Skip to content
Opens in a new window
Listen to this chapter • 4:46

[1] ಅರಸನಾದ ಹೆರೋದನ ಕಾಲದಲ್ಲಿ; ಯೂದಾಯ ಸೀಮೆಯ ಬೇತ್ಲೆಹೇಮ್ ಎಂಬ ಊರಿನಲ್ಲಿ ಯೇಸು ಹುಟ್ಟಿದಾಗ ಪೂರ್ವದೇಶದ ಜ್ಞಾನಿಗಳು ಯೆರೂಸಲೇಮಿಗೆ ಬಂದು,

[2] “ಯೆಹೂದ್ಯರ ಅರಸನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಪೂರ್ವದಿಕ್ಕಿನಲ್ಲಿ ಕಂಡು ಆತನಿಗೆ ಅಡ್ಡಬಿದ್ದು ನಮಸ್ಕರಿಸುವುದಕ್ಕಾಗಿ ಬಂದೆವು” ಎಂದರು.

[3] ಇದನ್ನು ಕೇಳಿ ಅರಸನಾದ ಹೆರೋದನು ತಳಮಳಪಟ್ಟನು ಮತ್ತು ಅವನೊಂದಿಗೆ ಯೆರೂಸಲೇಮಿನವರೆಲ್ಲರೂ ಕಳವಳಪಟ್ಟರು.

[4] ಅವನು ಯೆಹೂದ್ಯರ ಎಲ್ಲಾ ಮುಖ್ಯಯಾಜಕರನ್ನೂ ಶಾಸ್ತ್ರಿಗಳನ್ನೂ ಕೂಡಿಸಿ, “ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ” ಎಂದು ಅವರನ್ನು ಕೇಳಿದನು.

[5] ಅವರು ಅವನಿಗೆ, “ಯೂದಾಯದ ಬೇತ್ಲೆಹೇಮಿನಲ್ಲಿಯೇ; ಏಕೆಂದರೆ,

[6] “‘ಯೆಹೂದ ಸೀಮೆಯ ಬೇತ್ಲೆಹೇಮೇ, ಯೆಹೂದದ ಮುಖ್ಯಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಸಣ್ಣದಲ್ಲ. ಏಕೆಂದರೆ ನನ್ನ ಪ್ರಜೆಯಾದ ಇಸ್ರಾಯೇಲನ್ನು ಆಳತಕ್ಕ ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಉದಯಿಸುವನು.’ ಎಂಬುದಾಗಿ ಪ್ರವಾದಿಯ ಮುಖಾಂತರ ಬರೆಯಲ್ಪಟಿದೆ” ಎಂದು ಹೇಳಿದರು.

[7] ಆಗ ಹೆರೋದನು ಯಾರಿಗೂ ತಿಳಿಯದಂತೆ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಕಾಣಿಸಿದ ಗಳಿಗೆಯನ್ನು ಅವರಿಂದ ನಿಖರವಾಗಿ ತಿಳಿದುಕೊಂಡು,

[8] “ನೀವು ಹೋಗಿ ಆ ಕೂಸಿನ ವಿಷಯದಲ್ಲಿ ಚೆನ್ನಾಗಿ ವಿಚಾರಣೆ ಮಾಡಿರಿ; ಅದು ಸಿಕ್ಕಿದ ಮೇಲೆ ನನಗೆ ತಿಳಿಸಿರಿ; ನಾನು ಸಹ ಬಂದು ಆ ಕೂಸಿಗೆ ಅಡ್ಡಬಿದ್ದು ನಮಸ್ಕರಿಸುವೆನು” ಎಂದು ಹೇಳಿ ಜ್ಞಾನಿಗಳನ್ನು ಬೇತ್ಲೆಹೇಮಿಗೆ ಕಳುಹಿಸಿಕೊಟ್ಟನು.

[9] ಅವರು ಅರಸನ ಮಾತನ್ನು ಕೇಳಿ ಹೊರಟಾಗ ಪೂರ್ವದಿಕ್ಕಿನಲ್ಲಿ ಕಂಡ ನಕ್ಷತ್ರವು ಪುನಃ ಕಾಣಿಸಿಕೊಂಡು ಆ ಕೂಸು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದಾಗಿ ಹೋಗುತಿತ್ತು.

[10] ಅವರು ನಕ್ಷತ್ರವನ್ನು ಕಂಡು ಪರಮಾನಂದದಿಂದ ಸಂತೋಷಿಸಿದರು.

[11] ಅವರು ಆ ಮನೆಯೊಳಕ್ಕೆ ಹೋಗಿ ಆ ಕೂಸನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ನಿಕ್ಷೇಪದ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳಗಳನ್ನು ಮಗುವಿಗೆ ಕಾಣಿಕೆಯಾಗಿ ಅರ್ಪಿಸಿದರು.

[12] ದೇವರು ಕನಸಿನಲ್ಲಿ ಅವರಿಗೆ, ನೀವು ಹೆರೋದನ ಬಳಿಗೆ ಹಿಂದಿರುಗಿ ಹೋಗಬಾರದೆಂದು ಆಜ್ಞೆ ನೀಡಿದ್ದರಿಂದ ಅವರು ಮತ್ತೊಂದು ದಾರಿಯಿಂದ ತಮ್ಮ ದೇಶಕ್ಕೆ ಹೊರಟುಹೋದರು.

