Skip to content
Opens in a new window
Listen to this chapter • 8:00

[1] ತರುವಾಯ ಯೇಸು ದೇವಾಲಯದಿಂದ ಹೊರಟು ಹೋಗುತ್ತಿರಲು ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸುವುದಕ್ಕೆ ಆತನ ಹತ್ತಿರಕ್ಕೆ ಬಂದರು.

[2] ಆದರೆ ಅದಕ್ಕೆ ಉತ್ತರವಾಗಿ ಆತನು ಅವರಿಗೆ, “ಇವುಗಳನ್ನೆಲ್ಲಾ ನೋಡುತ್ತೀರಲ್ಲವೇ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ, ಎಲ್ಲಾ ಕೆಡವಲ್ಪಡುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಅಂದನು.

[3] ಬಳಿಕ ಆತನು ಎಣ್ಣೆಯ ಮರಗಳ ಗುಡ್ಡದ ಮೇಲೆ ಕುಳಿತಿದ್ದಾಗ ಶಿಷ್ಯರು ಆತನ ಬಳಿಗೆ ಪ್ರತ್ಯೇಕವಾಗಿ ಬಂದು, “ಇವೆಲ್ಲವೂ ಯಾವಾಗ ಸಂಭವಿಸುವುದು? ನಿನ್ನ ಬರೋಣಕ್ಕೂ ಲೋಕದ ಸಮಾಪ್ತಿಗೂ ಸೂಚನೆಯೇನು?” ನಮಗೆ ಹೇಳು ಅನ್ನಲು

[4] ಯೇಸು ಅವರಿಗೆ ಉತ್ತರವಾಗಿ ಹೇಳಿದ್ದೇನೆಂದರೆ, “ಯಾರೊಬ್ಬರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಿಂದಿರಿ.

[5] ಏಕೆಂದರೆ, ನನ್ನ ಹೆಸರಿನಲ್ಲಿ ಅನೇಕರು ಬಂದು, ‘ನಾನು ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.

[6] ಇದಲ್ಲದೆ ಯುದ್ಧಗಳಾಗುವುದನ್ನೂ ಯುದ್ಧಗಳಾಗುವ ಸೂಚನೆಯ ಸುದ್ದಿಗಳನ್ನೂ ನೀವು ಕೇಳಬಹುದು. ಕಳವಳಪಡದಂತೆ ನೋಡಿಕೊಳ್ಳಿರಿ; ಏಕೆಂದರೆ ಹೀಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ.

[7] ಹೀಗಿರಲಾಗಿ ಜನರಿಗೆ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಅಲ್ಲಲ್ಲಿ ಭೂಕಂಪಗಳು ಆಗುವವು;

[8] ಇವೆಲ್ಲಾ (ನೂತನ ಕಾಲವು ಹುಟ್ಟುವ) ಪ್ರಸವವೇದನೆಯ ಪ್ರಾರಂಭ.

[9] “ಆಗ ನಿಮ್ಮನ್ನು ಕಷ್ಟಸಂಕಟಗಳಿಗೆ ಗುರಿಮಾಡಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ದ್ವೇಷಿಸುವರು.

[10] ಆಗ ಅನೇಕರು ಎಡವಿ ಹಿಂಜರಿದು ಒಬ್ಬರನ್ನೊಬ್ಬರು ಹಿಡಿದುಕೊಡುವರು; ಒಬ್ಬರ ಮೇಲೊಬ್ಬರು ದ್ವೇಷ ಮಾಡುವರು.

[11] ಬಹು ಮಂದಿ ಸುಳ್ಳುಪ್ರವಾದಿಗಳು ಸಹ ಎದ್ದು ಅನೇಕರನ್ನು ಮೋಸಗೊಳಿಸುವರು.

[12] ಇದಲ್ಲದೆ ಅಧರ್ಮವು ಹೆಚ್ಚಾಗುವುದರಿಂದ ಬಹು ಜನರ ಪ್ರೀತಿಯು ತಣ್ಣಗಾಗಿ ಹೋಗುವುದು.

[13] ಆದರೆ ಕಡೆಯವರೆಗೂ ತಾಳುವವನು ರಕ್ಷಣೆ ಹೊಂದುವನು.

[14] ಇದಲ್ಲದೆ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಆಗ ಅಂತ್ಯವು ಬರುವುದು.

[15] “ಪ್ರವಾದಿಯಾದ ದಾನಿಯೇಲನು ಹೇಳಿದ ಹಾಗೆ ವಿನಾಶಕಾರಕ, ವಿಕಾರ ವಸ್ತು ಪವಿತ್ರ ಸ್ಥಾನದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ತಿಳಿದುಕೊಳ್ಳಲಿ)

[16] ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ;

[17] ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿರುವುದನ್ನು ತೆಗೆದುಕೊಳ್ಳುವುದಕ್ಕೆ ಹೋಗದಿರಲಿ,

[18] ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂತಿರುಗಿ ಹೋಗದಿರಲಿ.

