[1] ಹೀಗಿರುವಾಗ ಯೇಸು ಈ ಮಾತುಗಳನ್ನು ಮುಗಿಸಿದ ಮೇಲೆ ಗಲಿಲಾಯವನ್ನು ಬಿಟ್ಟು ಯೊರ್ದನ್ ಹೊಳೆಯ ಆಚೆಯಿರುವ ಯೂದಾಯ ಪ್ರಾಂತ್ಯಗಳಿಗೆ ಹೋದನು.
[2] ಜನರ ದೊಡ್ಡ ಗುಂಪುಗಳು ಆತನನ್ನು ಹಿಂಬಾಲಿಸಿದವು, ಆತನು ಅವರನ್ನು ಅಲ್ಲಿಯೇ ಸ್ವಸ್ಥಮಾಡಿದನು.
[3] ಫರಿಸಾಯರು ಯೇಸುವನ್ನು ಪರೀಕ್ಷಿಸಲು ಆತನ ಹತ್ತಿರಕ್ಕೆ ಬಂದು, “ಒಬ್ಬನು ಯಾವುದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಶಾಸ್ತ್ರ ಸಮ್ಮತವೋ?” ಎಂದು ಕೇಳಲು,
[4] ಆತನು ಪ್ರತ್ಯುತ್ತರವಾಗಿ, “ಮನುಷ್ಯರನ್ನು ಉಂಟುಮಾಡಿದವನು ಆದಿಯಿಂದಲೇ ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟುಮಾಡಿದನು,
[5] ‘ಈ ಕಾರಣದಿಂದಲೇ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ನೀವು ಓದಲಿಲ್ಲವೋ?’
[6] ಹೀಗಿರುವುದರಿಂದ ಅವರು ಇನ್ನು ಇಬ್ಬರಲ್ಲ ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಅಂದನು.
[7] ಅದಕ್ಕೆ ಅವರು ಆತನನ್ನು, “ಹಾಗಾದರೆ ವಿಚ್ಛೇದನ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಏಕೆ ಆಜ್ಞೆ ಕೊಟ್ಟನು?” ಎಂದು ಕೇಳಿದರು.
[8] ಅದಕ್ಕೆ ಯೇಸು ಅವರಿಗೆ, “ಮೋಶೆಯು ನಿಮ್ಮ ಮೊಂಡತನದ ದೆಸೆಯಿಂದ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಅಪ್ಪಣೆ ಕೊಟ್ಟನು. ಆದರೆ ಆದಿಯಿಂದ ಹೀಗೆ ಇರಲಿಲ್ಲ ಅಂದನು.
[9] ಮತ್ತು ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡಿದಂತೆ; ಮತ್ತು ಗಂಡ ಬಿಟ್ಟವಳನ್ನು ಮದುವೆಯಾಗುವವನು ವ್ಯಭಿಚಾರ ಮಾಡಿದಂತೆ” ಎಂದು ನಿಮಗೆ ಹೇಳುತ್ತೇನೆ ಅಂದನು.
[10] ಅದಕ್ಕೆ ಶಿಷ್ಯರು ಯೇಸುವಿಗೆ, “ಹೆಂಡತಿಯೊಂದಿಗೆ ಗಂಡನ ಸಂಬಂಧ ಹೀಗಿದ್ದರೆ ಮದುವೆಯಾಗುವುದು ಒಳ್ಳೆಯದಲ್ಲ” ಅಂದರು.
[11] ಆದರೆ ಯೇಸು ಅವರಿಗೆ, “ಈ ಮಾತನ್ನು ಎಲ್ಲರೂ ಅಂಗೀಕರಿಸಲಾರರು ಆದರೆ ಯಾರಿಗೆ ಆ ವರವು ಕೊಡಲ್ಪಟ್ಟಿದೆಯೋ ಅವರು ಮಾತ್ರ ಅದನ್ನು ಅಂಗೀಕರಿಸುವರು.
[12] ತಾಯಿಯ ಗರ್ಭದಿಂದ ನಪುಂಸಕರಾಗಿ ಹುಟ್ಟಿದವರು ಕೆಲವರು ಇದ್ದಾರೆ ಮತ್ತು ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟವರು ಕೆಲವರು ಇದ್ದಾರೆ ಮತ್ತು ಪರಲೋಕ ರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡವರು ಕೆಲವರು ಇದ್ದಾರೆ. ಈ ಬೋಧನೆಯನ್ನು ಅಂಗೀಕರಿಸಬಲ್ಲವರು ಅಂಗೀಕರಿಸಲಿ” ಎಂದು ಹೇಳಿದನು.
[13] ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ಕರೆತಂದು, ಅವರ ಮೇಲೆ ಆತನು ಕೈಗಳನ್ನಿಟ್ಟು ಪ್ರಾರ್ಥಿಸುವಂತೆ ಕೇಳಿದರು. ಆದರೆ ಶಿಷ್ಯರು ಅವರನ್ನು ಗದರಿಸಿದರು.
