[1] ಆದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸಮುದ್ರದ ದಡದಲ್ಲಿ ಕುಳಿತುಕೊಂಡನು.
[2] ಬಹಳ ಜನರ ಗುಂಪು ಆತನ ಬಳಿಗೆ ಸೇರಿಬಂದುದರಿಂದ ಆತನು ದೋಣಿ ಹತ್ತಿ ಕುಳಿತುಕೊಂಡನು. ಆ ಜನರೆಲ್ಲರೂ ದಡದಲ್ಲಿ ನಿಂತಿದ್ದರು.
[3] ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಹೇಳಿದನು.
[4] “ಕೇಳಿರಿ, ಬಿತ್ತುವವನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಅವುಗಳನ್ನು ತಿಂದು ಬಿಟ್ಟವು.
[5] ಕೆಲವು ಬೀಜಗಳು ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು. ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗ ಮೊಳೆತವು.
[6] ಆದರೆ ಬಿಸಿಲೇರಿದಾಗ ಬೇರಿಲ್ಲದ ಕಾರಣ ಬಾಡಿ ಒಣಗಿಹೋದವು.
[7] ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು, ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
[8] ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಕೆಲವು ನೂರರಷ್ಟು ಕೆಲವು ಅರವತ್ತರಷ್ಟು, ಕೆಲವು ಮೂವತ್ತರಷ್ಟು ಫಲವನ್ನು ಕೊಟ್ಟವು.
[9] ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಅಂದನು.
[10] ತರುವಾಯ ಆತನ ಶಿಷ್ಯರು ಬಂದು, “ಏಕೆ ಸಾಮ್ಯರೂಪವಾಗಿ ಜನರ ಗುಂಪಿನ ಸಂಗಡ ಮಾತನಾಡುತ್ತಿ?” ಎಂದು ಕೇಳಿದರು.
[11] ಅದಕ್ಕಾತನು ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ಪರಲೋಕ ರಾಜ್ಯದ ಮರ್ಮಗಳನ್ನು ತಿಳಿಯುವ ಭಾಗ್ಯವು ನಿಮಗೆ ಕೊಟ್ಟಿದೆ ಅವರಿಗೆ ಕೊಟ್ಟಿಲ್ಲ.
[12] ಏಕೆಂದರೆ ಇದ್ದವನಿಗೆ ಕೊಡಲ್ಪಡುವುದು ಅವನಿಗೆ ಇನ್ನೂ ಹೆಚ್ಚು ಸಮೃದ್ಧಿಯಾಗುವುದು ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು.
[13] ನಾನು ಅವರ ಸಂಗಡ ಸಾಮ್ಯರೂಪವಾಗಿ ಮಾತನಾಡುವುದಕ್ಕೆ ಕಾರಣವೇನೆಂದರೆ, ಅವರು ಕಂಡರೂ ಕಾಣುವುದಿಲ್ಲ. ಅವರು ಕೇಳಿದರೂ ನಿಜವಾಗಿಯೂ ಆಲಿಸುವುದಿಲ್ಲ ಮತ್ತು ತಿಳಿದುಕೊಳ್ಳುವುದಿಲ್ಲ.
[14] “ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ. ಅದೇನೆಂದರೆ, ‘ನೀವು ಕೇಳುತ್ತೀರಿ, ಕೇಳಿದರೂ ತಿಳಿದುಕೊಳ್ಳುವುದೇ ಇಲ್ಲ. ನೀವು ನೋಡುತ್ತೀರಿ, ನೋಡಿದರೂ ಗ್ರಹಿಸುವುದೇ ಇಲ್ಲ.
[15] ಈ ಜನರ ಹೃದಯವು ಮಂಕಾಯಿತು. ಇವರ ಕಿವಿಗಳು ಮಂದವಾದವು. ಇವರು ಕಣ್ಣು ಮುಚ್ಚಿಕೊಂಡಿದ್ದಾರೆ. ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ, ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆ ಹೊಂದಬಾರದೆಂದು ನಿರ್ಧಾರ ಮಾಡಿಕೊಂಡಿದ್ದಾರೆ’” ಎಂಬುದೇ.
