[1] ಯೇಸು ದೋಣಿಯನ್ನು ಹತ್ತಿ ಸಮುದ್ರವನ್ನು ದಾಟಿ ತನ್ನ ಊರಿಗೆ ಬಂದನು.
[2] ಅಲ್ಲಿಗೆ ಯೇಸು ಬಂದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ರೋಗಿಯನ್ನು ಹೊತ್ತುಕೊಂಡು ಬಂದವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯು ರೋಗಿಗೆ, “ಮಗನೇ ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
[3] ಅಲ್ಲಿದ್ದ ಶಾಸ್ತ್ರಿಗಳಲ್ಲಿ ಕೆಲವರು, “ಇವನು ದೇವದೂಷಣೆ ಮಾಡುತ್ತಾನೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು.
[4] ಯೇಸು ಅವರ ಆಲೋಚನೆಗಳನ್ನು ತಿಳಿದು, “ನೀವು ಏಕೆ ನಿಮ್ಮ ಮನಸ್ಸಿನಲ್ಲಿ ದುರಾಲೋಚನೆಯನ್ನು ಮಾಡುತ್ತಿದ್ದೀರಿ?
[5] ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಅನ್ನುವುದೋ?
[6] ಅಥವಾ ‘ಎದ್ದು ನಡೆ’ ಅನ್ನುವದೋ? ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಅಂದನು.
[7] ಆಗ ಅವನು ಎದ್ದು ತನ್ನ ಮನೆಗೆ ಹೊರಟುಹೋದನು.
[8] ಜನರು ಇದನ್ನು ನೋಡಿ ಆಶ್ಚರ್ಯಚಕಿತರಾಗಿ, ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು.
[9] ಯೇಸು ಅಲ್ಲಿಂದ ಹಾದು ಹೋಗುತ್ತಿರುವಾಗ, ಸುಂಕ ಸಂಗ್ರಹಣೆ ಕಟ್ಟೆಯಲ್ಲಿ ಕುಳಿತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.
[10] ಅನಂತರ ಯೇಸು ಅವನ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಬಹು ಮಂದಿ ಸುಂಕದವರೂ ಪಾಪಿಗಳೂ ಬಂದು ಯೇಸುವಿನ ಮತ್ತು ಆತನ ಶಿಷ್ಯರ ಪಂಕ್ತಿಯಲ್ಲೇ ಕುಳಿತುಕೊಂಡರು.
[11] ಅದನ್ನು ನೋಡಿದ ಫರಿಸಾಯರು ಆತನ ಶಿಷ್ಯರನ್ನು, “ನಿಮ್ಮ ಗುರುವು ಸುಂಕದವರು ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು.
[12] ಯೇಸು ಅದನ್ನು ಕೇಳಿ, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು.
[13] ನೀವು ಹೋಗಿ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದವನಲ್ಲ, ಆದರೆ ಪಾಪಿಗಳನ್ನು ಕರೆಯುವುದಕ್ಕೆ ಬಂದವನು” ಅಂದನು.
[14] ನಂತರ ಯೋಹಾನನ ಶಿಷ್ಯರು ಆತನ ಬಳಿಗೆ ಬಂದು, “ಫರಿಸಾಯರೂ ನಾವೂ ಬಹಳಸಾರಿ ಉಪವಾಸಮಾಡುತ್ತೇವೆ; ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ” ಎಂದು ಕೇಳಿದರು. ಅದಕ್ಕೆ ಯೇಸು ಅವರಿಗೆ,
[15] “ಮದುವೆಯ ಅತಿಥಿಗಳು ತಮ್ಮ ಸಂಗಡ ಮದಲಿಂಗನು ಇರುವ ತನಕ ದುಃಖಪಡುವರೇ? ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಂಡುಹೋಗುವ ಕಾಲ ಬರುತ್ತದೆ; ಆಗ ಅವರು ಉಪವಾಸಮಾಡುವರು. ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ವಸ್ತ್ರಕ್ಕೆ ತ್ಯಾಪೆ ಹಚ್ಚುವುದಿಲ್ಲ; ಹಾಗೆ ಹಚ್ಚಿದರೆ
[16] ಆ ತ್ಯಾಪೆಯು ಹಳೇ ವಸ್ತ್ರವನ್ನು ಹಿಂಜುವುದರಿಂದ ಹರಕು ಹೆಚ್ಚಾಗುವುದು.