[14] ಆದರೆ ಯೇಸು, “ಮಕ್ಕಳನ್ನು ಬಿಡಿರಿ. ನನ್ನ ಹತ್ತಿರ ಬರುವುದಕ್ಕೆ ಅವರಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ಪರಲೋಕ ರಾಜ್ಯವು ಇಂಥವರದೇ” ಎಂದು ಹೇಳಿದನು.
[15] ಮತ್ತು ಅವರ ಮೇಲೆ ಕೈಯಿಟ್ಟು ಅನಂತರ ಅಲ್ಲಿಂದ ಹೊರಟು ಹೋದನು.
[16] ಇಗೋ ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವವನ್ನು ಹೊಂದುವುದಕ್ಕೆ ಯಾವ ಒಳ್ಳೆ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು.
[17] ಆತನು ಅವನಿಗೆ, “ಒಳ್ಳೆಯದನ್ನು ಕುರಿತು ನನ್ನನ್ನು ಏಕೆ ಕೇಳುತ್ತೀಯಾ? ಒಳ್ಳೆಯವನು ಒಬ್ಬನೇ. ಆ ಜೀವಕ್ಕೆ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ವಿಧೇಯನಾಗಿ ನಡೆದುಕೊ” ಎಂದು ಹೇಳಿದನು.
[18] ಅದಕ್ಕೆ ಅವನು, “ಅವು ಯಾವುವು?” ಎಂದು ಕೇಳಲು ಯೇಸು, “ನರಹತ್ಯ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು.
[19] ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಮತ್ತು ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸಬೇಕು” ಇವುಗಳೇ ಅಂದನು.
[20] ಆ ಯೌವನಸ್ಥನು ಆತನಿಗೆ, “ಇವೆಲ್ಲಕ್ಕೂ ವಿಧೇಯನಾಗಿ ನಾನು ನಡೆದುಕೊಂಡಿದ್ದೇನೆ; ಇನ್ನೂ ನನಗೇನು ಕೊರತೆಯಾಗಿರಬಹುದು?” ಎಂದು ಕೇಳಿದನು.
[21] ಯೇಸು ಅವನಿಗೆ, “ನೀನು ಪೂರ್ಣನಾಗುವುದಕ್ಕೆ ಬಯಸುವುದಾದರೆ, ಹೋಗಿ ನಿನಗಿರುವುದನ್ನೆಲ್ಲಾ ಮಾರಿ, ಬಡವರಿಗೆ ಕೊಡು, ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
[22] ಆದರೆ ಆ ಯೌವನಸ್ಥನು ಬಹಳ ಆಸ್ತಿಯುಳ್ಳವನಾಗಿದ್ದುದರಿಂದ ಈ ಮಾತನ್ನು ಕೇಳಿ ದುಃಖದಿಂದ ಹೊರಟುಹೋದನು.
[23] ಆಗ ಯೇಸು ತನ್ನ ಶಿಷ್ಯರಿಗೆ, “ಐಶ್ವರ್ಯವಂತನು ಪರಲೋಕ ರಾಜ್ಯದಲ್ಲಿ ಸೇರುವುದು ಕಷ್ಟ” ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
[24] “ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ ಎಂದು ನಿಮಗೆ ತಿರುಗಿ ಹೇಳುತ್ತೇನೆ” ಅಂದನು.
[25] ಶಿಷ್ಯರು ಇದನ್ನು ಕೇಳಿ ಅತ್ಯಾಶ್ಚರ್ಯಪಟ್ಟು, “ಹೀಗಿದ್ದರೆ ರಕ್ಷಣೆ ಹೊಂದಲು ಯಾರಿಂದಾದೀತು?” ಎಂದು ಕೇಳಿದರು.
[26] ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಂದ ಅಸಾಧ್ಯ. ಆದರೆ ದೇವರಿಗೆ ಎಲ್ಲವು ಸಾಧ್ಯವೇ” ಅಂದನು.
[27] ಆಗ ಪೇತ್ರನು ಆತನನ್ನು, ಇಗೋ, ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ಇದರಿಂದ ನಮಗೆ ಏನು ದೊರಕುವುದು? ಎಂದು ಕೇಳಿದನು.
[28] ಯೇಸು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವಾಗ, ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.
[29] ಮತ್ತು ನನ್ನ ಹೆಸರಿನ ನಿಮಿತ್ತ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಭೂಮಿಯನ್ನಾಗಲಿ, ತೊರೆದುಬಿಟ್ಟಿರುವ ಪ್ರತಿಯೊಬ್ಬನೂ ಎಲ್ಲವನ್ನೂ ನೂರರಷ್ಟು ಹೊಂದುವನು. ಅಲ್ಲದೆ ನಿತ್ಯಜೀವಕ್ಕೆ ಬಾಧ್ಯನಾಗುವನು.
[30] ಆದರೆ ಈಗ ಮೊದಲಿನವರಾದ ಬಹು ಮಂದಿ ಕಡೆಯವರಾಗುವರು ಮತ್ತು ಕಡೆಯವರಾದ ಬಹು ಮಂದಿ ಮೊದಲಿನವರಾಗುವರು.