Skip to content
Opens in a new window
Listen to this chapter • 12:08

[1] ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತನ್ನ ಶಿಷ್ಯರಿಗೆ, “ಎರಡು ದಿನಗಳಾದ ಮೇಲೆ ಪಸ್ಕಹಬ್ಬ ಬರುತ್ತದೆಂದು ನೀವು ಬಲ್ಲಿರಿ;

[2] ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿ ಕೊಡಲಾಗುವುದು” ಎಂದು ಹೇಳಿದನು.

[3] ಆ ಕಾಲದಲ್ಲಿ ಮುಖ್ಯಯಾಜಕರೂ, ಜನರ ಹಿರಿಯರೂ ಕಾಯಫನೆಂಬ ಮಹಾಯಾಜಕನ ಭವನದಲ್ಲಿ ಕೂಡಿಬಂದು

[4] ಯೇಸುವನ್ನು ಗುಟ್ಟಾಗಿ ಹಿಡಿದು ಕೊಲ್ಲಬೇಕೆಂಬುದಾಗಿ ಒಳಸಂಚು ಮಾಡಿದರು.

[5] “ಆದರೂ ಹಬ್ಬದಲ್ಲಿ ಹಿಡಿಯಬಾರದು, ನಮ್ಮ ಜನರಲ್ಲಿ ಗದ್ದಲವಾದೀತು” ಎಂದು ಮಾತನಾಡಿಕೊಂಡರು.

[6] ಯೇಸು ಬೇಥಾನ್ಯದಲ್ಲಿ ಸೀಮೋನನೆಂಬ ಕುಷ್ಠರೋಗಿಯ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಒಬ್ಬ ಸ್ತ್ರೀಯು

[7] ಬಹು ಬೆಲೆಯುಳ್ಳ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಆತನ ಬಳಿಗೆ ಬಂದು ಆ ತೈಲವನ್ನು ಆತನ ತಲೆಯ ಮೇಲೆ ಸುರಿದಳು.

[8] ಶಿಷ್ಯರು ಇದನ್ನು ಕಂಡು ಕೋಪಗೊಂಡು, “ಹೀಗೆ ವ್ಯರ್ಥವಾಗಿ ಖರ್ಚುಮಾಡುವುದೇಕೆ?

[9] ಈ ತೈಲವನ್ನು ಬಹಳ ಹಣಕ್ಕೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ” ಅಂದರು.

[10] ಯೇಸು ಅದನ್ನು ತಿಳಿದು ಅವರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತಿದ್ದೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ.

[11] ಬಡವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರಲ್ಲಾ, ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ.

[12] ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಸುರಿದದ್ದು ನನ್ನ ಉತ್ತರಕ್ರಿಯೆಗಾಗಿಯೇ.

[13] ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವುದೋ ಅಲ್ಲೆಲ್ಲಾ ಈ ಸ್ತ್ರೀ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ” ಹೇಳುವರು.

[14] ಆ ಮೇಲೆ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನೆಂಬುವವನು ಮುಖ್ಯಯಾಜಕರ ಬಳಿಗೆ ಹೋಗಿ,

[15] “ನಾನು ಆತನನ್ನು ಹಿಡಿಯಲು ನಿಮಗೆ ಸಹಾಯಮಾಡಿದರೆ ನನಗೆ ಏನು ಕೊಡುತ್ತೀರಿ?” ಅಂದನು. ಅವರು ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ತೂಗಿ ಕೊಟ್ಟರು.

[16] ಅಂದಿನಿಂದ ಅವನು ಆತನನ್ನು ಹಿಡಿದುಕೊಡುವುದಕ್ಕಾಗಿ ಸಂದರ್ಭ ಹುಡುಕುತ್ತಿದ್ದನು.

[17] ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪಸ್ಕದ ಊಟಮಾಡುವುದಕ್ಕೆ ನಾವು ನಿನಗೆ ಎಲ್ಲಿ ಸಿದ್ಧಮಾಡಬೇಕನ್ನುತ್ತೀ” ಎಂದು ಕೇಳಿದರು.