[17] ಇದಲ್ಲದೆ ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಹಾಕಿಡುವುದಿಲ್ಲ; ಇಟ್ಟರೆ ಬುದ್ದಲಿಗಳು ಒಡೆದು ದ್ರಾಕ್ಷಾರಸವು ಚೆಲ್ಲಿಹೋಗುವುದಲ್ಲದೆ, ಬುದ್ದಲಿಗಳು ನಾಶವಾಗುವವು; ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ, ಆಗ ಎರಡೂ ಸಂರಕ್ಷಿಸಲ್ಪಡುವವು” ಎಂದು ಹೇಳಿದನು.
[18] ಹೀಗೆ ಯೇಸು ಅವರೊಂದಿಗೆ ಮಾತನಾಡುತ್ತಿರುವಾಗ ಒಬ್ಬ ಅಧಿಕಾರಿಯು ಬಂದು ಆತನಿಗೆ ಅಡ್ಡಬಿದ್ದು, “ನನ್ನ ಮಗಳು ಈಗಲೇ ತೀರಿಹೋದಳು; ಆದಾಗ್ಯೂ ನೀನು ಬಂದು ಆಕೆಯ ಮೇಲೆ ಕೈ ಇಟ್ಟರೆ ಬದುಕುವಳು” ಎಂದು ಬೇಡಿಕೊಂಡನು.
[19] ಯೇಸು ಎದ್ದು ಆ ಅಧಿಕಾರಿಯ ಹಿಂದೆ ಹೋಗುವಾಗ ಆತನ ಶಿಷ್ಯರು ಸಹ ಆತನನ್ನು ಹಿಂಬಾಲಿಸಿದರು.
[20] ಆಗ ಹನ್ನೆರಡು ವರ್ಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು,
[21] “ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಸ್ವಸ್ಥಳಾಗುವೆ ಎಂದು ಮನಸ್ಸಿನಲ್ಲಿ” ಅಂದುಕೊಂಡು ಹಿಂದಿನಿಂದ ಬಂದು ಯೇಸುವಿನ ಉಡುಪಿನ ಅಂಚನ್ನು ಮುಟ್ಟಿದಳು.
[22] ಆಗ ಯೇಸು ಹಿಂತಿರುಗಿ ಆಕೆಯನ್ನು ನೋಡಿ, “ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು” ಅಂದನು. ಆ ಕ್ಷಣವೇ ಆ ಹೆಂಗಸು ಸ್ವಸ್ಥಳಾದಳು.
[23] ಯೇಸು ಆ ಅಧಿಕಾರಿಯ ಮನೆಗೆ ಬಂದಾಗ ಕೊಳಲು ಊದುವವರನ್ನೂ ಗದ್ದಲ ಮಾಡುವ ಜನರ ಗುಂಪನ್ನೂ ಕಂಡು ಅವರಿಗೆ,
[24] “ಹೊರಗೆ ಹೋಗಿರಿ; ಹುಡುಗಿ ಸತ್ತಿಲ್ಲ ನಿದ್ರಿಸುತ್ತಿದ್ದಾಳೆ” ಅಂದನು. ಅದಕ್ಕೆ ಅವರು ಆತನನ್ನು ಪರಿಹಾಸ್ಯ ಮಾಡಿದರು.
[25] ಜನರನ್ನು ಹೊರಕ್ಕೆ ಕಳುಹಿಸಿದ ಮೇಲೆ ಆತನು ಒಳಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆ ಎದ್ದಳು.
