[1] ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಅಪ್ಪಣೆಕೊಡುವುದನ್ನು ಮುಗಿಸಿದ ಬಳಿಕ ಅವರ ಪಟ್ಟಣಗಳಲ್ಲಿ ಉಪದೇಶಮಾಡುವುದಕ್ಕೂ ಬೋಧಿಸುವುದಕ್ಕೂ ಅಲ್ಲಿಂದ ಹೊರಟು ಹೋದನು.
[2] ಕ್ರಿಸ್ತನ ಕಾರ್ಯಗಳ ಸುದ್ದಿಯನ್ನು ಸೆರೆಮನೆಯಲ್ಲಿದ್ದ ಯೋಹಾನನು ಕೇಳಿದಾಗ, ಆತನ ಬಳಿಗೆ ತನ್ನ ಶಿಷ್ಯರನ್ನು ಕಳುಹಿಸಿ,
[3] “ಬರಬೇಕಾದವನು ನೀನೋ ಇಲ್ಲವೇ ನಾವು ಬೇರೊಬ್ಬನಿಗಾಗಿ ಕಾದು ನೋಡಬೇಕೋ” ಎಂದು ಅವರ ಮೂಲಕ ಹೇಳಿ ಕೇಳಿಸಿದನು.
[4] ಯೇಸು ಅವರಿಗೆ ಪ್ರತ್ಯುತ್ತರವಾಗಿ, “ನೀವು ಹೋಗಿ ಕಾಣುವವುಗಳನ್ನು ಕೇಳುವವುಗಳನ್ನು ಯೋಹಾನನಿಗೆ ತಿಳಿಸಿರಿ;
[5] ಕುರುಡರು ನೋಡುತ್ತಿದ್ದಾರೆ, ಕುಂಟರು ನಡೆಯುತ್ತಿದ್ದಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಿದ್ದಾರೆ, ಕಿವುಡರು ಕೇಳುತ್ತಿದ್ದಾರೆ, ಸತ್ತವರು ಜೀವದಿಂದ ಎಬ್ಬಿಸಲ್ಪಡುತ್ತಿದ್ದಾರೆ, ಮತ್ತು ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದ್ದೆ.
[6] ನನ್ನ ವಿಷಯದಲ್ಲಿ ಆಪಾದಿಸದವನೇ ಧನ್ಯನು” ಎಂದು ಹೇಳಿದನು.
[7] ಅವರು ಹೊರಟು ಹೋಗುತ್ತಿರಲು ಯೇಸು ಯೋಹಾನನ ವಿಷಯವಾಗಿ ಆ ಜನರ ಗುಂಪುಗಳಿಗೆ ಹೇಳತೊಡಗಿದ್ದೇನಂದರೆ, “ನೀವು ಏನು ನೋಡಬೇಕೆಂದು ಅಡವಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ?
[8] ಹಾಗಾದರೆ ಏನು ನೋಡಬೇಕೆಂದು ಹೋಗಿದ್ದಿರಿ? ನಯವಾದ ಉಡುಪನ್ನು ಧರಿಸಿಕೊಂಡ ಮನುಷ್ಯನನ್ನೋ? ನಯವಾದ ಉಡುಪನ್ನು ಧರಿಸಿಕೊಂಡವರು ರಾಜನ ಅರಮನೆಗಳಲ್ಲಿ ಇರುತ್ತಾರಷ್ಟೆ.
[9] ಹಾಗಾದರೆ ಯಾತಕ್ಕೆ ಹೋಗಿದ್ದಿರಿ? ಪ್ರವಾದಿಯನ್ನು ನೋಡುವುದಕ್ಕೋ? ಹೌದು ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದ್ದೀರಿ ಎಂದು ನಿಮಗೆ ಹೇಳುತ್ತೇನೆ.
[10] ‘ಇಗೋ ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುವೆನು. ನೀನು ಹೋಗುವ ದಾರಿಯನ್ನು ಅವನು ನಿನ್ನ ಮುಂದೆ ಸಿದ್ಧಪಡಿಸುವನು’ ಎಂದು ಯಾರ ವಿಷಯವಾಗಿ ಬರೆದದೆಯೋ ಆತನು ಇವನೇ.
[11] ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಸ್ನಾನಿಕ ಯೋಹಾನನಿಗಿಂತ ದೊಡ್ಡವನು ಯಾರೂ ಇಲ್ಲ ಆದರೂ ಪರಲೋಕ ರಾಜ್ಯದಲ್ಲಿರುವ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
[12] ಸ್ನಾನಿಕ ಯೋಹಾನನ ಕಾಲದಿಂದ ಈ ವರೆಗೂ ಪರಲೋಕ ರಾಜ್ಯವು ಬಲವಂತಕ್ಕೆ ಗುರಿಯಾಗುತ್ತಿದೆ. ಬಲಾತ್ಕಾರಿಗಳು ಒತ್ತಾಯದಿಂದ ಅದನ್ನು ಸ್ವಾಧೀನಮಾಡಿಕೊಳ್ಳುತ್ತಿದ್ದಾರೆ.
[13] ಎಲ್ಲಾ ಪ್ರವಾದಿಗಳೂ, ಧರ್ಮಶಾಸ್ತ್ರವು ಯೋಹಾನನ ತನಕ ಪ್ರವಾದಿಸಿದರು.
[14] ನಿಮಗೆ ತಿಳಿದುಕೊಳ್ಳುವುದಕ್ಕೆ ಮನಸ್ಸಿದ್ದರೆ ಗಮನಿಸಿ ಬರತಕ್ಕ ಎಲೀಯನು ಇವನೇ.