[18] ಆತನು, “ನೀವು ಪಟ್ಟಣದೊಳಕ್ಕೆ ನಾನು ಸೂಚಿಸಿದವನ ಬಳಿಗೆ ಹೋಗಿ ಅವನಿಗೆ, ‘ನನ್ನ ಕಾಲ ಸಮೀಪವಾಯಿತು, ನಾನು ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬ ಮಾಡುತ್ತೇನೆ’ ಎಂಬುದಾಗಿ ಗುರುವು ಹೇಳುತ್ತಿದ್ದಾನೆ ಎಂದು ಹೇಳಿರಿ” ಅಂದನು.

[19] ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿ ಪಸ್ಕದ ಭೋಜನವನ್ನು ತಯಾರಿಸಿದರು.

[20] ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡನು.

[21] ಅವರು ಊಟಮಾಡುತ್ತಿರುವಾಗ ಆತನು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು” ಅಂದನು.

[22] ಆಗ ಅವರು ಬಹಳ ದುಃಖಪಟ್ಟು, “ಕರ್ತನೇ, ನಾನಲ್ಲವಲ್ಲಾ?” ಎಂದು ಪ್ರತಿಯೊಬ್ಬರು ಕೇಳತೊಡಗಿದರು.

[23] ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಬಟ್ಟಲಲ್ಲಿ ನನ್ನ ಸಂಗಡ ಕೈ ಅದ್ದಿದವನೇ ನನ್ನನ್ನು ಹಿಡಿದುಕೊಡುವವನು.

[24] ಮನುಷ್ಯಕುಮಾರನು ಆತನ ವಿಷಯವಾಗಿ ಬರೆದಿರುವ ಹಾಗೆ ಹೊರಟುಹೋಗುತ್ತಾನೆ; ಆದರೆ ಯಾವನು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ಗತಿಯನ್ನು ಏನೆಂದು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು” ಅಂದನು.

[25] ಆಗ ಆತನನ್ನು ಹಿಡಿದುಕೊಡಬೇಕೆಂದಿದ್ದ ಯೂದನು, “ಗುರುವೇ, ನಾನೋ?” ಎಂದು ಕೇಳಲು ಯೇಸು ಅವನಿಗೆ, “ನೀನೇ ಹಾಗೆ ಹೇಳಿದ್ದೀ” ಎಂದು ಹೇಳಿದನು.

[26] ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಅಂದನು.

[27] ಆ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಸಲ್ಲಿಸಿ ಅವರಿಗೆ ಕೊಟ್ಟು, “ಇದರಲ್ಲಿರುವುದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ,

[28] ಇದು ಬಹು ಜನರ ಪಾಪಗಳ ಕ್ಷಮಾಪಣೆಗಾಗಿ ಸುರಿಸಲ್ಪಡುವ ಹೊಸ ಒಡಂಬಡಿಕೆಯ ರಕ್ತ.

[29] ನಾನು ನನ್ನ ತಂದೆಯ ರಾಜ್ಯದಲ್ಲಿ ನಿಮ್ಮ ಸಂಗಡ ಹೊಸದಾಗಿ ದ್ರಾಕ್ಷಾರಸವನ್ನು ಕುಡಿಯುವ ದಿನದವರೆಗೂ ಇನ್ನು ಇದನ್ನು ಕುಡಿಯುವುದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ” ಅಂದನು.

[30] ಬಳಿಕ ಅವರು ಕೀರ್ತನೆಯನ್ನು ಹಾಡಿದ ಮೇಲೆ ಎಣ್ಣೆಯ ಮರಗಳ ಗುಡ್ಡಕ್ಕೆ ಹೊರಟು ಹೋದರು.

[31] ಆಗ ಯೇಸು, ಅವರಿಗೆ, “ಕುರುಬನನ್ನು ಹೊಡೆಯುವೆನು; ಹಿಂಡಿನ ಕುರಿಗಳು ಚದರಿಹೋಗುವವು ಎಂದು ಬರೆದಿರುವ ಹಾಗೆ ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಹಿಂಜರಿಯುವಿರಿ.”

