Skip to content
Opens in a new window
Listen to this chapter • 6:43

[1] ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ ದೆವ್ವಗಳನ್ನು ಬಿಡಿಸುವುದಕ್ಕೂ ಎಲ್ಲಾ ಬಗೆಯ ರೋಗಗಳನ್ನೂ ಎಲ್ಲಾ ರೀತಿಯ ಬೇನೆಗಳನ್ನೂ ವಾಸಿಮಾಡುವುದಕ್ಕೂ ಅಧಿಕಾರ ಕೊಟ್ಟನು.

[2] ಈ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಯಾವುವೆಂದರೆ, ಮೊದಲನೆಯವನು ಪೇತ್ರನೆನಿಸಿಕೊಳ್ಳುವ ಸೀಮೋನನು, ಅವನ ತಮ್ಮ ಅಂದ್ರೆಯ, ಜೆಬೆದಾಯನ ಮಗ ಯಾಕೋಬ, ಅವನ ತಮ್ಮನಾದ ಯೋಹಾನ,

[3] ಫಿಲಿಪ್ಪ, ಬಾರ್ತೊಲೊಮಾಯ, ತೋಮ, ಸುಂಕ ವಸೂಲಿಗಾರನಾದ ಮತ್ತಾಯ, ಅಲ್ಫಾಯನ ಮಗ ಯಾಕೋಬ, ತದ್ದಾಯ,

[4] ಮತಾಭಿಮಾನಿ ಎಂದು ಹೆಸರುಗೊಂಡ ಸೀಮೋನ ಹಾಗೂ ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ, ಎಂಬಿವರುಗಳೇ.

[5] ಈ ಹನ್ನೆರಡು ಮಂದಿಯನ್ನು ಯೇಸು ಕಳುಹಿಸಿದನು; ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟದ್ದೇನಂದರೆ, “ಅನ್ಯಜನಗಳಿರುವಲ್ಲಿಗೆ ಹೋಗಬೇಡಿರಿ, ಸಮಾರ್ಯದವರ ಊರೊಳಗೆ ಕಾಲಿಡಬೇಡಿರಿ;

[6] ಇವರನ್ನು ಬಿಟ್ಟು ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲಿನ ಮನೆತನದವರ ಬಳಿಗೆ ಹೋಗಿರಿ.

[7] ‘ಪರಲೋಕ ರಾಜ್ಯವು ಸಮೀಪವಾಯಿತೆಂದು’ ಸಾರಿಹೇಳುತ್ತಾ ಹೋಗಿರಿ.

[8] ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.

[9] ನಿಮ್ಮ ಕೈ ಚೀಲಗಳಲ್ಲಿ ಚಿನ್ನ, ಹಣ ದುಡ್ಡುಗಳನ್ನೂ, ದಾರಿಗೆ ಪ್ರಯಾಣದ ಚೀಲಗಳನ್ನೂ,

[10] ಎರಡು ಅಂಗಿ, ಚಪ್ಪಲಿ, ಕೋಲು ಮೊದಲಾದವುಗಳನ್ನೂ ತೆಗೆದುಕೊಳ್ಳಬೇಡಿರಿ. ಆಳು ತನ್ನ ಆಹಾರಕ್ಕೆ ಯೋಗ್ಯನಾಗಿದ್ದಾನೆ.

[11] ನೀವು ಯಾವುದೇ ಊರಿಗೆ ಅಥವಾ ಹಳ್ಳಿಗೆ ಪ್ರವೇಶಿಸಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ ಮುಂದಕ್ಕೆ ಹೊರಡುವ ತನಕ ಅ ಊರಲ್ಲೇ ಇರಿ.

[12] ಆ ಮನೆಯೊಳಗೆ ಹೋಗುವಾಗ ಶುಭವಾಗಲಿ ಅನ್ನಿರಿ.

[13] ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಸಮಾಧಾನವು ಅವರಿಗೆ ಬರಲಿ; ಅಯೋಗ್ಯರಾಗಿದ್ದರೆ ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಿ ಬರಲಿ.

[14] ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನಿಮ್ಮ ವಾಕ್ಯಗಳನ್ನೂ ಕೇಳದೆಯೂ ಹೋದರೆ ನೀವು ಆ ಮನೆಯನ್ನಾಗಲಿ ಆ ಊರನ್ನಾಗಲಿ ಬಿಟ್ಟು ಹೊರಡುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ.

[15] ನ್ಯಾಯವಿಚಾರಣೆಯ ದಿನದಲ್ಲಿ ಅಂಥ ಊರಿನ ಗತಿಯು ಸೊದೋಮ್ ಗೊಮೋರಗಳ ಸೀಮೆಯ ಗತಿಗಿಂತಲೂ ಕಠಿಣವಾಗಿರುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

[16] “ನೋಡಿರಿ, ತೋಳಗಳ ನಡುವೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇನೆ. ಆದುದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ.

[17] ಇದಲ್ಲದೆ ಜನರ ವಿಷಯದಲ್ಲಿ ಎಚ್ಚರವಾಗಿರಿ; ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಚಾವಟಿಗಳಿಂದ ಹೊಡೆಯುವರು.

[18] ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಕರೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವಿರಿ.

[19] ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಏನು ಮಾತನಾಡಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಸಮಯದಲ್ಲಿ ನಿಮಗೆ ಗೋಚರವಾಗುವುದು.

[20] ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತನಾಡುವನು.

