[1] ಯೇಸು ಪುನಃ ಅವರ ಸಂಗಡ ಮಾತನಾಡುತ್ತಾ ಸಾಮ್ಯರೂಪವಾಗಿ ಅವರಿಗೆ ಹೇಳಿದ್ದೇನೆಂದರೆ,
[2] “ಪರಲೋಕ ರಾಜ್ಯವು ತನ್ನ ಮಗನ ಮದುವೆಯ ಔತಣವನ್ನು ಏರ್ಪಡಿಸಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.
[3] ಅವನು ಮದುವೆಗೆ ಆಹ್ವಾನಿತರಾಗಿದ್ದವರನ್ನು ಕರೆಯುವುದಕ್ಕೆ ತನ್ನ ಆಳುಗಳನ್ನು ಕಳುಹಿಸಿದನು, ಆದರೆ ಬರುವುದಕ್ಕೆ ಅವರಿಗೆ ಮನಸ್ಸಿರಲಿಲ್ಲ.
[4] ಅರಸನು ತಿರುಗಿ ಬೇರೆ ಆಳುಗಳನ್ನು ಕರೆದು, ‘ನೀವು ಊಟಕ್ಕೆ ಆಹ್ವಾನಿತರ ಬಳಿಗೆ ಹೋಗಿ ಇಗೋ, ಔತಣ ಸಿದ್ಧವಾಗಿದೆ; ನನ್ನ ಎತ್ತುಗಳನ್ನೂ, ಕೊಬ್ಬಿದ ಹೋರಿಗಳನ್ನೂ ವಧಿಸಿದ್ದೇನೆ; ಎಲ್ಲಾ ಸಿದ್ಧವಾಗಿದೆ; ಮದುವೆಯ ಔತಣಕ್ಕೆ ಬನ್ನಿರಿ’ ಎಂಬುದಾಗಿ ಅವರಿಗೆ ಹೇಳಿರೆಂದು ಅಪ್ಪಣೆ ಕೊಟ್ಟು ಕಳುಹಿಸಿದನು.
[5] ಆದರೆ ಅವರು ಆಹ್ವಾನವನ್ನು ಅಲಕ್ಷ್ಯಮಾಡಿ, ಒಬ್ಬನು ತನ್ನ ಹೊಲಕ್ಕೆ ಒಬ್ಬನು ತನ್ನ ವ್ಯಾಪಾರಕ್ಕೆ ಹೋಗಿಬಿಟ್ಟರು;
[6] ಉಳಿದವರು ಅವನ ಆಳುಗಳನ್ನು ಹಿಡಿದು ಅವಮಾನಮಾಡಿ ಕೊಂದು ಹಾಕಿದರು.
[7] ಅರಸನು ಅದನ್ನು ಕೇಳಿ, ಸಿಟ್ಟುಗೊಂಡು, ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.
[8] ಆಗ ತನ್ನ ಆಳುಗಳಿಗೆ, ‘ಮದುವೆಯ ಔತಣವು ಸಿದ್ಧವಾಗಿದೆ ಸರಿ, ಆದರೆ ಆಹ್ವಾನಿತರು ಯೋಗ್ಯರಾಗಿರಲಿಲ್ಲ.
[9] ಆದುದರಿಂದ ನೀವು ಈಗ ಮುಖ್ಯರಸ್ತೆಗೆ ಹೋಗಿ ಕಂಡ ಕಂಡವರನ್ನೆಲ್ಲಾ ಮದುವೆಯ ಔತಣಕ್ಕೆ ಕರೆಯಿರಿ’ ಎಂದು ಹೇಳಿದನು.
[10] ಆ ಆಳುಗಳು ಮುಖ್ಯರಸ್ತೆಗಳಿಗೆ ಹೋಗಿ ಕೆಟ್ಟವರು ಒಳ್ಳೆಯವರೆನ್ನದೇ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುಕೊಂಡು ಬಂದರು. ಹೀಗೆ ಮದುವೆಯ ಮಂಟಪವು ಅತಿಥಿಗಳಿಂದ ತುಂಬಿಹೋಯಿತು.
[11] ಆಮೇಲೆ ಅರಸನು ಅತಿಥಿಗಳನ್ನು ನೋಡುವುದಕ್ಕಾಗಿ ಒಳಗೆ ಬಂದನು, ಮದುವೆಯ ಔತಣಕ್ಕೆ ತಕ್ಕ ವಸ್ತ್ರವನ್ನು ಹಾಕಿಕೊಳ್ಳದ ಒಬ್ಬನನ್ನು ಕಂಡು ಅರಸನು,
[12] ಅವನಿಗೆ ‘ಸ್ನೇಹಿತನೇ, ಮದುವೆಯ ಬಟ್ಟೆ ಇಲ್ಲದೆ ನೀನಿಲ್ಲಿ ಹೇಗೆ ಒಳಕ್ಕೆ ಬಂದೆ?’ ಎಂದು ಕೇಳಲು ಅವನು ಮೌನವಾಗಿದ್ದನು.