[26] ಈ ಸುದ್ದಿ ಆ ದೇಶದೊಳಗೆಲ್ಲಾ ಹಬ್ಬಿತು.
[27] ಯೇಸು ಅಲ್ಲಿಂದ ಹಾದುಹೋಗುತ್ತಿರುವಾಗ ಇಬ್ಬರು ಕುರುಡರು, “ದಾವೀದ ಕುಮಾರನೇ, ನಮ್ಮನ್ನು ಕರುಣಿಸು” ಎಂದು ಕೂಗುತ್ತಾ ಆತನನ್ನು ಹಿಂಬಾಲಿಸಿದರು.
[28] ಯೇಸು ಮನೆಗೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು. ಯೇಸು ಅವರನ್ನು, “ನಾನು ಇದನ್ನು ಮಾಡಬಲ್ಲೆನೆಂಬುದನ್ನು ನೀವು ನಂಬುತ್ತೀರೋ” ಎಂದು ಕೇಳಿದ್ದಕ್ಕೆ, ಅವರು “ಹೌದು, ಕರ್ತನೇ, ನಂಬುತ್ತೇವೆ” ಅಂದರು.
[29] ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ, “ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ” ಅಂದನು. ಆಗ ಅವರ ಕಣ್ಣುಗಳು ತೆರೆಯಲ್ಪಟ್ಟವು.
[30] ನಂತರ ಯೇಸು ಅವರಿಗೆ, “ಇದು ಯಾರಿಗೂ ತಿಳಿಯದಂತೆ ನೋಡಿಕೊಳ್ಳಿರಿ” ಎಂದು ಕಟ್ಟುನಿಟ್ಟಾಗಿ ಆದೇಶಿಸಿದನು.
[31] ಆದರೆ ಅವರು ಹೊರಟುಹೋಗಿ ಆ ದೇಶದೊಳಗೆಲ್ಲಾ ಆತನ ಸುದ್ದಿಯನ್ನು ಹಬ್ಬಿಸಿದರು.
[32] ಅವರು ಹೊರಟುಹೋಗುತ್ತಿರುವಾಗ ದೆವ್ವಹಿಡಿದ ಒಬ್ಬ ಮೂಕನನ್ನು ಯೇಸುವಿನ ಬಳಿಗೆ ಕರೆತಂದರು.
[33] ದೆವ್ವ ಬಿಡಿಸಿದ ಮೇಲೆ ಮೂಕನಾಗಿದ್ದ ಅವನು ಮಾತನಾಡುವವನಾದನು. ಅದಕ್ಕೆ ಜನರು, “ಇಸ್ರಾಯೇಲಿನಲ್ಲಿ ಇಂಥ ಕಾರ್ಯವನ್ನು ಇದುವರೆಗೂ ಯಾರೂ ನೋಡಲಿಲ್ಲವೆಂದು” ಆಶ್ಚರ್ಯಚಕಿತರಾದರು.
[34] ಆದರೆ ಫರಿಸಾಯರು, “ಇವನು ದೆವ್ವಗಳ ಒಡೆಯನ ಸಹಾಯದಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಎಂದು ಹೇಳಿದರು.
[35] ತರುವಾಯ ಯೇಸು ಎಲ್ಲಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚರಿಸುತ್ತಾ ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.
[36] ಯೇಸು ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ಚದುರಿರುವುದನ್ನು ಕಂಡು ಅವರ ಮೇಲೆ ಕನಿಕರಪಟ್ಟನು.
[37] ಆತನು ತನ್ನ ಶಿಷ್ಯರಿಗೆ, “ಬೆಳೆಯು ಬಹಳ ಇದೆ, ಆದರೆ ಕೆಲಸದವರು ಸ್ವಲ್ಪ.
[38] ಆದುದರಿಂದ ಬೆಳೆಯ ಯಜಮಾನನನ್ನು, ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಿಕೊಡಬೇಕೆಂದು ಬೇಡಿಕೊಳ್ಳಿರಿ” ಎಂದು ಹೇಳಿದನು.