[21] ಇದಲ್ಲದೆ ಸಹೋದರನು ಸಹೋದರನನ್ನು, ತಂದೆಯು ಮಗನನ್ನು, ಮರಣಕ್ಕೆ ಒಪ್ಪಿಸುವರು; ಮಕ್ಕಳು ತಂದೆತಾಯಿಗಳ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು.

[22] ಮತ್ತು ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕಡೆಯವರೆಗೂ ತಾಳಿಕೊಳ್ಳುವವನು ರಕ್ಷಣೆಹೊಂದುವನು.

[23] ಒಂದು ಊರಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಮತ್ತೊಂದು ಊರಿಗೆ ಓಡಿಹೋಗಿರಿ; ಮನುಷ್ಯಕುಮಾರನು ಬರುವಷ್ಟರಲ್ಲಿ ನೀವು ಇಸ್ರಾಯೇಲ್ ಜನರ ಊರುಗಳನ್ನು ಸಂಚರಿಸಿ ಮುಗಿಸಿರುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

[24] “ಗುರುವಿಗಿಂತ ಶಿಷ್ಯನು ದೊಡ್ಡವನಲ್ಲ, ಒಡೆಯನಿಗಿಂತ ಆಳು ದೊಡ್ಡವನಲ್ಲ.

[25] ಗುರುವಿನಂತೆ ಆಗುವುದು ಶಿಷ್ಯನಿಗೆ ಸಾಕು, ಒಡೆಯನಂತೆ ಆಗುವುದು ಆಳಿಗೆ ಸಾಕು. ಅವರು ಮನೆಯ ಯಜಮಾನನಿಗೆ ಬೆಲ್ಜೆಬೂಲನೆಂದು ಹೆಸರಿಟ್ಟು ಕರೆದ ಮೇಲೆ ಆತನ ಮನೆಯವರನ್ನು ಇನ್ನೆಷ್ಟು ಅವಹೇಳನವಾಗಿ ಕರೆದಾರು?

[26] ಆದರೂ ಅವರಿಗೆ ಹೆದರಬೇಡಿರಿ. ಮರೆಯಾಗಿರುವ ಯಾವುದೂ ವ್ಯಕ್ತವಾಗದೆ ಇರುವುದಿಲ್ಲ; ಬೆಳಕಿಗೆ ಬಾರದ ರಹಸ್ಯವು ಇಲ್ಲ.

[27] ನಾನು ಕತ್ತಲಲ್ಲಿ ನಿಮಗೆ ಹೇಳುವುದನ್ನು ನೀವು ಬೆಳಕಿನಲ್ಲಿ ಹೇಳಿರಿ, ಮತ್ತು ಕಿವಿಯಲ್ಲಿ ಕೇಳಿದ್ದನ್ನು ಮಾಳಿಗೆಗಳ ಮೇಲೆ ನಿಂತು ಸಾರಿರಿ.

[28] ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ.

[29] ಕಾಸಿಗೆ ಎರಡು ಗುಬ್ಬಿಗಳನ್ನು ಮಾರುವುದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳದು.

[30] ನಿಮ್ಮ ತಲೆಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.

[31] ಆದುದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚು ಬೆಲೆಬಾಳುವವರಾಗಿದ್ದೀರಿ.

[32] “ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು.

[33] ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.

[34] “ಭೂಲೋಕದ ಮೇಲೆ ಸಮಾಧಾನ ತರುವುದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವುದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವುದಕ್ಕೆ ಬಂದೆನು.

[35] ಹೇಗೆಂದರೆ ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದಹುಟ್ಟಿಸುವುದಕ್ಕೆ ಬಂದೆನು.

[36] ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ಶತ್ರುಗಳಾಗಿರುವರು.

[37] ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ; ಮಗನ ಮೇಲಾಗಲಿ ಮಗಳ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ.

[38] ಮತ್ತು ಯಾವನಾದರೂ ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನನ್ನು ಹಿಂಬಾಲಿಸದಿದ್ದರೆ ನನ್ನ ಶಿಷ್ಯನಾಗಲು ಯೋಗ್ಯನಲ್ಲ.

[39] ತನ್ನ ಪ್ರಾಣವನ್ನು ಕಂಡುಕೊಂಡವನು ಅದನ್ನು ಕಳೆದುಕೊಳ್ಳುವನು; ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಂಡವನು ಅದನ್ನು ಕಂಡುಕೊಳ್ಳುವನು.

[40] “ನಿಮ್ಮನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುವವನಾಗಿದ್ದಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವೀಕರಿಸುವವನಾಗಿದ್ದಾನೆ.

[41] ಪ್ರವಾದಿಯನ್ನು ಪ್ರವಾದಿಯೆಂದು ಸ್ವೀಕರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು; ನೀತಿವಂತನನ್ನು ನೀತಿವಂತನೆಂದು ಸ್ವೀಕರಿಸಿಕೊಳ್ಳುವವನು ನೀತಿವಂತನಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು.

[42] ಮತ್ತು ಈ ಕನಿಷ್ಠರಾದವರಲ್ಲಿ ಒಬ್ಬನಿಗೆ ನನ್ನ ಶಿಷ್ಯನೆಂದು ಯಾರಾದರೂ ಒಂದು ತಂಬಿಗೆ ತಣ್ಣೀರನ್ನು ಕುಡಿಯುವುದಕ್ಕೆ ಕೊಟ್ಟರೆ ತಕ್ಕ ಪ್ರತಿಫಲವು ಅವನಿಗೆ ಬರುವುದು ತಪ್ಪುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಅಂದನು.

ಮತ್ತಾಯನು — Chapters