[13] ಆಗ ಅರಸನು ಸೇವಕರಿಗೆ, ‘ಅವನ ಕೈಕಾಲು ಕಟ್ಟಿ ಅವನನ್ನು ಹೊರಗೆ ಕತ್ತಲೆಗೆ ನೂಕಿರಿ ಎಂದು ಹೇಳಿದನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.’
[14] ಹೀಗೆ ಕರೆಯಲ್ಪಟ್ಟವರು ಬಹು ಜನ, ಆರಿಸಲ್ಪಟ್ಟವರು ಸ್ವಲ್ಪ ಜನ” ಅಂದನು.
[15] ಅನಂತರ ಫರಿಸಾಯರು ಹೊರಟು ಯೇಸುವನ್ನು ಮಾತಿನಲ್ಲಿ ಹೇಗೆ ಸಿಕ್ಕಿಸೋಣ ಎಂದು ಕೂಡಿ ಆಲೋಚಿಸಿಕೊಂಡು
[16] ಆತನ ಬಳಿಗೆ ತಮ್ಮ ಶಿಷ್ಯರನ್ನು ಹೆರೋದ್ಯರ ಜೊತೆಮಾಡಿ ಕಳುಹಿಸಿದರು. ಇವರು ಯೇಸುವಿಗೆ, “ಗುರುವೇ, ನೀನು ಸತ್ಯವಂತನು, ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನು, ಯಾರಿಗೂ ಹೆದರದವನು; ನೀನು ಜನರ ದಾಕ್ಷಿಣ್ಯಕ್ಕೆ ತಕ್ಕಂತೆ ಮಾತನಾಡುವವನಲ್ಲ ಎಂದು ಬಲ್ಲೆವು.
[17] ಹೀಗಿರಲಾಗಿ ಕೈಸರನಿಗೆ ಸುಂಕ ಕೊಡುವುದು ನಿಯಮ ಬದ್ಧವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು” ಅಂದರು.
[18] ಯೇಸು ಅವರ ಕೆಡುಕನ್ನು ಅರಿತುಕೊಂಡವನಾಗಿ, “ಕಪಟಿಗಳೇ, ನನ್ನನ್ನು ಏಕೆ ಪರೀಕ್ಷೆಮಾಡುತ್ತೀರಿ?
[19] ಸುಂಕಕ್ಕೆ ಕೊಡುವ ನಾಣ್ಯವನ್ನು ನನಗೆ ತೋರಿಸಿರಿ” ಅನ್ನಲು ಅವರು ಆತನಿಗೆ ಒಂದು ನಾಣ್ಯವನ್ನು ತಂದು ಕೊಟ್ಟರು.
[20] ಆತನು, “ಈ ಸ್ವರೂಪವು ಈ ಮುದ್ರೆಯೂ ಯಾರದು?” ಎಂದು ಕೇಳಿದ್ದಕ್ಕೆ
[21] ಅವರು, “ಕೈಸರನದು” ಅಂದರು. ಆಗ ಆತನು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು.
[22] ಅವರು ಈ ಮಾತನ್ನು ಕೇಳಿ ಆಶ್ಚರ್ಯಪಟ್ಟು ಆತನನ್ನು ಬಿಟ್ಟು ಹೋದರು.
[23] ಅದೇ ದಿನದಲ್ಲಿ ಪುನರುತ್ಥಾನವಿಲ್ಲ ಎಂದು ವಾದಿಸುವ ಕೆಲವು ಸದ್ದುಕಾಯರು ಆತನ ಬಳಿಗೆ ಬಂದರು.
[24] ಇವರು ಆತನಿಗೆ, “ಬೋಧಕನೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಮಕ್ಕಳನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.’
[25] ಆದರೆ ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆ ಆಗಿ ತೀರಿಹೋದನು. ಅವನಿಗೆ ಮಕ್ಕಳಿಲ್ಲದ ಕಾರಣ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು;
[26] ಅದರಂತೆ ಎರಡನೆಯವನೂ ಮೂರನೆಯವನೂ ಹಾಗೆಯೇ ಏಳನೆಯವನ ವರೆಗೂ ಮಾಡಿದರು.
[27] ಅವರೆಲ್ಲರು ಸತ್ತ ಮೇಲೆ ಆ ಹೆಂಗಸೂ ಸತ್ತಳು.
[28] ಹಾಗಾದರೆ ಪುನರುತ್ಥಾನದಲ್ಲಿ ಆಕೆ ಆ ಏಳು ಮಂದಿಯಲ್ಲಿ ಯಾರಿಗೆ ಹೆಂಡತಿಯಾಗಿರುವಳು? ಆಕೆಯನ್ನು ಅವರೆಲ್ಲರೂ ಮದುವೆಮಾಡಿಕೊಂಡಿದ್ದರಲ್ಲಾ” ಎಂದು ಪ್ರಶ್ನಿಸಿದರು.