[16] “ಆದರೆ ನೀವು ಧನ್ಯರು ಏಕೆಂದರೆ ನಿಮ್ಮ ಕಣ್ಣುಗಳು ಕಾಣುತ್ತವೆ, ನಿಮ್ಮ ಕಿವಿಗಳು ಕೇಳುತ್ತವೆ.
[17] ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ನೋಡುತ್ತಿರುವ ಕಾರ್ಯಗಳನ್ನು ಬಹು ಮಂದಿ ಪ್ರವಾದಿಗಳೂ, ನೀತಿವಂತರೂ ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಾಗಲಿಲ್ಲ. ನೀವು ಕೇಳುತ್ತಿರುವ ಸಂಗತಿಗಳನ್ನು ಅವರು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಾಗಲಿಲ್ಲ.
[18] “ಬಿತ್ತುವವನ ವಿಷಯವಾದ ಸಾಮ್ಯದ ಅರ್ಥವನ್ನು ಕೇಳಿರಿ.
[19] ಯಾವನಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ತಿಳಿದುಕೊಳ್ಳದೆ ಇದ್ದರೆ ದುಷ್ಟನು ಬಂದು ಆತನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಹಾಕುತ್ತಾನೆ. ಇವನೇ ಬೀಜ ಬಿದ್ದ ದಾರಿಯ ಮಗ್ಗುಲಾಗಿರುವನು.
[20] ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟವನು ಯಾರೆಂದರೆ, ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸಿದರೂ,
[21] ತನಗೆ ಬೇರಿಲ್ಲದ ಕಾರಣ ಇವನು ಸ್ವಲ್ಪ ಕಾಲ ಮಾತ್ರವೇ ಇದ್ದು ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಕೂಡಲೆ ಎಡವಿ ಬೀಳುತ್ತಾನೆ.
[22] ಮುಳ್ಳುಗಿಡಗಳ ನೆಲದಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಯೂ, ಐಶ್ವರ್ಯದ ಮೋಸತನವೂ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ಫಲವನ್ನು ಕೊಡದೇ ಇರುತ್ತಾನೆ.
[23] ಒಳ್ಳೆಯ ಮಣ್ಣಿನಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿ ತಿಳಿದುಕೊಂಡು ಫಲವಂತನಾಗಿ ನೂರರಷ್ಟಾಗಲಿ, ಅರವತ್ತರಷ್ಟಾಗಲಿ, ಮೂವತ್ತರಷ್ಟಾಗಲಿ ಫಲವನ್ನು ಕೊಡುವವನೇ” ಎಂದು ಹೇಳಿದನು.
[24] ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ.
[25] ಆದರೆ ಜನರು ನಿದ್ರೆ ಮಾಡುವ ಸಮಯದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಕಳೆಯನ್ನು ಬಿತ್ತಿ ಹೋದನು.
[26] ಗೋದಿಯು ಬೆಳೆದು ಫಲ ಬಿಟ್ಟಾಗ ಕಳೆಯು ಸಹ ಕಾಣ ಬಂದಿತು.
[27] ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು, ‘ಅಯ್ಯಾ ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ್ದಿಯಲ್ಲಾ ಕಳೆ ಎಲ್ಲಿಂದ ಬಂದಿತು?’ ಎಂದು ಕೇಳಿದರು.
[28] ಅದಕ್ಕೆ ಅವನು, ‘ಇದು ವೈರಿ ಮಾಡಿದ ಕೆಲಸ’ ಎಂದು ಹೇಳಿದನು, ಅದಕ್ಕೆ ಆಳುಗಳು ಅವನಿಗೆ, ‘ಹಾಗಾದರೆ ನಾವು ಹೋಗಿ ಅದನ್ನು ಕಿತ್ತುಹಾಕುವುದು ನಿಮಗೆ ಇಷ್ಟವಿದೆಯೋ?’ ಎಂದು ಕೇಳಿದರು.
[29] ಅವರಿಗೆ ಅವನು, ‘ಬೇಡ, ಕಳೆಯನ್ನು ಕೀಳುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ.