[32] “ಆದರೆ ನಾನು ಜೀವಿತನಾಗಿ ಎದ್ದ ಮೇಲೆ ನಿಮಗಿಂತ ಮೊದಲೇ ಗಲಿಲಾಯಕ್ಕೆ ಹೋಗುವೆನು” ಎಂದು ಹೇಳಿದನು.

[33] ಆದರೆ ಪೇತ್ರನು ಆತನಿಗೆ, “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಮಾತ್ರ ಎಂದಿಗೂ ಹಿಂಜರಿಯುವುದಿಲ್ಲ” ಎಂದು ಉತ್ತರ ಕೊಟ್ಟನು.

[34] ಯೇಸು ಪೇತ್ರನಿಗೆ, “ನಿನಗೆ ಸತ್ಯವಾಗಿ ಹೇಳುತ್ತೇನೆ, ಇದೇ ರಾತ್ರಿಯಲ್ಲಿ ಕೋಳಿ ಕೂಗುವುದಕ್ಕಿಂತ ಮೊದಲೇ ನೀನು ನನ್ನನ್ನು ಮೂರು ಸಾರಿ ನಿರಾಕರಿಸುವಿ” ಅಂದನು.

[35] ಪೇತ್ರನು ಆತನಿಗೆ, “ನಾನು ನಿನ್ನ ಸಂಗಡ ಸಾಯಬೇಕಾಗಿಬಂದರೂ ನಿನ್ನನ್ನು ನಿರಾಕರಿಸುವುದಿಲ್ಲ” ಎಂದು ಹೇಳಿದನು. ಅದರಂತೆ ಶಿಷ್ಯರೆಲ್ಲರೂ ಹೇಳಿದರು.

[36] ಅನಂತರ ಯೇಸು ತನ್ನ ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ತೋಟಕ್ಕೆ ಬಂದು ಅವರಿಗೆ, “ಇಲ್ಲೇ ಕುಳಿತುಕೊಳ್ಳಿರಿ, ನಾನು ಅತ್ತ ಹೋಗಿ ಪ್ರಾರ್ಥಿಸುತ್ತೇನೆ” ಎಂದು ಹೇಳಿ,

[37] ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುಂದಕ್ಕೆ ಹೋಗಿ ದುಃಖಪಟ್ಟು ಮನಗುಂದಿದವನಾದನು.

[38] ಮತ್ತು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರಿ” ಎಂದು ಹೇಳಿದನು.

[39] ಆತನು ಸ್ವಲ್ಪ ಮುಂದೆ ಹೋಗಿ ಬೋರಲು ಬಿದ್ದು, “ನನ್ನ ತಂದೆಯೇ, ಸಾಧ್ಯವಾದರೆ ಈ ಪಾನಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು.

[40] ಅನಂತರ ಆತನು ಶಿಷ್ಯರ ಬಳಿಗೆ ಬರಲು ಅವರು ನಿದ್ದೆಮಾಡುವುದನ್ನು ಕಂಡು ಪೇತ್ರನಿಗೆ, “ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ?

[41] ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ಸಿದ್ಧವಾಗಿದೆ ಆದರೆ ದೇಹವು ಬಲಹೀನವಾಗಿದೆ” ಎಂದು ಹೇಳಿದನು.

[42] ತಿರುಗಿ ಎರಡನೇ ಸಾರಿ ಹೋಗಿ, “ನನ್ನ ತಂದೆಯೇ, ನಾನು ಕುಡಿಯದ ಹೊರತು ಈ ಪಾತ್ರೆ ಬಿಟ್ಟುಹೋಗಲಾರದು ಎಂದಿದ್ದರೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು.

[43] ಆತನು ತಿರುಗಿ ಬಂದಾಗಲೂ ಅವರು ನಿದ್ದೆಮಾಡುವುದನ್ನು ಕಂಡನು; ಅವರ ಕಣ್ಣುಗಳು ಭಾರವಾಗಿದ್ದವು.