[15] ಕೇಳುವುದ್ದಕ್ಕೆ ಕಿವಿಯುಳ್ಳವನು ಕೇಳಲಿ.
[16] ಆದರೆ ಈ ಸಂತತಿಯನ್ನು ಯಾರಿಗೆ ಹೋಲಿಸಲಿ? ಪೇಟೆಗಳಲ್ಲಿ ಕುಳಿತುಕೊಂಡು ತಮ್ಮ ಗೆಳೆಯರಿಗೆ,
[17] ‘ನಿಮಗೋಸ್ಕರ ಕೊಳಲೂದಿದೆವು ನೀವು ಕುಣಿಯಲಿಲ್ಲ. ಶೋಕಿಸಿದೆವು ನೀವು ಗೋಳಾಡಲಿಲ್ಲ’ ಎಂದು ಕೂಗಿ ಹೇಳುವಂಥ ಮಕ್ಕಳಿಗೆ ಸಮಾನವಾಗಿದೆ.
[18] ಯೋಹಾನನು ಬಂದನು, ಅವನು ಅನ್ನ ಪಾನಗಳನ್ನು ತೆಗೆದುಕೊಳ್ಳದವನಾಗಿದುದರಿಂದ, ಅವರು ಅವನಿಗೆ, ‘ದೆವ್ವ ಹಿಡಿದಿದೆ’ ಅನ್ನುತ್ತಾರೆ.
[19] ಮನುಷ್ಯಕುಮಾರನು ಬಂದನು, ಅವನು ಅನ್ನ ಪಾನಗಳನ್ನು ಸೇವಿಸುವವನಾಗಿದ್ದನು. ಅವರು ‘ಇಗೋ ಇವನು ಹೊಟ್ಟೆಬಾಕನು ಕುಡುಕನು ತೆರಿಗೆಯವರ ಮತ್ತು ಪಾಪಿಗಳ ಗೆಳೆಯನು’ ಅನ್ನುತ್ತಾರೆ. ಆದರೆ ಜ್ಞಾನವು ಅದರ ಕಾರ್ಯಗಳಿಂದಲೇ ಜ್ಞಾನವೆಂದು ಸಮರ್ಥಿಸಲ್ಪಡುತ್ತದೆ” ಅಂದನು.
[20] ಅನಂತರ ಆತನು ತನ್ನ ಮಹತ್ಕಾರ್ಯಗಳು ಬಹಳವಾಗಿ ನಡೆದ ಊರುಗಳವರು ಮಾನಸಾಂತರಪಡಲಿಲ್ಲವೆಂದು ಅವುಗಳನ್ನು ಗದರಿಸತೊಡಗಿದನು.
[21] ಹೇಗೆಂದರೆ, “ಅಯ್ಯೋ ಖೊರಾಜಿನೇ, ಅಯ್ಯೋ ಬೇತ್ಸಾಯಿದವೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿನವರು ಎಂದೋ ಗೋಣಿತಟ್ಟು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ಮಾನಸಾಂತರಪಡುತ್ತಿದ್ದರು.
[22] ಆದರೆ ನ್ಯಾಯವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ಸಹನೀಯವಾಗಿರುವುದು.
[23] ಎಲೈ ಕಪೆರ್ನೌಮೇ ನೀನು ಪರಲೋಕಕ್ಕೇರುವೇ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಇಂದಿನ ವರೆಗೆ ಉಳಿದಿರುತ್ತಿತ್ತು.
[24] ಆದರೆ ನ್ಯಾಯವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ಸೊದೋಮ್ ಸೀಮೆಯ ಗತಿಯು ಸಹನೀಯವಾಗಿರುವುದು” ಎಂದು ನಿಮಗೆ ಹೇಳುತ್ತೇನೆ ಅಂದನು.
[25] ಅದೇ ಸಮಯದಲ್ಲಿ ಯೇಸು ಹೇಳಿದ್ದೇನೆಂದರೆ, “ತಂದೆಯೇ! ಪರಲೋಕದ ಭೂಲೋಕದ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ವಿಷಯಗಳನ್ನು ಮರೆಮಾಡಿ ಚಿಕ್ಕ ಮಕ್ಕಳಿಗೆ ಅದನ್ನು ಪ್ರಕಟಪಡಿಸಿರುವಿ ಎಂದು ನಿನ್ನನ್ನು ಕೊಂಡಾಡುತ್ತೇನೆ.
[26] ಹೌದು ತಂದೆಯೇ, ಹೀಗೆ ಮಾಡುವುದೇ ಒಳ್ಳೆಯದೆಂದು ನಿನ್ನ ದೃಷ್ಟಿಗೆ ತೋಚಿತು.
[27] ನನ್ನ ತಂದೆಯು ಎಲ್ಲವನ್ನು ನನಗೆ ಒಪ್ಪಿಸಿದ್ದಾನೆ. ತಂದೆಯ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ. ಮಗನ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ. ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಪಡಿಸುವುದಕ್ಕೆ ಇಚ್ಛಿಸುತ್ತಾನೋ ಅವನು ಆತನನ್ನು ತಿಳಿದವನಾಗಿದ್ದಾನೆ.
[28] “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿ ಕೊಡುವೆನು.
[29] ನಾನು ಸಾತ್ವಿಕನೂ ದೀನಹೃದಯನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತುಕೊಳ್ಳಿರಿ, ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು.
[30] ಏಕೆಂದರೆ ನನ್ನ ನೊಗವು ಮೃದುವಾದದ್ದು, ನನ್ನ ಹೊರೆಯು ಹಗುರವಾದದ್ದು ಆಗಿದೆ” ಅಂದನು.