[30] ಸುಗ್ಗಿ ಕಾಲದ ತನಕ ಎರಡೂ ಒಟ್ಟಿಗೆ ಬೆಳೆಯಲಿ. ಸುಗ್ಗಿ ಕಾಲದಲ್ಲಿ ನಾನು ಕೊಯ್ಯುವವರಿಗೆ, ಮೊದಲು ಕಳೆಯನ್ನು ಕಿತ್ತು ತೆಗೆದು ಹೊರೆಕಟ್ಟಿ ಅದನ್ನು ಸುಡುವುದಕ್ಕೆ ಹಾಕಿ, ಗೋದಿಯನ್ನು ಕೂಡಿಸಿ ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು’” ಅಂದನು.
[31] ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು.
[32] ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. ಆದರೂ ಬೆಳೆದ ಮೇಲೆ ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ” ಎಂದು ಹೇಳಿದನು.
[33] ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು.”
[34] ಯೇಸು ಈ ಸಂಗತಿಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು. ಸಾಮ್ಯವಿಲ್ಲದೆ ಏನನ್ನೂ ಹೇಳಲಿಲ್ಲ.
[35] ಹೀಗೆ, “ನಾನು ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು; ಲೋಕದ ಆರಂಭದಿಂದ ಮರೆಯಾಗಿದ್ದವುಗಳನ್ನು ಗೋಚರಪಡಿಸುವೆನು” ಎಂದು ಪ್ರವಾದಿಯ ಮುಖಾಂತರ ನುಡಿದ ಮಾತು ನೆರವೇರಿತು.
[36] ಅನಂತರ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಹೋದನು. ಆಗ ಆತನ ಶಿಷ್ಯರು ಆತನ ಬಳಿಗೆ ಬಂದು, ಹೊಲದ ಕಳೆಯ ಸಾಮ್ಯದ ಅರ್ಥವನ್ನು ನಮಗೆ ವಿವರಿಸು ಅಂದರು.
[37] ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ಒಳ್ಳೆಯ ಬೀಜವನ್ನು ಬಿತ್ತುವವನು ಮನುಷ್ಯಕುಮಾರನು.
[38] ಹೊಲವೆಂದರೆ ಈ ಲೋಕ. ಒಳ್ಳೆಯ ಬೀಜವೆಂದರೆ ರಾಜ್ಯದ ಮಕ್ಕಳು.
[39] ಕಳೆಯೆಂದರೆ ದುಷ್ಟನ ಮಕ್ಕಳು. ಅದನ್ನು ಬಿತ್ತುವ ವೈರಿ ಎಂದರೆ ಸೈತಾನನು. ಸುಗ್ಗಿಯ ಕಾಲವೆಂದರೆ ಯುಗದ ಸಮಾಪ್ತಿ. ಕೊಯ್ಯುವವರು ಅಂದರೆ ದೇವದೂತರು.
[40] ಹೀಗಿರಲಾಗಿ ಹೇಗೆ ಕಳೆಯನ್ನು ಆರಿಸಿ ತೆಗೆದು ಸುಟ್ಟುಬಿಡುತ್ತಾರೋ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಸಂಭವಿಸುವುದು.
[41] ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದೊಳಗಿಂದ ಪಾಪಕ್ಕೆ ಕಾರಣವಾದವರೆಲ್ಲರನ್ನೂ ಅಧರ್ಮಿಗಳನ್ನೂ ಕೂಡಿಸಿ ಬೆಂಕಿ ಕೊಂಡದಲ್ಲಿ ಹಾಕುವರು.
[42] ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು
[43] ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದ್ದಕ್ಕೆ ಕಿವಿಗಳುಳ್ಳವನು ಕೇಳಿಸಿಕೊಳ್ಳಲಿ ಅಂದನು.
[44] “ಪರಲೋಕ ರಾಜ್ಯವು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಟ್ಟು. ತನಗಾದ ಸಂತೋಷದಿಂದ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.
[45] ಮತ್ತು ಪರಲೋಕ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
[46] ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.
[47] “ಪರಲೋಕ ರಾಜ್ಯವು ಸಮುದ್ರದಲ್ಲಿ ಎಲ್ಲಾ ತರವಾದ ಮೀನುಗಳನ್ನು ಹಿಡಿಯುವ ಒಂದು ಬಲೆಗೆ ಹೋಲಿಕೆಯಾಗಿದೆ.
