Skip to content
Opens in a new window
Listen to this chapter • 1:21

[1] “ಇಗೋ, ಯೆಹೋವನ ದಿನವು ಬರುತ್ತಿದೆ, ಒಲೆಯಂತೆ ಉರಿಯುತ್ತಿದೆ; ಸಕಲ ಅಹಂಕಾರಿಗಳೂ, ದುಷ್ಕರ್ಮಿಗಳೂ ಒಣಹುಲ್ಲಿನಂತೆ ಇರುವರು. ಬರುತ್ತಿರುವ ಆ ದಿನವು ಅವರಿಗೆ ಅಗ್ನಿಪ್ರಳಯವಾಗುವುದು. ಬುಡ, ರೆಂಬೆಗಳಾವುದನ್ನೂ ಉಳಿಸದು.

[2] ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೋ ದೇವರ ಧರ್ಮವೆಂಬ ಸೂರ್ಯನು ಸ್ವಸ್ಥತೆಯನ್ನುಂಟುಮಾಡುವ ಕಿರಣಗಳುಳ್ಳವನಾಗಿ ಮೂಡುವನು; ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಹೊರಟು ಬಂದು ಕುಣಿದಾಡುವಿರಿ; ದುಷ್ಟರನ್ನು ತುಳಿದುಬಿಡುವಿರಿ.

[3] ನಾನು ಕಾರ್ಯಸಾಧಿಸುವ ದಿನದಲ್ಲಿ ಅಧರ್ಮಿಗಳು ನಿಮ್ಮ ಅಂಗಾಲುಗಳ ಕೆಳಗೆ ಬೂದಿಯಾಗಿ ಬಿದ್ದಿರುವರು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

[4] “ನನ್ನ ಸೇವಕನಾದ ಮೋಶೆಯ ಧರ್ಮಶಾಸ್ತ್ರವನ್ನು ಅಂದರೆ, ನಾನು ಹೋರೇಬ್ ಬೆಟ್ಟದಲ್ಲಿ ಎಲ್ಲಾ ಇಸ್ರಾಯೇಲರಿಗಾಗಿ ಮೋಶೆಗೆ ನೇಮಿಸಿದ ನಿಯಮವಿಧಿಗಳನ್ನು ಜ್ಞಾಪಕಮಾಡಿಕೊಳ್ಳಿರಿ.

[5] ನಾನು ಬಂದು ದೇಶವನ್ನು ಶಾಪದಿಂದ ಹತಮಾಡದಂತೆ ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವುದಕ್ಕೆ ಮೊದಲೇ ಪ್ರವಾದಿಯಾದ ಎಲೀಯನನ್ನು ನಿಮ್ಮ ಬಳಿಗೆ ಕಳುಹಿಸುವೆನು;

[6] ಅವನು ತಂದೆಗಳ ಮನಸ್ಸನ್ನು ಮಕ್ಕಳ ಕಡೆಗೂ, ಮಕ್ಕಳ ಮನಸ್ಸನ್ನು ತಂದೆಗಳ ಕಡೆಗೂ ತಿರುಗಿಸುವನು.”

ಮಲಾಕಿಯನು — Chapters