[29] ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ನೀವು ದೇವರ ವಾಕ್ಯವನ್ನಾದರೂ ದೇವರ ಶಕ್ತಿಯನ್ನಾದರೂ ಸರಿಯಾಗಿ ತಿಳಿದುಕೊಳ್ಳದೆ ತಪ್ಪು ಅಭಿಪ್ರಾಯದಲ್ಲಿದ್ದೀರಿ;
[30] ಪುನರುತ್ಥಾನವಾದ ಮೇಲೆ ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಅವರು ಇರುತ್ತಾರೆ.
[31] ಸತ್ತವರ ಪುನರುತ್ಥಾನದ ವಿಷಯವಾಗಿ ಹೇಳಬೇಕಾದರೆ,
[32] ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’ ಎಂದು ದೇವರು ನಿಮಗೆ ನುಡಿದಿದ್ದನ್ನು ನೀವು ಓದಲಿಲ್ಲವೇ. ಆತನು ಸತ್ತವರಿಗೆ ದೇವರಲ್ಲ, ಆದರೆ ಜೀವಿಸುವವರಿಗೆ ದೇವರಾಗಿದ್ದಾನೆ” ಎಂದು ಹೇಳಿದನು.
[33] ಜನರ ಗುಂಪು ಅದನ್ನು ಕೇಳಿ ಆತನ ಬೋಧನೆಗೆ ಆಶ್ಚರ್ಯಪಟ್ಟರು.
[34] ಯೇಸು ಸದ್ದುಕಾಯರನ್ನು ಸದ್ದಿಲ್ಲದವರನ್ನಾಗಿ ಮಾಡಿದ್ದಾನೆಂದು ಫರಿಸಾಯರು ಕೇಳಿ ಅಲ್ಲಿಗೆ ಸೇರಿ ಬಂದರು.
[35] ಅವರಲ್ಲಿದ್ದ ಒಬ್ಬ ಧರ್ಮೋಪದೇಶಕನು ಆತನನ್ನು ಪರೀಕ್ಷೆ ಮಾಡಬೇಕೆಂದು,
[36] “ಗುರುವೇ, ಧರ್ಮಶಾಸ್ತ್ರದಲ್ಲಿ ಯಾವ ಆಜ್ಞೆ ಮುಖ್ಯವಾದದ್ದು” ಎಂದು ಆತನನ್ನು ಕೇಳಿದ್ದಕ್ಕೆ
[37] ಯೇಸು ಅವನಿಗೆ, “‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು’
[38] ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು.
[39] ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಯಾವುದೆಂದರೆ, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ.
[40] ಈ ಎರಡು ಆಜ್ಞೆಗಳಲ್ಲಿ ಎಲ್ಲಾ ಧರ್ಮನಿಯಮವೂ ಪ್ರವಾದನಾಗ್ರಂಥಗಳೂ ಆಧಾರವಾಗಿವೆ” ಎಂದು ಹೇಳಿದನು.
[41] ಫರಿಸಾಯರು ಕೂಡಿಬಂದಿರಲಾಗಿ ಯೇಸು ಅವರಿಗೆ,
[42] “ಬರಬೇಕಾದ ಕ್ರಿಸ್ತನ ವಿಷಯವಾಗಿ ನಿಮಗೆ ಹೇಗೆ ತೋರುತ್ತದೆ? ಆತನು ಯಾರ ಮಗನು?” ಎಂದು ಕೇಳಿದ್ದಕ್ಕೆ
[43] ಅವರು ಆತನಿಗೆ, “ದಾವೀದನ ಮಗನು” ಎಂದು ಹೇಳಿದರು. ಅದಕ್ಕೆ ಆತನು, “ಹಾಗಾದರೆ, ದಾವೀದನೇ ಪವಿತ್ರಾತ್ಮನ ಪ್ರೇರಣೆಯಿಂದ ಆತನನ್ನು ಕರ್ತನು ಎಂದು ಕರೆದಿದ್ದಾನಲ್ಲಾ, ಅದು ಹೇಗೆ?
[44] “‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು’ ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು.
[45] ಈ ಮಾತಿನಲ್ಲಿ ದಾವೀದನೇ ಆತನನ್ನು ‘ಕರ್ತನೆಂದು’ ಕರೆದ ಮೇಲೆ ಆತನು ಅವನಿಗೆ ಮಗನಾಗುವುದು ಹೇಗೆ?” ಅಂದನು.
[46] ಅದಕ್ಕೆ ಉತ್ತರವಾಗಿ ಯಾರೂ ಒಂದು ಮಾತನ್ನಾದರೂ ಆತನಿಗೆ ಹೇಳಲಾರದೆ ಹೋದರು. ಇದಲ್ಲದೆ ಅಂದಿನಿಂದ ಆತನನ್ನು ಪ್ರಶ್ನಿಸಲು ಯಾರೂ ಧೈರ್ಯಪಡಲಿಲ್ಲ.