Skip to content
Opens in a new window
Listen to this chapter • 4:06

[1] “ತೀರ್ಪುಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವುದಿಲ್ಲ.

[2] ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವುದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.

[3] “ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಧೂಳನ್ನು ಏಕೆ ಯೋಚಿಸುವೇ?

[4] ನೀನು ನಿನ್ನ ಸಹೋದರನಿಗೆ, ‘ನಿನ್ನ ಕಣ್ಣಿನೊಳಗಿನಿಂದ ಧೂಳನ್ನು ತೆಗೆಯುತ್ತೇನೆ ಬಾ’ ಎಂದು ಏಕೆ ಹೇಳುವೇ? ನಿನ್ನ ಕಣ್ಣಿನಲ್ಲೇ ತೊಲೆ ಇದೆಯಲ್ಲಾ.

[5] ಕಪಟಿಯೇ! ಮೊದಲು ನಿನ್ನ ಕಣ್ಣಿನೊಳಗಿನಿಂದ ತೊಲೆಯನ್ನು ತೆಗೆದುಹಾಕಿದರೆ; ನಿನ್ನ ಸಹೋದರನ ಕಣ್ಣಿನೊಳಗಿನಿಂದ ಧೂಳನ್ನು ತೆಗೆಯವುದಕ್ಕೆ ನಿನಗೆ ಸ್ಪಷ್ಟವಾಗಿ ಕಾಣಿಸುವುದು.

[6] “ಪವಿತ್ರವಾದುದನ್ನು ನಾಯಿಗಳಿಗೆ ನೀಡಬೇಡಿರಿ; ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿರಿ. ಬಹುಶಃ ಅವು ತಮ್ಮ ಕಾಲಿನಿಂದ ಅವುಗಳನ್ನು ತುಳಿದು ಹಿಂತಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು.

[7] “ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು; ಹುಡುಕಿರಿ, ನಿಮಗೆ ಸಿಕ್ಕುವುದು; ತಟ್ಟಿರಿ, ನಿಮಗೆ ತೆರೆಯುವುದು;

[8] ಏಕೆಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನೂ ಹೊಂದುವನು, ಹುಡುಕುವವನಿಗೆ ಸಿಕ್ಕುವುದು, ತಟ್ಟುವವನಿಗೆ ತೆರೆಯಲ್ಪಡುವುದು.

[9] “ನಿಮ್ಮಲ್ಲಿ ಯಾವನು ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವನೋ?

[10] ಮೀನು ಕೇಳಿದರೆ ಹಾವನ್ನು ಕೊಡುವನೋ?

[11] ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವರಗಳನ್ನು ಕೊಡುವನಲ್ಲವೇ?

[12] ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ ಇದೇ ಆಗಿದೆ.

[13] “ಇಕ್ಕಟ್ಟಾದ ಬಾಗಿಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಿಲು ದೊಡ್ಡದು, ದಾರಿ ವಿಶಾಲವಾದುದು; ಅದರಲ್ಲಿ ಹೋಗುವವರು ಬಹು ಜನ.

[14] ನಿತ್ಯ ಜೀವಕ್ಕೆ ಹೋಗುವ ಬಾಗಿಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.

[15] “ಕುರಿವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರಿ; ನಿಜವಾಗಿಯೂ ಅವರು ಕಿತ್ತುತಿನ್ನುವ ತೋಳಗಳೇ.

[16] ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳುಗಿಡಗಳಲ್ಲಿ ದ್ರಾಕ್ಷಿಹಣ್ಣುಗಳನ್ನೂ ದತ್ತೂರಿ ಗಿಡಗಳಿಂದ ಅಂಜೂರಗಳನ್ನೂ ಸಂಗ್ರಹಿಸುವುದುಂಟೇ?

[17] ಹಾಗೆಯೇ ಒಳ್ಳೆಯಮರಗಳೆಲ್ಲಾ ಒಳ್ಳೆಯ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವುದು. ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡಲಾರದು;

[18] ಹುಳುಕು ಮರವು ಒಳ್ಳೆಯ ಫಲವನ್ನು ಕೊಡಲಾರದು.

[19] ಒಳ್ಳೆಯ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ.

[20] ಹೀಗಿರಲಾಗಿ ಅವರ ಫಲಗಳಿಂದಲೇ ಅವರನ್ನು ತಿಳಿದುಕೊಳ್ಳುವಿರಿ.

[21] “ನನ್ನನ್ನು ಕರ್ತನೇ, ಕರ್ತನೇ ಅನ್ನುವವರೆಲ್ಲರು ಪರಲೋಕ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನು ಮಾತ್ರ ಪರಲೋಕ ರಾಜ್ಯಕ್ಕೆ ಪ್ರವೇಶಿಸುವನು.

[22] ಕರ್ತನೇ, ಕರ್ತನೇ, ನಿನ್ನ ಹೆಸರಿನಲ್ಲಿ ನಾವು ಪ್ರವಾದನೆ ಮಾಡಲಿಲ್ಲವೇ? ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ತೀರ್ಪಿನ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು.

[23] ಆಗ ನಾನು ಅವರಿಗೆ, ‘ನಿಮ್ಮ ಗುರುತೇ ನನಗಿಲ್ಲ; ದುಷ್ಟತನ ಮಾಡುವ ನೀವು, ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳಿಬಿಡುವೆನು.

[24] “ಆದುದರಿಂದ, ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿವಂತನಿಗೆ ಹೋಲುವನು.

[25] ಮನೆ ಕಟ್ಟಿದ ಮೇಲೆ ಮಳೆ ಸುರಿಯಿತು; ಪ್ರವಾಹವು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆದಾಗ್ಯೂ ಅದರ ಅಸ್ತಿವಾರವು ಬಂಡೆಯ ಮೇಲಿದ್ದುದರಿಂದ ಅದು ಬೀಳಲಿಲ್ಲ.

[26] ಆದರೆ ಈ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದ ಪ್ರತಿಯೊಬ್ಬನು ಮರಳಿನ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಹೀನನಿಗೆ ಸಮನಾಗಿರುವನು.

[27] ಮನೆ ಕಟ್ಟಿದ ಮೇಲೆ ಮಳೆ ಸುರಿಯಿತು; ಪ್ರವಾಹವು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಆ ಮನೆ ಸಂಪೂರ್ಣವಾಗಿ ಕುಸಿದುಬಿತ್ತು. ಆ ಕುಸಿತ ಅಗಾಧವಾದುದು.

[28] “ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ ಆ ಜನರ ಗುಂಪು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟರು.

[29] ಏಕೆಂದರೆ ಆತನು ಅವರ ಶಾಸ್ತ್ರಿಗಳಂತೆ ಉಪದೇಶಿಸದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶಮಾಡುತ್ತಿದ್ದನು.

ಮತ್ತಾಯನು — Chapters