Skip to content
Opens in a new window
Listen to this chapter • 4:52

[1] ಆಗ ಯೇಸು ಸೈತಾನನಿಂದ ಶೋಧಿಸಲ್ಪಡುವುದಕ್ಕಾಗಿ ದೇವರಾತ್ಮನು ಆತನನ್ನು ಅಡವಿಗೆ ನಡೆಸಿದನು.

[2] ಆತನು ನಲವತ್ತು ದಿನ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು.

[3] ಆಗ ಸೈತಾನನು ಆತನ ಬಳಿಗೆ ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳಿಗೆ ರೊಟ್ಟಿಯಾಗುವಂತೆ ಅಪ್ಪಣೆಕೊಡು” ಎಂದು ಹೇಳಲು,

[4] ಯೇಸು, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಬರುವ ಪ್ರತಿಯೊಂದು ನುಡಿಯಿಂದಲೂ ಬದುಕುವನು’ ಎಂದು ಬರೆದಿದೆ” ಅಂದನು.

[5] ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಗೋಪುರದ ಮೇಲೆ ನಿಲ್ಲಿಸಿ

[6] ಯೇಸುವಿಗೆ, “ನೀನು ದೇವರ ಮಗನೇ ಆಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು; ‘ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.

[7] ಅದಕ್ಕೆ ಯೇಸು, “ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬುದಾಗಿಯೂ ಬರೆದಿದೆ” ಅಂದನು.

[8] ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ,

[9] ಯೇಸುವಿಗೆ, “ನೀನು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು” ಅಂದನು.

[10] ಯೇಸು ಅವನಿಗೆ, “ಸೈತಾನನೇ, ನೀನು ತೊಲಗಿ ಹೋಗು. ‘ನಿನ್ನ ದೇವರಾಗಿರುವ ಕರ್ತನನ್ನು ಮಾತ್ರ ಆರಾಧಿಸಬೇಕು ಆತನೊಬ್ಬನನ್ನೇ ಸೇವಿಸಬೇಕು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.

[11] ಆಗ ಸೈತಾನನು ಆತನನ್ನು ಬಿಟ್ಟು ಹೊರಟು ಹೋದನು, ಆಗ ದೇವದೂತರು ಬಂದು ಆತನಿಗೆ ಉಪಚಾರ ಮಾಡಿದರು.

[12] ಯೋಹಾನನು ಸೆರೆಯಾದನು ಎಂದು ಯೇಸು ಕೇಳಿ ಆ ಸ್ಥಳವನ್ನು ಬಿಟ್ಟು ಗಲಿಲಾಯ ಸೀಮೆಗೆ ಹೊರಟು ಹೋದನು.

[13] ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್‌ ಮತ್ತು ನಫ್ತಾಲಿಯರ ಗಡಿ ನಾಡುಗಳಿಗೆ ಬಂದು ಸಮುದ್ರದ ಹತ್ತಿರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ವಾಸಿಸತೊಡಗಿದನು.

[14] ಇದರಿಂದ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿರುವ ಮಾತು ನೆರವೇರಿತು; ಆ ಮಾತು ಏನೆಂದರೆ,

[15] “ಜೆಬುಲೋನ್ ಸೀಮೆ ಮತ್ತು ನಫ್ತಾಲಿ ಸೀಮೆ, ಯೊರ್ದನಿನ ಆಚೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ,

[16] ಹೀಗೆ ಕತ್ತಲಲ್ಲಿ ವಾಸಿಸಿದ ಈ ಸೀಮೆಯ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣದ ಛಾಯೆ ನೆರೆದ ಪ್ರದೇಶಗಳಲ್ಲಿ ವಾಸಿಸುವವರಿಗೆ ಬೆಳಕು ಉದಯವಾಯಿತು” ಎಂಬುದು.

[17] ಅಂದಿನಿಂದ ಯೇಸು, “ಪಶ್ಚಾತ್ತಾಪಪಡಿರಿ ಪರಲೋಕ ರಾಜ್ಯವು ಸಮೀಪಿಸಿತು” ಎಂದು ಸಾರುವುದಕ್ಕೆ ಪ್ರಾರಂಭಿಸಿದನು.

[18] ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದು ಹೋಗುವಾಗ ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ಸಹೋದರನಾದ ಅಂದ್ರೆಯನು ಸಮುದ್ರದಲ್ಲಿ ಬಲೆಬೀಸುವುದನ್ನು ಕಂಡನು; ಅವರು ಬೆಸ್ತರಾಗಿದ್ದರು.

[19] ಅವರಿಗೆ ಆತನು, “ನನ್ನನ್ನು ಹಿಂಬಾಲಿಸಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳುತ್ತಲೇ,

[20] ತಕ್ಷಣ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.

[21] ಯೇಸು ಅಲ್ಲಿಂದ ಮುಂದೆ ಹೋಗುತ್ತಿರುವಾಗ ಇನ್ನಿಬ್ಬರು ಅಣ್ಣ ತಮ್ಮಂದಿರನ್ನು ಅಂದರೆ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನ್ನೂ ಕಂಡನು; ಇವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಆತನು ಅವರನ್ನು ಕರೆದನು.

[22] ಕೂಡಲೆ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.

[23] ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.

[24] ಆತನ ಸುದ್ದಿಯು ಸಿರಿಯಾದಲ್ಲೆಲ್ಲಾ ಹಬ್ಬಿದ್ದರಿಂದ ಅಸ್ವಸ್ಥರಾದವರನ್ನು, ಅಂದರೆ ನಾನಾ ರೀತಿಯ ರೋಗಗಳಿಂದ ಮತ್ತು ವೇದನೆಗಳಿಂದ ಕಷ್ಟಪಡುವವರನ್ನೂ, ದೆವ್ವಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು.

[25] ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಎಂಬೀ ಸ್ಥಳಗಳಿಂದಲೂ ಯೊರ್ದನ್ ಹೊಳೆಯ ಆಚೇ ಕಡೆಯಿಂದಲೂ ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು.

ಮತ್ತಾಯನು — Chapters