[1] “ಯೇಸು ಬೆಟ್ಟದಿಂದ ಕೆಳಗೆ ಇಳಿದು ಬರುವಾಗ ಜನರು ದೊಡ್ಡಗುಂಪು ಆತನ ಹಿಂದೆ ಹೋದರು.
[2] ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನಿಗೆ ಅಡ್ಡಬಿದ್ದು, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಅಂದನು.
[3] ಆತನು ಕೈಚಾಚಿ ಆತನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು. ಕೂಡಲೆ ಅವನು ಕುಷ್ಠದಿಂದ ಶುದ್ಧನಾದನು.
[4] ಆಗ ಯೇಸು ಅವನಿಗೆ; “ನೋಡು, ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಿಸಿದ ಕಾಣಿಕೆಯನ್ನು ಕೊಡು;” ಅದು ಅವರಿಗೆ ಸಾಕ್ಷಿಯಾಗಲಿ ಎಂದು ಹೇಳಿದನು.
[5] ಯೇಸು ಕಪೆರ್ನೌಮಿಗೆ ಬಂದಾಗ ಒಬ್ಬ ದಂಡಿನ ಶತಾಧಿಪತಿಯು ಆತನ ಬಳಿಗೆ ಬಂದು,
[6] “ಕರ್ತನೇ, ನನ್ನ ಆಳು ಪಾರ್ಶ್ವವಾಯುವಿನ ನಿಮಿತ್ತ ತೀವ್ರವಾದ ನೋವಿನಿಂದ ಮನೆಯಲ್ಲಿ ಮಲಗಿ ನರಳುತ್ತಿದ್ದಾನೆ” ಎಂದು ಹೇಳಿದನು.
[7] ಯೇಸು ಅವನಿಗೆ, “ನಾನು ಬಂದು ಅವನನ್ನು ವಾಸಿ ಮಾಡುತ್ತೇನೆ” ಎಂದು ಹೇಳಲು,
[8] ಆ ಶತಾಧಿಪತಿಯು, “ಕರ್ತನೇ, ನೀನು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು.
[9] ನಾನು ಸಹ ಅಧಿಕಾರದ ಕೆಳಗಿರುವ ಮನುಷ್ಯನು; ನನ್ನ ಕೈಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಹೋಗುತ್ತಾನೆ; ಮತ್ತೊಬ್ಬನಿಗೆ ‘ಬಾ’ ಎಂದು ಹೇಳಿದರೆ ಬರುತ್ತಾನೆ; ‘ನನ್ನ ಆಳಿಗೆ ಇಂಥಿಂಥದ್ದನ್ನು ಮಾಡು’ ಎಂದು ಹೇಳಿದರೆ ಮಾಡುತ್ತಾನೆ” ಅಂದನು.
[10] ಯೇಸು ಇದನ್ನು ಕೇಳಿ ಆಶ್ಚರ್ಯಚಕಿತನಾದನು, ತನ್ನ ಹಿಂದೆ ಬರುತ್ತಿದ್ದವರಿಗೆ, “ನಾನು ಇಂಥಾ ಮಹತ್ತರವಾದ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.
[11] ಇದಲ್ಲದೆ ನಿಮಗೆ ಹೇಳುವುದೇನಂದರೆ ಪೂರ್ವ ಪಶ್ಚಿಮ ದಿಕ್ಕುಗಳಿಂದ ಬಹಳ ಜನ ಬಂದು ಪರಲೋಕ ರಾಜ್ಯದಲ್ಲಿ ಅಬ್ರಹಾಮ, ಇಸಾಕ, ಯಾಕೋಬ ಎಂಬುವವರ ಸಂಗಡ ಊಟಕ್ಕೆ ಕುಳಿತುಕೊಳ್ಳುವರು;
[12] ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಗೆ ಎಸೆಯಲ್ಪಡುವರು; ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು” ಎಂದು ಹೇಳಿದನು.
[13] ಬಳಿಕ ಯೇಸು ಆ ಶತಾಧಿಪತಿಗೆ, “ನೀನು ನಂಬಿದಂತೆ ನಿನಗಾಗಲಿ, ಹೋಗು” ಎಂದು ಹೇಳಿದನು. ಅದೇ ಗಳಿಗೆಯಲ್ಲಿ ಅವನ ಆಳಿಗೆ ಗುಣವಾಯಿತು.
[14] ತರುವಾಯ ಯೇಸು ಪೇತ್ರನ ಮನೆಗೆ ಬಂದಾಗ, ಪೇತ್ರನ ಅತ್ತೆ ಜ್ವರದಲ್ಲಿ ಮಲಗಿರುವುದನ್ನು ಕಂಡು, ಆತನು ಆಕೆಯ ಕೈಯನ್ನು ಮುಟ್ಟಿದನು ತಕ್ಷಣವೇ
[15] ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆ ಎದ್ದು ಆತನಿಗೆ ಉಪಚಾರಮಾಡಿದಳು.
[16] ಸಂಜೆಯಾಗಲು ದೆವ್ವಹಿಡಿದ ಬಹಳ ಜನರನ್ನು ಆತನ ಬಳಿಗೆ ಕರೆತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಅಸ್ವಸ್ಥರಾದವರೆಲ್ಲರನ್ನು ವಾಸಿಮಾಡಿದನು.
[17] ಇದರಿಂದ “ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು” ಎಂದು ಯೆಶಾಯನೆಂಬ ಪ್ರವಾದಿ ನುಡಿದಂತಹ ಮಾತು ಹೀಗೆ ನೆರವೇರಿತು.