[44] ಅನಂತರ ಮತ್ತೆ ಅವರನ್ನು ಬಿಟ್ಟು ಹೊರಟುಹೋಗಿ ತಿರುಗಿ ಅದೇ ಮಾತುಗಳನ್ನು ಹೇಳುತ್ತಾ ಮೂರನೆಯ ಸಾರಿಯೂ ಪ್ರಾರ್ಥಿಸಿದನು.

[45] ತರುವಾಯ ಆತನು ಶಿಷ್ಯರ ಬಳಿಗೆ ಬಂದು ಅವರಿಗೆ, “ನೀವು ಇನ್ನು ನಿದ್ದೆ ಮಾಡಿ ವಿಶ್ರಮಿಸಿಕೊಳ್ಳುತ್ತಿದ್ದೀರೋ; ಇಗೋ, ಅ ಗಳಿಗೆ ಸಮೀಪಿಸಿತು, ಈಗ ಮನುಷ್ಯಕುಮಾರನು ಪಾಪಿಷ್ಠರ ಕೈಗೆ ಒಪ್ಪಿಸಲ್ಪಡುತ್ತಾನೆ.

[46] ಏಳಿರಿ, ಹೋಗೋಣ; ನನ್ನನ್ನು ಹಿಡಿದುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ ನೋಡಿರಿ” ಎಂದು ಹೇಳಿದನು.

[47] ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮುಖ್ಯಯಾಜಕರ ಹಾಗು ಜನರ ಹಿರಿಯರ ಕಡೆಯಿಂದ ಬಹು ಜನರ ಗುಂಪು ಕತ್ತಿ, ದೊಣ್ಣೆಗಳನ್ನು ಹಿಡಿದುಕೊಂಡು ಅವನ ಸಂಗಡ ಬಂದರು.

[48] ಇದಲ್ಲದೆ ಆತನನ್ನು ಹಿಡಿದುಕೊಡುವವನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿಯಿರಿ” ಎಂದು ಮುನ್ಸೂಚನೆ ನೀಡಿದ್ದನು.

[49] ಕೂಡಲೇ ಅವನು ಯೇಸುವಿನ ಬಳಿಗೆ ಬಂದು, “ಗುರುವೇ ನಮಸ್ಕಾರ” ಎಂದು ಹೇಳಿ ಆತನಿಗೆ ಮುದ್ದಿಟ್ಟನು.

[50] ಯೇಸು ಅವನಿಗೆ, “ಗೆಳೆಯನೇ, ನೀನು ಯಾಕೆ ಬಂದಿರುವೇ” ಎಂದು ಹೇಳಿದನು. ಅವರು ಹತ್ತಿರಕ್ಕೆ ಬಂದು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು.

[51] ಇಗೋ ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ಕೈಚಾಚಿ ತನ್ನ ಕತ್ತಿಯನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿ ಹಾಕಿದನು.

[52] ಆಗ ಯೇಸು ಅವನಿಗೆ, “ನಿನ್ನ ಕತ್ತಿಯನ್ನು ತಿರುಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರೂ ಕತ್ತಿಯಿಂದ ನಾಶವಾಗುವರು,

[53] ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆ, ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವುದಿಲ್ಲವೆಂದು ಭಾವಿಸುತ್ತೀಯೋ?

[54] ಕಳುಹಿಸಿಕೊಟ್ಟರೆ ನನಗೆ ಹೀಗೀಗೆ ಆಗಬೇಕೆಂಬ ಶಾಸ್ತ್ರದ ಮಾತುಗಳು ನೆರವೇರುವುದಾದರೂ ಹೇಗೆ?” ಎಂದು ಹೇಳಿದನು.

[55] ಅದೇ ಸಮಯದಲ್ಲಿ ಯೇಸು ಗುಂಪಾಗಿ ಕೂಡಿಬಂದಿದ್ದ ಜನರಿಗೆ, “ಕಳ್ಳನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನು ದೊಣ್ಣೆಗಳನ್ನು ತೆಗೆದುಕೊಂಡು ನನ್ನನ್ನು ಹಿಡಿಯುವುದಕ್ಕೆ ಬಂದಿರಾ? ನಾನು ಪ್ರತಿದಿನ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲವಲ್ಲಾ;

[56] ಆದರೆ ಪ್ರವಾದಿಗಳು ಬರೆದ ವಚನಗಳು ನೆರವೇರುವಂತೆ ಇದೆಲ್ಲಾ ಆಯಿತು” ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.

