ಆರೈಕೆ ಮಾಡಿದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುವನು.
[37] ಅದಕ್ಕೆ ಉತ್ತರವಾಗಿ ನೀತಿವಂತರು, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನು ಕಂಡು ನಿನಗೆ ಊಟ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವುದಕ್ಕೆ ಕೊಟ್ಟೆವು?
[38] ಯಾವಾಗ ನೀನು ಪರದೇಶಿಯಾಗಿರುವುದನ್ನು ಕಂಡು ಆಶ್ರಯ ನೀಡಿದೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವುದಕ್ಕೆ ಕೊಟ್ಟೆವು?
[39] ಯಾವಾಗ ನೀನು ಅಸ್ವಸ್ಥನಾಗಿದ್ದಾಗ ಅಥವಾ ಸೆರೆಮನೆಯಲ್ಲಿ ಇದ್ದುದನ್ನು ಕಂಡು ನಿನ್ನನ್ನು ನೋಡುವುದಕ್ಕೆ ಬಂದೆವು’ ಎಂದು ಕೇಳುವರು.
[40] ಅದಕ್ಕೆ ಉತ್ತರವಾಗಿ ಅರಸನು, ‘ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು.
[41] ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.
[42] ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ.
[43] ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಡಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವುದಕ್ಕೆ ಬರಲಿಲ್ಲವೆಂದು’ ಹೇಳುವನು.
[44] ಅದಕ್ಕೆ ಉತ್ತರವಾಗಿ ಅವರೂ ಸಹ, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನೂ, ನೀನು ಬಾಯಾರಿದ್ದನ್ನೂ, ನೀನು ಪರದೇಶಿಯಾಗಿದ್ದನ್ನೂ, ಬಟ್ಟೆಯಿಲ್ಲದವನಾಗಿದ್ದನ್ನೂ, ಅಸ್ವಸ್ಥನಾಗಿದ್ದುದನ್ನೂ, ಸೆರೆಮನೆಯಲ್ಲಿದ್ದುದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು?’ ಅನ್ನುವರು.
[45] ಆಗ ಆತನು ಉತ್ತರವಾಗಿ ಅವರಿಗೆ, ‘ನೀವು ಈ ಕೇವಲ ಅಲ್ಪರಾದವರಲ್ಲಿ ಒಬ್ಬನಿಗೆ ಏನನ್ನು ಮಾಡದೆ ಹೋದಿರೋ ಅದನ್ನು ನನಗೂ ಮಾಡದೆ ಹೋದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು.
[46] ಮತ್ತು ಅನೀತಿವಂತರಾದ ಇವರು ನಿತ್ಯದಂಡನೆಗೆ ಹೋಗುವರು ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು” ಎಂದು ಹೇಳಿದನು.