[18] ಯೇಸು ತನ್ನ ಸುತ್ತಲಿದ್ದ ಜನಗಳ ದೊಡ್ಡ ಗುಂಪುಗಳನ್ನು ಕಂಡು ಗಲಿಲಾಯ ಸಮುದ್ರದ ಆಚೆ ಭಾಗಕ್ಕೆ ಹೊರಟು ಹೋಗಬೇಕೆಂದು ಅಪ್ಪಣೆ ಕೊಟ್ಟನು.
[19] ಆಗ ಒಬ್ಬ ಶಾಸ್ತ್ರಿಯು ಹತ್ತಿರಕ್ಕೆ ಬಂದು ಆತನಿಗೆ, “ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಲು,
[20] ಯೇಸು ಅವನಿಗೆ, “ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ” ಎಂದು ಹೇಳಿದನು.
[21] ಶಿಷ್ಯರಲ್ಲಿ ಬೇರೊಬ್ಬನು, “ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು” ಅನ್ನಲಾಗಿ,
[22] ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು, ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ” ಎಂದು ಹೇಳಿದನು.
[23] ಯೇಸು ದೋಣಿಯನ್ನು ಹತ್ತಿದಾಗ ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು.
[24] ಅವರು ಹೋಗುತ್ತಿರುವಾಗ ಸಮುದ್ರವು ಅಲ್ಲೋಲಕಲ್ಲೋಲವಾಗಿ ದೋಣಿಯು ಅಲೆಗಳಿಂದ ಮುಚ್ಚುವಂತೆ ಆಯಿತು; ಆದರೆ ಯೇಸು ನಿದ್ರಿಸುತ್ತಿದ್ದನು.
[25] ಆಗ ಶಿಷ್ಯರು ಆತನ ಹತ್ತಿರ ಬಂದು ಆತನನ್ನು ಎಬ್ಬಿಸಿ, “ಕರ್ತನೇ, ನಮ್ಮನ್ನು ಕಾಪಾಡು, ಸಾಯುತ್ತಿದ್ದೇವೆ” ಎಂದರು.
[26] ಆತನು ಅವರಿಗೆ, “ಅಲ್ಪ ವಿಶ್ವಾಸಿಗಳೇ, ಏಕೆ ಹೆದರುತ್ತೀರಿ?” ಎಂದು ಹೇಳಿ, ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು; ಆಗ ಅಲ್ಲಿ ಸಂಪೂರ್ಣವಾಗಿ ಶಾಂತವಾಯಿತು.
[27] ಆ ಜನರು ಬೆರಗಾಗಿ, “ಈತನು ಎಂಥವನಾಗಿರಬಹುದು! ಗಾಳಿಯೂ ಸಮುದ್ರವೂ ಸಹ ಈತನಿಗೆ ವಿಧೇಯವಾಗುತ್ತವಲ್ಲಾ” ಅಂದರು.
[28] ಆಮೇಲೆ ಆತನು ಆಚೇದಡಕ್ಕೆ ಗದರೇನರ ಸೀಮೆಗೆ ಬಂದಾಗ ದೆವ್ವಹಿಡಿದವರಿಬ್ಬರು ಸಮಾಧಿಯ ಗವಿಗಳೊಳಗಿಂದ ಹೊರಟು ಆತನೆದುರಿಗೆ ಬಂದರು. ಅವರು ಮಹಾಕ್ರೂರಿಗಳಾಗಿದ್ದುದರಿಂದ ಆ ದಾರಿಯಲ್ಲಿ ಯಾರೂ ತಿರುಗಾಡುತ್ತಿರಲಿಲ್ಲ.
[29] ಅವರು, “ದೇವರ ಕುಮಾರನೇ, ನಮ್ಮ ಗೊಡವೆ ನಿನಗೇಕೆ? ಕಾಲ ಬರುವುದಕ್ಕಿಂತ ಮೊದಲೇ ನಮ್ಮನ್ನು ದಂಡಿಸುವುದಕ್ಕೆ ಇಲ್ಲಿಗೆ ಬಂದಿರುವೆಯಾ” ಎಂದು ಕೂಗಿದರು.
[30] ಅವರಿಂದ ಸ್ವಲ್ಪ ದೂರದಲ್ಲಿ ಬಹಳ ಹಂದಿಗಳ ಒಂದು ಹಿಂಡು ಮೇಯುತ್ತಿತ್ತು.
[31] ಆ ದೆವ್ವಗಳು, “ನೀನು ನಮ್ಮನ್ನು ಇವರೊಳಗಿಂದ ಹೊರಡಿಸುವುದಾದರೆ ಆ ಹಂದಿಯ ಗುಂಪಿನೊಳಗೆ ನಮ್ಮನ್ನು ಕಳುಹಿಸಿಕೊಡು” ಎಂದು ಬೇಡಿಕೊಂಡವು.
[32] ಆತನು ಅವುಗಳಿಗೆ, “ಹೋಗಿರಿ” ಅನ್ನಲು ಅವು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಅ ಕ್ಷಣವೇ ಆ ಗುಂಪೆಲ್ಲಾ ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಸತ್ತು ಹೋದವು.
[33] ಹಂದಿಗಳನ್ನು ಮೇಯಿಸುವವರು ಊರೊಳಕ್ಕೆ ಓಡಿಹೋಗಿ ಇದೆಲ್ಲವನ್ನು ದೆವ್ವಹಿಡಿದವರ ಸಂಗತಿ ಸಹಿತವಾಗಿ ತಿಳಿಸಲು;
[34] ಆಗ ಊರಿನವರೆಲ್ಲರೂ ಯೇಸುವನ್ನು ಸಂಧಿಸಲು ಹೊರಟುಬಂದು ಆತನನ್ನು ಕಂಡು ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.