[48] ಅದು ತುಂಬಿದ ಮೇಲೆ ಬೆಸ್ತರು ಅದನ್ನು ದಡಕ್ಕೆ ಎಳೆದುತಂದು ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿಬಿಡುವರು.
[49] ಹಾಗೆಯೇ ಯುಗದ ಸಮಾಪ್ತಿಯಲ್ಲಿ ಆಗುವುದು. ದೇವದೂತರು ಹೊರಟು ಬಂದು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆ ಮಾಡಿ ಅವರನ್ನು ಬೆಂಕಿಯ ಕೊಂಡದಲ್ಲಿ ಹಾಕುವರು.
[50] ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
[51] “ಈ ಎಲ್ಲಾ ಸಂಗತಿಗಳು ನಿಮಗೆ ಅರ್ಥವಾಯಿತೋ” ಎಂದು ಕೇಳಲು, ಶಿಷ್ಯರು, “ಅರ್ಥವಾಯಿತು” ಅಂದರು.
[52] ಆಗ ಆತನು ಅವರಿಗೆ, “ಹೀಗಿರಲಾಗಿ ಪರಲೋಕ ರಾಜ್ಯದ ವಿಷಯವಾಗಿ ಉಪದೇಶಹೊಂದಿ ಶಿಕ್ಷಿತನಾದ ಪ್ರತಿಯೊಬ್ಬ ಶಾಸ್ತ್ರೋಪದೇಶಕನು, ತನ್ನ ಬೊಕ್ಕಸದೊಳಗಿನಿಂದ ಹೊಸ ವಸ್ತುಗಳನ್ನೂ, ಹಳೆಯ ವಸ್ತುಗಳನ್ನೂ ಹೊರಗೆ ತೆಗೆಯುವಂಥ ಮನೆ ಯಜಮಾನನಿಗೆ ಹೋಲಿಕೆಯಾಗಿದ್ದಾನೆ” ಎಂದು ಹೇಳಿದನು.
[53] ಯೇಸು ಈ ಸಾಮ್ಯಗಳನ್ನು ಹೇಳಿ ಮುಗಿಸಿದ ಮೇಲೆ ಅಲ್ಲಿಂದ ಹೊರಟು ಹೋದನು.
[54] ತರುವಾಯ ಆತನು ತನ್ನ ಸ್ವಂತ ಊರಿಗೆ ಬಂದು ಅವರ ಸಭಾಮಂದಿರದಲ್ಲಿ ಜನರಿಗೆ ಉಪದೇಶಮಾಡುತ್ತಿದ್ದನು. ಅವರು ಅದನ್ನು ಕೇಳಿ ಆಶ್ಚರ್ಯ ಪಟ್ಟು, “ಇವನಿಗೆ ಈ ಜ್ಞಾನವೂ ಈ ಮಹತ್ಕಾರ್ಯಗಳೂ ಎಲ್ಲಿಂದ ಬಂದಿದ್ದಾವು?
[55] ಇವನು ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳೆಂಬುವವಳಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವರು ಇವನ ತಮ್ಮಂದಿರಲ್ಲವೇ?
[56] ಇವನ ತಂಗಿಯರೆಲ್ಲರೂ ನಮ್ಮಲ್ಲಿ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವೂ ಇವನಿಗೆ ಎಲ್ಲಿಂದ ಬಂದಿದ್ದಾವು?” ಎಂದು ಅಂದುಕೊಂಡು ಆತನ ವಿಷಯದಲ್ಲಿ ತಿರಸ್ಕಾರವುಳ್ಳವರಾದರು.
[57] ಆದರೆ ಯೇಸುವು ಅವರಿಗೆ “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು. ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ” ಅಂದನು.
[58] ಅವರ ಅಪನಂಬಿಕೆಯ ನಿಮಿತ್ತ ಆತನು ಅಲ್ಲಿ ಹೆಚ್ಚು ಮಹತ್ಕಾರ್ಯಗಳನ್ನು ಮಾಡಲಿಲ್ಲ.