[13] ಜ್ಞಾನಿಗಳು ಹೋದ ಮೇಲೆ ದೇವದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ನೀನು ಎದ್ದು ಕೂಸನ್ನೂ, ತಾಯಿಯನ್ನೂ ಕರೆದುಕೊಂಡು ಐಗುಪ್ತ ದೇಶಕ್ಕೆ ಓಡಿಹೋಗು, ನಾನು ನಿನಗೆ ಹೇಳುವ ತನಕ ಅಲ್ಲೇ ಇರು; ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಅದನ್ನು ಹುಡುಕುತ್ತಿರುವನು” ಎಂದನು.

[14] ಅದೇ ರಾತ್ರಿ ಯೋಸೇಫನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಐಗುಪ್ತ ದೇಶಕ್ಕೆ ಹೊರಟುಹೋದನು. ಹೆರೋದನು ತೀರಿಹೋಗುವ ತನಕ ಅವರು ಅಲ್ಲೇ ಇದ್ದರು.

[15] ಹೀಗೆ, “ನನ್ನ ಮಗನನ್ನು ಐಗುಪ್ತದೇಶದೊಳಗಿಂದ ಕರೆದೆನೆಂದು” ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರಿತು.

[16] ಆಗ ಹೆರೋದನು ತಾನು ಜ್ಞಾನಿಗಳಿಂದ ವಂಚಿತನಾದೆ ಎಂದು ತಿಳಿದು ಬಹಳ ಕೋಪಗೊಂಡು ತನ್ನ ಆಳುಗಳನ್ನು ಕಳುಹಿಸಿ ತಾನು ಜ್ಞಾನಿಗಳಿಂದ ಕೂಸು ಹುಟ್ಟಿದ್ದ ಗಳಿಗೆಯನ್ನು ತಿಳಿದುಕೊಂಡಿದ್ದ ಕಾಲಕ್ಕೆ ಸರಿಯಾಗಿ, ಬೇತ್ಲೆಹೇಮಿನಲ್ಲಿಯೂ ಅದರ ಎಲ್ಲಾ ನೆರೆಹೊರೆ ಹಳ್ಳಿಗಳಲ್ಲಿಯೂ ಹುಟ್ಟಿದ ಎರಡು ವರ್ಷದೊಳಗಿನ ಗಂಡು ಕೂಸುಗಳನ್ನೆಲ್ಲಾ ಕೊಲ್ಲಿಸಿದನು.

[17] ಯೆರೆಮೀಯನೆಂಬ ಪ್ರವಾದಿಯು ಹೇಳಿದ ಮಾತು ಹೀಗೆ ನೆರವೇರಿತು; ಅದೇನೆಂದರೆ,

[18] “ರಾಮದಲ್ಲಿ ಬೊಬ್ಬೆಯು ಕೇಳಿಸಿತು; ಆಕ್ರಂದನವೂ ಬಹು ಗೋಳಾಟವೂ ಉಂಟಾದವು; ರಾಹೇಲಳು ತನ್ನ ಮಕ್ಕಳಿಗೋಸ್ಕರ ಗೋಳಾಡಿ ಅವರು ಇಲ್ಲದೆ ಹೋದದ್ದಕ್ಕಾಗಿ ಸಮಾಧಾನ ಹೊಂದಲಾರದೆ ಇದ್ದಳು” ಎಂಬುದೇ.

[19] ಹೆರೋದನು ತೀರಿಹೋದ ಮೇಲೆ ಐಗುಪ್ತದೇಶದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು,

[20] “ನೀನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಹೋಗು; ಕೂಸಿನ ಪ್ರಾಣವನ್ನು ತೆಗೆಯಬೇಕೆಂದಿದ್ದವರು ಸತ್ತು ಹೋದರು” ಎಂದು ಹೇಳಿದನು.

[21] ಆಗ ಯೋಸೇಫನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಬಂದನು.

[22] ಆದರೆ ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯವನ್ನು ಆಳುತ್ತಿದ್ದಾನೆ ಎಂದು ಕೇಳಿ ಅಲ್ಲಿಗೆ ಹೋಗುವುದಕ್ಕೆ ಅಂಜಿದನು. ಆಗ ಅವನು ಕನಸಿನಲ್ಲಿ ದೇವರ ಅಪ್ಪಣೆಯನ್ನು ಹೊಂದಿ ಗಲಿಲಾಯ ಸೀಮೆಗೆ ಹೋದನು.

[23] ಅಲ್ಲಿರುವ ನಜರೇತೆಂಬ ಊರನ್ನು ಸೇರಿ ವಾಸಮಾಡಿದನು. ಹೀಗೆ, “ಆತನು ನಜರೇತಿನವನೆಂದು ಕರೆಯಲ್ಪಡುವನು” ಎಂಬುದಾಗಿ ಪ್ರವಾದಿಗಳು ಹೇಳಿರುವ ಮಾತು ನೆರವೇರಿತು.

ಮತ್ತಾಯನು — Chapters