[57] ಯೇಸುವನ್ನು ಹಿಡಿದವರು ಆತನನ್ನು ಮಹಾಯಾಜಕನಾದ ಕಾಯಫನ ಬಳಿಗೆ ಕರೆದುಕೊಂಡು ಹೋದರು, ಅಲ್ಲಿ ಶಾಸ್ತ್ರಿಗಳೂ ಹಿರಿಯರೂ ಒಟ್ಟಾಗಿ ಸೇರಿಬಂದಿದ್ದರು.

[58] ಆದರೆ ಪೇತ್ರನು ದೂರದಿಂದ ಆತನನ್ನು ಹಿಂಬಾಲಿಸುತ್ತಾ, ಮಹಾಯಾಜಕನ ಭವನದ ಅಂಗಳದ ಒಳಗೆ ನುಗ್ಗಿ ಬಂದು ಆತನಿಗೆ ಏನಾಗುವುದೋ ಎಂದು ನೋಡಬೇಕೆಂದು ಸೈನಿಕರ ಸಂಗಡ ಕುಳಿತುಕೊಂಡನು.

[59] ಆಗ ಮುಖ್ಯಯಾಜಕರೂ ಹಿರೀಸಭೆಯವರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಆತನ ಮೇಲೆ ಸುಳ್ಳುಸಾಕ್ಷಿಯನ್ನು ಹುಡುಕಿದರು; ಆದರೆ ಬಹು ಮಂದಿ ಸುಳ್ಳುಸಾಕ್ಷಿಗಳು ಮುಂದೆ ಬಂದರೂ ಏನೂ ಸಿಕ್ಕಲಿಲ್ಲ.

[60] ಅನಂತರ ಇಬ್ಬರು ಮುಂದೆ ಬಂದು,

[61] “ನಾನು ದೇವರ ಆಲಯವನ್ನು ಕೆಡವಿಬಿಟ್ಟು ಮೂರು ದಿನಗಳಲ್ಲಿ ತಿರುಗಿ ಕಟ್ಟಬಲ್ಲೆನೆಂದು ‘ಈ ಮನುಷ್ಯನು ಹೇಳಿದನು’” ಅಂದರು;

[62] ಆಗ ಮಹಾಯಾಜಕನು ಎದ್ದು ನಿಂತು, “ನೀನೇನೂ ಉತ್ತರಹೇಳುವುದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಆರೋಪಗಳು ನಿಜವೇನು?” ಎಂದು ಆತನನ್ನು ಕೇಳಿದನು. ಆದರೆ ಯೇಸು ಸುಮ್ಮನಿದ್ದನು.

[63] ಮಹಾಯಾಜಕನು ಯೇಸುವಿಗೆ, “ನಿನಗೆ ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದಾನೆ; ನೀನು ದೇವಕುಮಾರನಾದ ಕ್ರಿಸ್ತನಾದರೆ ನಮಗೆ ಹೇಳಬೇಕು” ಅಂದನು.

[64] ಯೇಸು ಪ್ರತ್ಯುತ್ತರವಾಗಿ, “ನೀನೇ ಹೇಳಿದ್ದೀ; ಆದರೆ ನಾನು ನಿಮಗೆ ಹೇಳುವುದೇನೆಂದರೆ, ಇನ್ನು ಮೇಲೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ, ಆಕಾಶದ ಮೇಘಗಳ ಮೇಲೆ ಕುಳಿತು ಬರುವುದನ್ನೂ ಕಾಣುವಿರಿ” ಅಂದನು.