[19] ಆದರೆ ಆ ದಿನದಲ್ಲಿ ಬಸುರಿಯರಿಗೂ, ಬಾಣಂತಿಯರಾಗಿರುವ ಹೆಂಗಸರಿಗೂ ಅಯ್ಯೋ ಕಷ್ಟ.

[20] ನಿಮ್ಮ ಪಲಾಯನವು ಚಳಿಗಾಲದಲ್ಲಾಗಲಿ ಸಬ್ಬತ್ ದಿನದಲ್ಲಿಯಾಗಲಿ ಆಗಬಾರದೆಂದು ಪ್ರಾರ್ಥಿಸಿರಿ.

[21] ಏಕೆಂದರೆ ಲೋಕದ ಅರಂಭದಿಂದ ಇಂದಿನವರೆಗೂ ಆಗದಿರುವಂಥದ್ದು, ಇನ್ನು ಮೇಲೆಯೂ ಆಗದಿರುವಂತಹ ಮಹಾ ಸಂಕಟವು ಅಂದು ಉಂಟಾಗುವುದು.

[22] ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಬ್ಬ ನರಪ್ರಾಣಿಯಾದರೂ ಉಳಿಯನು; ಆದರೆ ತಾನು ಆರಿಸಿಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡುವನು.

[23] ಆಗ ಯಾರಾದರು ನಿಮಗೆ, ‘ಇಗೋ ಕ್ರಿಸ್ತನು ಇಲ್ಲಿದ್ದಾನೆ, ಅಗೋ ಅಲ್ಲಿದ್ದಾನೆ’ ಎಂದು ಹೇಳಿದರೆ ನಂಬಬೇಡಿರಿ.

[24] ಸುಳ್ಳು ಕ್ರಿಸ್ತರೂ, ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನು ಸಹ ಮೋಸಗೊಳಿಸುವುದಕ್ಕೋಸ್ಕರ ಮಹಾ ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.

[25] ನೋಡಿರಿ, ನಾನು ಮುಂಚಿತವಾಗಿಯೇ ನಿಮಗೆ ಇದನ್ನು ಹೇಳುತ್ತಿದ್ದೇನೆ.

[26] ಆದಕಾರಣ ಯಾರಾದರು ನಿಮಗೆ, ‘ಅಗೋ ಕ್ರಿಸ್ತನು ಅಡವಿಯಲ್ಲಿ ಇದ್ದಾನೆಂದು’ ಹೇಳಿದರೆ ಅಡವಿಗೆ ಹೊರಟುಹೋಗಬೇಡಿರಿ; ‘ಇಗೋ ಒಳಕೋಣೆಗಳಲ್ಲಿದ್ದಾನೆಂದು’ ಹೇಳಿದರೆ ನಂಬಬೇಡಿರಿ.

[27] ಹೇಗೆ ಮಿಂಚು ಪೂರ್ವದಲ್ಲಿ ಹುಟ್ಟಿ ಪಶ್ಚಿಮದ ವರೆಗೂ ಹೊಳೆಯುತ್ತದೋ ಹಾಗೆಯೇ ಮನುಷ್ಯಕುಮಾರನ ಬರುವಿಕೆಯೂ ಆಗುವುದು.

[28] ಹೆಣ ಬಿದ್ದಲ್ಲಿ ಹದ್ದುಗಳು ಬಂದು ಸೇರಿಕೊಳ್ಳುವವು.

[29] “ಆ ದಿನಗಳ ಸಂಕಟವು ಮುಗಿದಕೂಡಲೆ ಸೂರ್ಯನು ಕತ್ತಲಾಗಿ ಹೋಗುವನು, ಚಂದ್ರನು ಬೆಳಕು ಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು, ಆಕಾಶದ ಶಕ್ತಿಗಳು ಕದಲುವವು.

[30] ಆಗ ಮನುಷ್ಯಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವವು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು, ಮತ್ತು ಮನುಷ್ಯಕುಮಾರನು ಬಲದಿಂದಲೂ, ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವುದನ್ನು ಕಾಣುವರು.

[31] ಆತನು ತನ್ನ ದೂತರನ್ನು ತುತ್ತೂರಿಯ ಮಹಾ ಶಬ್ದದೊಂದಿಗೆ ಕಳುಹಿಸುವನು. ಅವರು ಆತನು ಆರಿಸಿಕೊಂಡವರನ್ನು ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ನಾಲ್ಕು ದಿಕ್ಕುಗಳಿಂದ ಒಟ್ಟುಗೂಡಿಸುವರು.

[32] “ಅಂಜೂರ ಮರದ ದೃಷ್ಟಾಂತದಿಂದ ಬುದ್ಧಿಕಲಿಯಿರಿ. ಅದರ ಕೊಂಬೆ ಇನ್ನು ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ತಿಳಿದುಕೊಳ್ಳುತ್ತೀರಲ್ಲಾ.