[65] ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಇವನು ದೇವದೂಷಣೆಯ ಮಾತನಾಡಿದ್ದಾನೆ; ನಮಗೆ ಸಾಕ್ಷಿಗಳು ಇನ್ನು ಯಾತಕ್ಕೆ ಬೇಕು? ನೋಡಿ ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರಲ್ಲಾ;

[66] ನಿಮಗೆ ಹೇಗೆ ತೋರುತ್ತದೆ?” ಅನ್ನಲು, “ಇವನು ಮರಣದಂಡನೆಗೆ ಯೋಗ್ಯನು” ಎಂದು ಅವರು ಉತ್ತರಕೊಟ್ಟರು.

[67] ಆಗ ಅವರು ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಕೆಲವರು ಆತನ ಕೆನ್ನೆಗೆ ಹೊಡೆದು,

[68] “ಕ್ರಿಸ್ತನೇ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದನೆ ಹೇಳು” ಅಂದರು.

[69] ಆಗ ಪೇತ್ರನು ಹೊರಗೆ ಅಂಗಳದಲ್ಲಿ ಕುಳಿತಿದ್ದನು. ಅಲ್ಲಿ ಒಬ್ಬಳು ದಾಸಿಯು ಅವನ ಬಳಿಗೆ ಬಂದು, “ನೀನೂ ಸಹ ಗಲಿಲಾಯದ ಯೇಸುವಿನ ಕೂಡ ಇದ್ದವನು” ಅಲ್ಲವೇ ಎನ್ನಲು.

[70] ಅವನು ನಿರಾಕರಿಸಿ, “ನೀನು ಏನು ಹೇಳುತ್ತಿರುವೆ ನನಗೆ ಗೊತ್ತಿಲ್ಲ” ಎಂದು ಎಲ್ಲರ ಮುಂದೆ ಹೇಳಿದನು.

[71] ಅವನು ಅಲ್ಲಿಂದ ಬಾಗಿಲಿನ ಕಡೆಗೆ ಹೋದಾಗ ಮತ್ತೊಬ್ಬ ದಾಸಿಯು ಅವನನ್ನು ಕಂಡು ಅಲ್ಲಿದ್ದವರಿಗೆ, “ಇವನೂ ನಜರೇತಿನ ಯೇಸುವಿನ ಜೊತೆಯಲ್ಲಿ ಇದ್ದವನು” ಎಂದು ಹೇಳಿದಳು.

[72] ಅವನು ತಿರುಗಿ ನಿರಾಕರಿಸಿ ಆಣೆಯಿಟ್ಟು, “ಆ ಮನುಷ್ಯನನ್ನು ನಾನರಿಯೆನು” ಎಂದು ಹೇಳಿದನು.

[73] ಸ್ವಲ್ಪ ಹೊತ್ತಿನ ನಂತರ ಅಲ್ಲಿ ನಿಂತಿದ್ದವರು ಮುಂದೆ ಬಂದು ಪೇತ್ರನಿಗೆ, “ನಿಶ್ಚಯವಾಗಿ ನೀನೂ ಸಹ ಅವರಲ್ಲಿ ಒಬ್ಬನು, ನಿನ್ನ ಭಾಷೆಯೇ ನಿನ್ನನ್ನು (ಗಲಿಲಾಯದವನೆಂದು) ತೋರಿಸಿಕೊಡುತ್ತದೆ” ಎಂದು ಹೇಳಲು

[74] ಅವನು, “ಶಾಪಹಾಕಿಕೊಳ್ಳುವುದಕ್ಕೆ ಪ್ರಾರಂಭಿಸಿ ಆಣೆಯಿಟ್ಟು, ಆ ಮನುಷ್ಯನನ್ನು ನಾನರಿಯೆನು” ಎಂದು ಹೇಳಿದನು. ಕೂಡಲೇ ಹುಂಜವೂ ಕೂಗಿತು.

[75] ಪೇತ್ರನಿಗೆ ಯೇಸು, “ಹುಂಜವೂ ಕೂಗುವುದಕ್ಕಿಂತ ಮೊದಲೇ ಮೂರು ಸಾರಿ ನನ್ನನ್ನು ನಿರಾಕರಿಸುವಿ” ಎಂದು ಹೇಳಿದ ಮಾತನ್ನು ನೆನಪಿಸಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.

ಮತ್ತಾಯನು — Chapters