[33] ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗ ಆ ದಿನವು ಹತ್ತಿರವಿದೆ, ಹೊಸ್ತಿಲಲ್ಲೇ ಇದೆ ಎಂದು ತಿಳಿದುಕೊಳ್ಳಿರಿ.

[34] ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

[35] ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ವಾಕ್ಯಗಳೋ ಅಳಿದುಹೋಗುವುದೇ ಇಲ್ಲ.

[36] “ಇದಲ್ಲದೆ ಆ ದಿನವನ್ನು ಕುರಿತು ಆ ಗಳಿಗೆಯನ್ನು ಕುರಿತು, ನನ್ನ ತಂದೆಗೆ ಮಾತ್ರ ತಿಳಿದಿದೆಯೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ಕೂಡ ತಿಳಿಯದು, ಮಗನಿಗೂ ತಿಳಿಯದು,

[37] ನೋಹನ ದಿನಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಬರೋಣವು ಇರುವುದು.

[38] ಹೇಗೆಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆಮಾಡಿಕೊಳ್ಳುತ್ತಾ, ಮದುವೆಮಾಡಿಕೊಡುತ್ತಾ ಇದ್ದರು.

[39] ಪ್ರಳಯದ ನೀರು ಬಂದು ಎಲ್ಲರನ್ನು ಕೊಚ್ಚಿಕೊಂಡು ಹೋಗುವ ತನಕ ಅವರು ಏನೂ ತಿಳಿಯದೆ ಇದ್ದರಲ್ಲಾ. ಅದರಂತೆಯೇ ಮನುಷ್ಯಕುಮಾರನು ಬರುವ ಕಾಲದಲ್ಲಿಯೂ ಇರುವುದು.

[40] ಆಗ ಇಬ್ಬರು ಹೊಲದಲ್ಲಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಒಬ್ಬನು ಕೈ ಬಿಡಲ್ಪಡುವನು.

[41] ಇಬ್ಬರು ಹೆಂಗಸರು ಬೀಸುವ ಕಲ್ಲಿನ ಮುಂದೆ ಕುಳಿತು ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಇನ್ನೊಬ್ಬಳು ಕೈ ಬಿಡಲ್ಪಡುವಳು.

[42] “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲದಿರುವುದರಿಂದ ಎಚ್ಚರವಾಗಿರಿ.

[43] ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ತನ್ನ ಮನೆಗೆ ಕನ್ನಾ ಹಾಕಗೊಡಿಸದೇ ಕಾಯುತ್ತಿದ್ದನೆಂದು ತಿಳಿದುಕೊಳ್ಳಿರಿ.

[44] ಆದಕಾರಣ ನೀವು ಸಹ ಸಿದ್ಧವಾಗಿರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.

[45] ಹಾಗಾದರೆ ಯಜಮಾನನು ತನ್ನ ಮನೆಯವರಿಗೆ ಹೊತ್ತು ಹೊತ್ತಿಗೆ ಆಹಾರ ಕೊಡುವುದಕ್ಕಾಗಿ ಅವರ ಮೇಲಿರಿಸಿದ ನಂಬಿಗಸ್ತನೂ, ವಿವೇಕಿಯೂ ಆದಂಥ ಆಳು ಯಾರು?

[46] ಯಜಮಾನನು ಬರುವಾಗ ಯಾವ ಆಳು ಹೀಗೆ ಮಾಡುತ್ತಿರುವುದನ್ನು ಕಾಣುವನೋ ಆ ಆಳು ಧನ್ಯನು.

[47] ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲ್ವಿಚಾರಕನನ್ನಾಗಿ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.

[48] ಆದರೆ ಆ ದುಷ್ಟ ಆಳು, ‘ನನ್ನ ಯಜಮಾನನು ಬರುವುದಕ್ಕೆ ತಡ ಮಾಡುತ್ತಾನೆ’ ಎಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು

[49] ತನ್ನ ಜೊತೆ ಆಳುಗಳನ್ನು ಹೊಡೆಯುವುದಕ್ಕೂ, ಕುಡುಕರ ಸಂಗಡ ತಿನ್ನುವುದಕ್ಕೂ, ಕುಡಿಯುವುದಕ್ಕೂ ಪ್ರಾರಂಭಿಸಿದಾದರೆ,

[50] ಅವನು ನೆನಸದ ದಿನದಲ್ಲಿಯೂ, ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾಗಿ ದಂಡಿಸಿ

[51] ಕಪಟಿಗಳಿಗೆ ಆಗತಕ್ಕ ಗತಿಯನ್ನು ಅವನಿಗೂ ಮಾಡುವನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.

ಮತ್ತಾಯನು — Chapters